ಹೊಸ ಸಿನಿಮಾಗೆ ಚಿತ್ರಕಥೆ ಮುಗಿಸಿದ ಖುಷಿಯಲ್ಲಿ ಜೋಗಿ ಪ್ರೇಮ್‌ ; ಈ ಬಾರಿ ಪಕ್ಕಾ ಆಕ್ಷನ್‌ ಸಿನಿಮಾಗೆ ಕೈ ಹಾಕ್ತಾರಾ ಬಾಸು!

ನಿರ್ದೇಶಕ ಪ್ರೇಮ್‌ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಅರೇ, ಮತ್ಯಾವ ಸ್ಟಾರ್‌ ನಟ ಅವರ ವಿರುದ್ಧ ಮಾತಾಡಿದ್ರು ಅನ್ನೋ ಪ್ರಶ್ನೆ ಈಗ ಸಹಜ. ಅದಕ್ಕೆ ಕಾರಣ, ಇತ್ತೀಚೆಗಷ್ಟೇ ಪ್ರೇಮ್‌ ಅವರನ್ನು ಕುರಿತಂತೆ ನಟ ದರ್ಶನ್‌ ಅವರು ಅವರೇನು ದೊಡ್ಡ ಪುಡಂಗಾನ ಅಂದಿದ್ದರು. ಆ ಮಾತು ಜೋರು ಸುದ್ದಿ ಮಾಡಿತ್ತು. ಅಷ್ಟೇ ಅಲ್ಲ, ಅತ್ತ ಪ್ರೇಮ್‌ ಅವರನ್ನೂ ಕೆರಳಿಸುವಂತೆ ಮಾಡಿದ್ದು ಸುಳ್ಳಲ್ಲ. ಪ್ರೇಮ್‌ ಕೂಡ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ದರ್ಶನ್‌ ವಿರುದ್ಧ ಮಾತಾಡಿದ್ದರು. ಆ ಮಧ್ಯೆ ರಕ್ಷಿತಾ ಪ್ರೇಮ್‌ ಎಂಟ್ರಿಯಾಗಿ, ದರ್ಶನ್‌ ಜೊತೆಗಿದ್ದ ಒಂದು ಫೋಟೋ ಹಾಕಿಕೊಂಡು ಒಂದು ಸ್ಟೇಟಸ್‌ ಹಾಕಿಕೊಂಡಿದ್ದರು. ಅಲ್ಲಿಗೆ ಎಲ್ಲವೂ ಸುಖಾಂತ್ಯಗೊಂಡಿತ್ತು. ಈಗ ಪ್ರೇಮ್‌ ಅವರ ಹೊಸ ಸುದ್ದಿ ಅಂದರೆ, ಅವರೊಂದು ಹೊಸ ಸಿನಿಮಾ ಕಥೆಯನ್ನು ಮುಗಿಸಿದ್ದಾರೆ.

ಹೌದು, ಹೀಗಂತ ಸ್ವತಃ ಪ್ರೇಮ್‌ ಅವರೇ ಸೋಶಿಯಲ್‌ ಮೀಡಿಯಾದಲ್ಲೊಂದು ವಿಡಿಯೋ ಹಂಚಿಕೊಂಡು ಹೇಳಿಕೊಂಡಿದ್ದಾರೆ. ಸದ್ಯ ಪ್ರೇಮ್‌ ರಕ್ಷಿತಾ ಅವರ ಸಹೋದರ ರಾಣ ಅವರಿಗೆ “ಏಕ್‌ ಲವ್‌ ಯಾ” ಸಿನಿಮಾ ಮಾಡಿದ್ದಾರೆ. ಅದು ಇಷ್ಟರಲ್ಲೇ ಪ್ರೇಕ್ಷಕರ ಮುಂದೆ ಬರಲು ತಯಾರಾಗುತ್ತಿದೆ. ಇದರ ಮಧ್ಯೆ ಪ್ರೇಮ್‌ ಕೂಡ ಸದ್ದಿಲ್ಲದೆಯೇ ಒಂದು ಸಿನಿಮಾದ ಚಿತ್ರಕಥೆ ಮುಗಿಸಿದ ಬಗ್ಗೆ ಹೇಳಿಕೊಂಡಿದ್ದು, ಆ ಚಿತ್ರಕಥೆಗೆ ವಿಶೇಷ ಪೂಜೆ ಮಾಡಿ, ಕುಂಬಳಕಾಯಿ ಒಡೆದು ಖುಷಿಗೊಂಡಿದ್ದಾರೆ. ಹಾಗಾದರೆ, ಪ್ರೇಮ್‌ ಈ ಬಾರಿ ಯಾವ ಜಾನರ್‌ ಸಿನಿಮಾ ಮಾಡ್ತಾರೆ? ಸಹಜವಾಗಿಯೇ ಎಲ್ಲರಲ್ಲೂ ಕಾಡುವ ಪ್ರಶ್ನೆ ಇದು. ಪ್ರೇಮ್‌ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಷಯವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅವರ ಮುಂದಿನ ಸಿನಿಮಾ ಪಕ್ಕಾ ಆಕ್ಷನ್‌ ಸಿನಿಮಾ ಆಗಿರುತ್ತೆ ಅನ್ನುವುದು ದಟ್ಟವಾಗಿದೆ.

ಅಷ್ಟಕ್ಕೂ ಪ್ರೇಮ್‌ ಹಂಚಿಕೊಂಡಿರುವ ಆ ವಿಡಿಯೋದಲ್ಲೇನಿದೆ ಗೊತ್ತಾ? “ಯಾರಾದರೂ ಯುದ್ಧದಲ್ಲಿ ಹುತಾತ್ಮರಾದರೆ ಅವರ ಸ್ವಾಗತಕ್ಕಾಗಿ ಸ್ವರ್ಗ ಕಾಯುತ್ತಿರುತ್ತದೆ. ಒಂದೊಮ್ಮೆ ಯುದ್ಧದಲ್ಲಿ ಗೆದ್ದರೆ, ಅವರಿಗಾಗಿ ಅಧಿಕಾರದ ಕಿರೀಟ ಕಾಯುತ್ತಿರುತ್ತದೆ. ಒಟ್ಟಾರೆ ಯುದ್ಧ ಒಳ್ಳೆಯದೇ. ಯುದ್ಧ ಈಗ ಶುರುವಾಗುತ್ತಿದೆ…ʼ ಎಂದಿದ್ದಾರೆ ಪ್ರೇಮ್.‌ ಚಿತ್ರಕತೆ ಕೆಲಸವನ್ನು ಮುಗಿಸಿದ್ದೇನೆ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಆಗಸ್ಟ್ 2021ರಲ್ಲಿಯೇ ಹಂಚಿಕೊಳ್ಳಲಿದ್ದೇನೆ’ ಎಂದಿರುವ ಪ್ರೇಮ್ ಅವರಿಗೆ ಇದು 9ನೇ ಚಿತ್ರ. 2003ರಲ್ಲಿ ‘ಕರಿಯಾ’ ಚಿತ್ರದ ಮೂಲಕ ನಿರ್ದೇಶಕರಾಗಿ ಚಿತ್ರರಂಗ ಪ್ರವೇಶಿಸಿದ ಪ್ರೇಮ್, ಆ ಬಳಿಕ ಒಂದೊಂದೇ ಹಿಟ್‌ ಸಿನಿಮಾ ಕೊಟ್ಟರು. ಆ ಮೂಲಕ ಅವರು ಗಾಂಧಿನಗರದಲ್ಲಿ ಗಟ್ಟಿ ಬೇರೂರಿದರು.

ತಮ್ಮದೇ ಶೈಲಿಯಲ್ಲಿ ಸಿನಿಮಾ ಮಾಡುವ ಪ್ರೇಮ್‌ಗೆ ಪ್ರೇಕ್ಷಕರ ನಾಡಿಮಿಡಿತ ಗೊತ್ತಿದೆ. ಅವರಿಗೆ ತಕ್ಕಂತೆಯೇ ಸಿನಿಮಾ ಕೊಡುವ ಜಾಣತನ ಪ್ರೇಮ್‌ಗಿದೆ. ಸ್ಟಾರ್‌ ಮಾತ್ರವಲ್ಲ, ಹೊಸಬರನ್ನೂ ಇಟ್ಟುಕೊಂಡು ಸಾಬೀತು ಮಾಡಿರುವ ಪ್ರೇಮ್‌, ಒಂದು ಸಿನಿಮಾ ಮಾಡ್ತಾರೆ ಅಂದರೆ, ಅದೊಂದು ರೀತಿ ಕುತೂಹಲವಂತೂ ಹೌದು. ಪ್ರೇಮ್‌ ಸೋಲು ಕಂಡಿದ್ದೂ ಇದೆ, ಗೆಲುವಿನ ಮೆಟ್ಟಿಲನ್ನೂ ಏರಿದ್ದೂ ಇದೆ. ನಿರೀಕ್ಷೆ ಇಟ್ಟುಕೊಂಡ ಸಿನಿಮಾಗಳು ಸಹ ಕೈ ಕೊಟ್ಟಿದ್ದ ಉದಾಹರಣೆ ಇದ್ದರೂ, ಪ್ರೇಮ್‌ ಮಾತ್ರ, ತಮ್ಮ ಪಾಡಿಗೆ ತಾವು ಸಿನಿಮಾ ಮಾಡುತ್ತಿದ್ದಾರೆ. “ವಿಲನ್‌” ಮೂಲಕ ಶಿವರಾಜಕುಮಾರ್‌ ಮತ್ತು ಸುದೀಪ್‌ ಅವರನ್ನು ಇಟ್ಟುಕೊಂಡು ದೊಡ್ಡ ಮಟ್ಟದ ಚಿತ್ರ ಕೊಟ್ಟರು. ಭಾರೀ ಕುತೂಹಲ ಕೆರಳಿಸಿದ್ದ ಆ ಚಿತ್ರ, ತಕ್ಕಮಟ್ಟಿಗೆ ಮೆಚ್ಚುಗೆ ಪಡೆದುಕೊಂಡಿತು. ಆ ಬಳಿಕ ಅವರು, “ಏಕ್‌ ಲವ್‌ ಯಾ” ಸಿನಿಮಾಗೆ ಅಣಿಯಾದರು.

ಈಗ ಆ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಇಷ್ಟರಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ. ಅಂದಹಾಗೆ, ರಕ್ಷಿತಾ ಅವರ ಸಹೋದರನಿಗಾಗಿಯೇ, ಒಂದೊಳ್ಳೆಯ ಲವ್‌ ಸ್ಟೋರಿ ಹೆಣೆದಿರುವ ಪ್ರೇಮ್‌, ಈಗಾಗಲೇ ಚಿತ್ರದ ಒಂದು ಸಾಂಗ್‌ ಬಿಟ್‌ ಬಿಡುಗಡೆ ಮಾಡಿ, ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದಾರೆ. ಅದೇನೆ ಇರಲಿ, ಪ್ರೇಮ್‌ ಈಗ ಹೊಸ ಸಿನಿಮಾದ ಚಿತ್ರಕಥೆ ಸಿದ್ಧಪಡಿಸಿದ್ದಾರೆ. ಈ ಬಾರಿ ಸ್ಟಾರ್‌ ಹಿಂದೆ ಹೋಗ್ತಾರೋ ಅಥವಾ ಹೊಸಬರನ್ನು ಕರೆತರುತ್ತಾರೋ ಅನ್ನುವುದನ್ನು ಕಾದು ನೋಡಬೇಕಿದೆ.

Related Posts

error: Content is protected !!