ಕನ್ನಡ ನಿರ್ದೇಶಕ ಸುಧೀರ್ ಅತ್ತಾವರ್ ದೂರದ ಮುಂಬೈನಲ್ಲಿದ್ದುಕೊಂಡೇ ಒಂದಷ್ಟು ಸುದ್ದಿ ಮಾಡುತ್ತಿದ್ದಾರೆ. ಈಗಾಗಲೇ ಬಾಲಿವುಡ್ ಅಂಗಳದಲ್ಲಿ ತಮ್ಮದೇ ಆದ ಸಕ್ಸಸ್ ಫಿಲ್ಮ್ಸ್ ಹೆಸರಿನ ಸ್ಟುಡಿಯೊ ಶುರು ಮಾಡಿ ಬಾಲಿವುಡ್ ಮಂದಿಯ ಫೇವರ್ ಎನಿಸಿರುವ ಸುಧೀರ್ ಅತ್ತಾವರ್, ಈಗ ಹೊಸದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಹಾಗಂತ ಅವರು ಹೊಸ ಹಿಂದಿ ಸಿನಿಮಾ ಶುರು ಮಾಡಿದ್ದಾರಾ? ಈ ಪ್ರಶ್ನೆ ಸಹಜ. ಅವರು ಈಗಾಗಲೇ ಮರಾಠಿ ಹಾಗು ಹಿಂದಿ ಭಾಷೆಯ ಸಿನಿಮಾ ಮಾಡಿದ್ದಾಗಿದೆ. ಹೊಸದೊಂದು ಪ್ಯಾನ್ ಇಂಡಿಯಾ ಚಿತ್ರಕ್ಕೂ ಪ್ಲಾನ್ ಮಾಡಿದ್ದಾರೆ. ಇದರ ಜೊತೆ ಹೊಸ ಕಾರ್ಯಕ್ಕೆ ಮುಂದಾಗಿದ್ದಾರೆ ಅನ್ನೋದೇ ಈ ಹೊತ್ತಿನ ವಿಶೇಷ.
ಹೌದು, ನಿರ್ದೇಶಕ ಸುಧೀರ್ ಅತ್ತಾವರ್ ಅವರು ಈಗ ಕೈ ಹಾಕಿರೋದು ದೇಶದ ಮಹಾನ್ ಸ್ವಾತಂತ್ರ್ಯ ಹೋರಾಟಗಾರರನ್ನು ಪರಿಚಯಿಸುವಂತಹ ಕೆಲಸಕ್ಕೆ. ಈಗಾಗಲೇ ಅದು ಬಾನುಲಿ ಸರಣಿ ಮೂಲಕ ಪ್ರಸಾರವಾಗುತ್ತಿದೆ. ಅಂದಹಾಗೆ, ‘ಹಮಾರೇ ಸ್ವತಂತ್ರ್ಯ ತಾ ಸೇನಾನಿ’ ಶೀರ್ಷಿಕೆಯಡಿ ಹೊಸ ಸರಣಿ ಶುರು ಮಾಡಿದ್ದು, ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.
ಸುಧೀರ್ ಅತ್ತಾವರ್ ಅವರು ಮುಂಬೈನಲ್ಲಿರೋ ತಮ್ಮಸಕ್ಸಸ್ ಫಿಲ್ಮ್ಸ್ ಮೂಲಕ ಈ ಬಾನುಲಿ ಸರಣಿಯನ್ನು ನಿರ್ಮಾಣ ಮಾಡಿದ್ದಾರೆ. ಡಿ.ಕೆ ಫ್ಲ್ಯಾಗ್ ಫೌಂಡೇಷನ್ ಈ ಕಾರ್ಯಕ್ರಮವನ್ನು ಅರ್ಪಿಸಿದ್ದು, ಡಿ.ಕೆ. ಫ್ಲ್ಯಾಗ್ ಫೌಂಡೇಷನ್ ನ ಡಾ. ರಾಕೇಶ್ ಬಕ್ಷಿ ಈ ಸರಣಿಯನ್ನು ನಡೆಸಿಕೊಡಲಿದ್ದಾರೆ. ಖ್ಯಾತ ಹಿನ್ನೆಲೆ ಗಾಯಕರಾದ ಶಾನ್, ಶರೋನ್ ಪ್ರಭಾಕರ್, ಆರತಿ ಮುಖರ್ಜಿ, ಡಾ.ಸಂದೇಶ್ ಮಾಯೆಕರ್, ಹಾಕಿ ಪ್ಲೇಯರ್ ಧನರಾಜ್ ಪಿಳೈ, ಹಜ್ ಹೌಸ್ ಅಧ್ಯಕ್ಷ ಮಕ್ಸೂದ್ ಅಹ್ಮದ್ ಖಾನ್, ಬೀನಾ ಸಂತೋಷ್ ಸೇರಿದಂತೆ ಇತರರು ಇಲ್ಲಿ ಭಾಗವಹಿಸುತ್ತಿದ್ದಾರೆ ಅನ್ನೋದು ವಿಶೇಷ.
ಅಂದಹಾಗೆ, ಈ ಕಾರ್ಯಕ್ರಮ ದೆಹಲಿ, ಮುಂಬೈ, ಕೋಲ್ಕತಾ, ಚೆನೈ,ಹೈದರಾಬಾದ್, ಫೋರ್ಟ್ ಬ್ಲೇರ್, ಚಂಡೀಘರ್,ಲಕ್ನೋ, ಅಹಮದಾಬಾದ್,ಪೂನಾ, ನಾಗ್ಪುರ, ಬೆಂಗಳೂರು, ಮಂಗಳೂರು ಸೇರಿ ದೇಶದ ಪ್ರಮುಖ ಬಾನುಲಿ ಕೇಂದ್ರಗಳಲ್ಲಿ ಈಗಾಗಲೇ ಶರುವಾಗಿದೆ. ಆಗಸ್ಟ್ 15ರವರೆಗೆ ಪ್ರತಿ ದಿನ ಸಂಜೆ4.30ರಿಂದ ಪ್ರಸಾರವಾಗುತ್ತಿದೆ. ವಿಶೇಷವೆಂದರೆ, ಈ ಬಾನುಲಿ ಸರಣಿ ಕಾರ್ಯಕ್ರಮ 75ನೇ ಸ್ವಾತಂತ್ರ್ಯ ಹೋರಾಟಗಾರರ ಕುರಿತಾಗಿದ್ದು, 15 ಕಂತುಗಳಲ್ಲಿ ಪ್ರಸಾರವಾಗಲಿದೆ.
ಅದೇನೆ ಇರಲಿ, ಕನ್ನಡಿಗ ಸುಧೀರ್ ಅತ್ತಾವರ್, ದೂರದ ಮುಂಬೈನಲ್ಲಿದ್ದುಕೊಂಡೇ ತಮ್ಮ ಪ್ರತಿಭಾವಂತರ ತಂಡ ಕಟ್ಟಿಕೊಂಡು, ಹೊಸ ಪ್ರಯತ್ನ ಮಾಡುತ್ತಲೇ ಇದ್ದಾರೆ. ಆ ಸಾಲಿಗೆ ಈ ಬಾನುಲಿ ಸರಣಿ ಕೂಡ ವಿನೂತನ ಪ್ರಯತ್ನ. ಇದು ಆ ತಂಡದ ದೇಶಾಭಿಮಾನಕ್ಕೊಂದು ಸಾಕ್ಷಿ ಅಲ್ಲದೆ ಮತ್ತೇನು? ಇನ್ನು ಇಂತಹ ಹಲವು ವಿಶೇಷ ಕಾರ್ಯಕ್ರಮಗಳು ಅವರ ಸಕ್ಸಸ್ ಫಿಲ್ಮ್ಸ್ ಮೂಲಕ ಬರಲಿ. ಹಾಗೆಯೇ ಅವೆಲ್ಲವೂ ಸಕ್ಸಸ್ ಆಗಲಿ ಅನ್ನೋದು ‘ಸಿನಿಲಹರಿ’ ಆಶಯ.