ಎರಡು ಸಿನಿಮಾದ್ದು ಒಂದೇ ಕಥೆನಾ ? ಹೌದು, ಹೀಗೊಂದು ಪ್ರಶ್ನೆ ಹುಟ್ಟು ಹಾಕಿದ್ದು ರಿಷಬ್ ಶೆಟ್ಟಿ ಆಕ್ಷನ್ ಕಟ್ ಹೇಳುವುದಿಕ್ಕೆ ಹೊರಟಿರುವ ʼಕಾಂತಾರʼ ಸಿನಿಮಾ. ಅಂದ ಹಾಗೆ, ಇದು ಹೊಂಬಾಳೆ ಫಿಲಂಸ್ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾ. ʼಬೆಲ್ ಬಾಟಮ್ʼ ಖ್ಯಾತಿಯ ನಟ ರಿಷಬ್ ಶೆಟ್ಟಿ ನಿರ್ದೇಶಿಸಿ, ನಾಯಕರಾಗಿ ಕಾಣಿಸಿಕೊಳ್ಳಲು ಹೊರಟಿದ್ದಾರೆ. ಶುಕ್ರವಾರವಷ್ಟೇ ಈ ಚಿತ್ರದ ಟೈಟಲ್ ಲಾಂಚ್‌ನ ಆಟ್ರ್ಯಾಕ್ಟಿವ್ ಪೋಸ್ಟರ್ ಬಂದಿದೆ. ಹಾಗೆಯೇ ಅದರಲ್ಲಿ ಒಂದಷ್ಟು ವಿವರ ರಿವೀಲ್ ಆಗಿದೆ. ಈಗ ಅದರ ಪೋಸ್ಟರ್ ಕುರಿತು ದೊಡ್ಡ ಸುದ್ದಿ ಆಗಿದೆ. ಅದಕ್ಕೆ ಕಾರಣ ಕಂಬಳ ಹಿನ್ನೆಲೆಯಲ್ಲಿ ಬಂದ ಪೋಸ್ಟರ್. ಈ ಪೋಸ್ಟರ್‌ನಲ್ಲಿ ಕೋಣನ ಓಟದಲ್ಲಿ ರಿಷಬ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಅಲ್ಲಿಗೆ ಇದು ಕೂಡ ಕರಾವಳಿಯ ಜನಪ್ರಿಯ ಜಾನಪದ ಕ್ರೀಡೆ ʼಕೋಣನ ಓಟʼ ಕುರಿತದ್ದೇ ಆಗಿರಬಹುದು ಅನ್ನೋದು ನೋಡುಗರ ಉಹೆ. ಅದೇ ಕಾರಣಕ್ಕೀಗ ಸೋಷಲ್ ಮೀಡಿಯಾದಲ್ಲಿ ಒಂದಷ್ಟು ಚರ್ಚೆ ಹುಟ್ಟಿಕೊಂಡಿದೆ. ಅದಕ್ಕೆ ಕಾರಣ ಎರಡು ವರ್ಷಗಳ ಹಿಂದೆ ʼರಥಾವರʼ ಖ್ಯಾತಿಯ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ರಿವೀಲ್ ಮಾಡಿದ್ದ ಆ ಪೋಸ್ಟರ್.
ಇಷ್ಟಕ್ಕೂ ಅಲ್ಲೇನಿತ್ತು ಗೊತ್ತಾ? ʼವೈರಮುಡಿʼ ಹೆಸರಲ್ಲಿ ಅವರು ತೆರೆಗೆ ತರಲು ಹೊರಟಿದ್ದ ಸಿನಿಮಾದ ಮೊದಲ ಪೋಸ್ಟರ್ ಅದು. ಅದರಲ್ಲಿ ನಟ ಶಿವರಾಜ್ ಕುಮಾರ್ ಕಂಬಳದ ಕೋಣವನ್ನು ಓಡಿಸುವ ಪೈಲ್ವಾನ್ ಲುಕ್ ಕೊಟ್ಟಿದ್ದರು. ಹಾಗೆಯೇ ಅವರ ಭಾವಚಿತ್ರದ ಹಿನ್ನೆಲೆಯಲ್ಲಿ ಕಂಬಳ ಓಟದ ಕೋಣಗಳು ನಿಂತಿದ್ದವು. ಅಲ್ಲಿಗೆ ಇದು ಕೂಡ ಕಂಬಳ ಕುರಿತ ಕಥಾ ಹಂದರದ ಸಿನಿಮಾವೇ ಎನ್ನುವುದಕ್ಕೆ ಈ ಪೋಸ್ಟರ್ ಸಾಕ್ಷಿ ಆಗಿತ್ತು. ಆ ಹೊತ್ತಿಗೆ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಕಥೆ, ಚಿತ್ರಕಥೆ ರೆಡಿ ಮಾಡಿಕೊಂಡು ಚಿತ್ರೀಕರಣಕ್ಕೆ ಹೊರಡುವ ಸಿದ್ದತೆಯಲ್ಲಿದ್ದರು. ದುರಾದೃಷ್ಟ ಅಂದ್ರೆ, ಆ ಹೊತ್ತಿಗೆ ಕೊರೋನಾ ಬಂತು. ಸಿನಿಮಾ ಚಿತ್ರೀಕರಣದ ಪ್ಲಾನ್ ಅಷ್ಟಕ್ಕೆ ನಿಂತಿದ್ದು ಉದ್ಯಮದ ಜನರಿಗೆ ಗೊತ್ತು. ಈಗ ನೋಡಿದರೆ ಅದೇ ಕಥಾಹಂದರವನ್ನೇ ಇಟ್ಟುಕೊಂಡಿರಬಹುದಾದ ಸಿನಿಮಾ ಎನ್ನುವ ಶಂಕೆ ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ನಟನೆಯʼ ಕಾಂತಾರʼ ಚಿತ್ರದ ಪೋಸ್ಟರ್ ಮೂಲಕ ಹುಟ್ಟಿದೆ.
ಈ ಬಗ್ಗೆ ಸೋಷಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಸಿನಿಲಹರಿ ಗೆ ಪ್ರತಿಕ್ರಿಯೆ ನೀಡಿದ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ, ಕಾಂತಾರ ಚಿತ್ರದ ಕಥೆ ನಿರ್ದಿಷ್ಟವಾಗಿ ಕಂಬಳಕ್ಕೆ ಸಂಬಂಧಿಸಿದ್ದಾ, ಅಥವಾ ಇನ್ನಾವುದೋ ಕಥೆಯೋ ನಂಗಿನ್ನು ಗೊತ್ತಿಲ್ಲ. ಆದರೆ ಅದೇ ಕಂಬಳವನ್ನೇ ಪ್ರಧಾನವಾಗಿಟ್ಟುಕೊಂಡು ರಿಷಬ್ ಅವರು ಸಿನಿಮಾ ಮಾಡಲು ಹೊರಟರೆ, ಒಬ್ಬ ನಿರ್ದೇಶಕನ ಶ್ರಮಕ್ಕೆ ಮಾಡಿದ ಅವಮಾನ ಆಗಲಿದೆ. ಯಾಕಂದ್ರೆ, ಒಂದು ಕಥೆ ಬರೆಯುವ ಕಷ್ಟ ಹೇಗಿರುತ್ತೆ ಅಂತ ಅವರಿಗೂ ಗೊತ್ತಿರುತ್ತದೆ. ಅದರಲ್ಲೂ ನಾನು ಒಂದು ಸಿನಿಮಾ ಕಥೆ ಮಾಡುವಾಗ ಯಾವುದೇ ನಿರ್ಮಾಪಕರನ್ನು ಅವಲಂಬಿಸಿ ಬರೆಯೋದಿಲ್ಲ. ನನ್ನದೇ ಖರ್ಚು ವೆಚ್ಚದಲ್ಲಿ ವರ್ಷಗಟ್ಟಲೆ ಸಂಶೋಧನೆ ಮಾಡಿ ಒಂದು ಸಿನಿಮಾದ ಕಥೆ ರೆಡಿ ಮಾಡುತ್ತೇನೆ. ಈ ನೋವಿನಿಂದ ಹೇಳೋದಾದ್ರೆ, ಇದೊಂದು ಕೃತಿಚೌರ್ಯವೇ ಹೌದುʼ ಎಂದು ಸಿಟ್ಟಾದರು.
ʼ ನಾನು ಕಂಬಳ ಕುರಿತು ಸಿನಿಮಾ ಮಾಡ್ಬೇಕು ಅಂತ ಹೋರಾಟಾಗ ಅದರ ಹಿನ್ನೆಲೆಯನ್ನು ವರ್ಷಗಟ್ಟಲೆ ಸಂಶೋಧಿಸಿದ್ದೇನೆ. ಆಮೇಲೆ ಒಂದು ಕಥೆ ರೆಡಿ ಮಾಡಿಕೊಂಡು, ಅದಕ್ಕೆ ತಕ್ಕಂತೆ ದೊಡ್ಡ ಸ್ಟಾರ್ ಇಟ್ಟುಕೊಂಡೇ ಸಿನಿಮಾ ಮಾಡಬೇಕು ಅಂತ ಶಿವಣ್ಣ ಅವರನ್ನು ಆಯ್ಕೆ ಮಾಡಿಕೊಂಡೇ. ಇದೆಲ್ಲ ರಿಷಬ್ ಅವರಿಗೂ ಗೊತ್ತಿರುತ್ತದೆ. ಯಾಕಂದ್ರೆ ಅವರು ಕೂಡ ಹಲವಾರು ವರ್ಷಗಳಿಂದ ಸಿನಿಮಾ ಜಗತ್ತಿನಲ್ಲಿಯೇ ಇದ್ದಾರೆ. ಅವರಿಗೆ ನಮ್ಮ ಕಷ್ಟಗಳು ಗೊತ್ತಿದ್ದರೆ ನಾನು ಮಾಡ ಹೊರಟ ಸಿನಿಮಾದ ಕಥೆಯನ್ನೇ ಕಾಫಿ ಮಾಡುವ ಹಾಗೆ ಸಿನಿಮಾ ಮಾಡೋದಿಲ್ಲ ಅಂತ ಭಾವಿಸಿದ್ದೇನೆ. ಇಷ್ಟಾಗಿಯೂ ಅವರು ಒಂದು ಸೌಜನ್ಯಕ್ಕಾದರೂ ನನ್ನ ಕೇಳಬಹುದಾಗಿತ್ತು ಎನ್ನುವ ನೋವಿದೆʼ ಎನ್ನುತ್ತಾರೆ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ.
ಶುಕ್ರವಾರ ರಿವೀಲ್ ಆಗಿರುವ ʼಕಾಂತಾರʼ ಚಿ ತ್ರದ ಫಸ್ಟ್ ಲುಕ್ ನಲ್ಲಿ ಕಿರಿಕ್ ಪಾರ್ಟಿ ಖ್ಯಾತಿಯ ರಿಷಬ್ ಶೆಟ್ಟಿ ಕಂಬಳದ ಕೋಣ ಓಡಿಸುವ ಜಟ್ಟಿಯ ವೇಷದಲ್ಲಿದ್ದಾರೆ. ಕೋಣಗಳು ಓಟ ಕಿತ್ತಿವೆ. ಈ ಪೋಸ್ಟರ್ ಕೂಡ ಹೀಗಿದೆ ಅಂದ್ಮೇಲೆ ಇದು ಕೂಡ ಕಂಬಳ ಕುರಿತಾದ ಸಿನಿಮಾ ಅನ್ನೋದ್ರಲ್ಲಿ ನೋ ಡೌಟ್. ಹಾಗಂತ ನಿರ್ದೇಶಕ ರಿಷಬ್ ಶೆಟ್ಟಿ ಅವರಾ ಗಲಿ, ಹೊಂಬಾಳೆ ಫಿಲಂಸ್ ಕಡೆಯಿಂದಾಗಲಿ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಆದರೆ ಮೇಲ್ನೋಟದಲ್ಲಿಯೇ ಪೋಸ್ಟರ್ ಕಂಬಳದ ಕಥೆ ಹೇಳುವು ದರಿಂದ ಸಹಜವಾಗಿಯೇ ಸೋಷಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದ್ದು ಹೌದು. ಆದರೆ ರಿಷಬ್ ಶೆಟ್ಟಿ ಅವರ ಆಪ್ತವಲಯದ ಪ್ರಕಾರ ಕಾಂತಾರ ಎನ್ನುವುದೊಂದು ದಂತಕಥೆ. ಕಂಬಳದ ಕಥೆಗೂ ಅದಕ್ಕೂ ಸಂಬಂಧವೇ ಇಲ್ಲವಂತೆ.