ಬೆಳ್ಳಿತೆರೆಗೆ `ಕಲಿವೀರ’ ಲಗ್ಗೆ; ಸಿನಿ ಪ್ರೇಮಿಗಳು ಏನಂದ್ರು ? ಕೈ ಹಿಡಿದು ಕಾಪಾಡ್ಬೇಕಿದೆ ಮುಕ್ಕೋಟಿ ಒಡೆಯ !?

ಚಿತ್ರ ವಿಮರ್ಶೆ

  • ವಿಶಾಲಾಕ್ಷಿ

ಶುಭ ಶುಕ್ರವಾರ ಸಿನಿ ಶುಕ್ರವಾರ ಚಿತ್ರಮಂದಿರಕ್ಕೆ ಸಿನಿಮಾವೊಂದು ಲಗ್ಗೆ ಇಟ್ಟಿದೆ. ಚಿತ್ರಮಂದಿರಗಳು ಮದುವಣಗಿತ್ತಿಯಂತೆ ಕಂಗೊಳ್ಳಿಸುತ್ತಿವೆ, ಪ್ರೇಕ್ಷಕ ಮಹಾಷಯರು ಸಾಗರೋಪಾದಿಯಲ್ಲಿ ಥಿಯೇಟರ್‌ನತ್ತ ದೌಡಾಯಿಸುತ್ತಿದ್ದಾರೆ. ಈಗಾಗಲೇ ಹೌಸ್‌ಫುಲ್ ಬೋರ್ಡ್ಬಿದ್ದಿದೆ. ಫಿಲಂ ಟೀಮ್‌ ಮೊಗದಲ್ಲಿ ಮಂದಹಾಸ ಮೂಡಿದೆ. ಈ ರೀತಿ ಬರೆಯುವ ಸಂದರ್ಭ ಆದಷ್ಟು ಬೇಗ ಬರಬೇಕು. ಸದ್ಯದ ಪರಿಸ್ಥಿತಿಯನ್ನು ನೋಡಿದ್ರೆ, ಕೊರೊನಾ ಮೂರನೇ ಅಲೆಯ ಅವಾಂತರವನ್ನು ಸೂಕ್ಷವಾಗಿ ಗಮನಿಸಿದರೆ ಅಂತಹದ್ದೊಂದು ಸಂದರ್ಭ ಹಾಗೂ ಸನ್ನಿವೇಶ ಸದ್ಯಕ್ಕಿಲ್ಲ ಎನ್ನುವ ಸೂಚನೆ ಸಿಕ್ಕರೂ ಕೂಡ ಹುಂಬು ಧೈರ್ಯ ಮಾಡಿ ಮಲ್ಟಿಪ್ಲೆಕ್ಸ್ ಅಖಾಡಕ್ಕೆ ಧುಮ್ಕಿರುವ `ಕಲಿವೀರ’ನ ಕಾನ್ಫಿಡೆನ್ಸ್‌ಗೆ ಉಘೇ ಉಘೇ ಎನ್ನಲೆಬೇಕು.

ಕಲಿವೀರ ಕೊರೊನಾ ಎರಡನೇ ಅಲೆಯ ನಂತರ ಬಿಡುಗಡೆಯಾಗಿರುವ ಕನ್ನಡದ ಮೊದಲ ಚಿತ್ರ. ಕೊರೊನಾ ಮೂರನೇ ಅಲೆ ಶುರುವಾಗುತ್ತಂತೆ, ಮತ್ತೆ ಲಾಕ್‌ಡೌನ್ ಮಾಡ್ತಾರಂತೆ ಎನ್ನುವ ಸದ್ದುಗದ್ದಲ್ಲದ ನಡುವೆಯೂ ಕೂಡ `ಕಲಿವೀರ’ ಚಿತ್ರವನ್ನು ರಿಲೀಸ್ ಮಾಡಿದ್ದಾರೆ. ಚಿತ್ರಮಂದಿರಕ್ಕೆ ಸರ್ಕಾರ ಶೇಕಡ 100ರಷ್ಟು ವಿನಾಯಿತಿಯನ್ನು ನೀಡದ ಕಾರಣ ಸಿಂಗಲ್ ಸ್ಕ್ರೀನಿಂಗ್‌ ಚಿತ್ರಮಂದಿರಗಳು ಇನ್ನೂ ಬಾಗಿಲು ತೆರೆದಿಲ್ಲ. ಆದರೆ, ಮಾಲ್ ಮಂದಿ 50 ಪರ್ಸೆಂಟ್ ಆದರೂ ಪರವಾಗಿಲ್ಲ ಸಿನಿಮಾ ಹಾಕೋದಕ್ಕೆ ರೆಡಿ ಇರೋದ್ರಿಂದ ಕಲಿವೀರ ಚಿತ್ರತಂಡ ಕರ್ನಾಟಕದಾದ್ಯಂತ ಬಹುತೇಕ ಮಲ್ಟಿಪ್ಲೆಕ್ಸ್‌ ಗಳಲ್ಲಿ ತಮ್ಮ ಚಿತ್ರವನ್ನು ಬಿಡುಗಡೆಗೊಳಿಸಿದೆ.

ಹಾಗಾದ್ರೆ, ಕಲಿವೀರ ಚಿತ್ರ ಹೇಗಿದೆ? ಕಥೆಯ ತಿರುಳೇನು? ಮಲ್ಟಿಪ್ಲೆಕ್ಸ್‌ನಲ್ಲಿ ಸಿನಿಮಾ ನೋಡಿದ ಕ್ಲಾಸ್ ಮಂದಿ ಏನಂದ್ರು? ಹುಂಬು ಧೈರ್ಯ ಮಾಡಿ ರಿಲೀಸ್ ಮಾಡಿದ ಚಿತ್ರತಂಡ ಖುಷಿಯಾಗಿದೆಯಾ? ಕಲಿವೀರನ ಹುಚ್ಚು ಸಾಹಸಕ್ಕೆ ಮೆಚ್ಚುಗೆ ಸಿಕ್ಕಿತಾ? ಏಕಲವ್ಯನ ಚೊಚ್ಚಲ ಅಭಿನಯಕ್ಕೆ ಸಿನಿರಸಿಕರು ಉಘೇ ಉಘೇ ಎಂದರಾ? ಈ ರೀತಿ ಒಂದಿಷ್ಟು ಪ್ರಶ್ನೆಗಳು ಕಾಡುತ್ತವೆ. ಕಲಿವೀರನ ಬಗ್ಗೆ ಹೇಳುವುದಾದರೆ..,

ಕಲಿವೀರ' ಸ್ಯಾಂಡಲ್‌ವುಡ್ ಅಂಗಳದಲ್ಲಿ ಟೀಸರ್ ಹಾಗೂ ಟ್ರೇಲರ್‌ನಿಂದಲೇ ಕೂತೂಹಲ ಕೆರಳಿಸಿದ್ದ ಚಿತ್ರ. ಕಥೆ-ಚಿತ್ರಕಥೆ ಹೇಗಿರಬಹುದು ಎನ್ನುವ ಲೆಕ್ಕಚ್ಚಾರಕ್ಕಿಂತ ನಾಯಕ ಏಕಲವ್ಯನ ಆಕ್ಷನ್ ಧಮಾಕ ನೋಡುವುದಕ್ಕೆ ಒಂದಿಷ್ಟು ಮಂದಿ ಕೌತುಕದಿಂದ ಕಾಯ್ತಿದ್ದರು. ಆ ಕೂತೂಹಲಕ್ಕೆ ಇವತ್ತು ತೆರೆಬಿದ್ದಿದೆ. ಡ್ಯೂಪ್-ರೋಪ್ ಹಾಕಿಸಿಕೊಳ್ಳದೆ ಕಲಿವೀರ ಹೊಡೆದಾಡಿರುವುದನ್ನು ನೋಡಿದರೆ ಎದೆ ಝಲ್ ಎನಿಸುತ್ತೆ. ಕಳರಿಪಯಟ್ಟು ಸಮರ ಕಲೆಯಲ್ಲಿ ಪ್ರವೀಣರಾಗಿರುವ ಏಕಲವ್ಯ ʼಕಲಿವೀರ’ನಾಗಿ ಕಮಾಲ್ ಮಾಡಿದ್ದಾರೆ. ಚೊಚ್ಚಲ ಸಿನಿಮಾ ಆದರೂ ಕೂಡ ಹತ್ತಾರು ಸಿನಿಮಾ ಮಾಡಿರುವ ನಟರಂತೆ ಕ್ಯಾಮೆರಾ ಎದುರಿಸಿದ್ದಾರೆ. ಏನಾದರೊಂದು ಸಾಧನೆ ಮಾಡೋವರೆಗೂ ಗಡ್ಡ ತೆಗಿಯಲ್ಲ-ಮೀಸೆ ಬೋಳಿಸಲ್ಲ ಅಂತ ಪಣತೊಟ್ಟು ಸಾಧಿಸಿ ತೋರಿಸಿದ್ದಾರೆ. ಭರ್ತಿ ಮೂವತ್ತು ವರ್ಷದ ಕನಸನ್ನು ನನಸು ಮಾಡಿದ್ದಾರೆ. ಜೀವಂತವಾಗಿ ಉಳಿದಿಲ್ಲದ ಹೆತ್ತವ್ವನ ಮಹದಾಸೆಯೊಂದನ್ನು ಈಡೇರಿಸಿ ಬೆಳ್ಳಿಪರದೆ ಮೇಲೆ ಮೆರವಣಿಗೆ ಹೊರಟಿದ್ದಾರೆ.

ಇಷ್ಟೆಲ್ಲಾ ಹೇಳಿದ್ಮೇಲೆ ಕಲಿವೀರ' ಕಥೆ ಏನು? ಕೊರೊನಾ ಆತಂಕಬಿಟ್ಟು ನಾವ್ಯಾಕೆ ಮಲ್ಟಿಪ್ಲೆಕ್ಸ್‌ಗೆ ಹೋಗಿ ಸಿನಿಮಾ ನೋಡ್ಬೇಕು? ಒಂದು ವೇಳೆ ದುಡ್ಡು ಕೊಟ್ಟು ಮಾಲ್‌ಗೆ ಹೋಗಿ ಸಿನಿಮಾ ನೋಡಿದರೆಕಲಿವೀರ’ ನಮ್ಮನ್ನು ರಂಜಿಸುತ್ತಾನೆಯೇ? ಕೊಟ್ಟ ದುಡ್ಡಿಗೆ ನಮಗೆ ಮೋಸ ಆಗುವುದಿಲ್ಲವೇ? ಕಂಪ್ಲೀಟ್ ಫ್ಯಾಮಿಲಿ ಕರೆದುಕೊಂಡು ಹೋಗಿ ಸಿನಿಮಾ ನೋಡಬಹುದೇ? ಹಂಡ್ರೆಡ್‌ ಪರ್ಸೆಂಟ್ ಅಲ್ಲ ಅಂದರೂ ಕೂಡ ೫೦ ಪರ್ಸೆಂಟ್ ಶ್ಯೂರಿಟಿ ಕೊಡಬಹುದು. `ಕಲಿವೀರ’ ನಿಮ್ಮನ್ನ ಸೀಟಿನಲ್ಲಿ ಕೂರಿಸುತ್ತಾನೆ. ಕಣ್ಣುಬ್ಬು ಎಗಿರಿಸುತ್ತಾ, ಕಣ್ಣಲ್ಲೇ ಅಭಿನಯಿಸುತ್ತಾ, ಜಬರ್ದಸ್ತ್ ಆಕ್ಷನ್ ಮಾಡುವ ಜೊತೆಗೆ ಪ್ರಾಣಿ-ಪಕ್ಷಿಯಂತೆ ಸೌಂಡ್ ಮಾಡುತ್ತಾ ರಂಜಿಸುತ್ತಾನೆ. ತಬಲನಾಣಿಯವರ ಕಾಮಿಡಿ, ಅನಿತಾಭಟ್‌ ಅವರ ಗ್ಲಾಮರ್ ನೋಟ ಕಿಕ್ ಕೊಡುತ್ತೆ. ಪಾವನಗೌಡ-ಚಿರಶ್ರೀ ಅಂಚನ್ ಇಬ್ಬರು ನಟಿಯರು ಗಮನ ಸೆಳೆಯುತ್ತಾರೆ. ಡ್ಯಾನಿ ಕುಟ್ಟಪ್ಪ ಖಳನಾಯಕರಾಗಿ, ರಮೇಶ್ ಪಂಡಿತ್ ಮಂತ್ರವಾದಿಯಾಗಿ ಮಂತ್ರಮುಗ್ದಗೊಳಿಸ್ತಾರೆ.

ಯಾರು ಈ ಕಲಿ?

ʼಕಲಿ' ಒಬ್ಬ ಆದಿವಾಸಿ ಜನಾಂಗಕ್ಕೆ ಸೇರಿದವ. ತಮ್ಮ ಸಮುದಾಯಕ್ಕೆ ಆಗುವ ಅನ್ಯಾಯದ ವಿರುದ್ದ ಸಿಡಿದೆದ್ದು ಪ್ರತಿಕಾರ ತೀರಿಸಿಕೊಳ್ತಾನೆ. ವಜ್ರದ ಶಿವಲಿಂಗವೇ ಕಲಿವೀರ’ ಚಿತ್ರ ಕಥೆಯ ಪ್ರಮುಖ ತಿರುಳು. ಆದಿವಾಸಿ ಸಮುದಾಯ ಈ ವಜ್ರದ ಶಿವಲಿಂಗವನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿಕೊಳ್ಳುತ್ತಿತ್ತು. ಈ ವಜ್ರದ ಶಿವಲಿಂಗದ ಮೇಲೆ ಆಫ್ಗಾನ್ ದೊರೆ ಘಡಾಫು ಕಣ್ಣಿಟ್ಟು ಸಂಚು ರೂಪಿಸ್ತಾನೆ. ಹೇಗಾದರೂ ಮಾಡಿ ಆದಿವಾಸಿ ಸಮುದಾಯವನ್ನು ಮಟ್ಟ ಹಾಕಿ ವಜ್ರದ ಶಿವಲಿಂಗ ವಶಪಡಿಸಿಕೊಳ್ಳೋಕೆ ಪ್ಲಾನ್ ರೂಪಿಸ್ತಾನೆ. ಅದರಂತೇ ಎಲ್ಲರನ್ನೂ ನಾಶಪಡಿಸುತ್ತಾನೆ. ಆದರೆ, ಕಲಿಯನ್ನು ಮಟ್ಟ ಹಾಕೋದಕ್ಕೆ ಸಾಧ್ಯವಾಗೋದಿಲ್ಲ. ವಜ್ರದ ಶಿವಲಿಂಗ ಆಫ್ಗಾನ್ ದೊರೆ ಘಡಾಫು ಕೈ ಸೇರಲ್ಲ. ಅದು ಹೇಗೆ ಎಂತ ಅನ್ನೋದಕ್ಕೆ ನೀವು ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡ್ಬೇಕು. ಅಂದ್ಹಾಗೇ,
ಮೊಹಮ್ಮದ್ ಘಜ್ನಿ ಹಾಗೂ ಮೊಹಮ್ಮದ್ ಘೋರಿ ಹಿಂದೂ ಸ್ಥಾನದ ಮೇಲೆ ದಂಡೆತ್ತಿ ಬಂದು ಎಷ್ಟೋ ದೇವಸ್ತಾನಗಳನ್ನು ಹೊಡೆದುರುಳಿಸಿ ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆನ್ನುವುದಕ್ಕೆ ಇತಿಹಾಸ ಪುಟದಲ್ಲಿ ಪುರಾವೆಗಳಿವೆ. ಆ ಪುರಾವೆಯನ್ನ ಇಟ್ಕೊಂಡು ಕಾಲ್ಪನಿಕವಾಗಿ ಕಥೆ ಮಾಡಿಟ್ಟುಕೊಂಡ ನಿರ್ದೇಶಕ ಅವಿಯವರು, `ಕಲಿವೀರ’ ಚಿತ್ರ ಮಾಡಿದ್ದಾರೆ. ಕಥೆಯಷ್ಟೇ ನಿರೂಪಣೆ ಕೂಡ ಸೊಗಸಾಗಿದೆ. ಅಲ್ಲಿ ದೇಸಿ ಸೊಗಡನ್ನು ಅಷ್ಟೇ ಅರ್ಥಪೂರ್ಣವಾಗಿ ಬಿಂಬಿಸಿದ್ದಾರೆ ಕೂಡ. ಇನ್ನು, ಚಿತ್ರಕ್ಕೆ ಪೂರಕವಾಗಿ ಕ್ಯಾಮೆರಾ ಕಣ್ಣು ಏಕಲವ್ಯನ ಸ್ಪೀಡ್‌ಗೆ ತಕ್ಕಂತೆ ವರ್ತಿಸಿದೆ. ಸಂಗೀತ ಕೂಡ ಚಿತ್ರದ ವೇಗಕ್ಕೆ ಹೆಗಲು ಕೊಟ್ಟಿದೆ. ಸಿನಿಮಾಗೆ ಸಂಕಲನ ಕೂಡ ಮುಖ್ಯ. ಇಲ್ಲಿ ಕತ್ತರಿ ಪ್ರಯೋಗವೂ ತನ್ನ ವೇಗ ಕಳೆದುಕೊಂಡಿಲ್ಲ. ಇಷ್ಟಾಗಿಯೂ ಈ ಕಲಿವೀರನ ಬಗ್ಗೆ ನೋಡುವ ಕುತೂಹಲವೇನಾದರೂ ಇದ್ದರೆ, ಥಿಯೇಟರ್‌ನತ್ತ ಮುಖಮಾಡಬಹುದು.

ಚಿತ್ರ : ಕಲಿವೀರ
ನಿರ್ದೇಶಕ : ಅವಿನಾಶ್‌ ಭೂಷಣ್
ನಿರ್ಮಾಪಕ:‌ ಹನುಮಂತಪ್ಪ, ರಾಜು ಪೂಜಾರ್
ಸಂಗೀತ- ವಿ.ಮನೋಹರ್
ತಾರಾಗಣ: ಏಕಲವ್ಯ, ತಬಲಾನಾಣಿ, ಚಿರಶ್ರೀ ಅಂಚನ್‌, ನೀನಾಸಂ ಅಶ್ವತ್ಥ್‌, ಪಾವನಾ, ಅನಿತಾಭಟ್‌, ಡ್ಯಾನಿ ಕುಟ್ಟಪ್ಪ, ಮೋಹನ್‌ ಜುನೇಜಾ ಇತರರು.

Related Posts

error: Content is protected !!