ಗ್ರೂಫಿ ಸಾಂಗ್‌ ಹೊರಬಂತು;‌ ಹೊಸಬರಿಗೆ ಅರ್ಜುನ್‌ ಜನ್ಯ ಸಾಥ್ -‌ ವರಮಹಾಲಕ್ಷ್ಮಿ ಹಬ್ಬಕ್ಕೆ ಚಿತ್ರ ರಿಲೀಸ್


“ಗ್ರೂಫಿ”… ಇದು ಹೊಸಬರ ಸಿನಿಮಾ. ಏನಿದು ಗ್ರೂಫಿ? ಸಾಮಾನ್ಯವಾಗಿ ಎಲ್ಲರಿಗೂ ಇದೊಂದೇ ಈ ಪ್ರಶ್ನೆ. ಒಬ್ಬರೇ ಫೋಟೋ ಕ್ಲಿಕ್ಕಿಸಿಕೊಂಡರೆ ಸೆಲ್ಫಿ. ಅದೇ ಗುಂಪಾಗಿ ತೆಗೆದುಕೊಳ್ಳುವುದಕ್ಕೆ ಗ್ರೂಫಿ ಅಂತಾರೆ. ಅಂದಹಾಗೆ, ಈ ಚಿತ್ರವನ್ನು ರವಿ ಅರ್ಜುನ್‌ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಅರ್ಯನ್‌ ಹೀರೋ. ಪದ್ಮಶ್ರೀ ಸಿ.ಜೈನ್‌ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಅರ್ಜುನ್‌ ಜನ್ಯ ಅವರು ಸಾಂಗ್‌ ರಿಲೀಸ್‌ ಮಾಡಿ ಶುಭಹಾರೈಸಿದರು. ಈ ವೇಳೆ ಮಾತಿಗಿಳಿದ ಅವರು, ಸಿನಿಮಾ ಹಾಡುಗಳು ಚೆನ್ನಾಗಿವೆ. ನನ್ನ ಪ್ರಕಾರ ಗ್ರೂಫಿ ಅಂದರೆ ಹೆಮ್ಮೆ ಅಂತ. ಸಂಗೀತ ನಿರ್ದೇಶಕ ವಿಜೇತ್ ಕೃಷ್ಣ ಹಾಗೂ ನಿರ್ದೇಶಕ ರವಿ ಅರ್ಜುನ್ ಸ್ನೇಹಿತರು. ಇಪ್ಪತ್ತು ವರ್ಷದ ಹಿಂದೆ ಇದೇ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ವಿ.ಮನೋಹರ್ ಅವರ ಬಳಿ ನನ್ನ ಸಂಗೀತ ಪಯಣ ಆರಂಭವಾಗಿತ್ತು. ನನ್ನ ಸ್ನೇಹಿತನ ಮೊದಲ ಸಿನಿಮಾ ಆಡಿಯೋ ರಿಲೀಸ್ ಇಲ್ಲೇ ಆಗುತ್ತಿರುವುದು ಕಾಕತಾಳೀಯ. ಇಡೀ ತಂಡಕ್ಕೆ ಶುಭವಾಗಲಿ ಎಂಬುದು ಅರ್ಜುನ್‌ ಜನ್ಯ ಮಾತು.


ನಿರ್ದೇಶಕ ರವಿ ಅರ್ಜುನ್‌ ಹೇಳುವಂತೆ, “ಗ್ರೂಫಿ ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥೆ ಆಧಾರಿತ ಸಿನಿಮಾ. ಒಬ್ಬರೆ ಫೋಟೋ ತೆಗೆದುಕೊಂಡರೆ ಸೆಲ್ಫಿ. ಗುಂಪಾಗಿ ತೆಗೆದುಕೊಳ್ಳುವುದನ್ನು “ಗ್ರೂಫಿ” ಎನ್ನುತ್ತಾರೆ ಈಗಿನ ಯುವಪೀಳಿಗೆ. ಚಿತ್ರದ ಶೀರ್ಷಿಕೆಗೆ ಹಾಗೂ ಕಥೆಗೆ ಸಂಬಂಧವಿದೆ ಹಾಗಾಗಿ ಈ ಹೆಸರಿಟ್ಟಿದ್ದೇವೆ. ಈ ಚಿತ್ರದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಪ್ರಯತ್ನ ಮಾಡಿದ್ದೇವೆ. ಬೆಂಗಳೂರು, ಹೊನ್ನಾವರ, ಮಡಿಕೇರಿ ಹಾಗೂ ಪಶ್ಚಿಮ ಘಟ್ಟಗಳ ಸುಂದರ ಪರಿಸರದಲ್ಲಿ ಚಿತ್ರೀಕರಣ ನಡೆದಿದೆ ಎಂಬುದು ರವಿ ಅರ್ಜುನ್ ಮಾತು.


ನಾಯಕ ಆರ್ಯನ್‌ ಇಲ್ಲಿ ಛಾಯಾಗ್ರಾಹಕನ ಪಾತ್ರ ಮಾಡಿದ್ದಾರಂತೆ. ಚಿತ್ರ ನೋಡಿ ಹರಸಿ ಅನ್ನುತ್ತಾರೆ ನಾಯಕ ಆರ್ಯನ್. ನಾಯಕಿ ಪದ್ಮಶ್ರೀ ಸಿ.ಜೈನ್‌ ಅವರಿಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಅವರು ಎಲ್ಲರೊಂದಿಗೆ ಸೆಲ್ಫಿ ತೆಗೆದುಕೊಂಡು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದು. ಎಷ್ಟು ಲೈಕ್ ಹಾಗೂ ಕಾಮೆಂಟ್ ಬರುತ್ತದೆ ಎಂದು ಕಾಯುವ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರಂತೆ.
ಸಂಗೀತ ನಿರ್ದೇಶಕ ವಿಜೇತ್‌ ಕೃಷ್ಣ ಅವರಿಗೆ ಅವರ ಗುರು ಅರ್ಜುನ್‌ ಜನ್ಯ ಅವರು ಸಾಂಗ್‌ ರಿಲೀಸ್‌ ಮಾಡಿದ್ದು ಖುಷಿ ಕೊಟ್ಟಿದೆಯಂತೆ.

ಇನ್ನು ನಿರ್ಮಾಪಕ ಕೆ.ಜಿ.ಸ್ವಾಮಿ ಅವರಿಗೆ ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತಂತೆ. ವರಮಹಾಲಕ್ಷ್ಮೀ ಹಬ್ಬದಂದು ಸುಮಾರು ನೂರಿಪ್ಪತ್ತಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ನಮ್ಮ ಚಿತ್ರ ಬಿಡುಗಡೆ ಮಾಡುತ್ತಿದ್ದೇವೆ. ಉತ್ತಮ ಸಂದೇಶ ಇರುವ ಈ ಚಿತ್ರಕ್ಕೆ ನಿಮ್ಮ ಬೆಂಬಲವಿರಲಿ ಎಂದರು ಅವರು.
ಅಜಯ್ ಲಕ್ಷ್ಮೀಕಾಂತ್ ಛಾಯಾಗ್ರಹಣ ಮಾಡಿದರೆ, ವಿಜೇತ್ ಚಂದ್ರ ಸಂಕಲನ ಮತ್ತು ಇಮ್ರಾನ್ ಸರ್ದಾರಿಯಾ, ಮೋಹನ್ ನೃತ್ಯ ನಿರ್ದೇಶನವಿದೆ. ಚಿತ್ರದಲ್ಲಿ ಗಗನ್, ಉಮಾ ಮಯೂರಿ, ಪ್ರಜ್ವಲ್, ಸಂಧ್ಯಾ, ಶ್ರೀಧರ್, ಹನುಮಂತೇಗೌಡ, ಸಂಗೀತ, ರಜನಿಕಾಂತ್ ನಟಿಸಿದ್ದಾರೆ.

ಚಿತ್ರದ ನಾಲ್ಕು ಹಾಡುಗಳಿಗೆ ಜಯಂತ ಕಾಯ್ಕಿಣಿ, ಹೃದಯ ಶಿವ, ಚೇತನ್ ಕುಮಾರ್, ರವಿ ಅರ್ಜುನ್ ಬರೆದಿದ್ದಾರೆ. ಸಂತೋಷ್ ವೆಂಕಿ, ಮಾನಸ ಹೊಳ್ಳ, ಅನಿರುದ್ಧ ಶಾಸ್ತ್ರಿ, ವಿಜೇತ್ ಕೃಷ್ಣ ಹಾಗೂ ರಕ್ಷ ಹಾಡಿದ್ದಾರೆ.

Related Posts

error: Content is protected !!