ಹೊಂಬಾಳೆಗೆ ಘಟ್ಟ ಇಳಿದು ಪಟ್ಟ ಏರುವ ಆಸೆ- ದಂತಕಥೆ ಸೃಷ್ಟಿಸಲಿದ್ದಾರಾ ಈ ಇಬ್ಬರು ಶೆಟ್ರು ?

ಚಿನ್ನದ ಸಾಮ್ರಾಜ್ಯಕ್ಕೆ ಒಡೆಯರಾದವರಿಗೆ ಸಮುದ್ರಕ್ಕೆ ಅಧಿಪತಿಯಾಗುವಾಸೆ !

ಅದೃಷ್ಟ ಅಂದ್ರೆ ಇದೆ ಅಲ್ವಾ ? ಹೌದು, ಅದೊಂದು ಬೆಳವಣಿಗೆ ಮಾತ್ರ ಕನ್ನಡ ಚಿತ್ರ ರಂಗದಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿದೆ. ಕೊರೋನಾ ಅಂತ ಇಡೀ ಚಿತ್ರೋದ್ಯಮವೇ ಸೈಲೆಂಟ್‌ ಆಗಿ ಸೈಡಿಗೆ ಕುಳಿತಿರುವಾಗ ಕನ್ನಡದ ಆ ಸ್ಟಾರ್‌ ಜೋಡಿಗೆ ಬಿಗ್‌ ಆಫರ್‌ ಒಲಿದು ಬಂದಿದೆ. ಅವರಿಬ್ಬರು ಆಕ್ಟರ್‌ ಅಷ್ಟೇ ಅಲ್ಲ, ಡೈರೆಕ್ಟರ್‌ ಕೂಡ ಹೌದು. ಅವರು ಇದುವರೆಗೂ ಆವೆರೆಡು ಅವತಾರ ತೋರಿಸಿದ್ದು ಅವರದೇ ಬ್ಯಾನರ್‌ ಸಿನಿಮಾಗಳ ಮೂಲಕ.

ಫಾರ್‌ ಏ ಚೇಂಜ್‌ ಈಗವರು ಕನ್ನಡದ ಪ್ರತಿಷ್ಠಿತ ಪ್ರೊಡಕ್ಷನ್‌ ಹೌಸ್‌ ಎಂದೇ ಖ್ಯಾತಿ ಪಡೆದಿರುವ ಹೊಂಬಾಳೆ ಫಿಲಂಸ್‌ ನಲ್ಲಿ ನಟನೆಯ ಜತೆಗೆ ನಿರ್ದೇಶನಕ್ಕೂ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಇದು ಅಷ್ಟು ಸುಲಭದ ಮಾತಲ್ಲ. ಸ್ಟಾರ್‌ ಡೈರೆಕ್ಟರ್‌ ಗಳೇ ಇವತ್ತು ಅವಕಾಶ ಎದುರು ನೋಡು ತ್ತಾ ಕುಳಿತಿರುವಾಗ, ಈ ಸ್ಟಾರ್‌ ಜೋಡಿಗೆ ಮಾತ್ರ ಎರಡು ಅವತಾರಕ್ಕೆ ಅವಕಾಶ ಸಿಕ್ಕಿದೆ. ಇದು ಸಾಧ್ಯವಾಗಿದ್ದುದಾದ್ರೂ ಹೇಗೆ ? ಅಷ್ಟು ದೊಡ್ಡ ಪ್ರೊಡಕ್ಷನ್‌ ಹೌಸ್‌ಗೆ ಆ ಸ್ಟಾರ್‌ ಜೋಡಿ ಮಾಡಿದ ಮೋಡಿಯಾದ್ರು ಎಂಥಹದು ?

ಅಂದ ಹಾಗೆ, ನಾವಿಲ್ಲಿ ಹೇಳಹೊರಟಿದ್ದು ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ ಹಾಗೂ ಡಿಟೆಕ್ಟಿವ್‌ ದಿವಾಕರ್‌ ಖ್ಯಾತಿಯ ರಿಷಬ್‌ ಶೆಟ್ಟಿ ಅವರ ಬಗ್ಗೆ. ಇವರಿಬ್ಬರು ಕರವಾಳಿ ಮೂಲದವರು ಅನ್ನೋದು ಮಾತ್ರವಲ್ಲ ಅತ್ಯಾಪ್ತ ಸ್ನೇಹಿತರು ಹೌದು. ‘ಕಿರಿಕ್‌ ಪಾರ್ಟಿ’ ಮೂಲಕ ಕನ್ನಡದಲ್ಲಿ ದೊಡ್ಡ ಹವಾ ಸೃಷ್ಟಿಸಿದ ಜೋಡಿ. ಸ್ಪೆಷಲ್‌ ಅಂದ್ರೆ, ಅಲ್ಲಿಂದಲೇ ಇವರಿಬ್ಬರಿಗೂ ದೊಡ್ಡ ಮಟ್ಟದ ನೇಮ್ ಅಂಡ್ ಫೇಮ್‌ ಎರಡು ಸಿಕ್ಕವು ಅನ್ನೋದೆಲ್ಲ ಹಳೇ ಮಾತೇ. ʼರಿಕ್ಕಿʼ ಮೂಲಕ ರಿಷಬ್ ಶೆಟ್ಟಿ ಡೈರೆಕ್ಟರ್ ಹ್ಯಾಟ್ ತೊಟ್ಟರೆ, ವೃತ್ತಿಯಲ್ಲಿ ಟೆಕ್ಕಿಯಾಗಿದ್ದ ರಕ್ಷಿತ್ ಶೆಟ್ಟಿ ‘ ಉಳಿದವರು ಕಂಡಂತೆ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು ಮಾತ್ರವಲ್ಲ, ಅಲ್ಲಿ ಅವರೇ ನಾಯಕರು ಆಗಿದ್ದರು. ಇನ್ನು ರಿಷಬ್ ಶೆಟ್ಟಿ ಡೈರೆಕ್ಟರ್ ಆಗುವ ಮುನ್ನ ʼಅಟ್ಟಹಾಸʼ ಹಾಗೂ ʼಲೂಸಿಯಾʼ ಚಿತ್ರಗಳಿಗೆ ಬಣ್ಣ ಹಚ್ಚಿ ನಟರಾದವರು. ಅಲ್ಲಿಂದ ಶುರುವಾದ ಅವರಿಬ್ಬರ ಜರ್ನಿಯಲ್ಲೀಗ ಬಿಗ್ ಟರ್ನಿಂಗ್ ಪಾಯಿಂಟ್.

ಯಾಕಂದ್ರೆ, ಅವರೀಗ ಆ್ಯಕ್ಟರ್ ಜತೆಗೆ ಡೈರೆಕ್ಟರ್ ಅವತಾರೊಂದಿಗೆ ತೆರೆ ಮೇಲೆ ಬರುತ್ರಿರುವುದು ‘ಕೆಜಿಎಫ್ ‘ಖ್ಯಾತಿಯ ಹೊಂಬಾಳೆ ಫಿಲಂಸ್ ನಿರ್ಮಾಣದ ಚಿತ್ರಗಳ ಮೂಲಕ. ಹೊಂಬಾಳೆ ಫಿಲಂಸ್ ಅಂದ್ರೆ ಇವತ್ತು ಭಾರತೀಯ ಚಿತ್ರರಂಗದಲ್ಲಿ ಮನೆ ಮಾತಾದ ಪ್ರೊಡಕ್ಷನ್‌ ಹೌಸ್‌. ಹಾಗೊಂದು ಹವಾ ಕ್ರಿಯೇಟ್ ಮಾಡಿದ್ದು ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ಚಿತ್ರ ‘ಕೆಜಿಎಫ‍್’. ಅದೇ ಕಾರಣಕ್ಕೆ ಇವತ್ತು ಫ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಫ್ಯಾನ್ಸ್ ‘ಕೆಜಿಎಫ್ 2’ ಗೆ ಕಾಯುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತಾಗಿದ್ದರೆ ಈ ಚಿತ್ರ ಇಷ್ಟರಲ್ಲಿಯೇ ಬಂದು, ಮತ್ತೊಂದು ಚರಿತ್ರೆ ಸೃಷ್ಟಿಸುತ್ತೋ ಏನೋ. ಆದರೆ ಕೊರೋನಾ, ಲಾಕ್ ಡೌನ್ ಅಂತ ಎಲ್ಲವೂ ಏರುಪೇರು ಆಗಿದೆ. ಈ ವರ್ಷದ ಅಂತ್ಯಕ್ಕೆ ಕೆಜಿಎಫ್‌ ಬಂದರೂ ಬರಬಹುದು. ಅದರಾಚೆ ಹೊಂಬಾಳೆ ಬಗ್ಗೆ ಕುತೂಹಲ ಇರೋದು, ಕೊರೋನಾ ಕಾಲದಲ್ಲೂ ಅದು ಬ್ಯಾಕ್‌ ಟು ಬ್ಯಾಕ್‌ ಸಿನಿಮಾ ಅನೌನ್ಸ್‌ ಮಾಡ್ತಿರೋ ಸಾಹಸಕ್ಕೆ.

ಕೊರೋನಾ ಮೊದಲ ಅಲೆ ಕಡಿಮೆ ಆಗಿ ಲಾಕ್‌ ಡೌನ್‌ ತೆರವಾದ ನಂತರ ಪ್ರಭಾಸ್‌ ಹಾಗೂ ಪ್ರಶಾಂತ್‌ ನೀಲ್‌ ಕಾಂಬಿನೇಷನ್‌ ಮೂಲಕ ʼಸಲಾರ್‌ʼ ಅನೌನ್ಸ್‌ ಅಯಿತು. ಸಲಾರ್‌ ಅದ್ದೂರಿ ವೆಚ್ಚದ ಸಿನಿಮಾ. ಆ ಚಿತ್ರಕ್ಕೆ ಹೊಂಬಾಳೆ ಫಿಲಂಸ್‌ ಖರ್ಚು ಮಾಡ್ತಿರೋದು ಹತ್ತಿಪ್ಪತ್ತು ಕೋಟಿ ಅಲ್ಲ, ಕನಿಷ್ಟ ಮೂನ್ನೂರು ಕೋಟಿ ಅಂತೆ. ಆದಾದ ನಂತರ ಮತ್ತೆ ಪವರ್‌ ಸ್ಟಾರ್‌ ಕಾಂಬಿನೇಷನ್‌ ನಲ್ಲಿ ʼದ್ವಿತ್ವʼ ಲಾಂಚ್‌ ಆಗಿದೆ. ಆದಾದ ಮೇಲೆ ರಕ್ಷಿತ್‌ ಶೆಟ್ಟಿ ನಟನೆ ಹಾಗೂ ನಿರ್ದೇಶನದ ʼರಿಚರ್ಡ್‌ ಆಂಟನಿʼ ಚಿತ್ರ. ಅದರ ಬೆನ್ನಲೇ ಈಗ ರಿಷಬ್‌ ಶೆಟ್ಟಿ ನಟನೆ ಹಾಗೂ ನಿರ್ದೇಶನದ ʼಕಾಂತಾರ ʼಚಿತ್ರ. ಡಿಫೆರೆಂಟ್ ಕಾನ್ಸೆಪ್ಟ್ ‌ಮೂಲಕ ಬಂದಿರುವ ಇದರ ಪೋಸ್ಟರ್‌ ಈಗ ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ. ಅದಕ್ಕೆ ಕಾರಣವೂ ಇದೆ. ಶಿವರಾಜ್‌ ಕುಮಾರ್‌ ಅಭಿನಯ ಹಾಗೂ ಚಂದ್ರಶೇಖರ್‌ ಬಂಡಿಯಪ್ಪ ನಿರ್ದೇಶನ ಒಂದು ಸಿನಿಮಾದ ಪೋಸ್ಟರ್‌ ಇದೆ ರೀತಿಯಲ್ಲಿತ್ತು. ಹಾಗಾಗಿ ಅದೇ ಸಿನಿಮಾ ಕಥೆ, ರಿಷಬ್‌ ಶೆಟ್ಟಿ ಅವರ ಕಾಂತಾರ ಚಿತ್ರದಲ್ಲೂ ಇದೆಯಾ ಅನ್ನೋದು ಫ್ಯಾನ್ಸ್‌ ಗೆ ಇರುವ ಡೌಟು.

ಅದೇನೆ ಇರಲಿ, ಬಿಡಿ, ರಿಯಾಲಿಟಿ ಮುಂದೆ ಗೊತ್ತಾಗುತ್ತೆ. ಅದು ಬಿಟ್ಟರೆ ನಾವಿಲ್ಲಿ ಪಾಯಿಂಟ್‌ ಔಟ್‌ ಮಾಡ್ತಿರೋದು, ಹೊಂಬಾಳೆಯಂತಹ ದೊಡ್ಡ ಬ್ಯಾನರ್‌ನಲ್ಲಿ ಇಬ್ಬರು ಶೆಟ್ರು ನಾಯಕರಾಗುವ ಜತೆಗೆ ಡೈರೆಕ್ಟರ್‌ ಅವಕಾಶವನ್ನು ಹೇಗೆ ಗಿಟ್ಟಿಸಿಕೊಂಡ್ರು ಅಂತ. ಇದು ನಮದ್ದಲ್ಲ, ಇಡೀ ಇಂಡಸ್ಟ್ರಿನಲ್ಲಿರೋ ದೊಡ್ಡ ಕುತೂಹಲವೂ ಹೌದು. ಯಾಕಂದ್ರೆ ಹೊಂಬಾಳೆ ಫಿಲಂಸ್‌ನಲ್ಲಿ ಬಂದ ಅಷ್ಟು ಸಿನಿಮಾಗಳಲ್ಲಿ ಇದುವರೆಗೂ ನಾಯಕರೇ ಬೇರೆ, ನಿರ್ದೇಶಕರೇ ಬೇರೆ. ಮೊದಲ‌ ಸಿನಿಮಾದಿಂದಲೂ ಬರೀ ಸ್ಟಾರ್ ನಟರನ್ನೇ ಪೋಕಸ್ ಮಾಡಿದೆ. ಬಜಾರ್ ನಲ್ಲಿ ಓಡುವ ಕುದುರೆಗಷ್ಟೇ ದುಡ್ಡು ಕಟ್ಟಿದೆ. ಫಾರ್‌ ಏ ಚೇಂಜ್‌ ಈಗ ರಕ್ಷಿತ್‌ ಶೆಟ್ಟಿ ಹಾಗೂ ರಿಷಬ್‌ ಶೆಟ್ಟಿ ಅವರಿಗೆ ನಟನೆಯ ಜತೆಗೆ ನಿರ್ದೇಶನಕ್ಕೂ ಅವಕಾಶ ಕೊಟ್ಟಿದೆ. ಆ ಮೂಲಕ ಹೊಂಬಾಳೆ ತೇರು ಈಗ ಕರಾವಳಿ ಕಡೆ ಮುಖ ಮಾಡಿದೆ. ಘಟ್ಟ ಇಳಿದು, ಪಟ್ಟ ಏರುವ ಆಸೆ ಹೊತ್ತಿದೆ. ಮುಗ್ಗರಿಸಿದರೆ ಮುಂದಿರೋದು ಸಮುದ್ರ ಎನ್ನುವ ಎಚ್ಚರವೂ ಅದಕ್ಕಿಲ್ಲ ಎನ್ನುವಂತೆಯೂ ಇಲ್ಲ. ಹೇಗೋ ಏನೋ ಎನ್ನವುದಕ್ಕಿಂತ ಇಬ್ಬರು ಶೆಟ್ರು ಮೇಲೂ ಆಗಾಧವಾದ ವಿಶ್ವಾಸ ಹೊತ್ತಿದೆ. ಚಿನ್ನದ ಸಾಮ್ರಾಜ್ಯಕ್ಕೆ ಒಡೆಯರಾದವರಿಗೆ ಸಮುದ್ರಕ್ಕೆ ಅಧಿಪತಿಯಾಗುವಾಸೆ ಇಟ್ಟುಕೊಂಡಿದೆ. ಅದಕ್ಕೆ ಕಾರಣ ಅವರಿಬ್ಬರ ಹಿನ್ನೆಲೆ.

ಕರಾವಳಿಯ ಮೂಲದ ಆ ಇಬ್ಬರು ಶೆಟ್ರು ಬುದ್ದಿವಂತರು. ಪ್ರತಿಭಾವಂ ತರು ಕೂಡ. ಸಿನಿ ದುನಿಯಾದಲ್ಲಿ ಆಕ್ಟರ್‌ ಆಗಿ ಗೆದ್ದ ಹಾಗಿಯೇ ಡೈರೆಕ್ಟ ರ್‌ ಆಗಿಯೂ ಸಕ್ಸಸ್‌ ಕಂಡಿದ್ದಾರೆ. ಇವರಿಬ್ಬರು ತುಂಬಾ ಡಿಫೆರೆಂಟ್‌ ಅಂತ ಅನ್ನೋದಿಕ್ಕೆ ಇಷ್ಟು ಸಾಕು. ಹೊಂಬಾಳೆ ಫಿಲಂಸ್‌ ಲೆಕ್ಕಚಾರದ ಹಿಂದೆಯೂ ಇದಿದ್ದು ಕೂಡ ಅದೇ ನಿರೀಕ್ಷೆ. ಯಾಕಂದ್ರೆ, ದೊಡ್ಡ ಸಂಸ್ಥೆ ಯಾವುತ್ತೂ ರಿಸ್ಕ್ ತೆಗೆದುಕೊಳ್ಳೋದಕ್ಕೆ ರೆಡಿ ಇರೋದಿಲ್ಲ.‌ ನಿರ್ದೇಶಕ ಹಾಗೂ ನಟ ಇಬ್ಬರು ಪವರ್ ಫುಲ್ ಅಂದರೆ ಮಾತ್ರ ಕಾಸು ಬಿಚ್ಚುತ್ತದೆ. ಅದರಲ್ಲಿ ಒಬ್ಬರು ಕೊಂಚ ಡಲ್‌ ಎನಿಸಿದರೂ ಖಜಾನೆ ಬಾಗಿಲು ಓಪನ್ ಮಾಡಲ್ಲ. ಇಷ್ಟಾಗಿಯೂ ರಕ್ಷಿತ್‌ ಶೆಟ್ಟಿ ಅವರಿಗೊಂದು ಸಿನಿಮಾ, ಅವರ ಸ್ನೇಹಿತ ರಿಷಬ್‌ ಶೆಟ್ಟಿ ಅವರಿಗೊಂದು ಸಿನಿಮಾ ವನ್ನು ಈ ಕೊರೋನಾ ನಡುವೆಯೂ ಹೊಂಬಾಳೆ ಫಿಲಂಸ್‌ ಅನೌನ್ಸ್‌ ಮಾಡುತ್ತದೆ ಅಂದ್ರೆ, ನಿರ್ದೇಶನದ ಜೊತೆಗೆ ಅವರಲ್ಲೊಬ್ಬ ಅಭಿನಯ ಕಲಾವಿದ ಇದ್ದಾನೆ ಅವನಿಗಾಗಲೇ ಜನರಿಂದ ವಿಜಯದ ಹಾರ ಹಾಕಿಸಿಕೊಂಡಿದ್ದಾನೆ‌ ಎನ್ನುವ ಕಾರಣಕ್ಕೆ. ಸದ್ಯಕ್ಕೆ ಇಬ್ಬರೂ ಈಗ ಕರಾವಳಿಯ ಕಥೆಗಳನ್ನೇ ಮುಂದಿಟ್ಟುಕೊಂಡೇ ಸಿನಿಮಾ ಮಾಡುವ ಸಿದ್ದತೆ ನಡೆಸಿದ್ದಾರೆ. ಎರಡು ಸಿನಿಮಾಗಳ ಮೊದಲ ಪೋಸ್ಟರ್‌ ಗಳು ಈಗಾಗಲೇ ದೊಡ್ಡ ಹವಾ ಎಬ್ಬಿಸಿವೆ. ಆ ಮೂಲಕ ಹೊಂಬಾಳೆ ಬ್ಯಾನರ್‌ ಮೂಲಕ ಮುಂದೆ ಪ್ಯಾನ್‌ ಇಂಡಿಯಾ ಲೆವೆನ್‌ ನಲ್ಲಿ ದಂತ ಕಥೆ ಸೃಷ್ಟಿಸುತ್ತಾರೆ ಎನ್ನುವುದು ದೊಡ್ಡ ಕುತೂಹಲ ಹುಟ್ಟಿಸಿದೆ. ಆ ಇಬ್ಬರು ಶೆಟ್ರಿಗೆ ಸಿನಿಲಹರಿ ಕಡೆಯಿಂದ ಆಲ್‌ ದಿ ಬೆಸ್ಟ್.

Related Posts

error: Content is protected !!