ಒಬ್ಬ ನಟನ ವೃತ್ತಿ ಬದುಕಲ್ಲಿ ಐನೂರನೇ ಸಿನಿಮಾ ಅನ್ನೋದು ನಿಜಕ್ಕೂ ಮೈಲಿಗಲ್ಲು. ಅದರಲ್ಲೂ ಅಪರೂಪದ ನಟರಾಗಿ ಗುರುತಿಸಿಕೊಂಡಿರುವ ಹಾಸ್ಯ ನಟ ವೈಜನಾಥ್ ಬಿರಾದಾರ್ ಅವರು ಯಶಸ್ವಿ ಐನೂರನೇ ಸಿನಿಮಾಗೆ ಬಣ್ಣ ಹಚ್ಚಿ ದಾಖಲೆ ಬರೆದಿದ್ದಾರೆ. ಅಷ್ಟೇ ಅಲ್ಲ, ಆ ಸಿನಿಮಾ ಇತ್ತೀಚೆಗೆ ಡಬ್ಬಿಂಗ್ ಕಾರ್ಯವನ್ನೂ ಮುಗಿಸಿದೆ. ಹೌದು, “ನೈಂಟಿ ಹೊಡಿ ಮನೀಗ್ ನಡಿ” ಸಿನಿಮಾ ಈಗ ಬಿಡುಗಡೆಯತ್ತ ಸಾಗಿದೆ. ಅಂದಹಾಗೆ, ಅಮ್ಮಾ ಟಾಕೀಸ್ ಬಾಗಲಕೋಟೆ ಬ್ಯಾನರಿನಡಿ ನಿರ್ಮಾಣವಾಗಿರುವ “ನೈಂಟಿ ಹೊಡಿ ಮನೀಗ್ ನಡಿ” ಚಿತ್ರ ಇತ್ತೀಚೆಗಷ್ಟೇ ಡಬ್ಬಿಂಗ್ ಮುಗಿಸಿದೆ.
ಈ ಸಿನಿಮಾ ನಟ ವೈಜನಾಥ ಬಿರದಾರ್ ಅವರ ಐನೂರನೇ ಚಿತ್ರ ಅನ್ನೋದು ವಿಶೇಷ. ಇತ್ತೀಚೆಗೆ ಬೆಂಗಳೂರಿನ ಸುತ್ತಮುತ್ತ ಕೊನೆಯ ಹಂತದ ಚಿತ್ರೀಕರಣ ಮುಗಿಸಿತ್ತು. ಉಮೇಶ್ ಬಾದರದಿನ್ನಿ ಮತ್ತು ನಾಗರಾಜ್ ಅರೆಹೊಳೆ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದೊಂದು ಔಟ್ ಆಂಡ್ ಔಟ್ ಕಮರ್ಷಿಯಲ್ ಕಾಮಿಡಿ ಥ್ರಿಲ್ಲರ್ ಚಿತ್ರವಾಗಿದ್ದು, ರತ್ನಮಾಲಾ ಬಾದರದಿನ್ನಿ ಅವರು ಚಿತ್ರದ ನಿರ್ಮಾಪಕರು.
ಚಿತ್ರದಲ್ಲಿ ವೈಜನಾಥ ಬಿರಾದರ್ ಅವರಿಗೆ ಜೋಡಿಯಾಗಿ ನೀತು ಕಾಣಿಸಿಕೊಂಡಿದ್ದಾರೆ. ಉಳಿದಂತೆ ಚಿತ್ರದಲ್ಲಿ ಪ್ರೀತು ಪೂಜಾ, ಹಿರಿಯ ನಟರಾದ ಕರಿಸುಬ್ಬು, ಧರ್ಮ, ಪ್ರಶಾಂತ್ ಸಿದ್ಧಿ, ಅಭಯ್ ವೀರ್, ಆರ್.ಡಿ. ಬಾಬು, ವಿವೇಕ್ ಜಂಬಗಿ, ರುದ್ರಗೌಡ ಬಾದರದಿನ್ನಿ, ಹೊಸಕೋಟೆ ಮುರುಳಿ, ಸಂತು ಸೊಕನಾದಗಿ, ರಾಜು ಗೂಗವಾಡ, ಎಲ್ಐಸಿ ಲೋಕೇಶ್ ಸೇರಿದಂತೆ ಇತರರು ನಟಿಸಿದ್ದಾರೆ.
ಚಿತ್ರಕ್ಕೆ ಕೃಷ್ಣ ನಾಯ್ಕರ್ ಛಾಯಾಗ್ರಹಣ ಮಾಡಿದರೆ, ರಾಕಿ ರಮೇಶ್ ಸಾಹಸವಿದೆ. ಯುಡಿವಿ ವೆಂಕಿ ಸಂಕಲನ ಮಾಡಿದ್ದಾರೆ. ನಾಗೇಂದ್ರ ಪ್ರಸಾದ್ ಸಾಹಿತ್ಯವಿದೆ. ಕಿರಣ್ ಶಂಕರ್ ಸಂಗೀತ ನೀಡಿದ್ದಾರೆ. ರಾಜೇಶ್ ಕೃಷ್ಣನ್ ಹಾಡಿದ್ದಾರೆ. ಉತ್ತರ ಕರ್ನಾಟಕದ ನಾಟಿ ಶೈಲಿಯ ಹಾಡಿಗೆ “ಚುಟು ಚುಟು” ಖ್ಯಾತಿಯ ಶಿವು ಭೆರ್ಗಿ ಸಾಹಿತ್ಯ ಬರೆದು, ಸಂಗೀತ ನೀಡಿದದಾರೆ. ಆ ಹಾಡಿಗೆ ರವೀಂದ್ರ ಸೋರಗಾಂವಿ ಮತ್ತು ಶಮಿತಾ ಮಲ್ನಾಡ್ ಧ್ವನಿಯಾಗಿದ್ದಾರೆ. ಭೂಷಣ್ ನೃತ್ಯ ನಿರ್ದೇಶನವಿದೆ. ಸದ್ಯ ಬಾಲಾಜಿ ಡಿಜಿ ಸ್ಟುಡಿಯೋದಲ್ಲಿ ಡಬ್ಬಿಂಗ್ ಮುಗಿಸಿ, ಬಿಡುಗಡೆ ಕೆಲಸದತ್ತ ಚಿತ್ರತಂಡ ತೊಡಗಿಕೊಂಡಿದೆ.