ಹೊಂಬಾಳೆ ಹವಾ ಹಿಂಗೈತಿ ನೋಡು ಗುರು ;ಸ್ಪೋಟಕ ಸುದ್ದಿ ಬಿಚ್ಚಿಟ್ರಲ್ಲ ನಿರ್ಮಾಪಕ ವಿಜಯ್ ಕಿರಗಂದೂರ್ !

ಹೊಂಬಾಳೆ.. ಹೊಂಬಾಳೆ..ಹೊಂಬಾಳೆ.. ಎಲ್ಲಿ ನೋಡಿದ್ರೂ ಇವ್ರದ್ದೇ ಹವಾ.. ಎಲ್ಲಿ ನೋಡಿದ್ರೂ ಇವ್ರದ್ದೇ ಕಾರುಬಾರು.. ಅದ್ಯಾವ ದಿವ್ಯಕ್ಷಣದಲ್ಲಿ ಹೊಂಬಾಳೆ‌ ಎನ್ನುವ ಮೂರಕ್ಷರದ ಸಂಸ್ಥೆ ಹುಟ್ಟುಹಾಕಿದ್ರೋ ಏನೋ ಗೊತ್ತಿಲ್ಲ. ಇವತ್ತು ಈ ಫಿಲ್ಮ್ ಸಂಸ್ಥೆಗೆ ಭೂಮಿತೂಕದ ಬೆಲೆಬಂದಿದೆ.‌ ಗಂಧದ ಗುಡಿ ಮಾತ್ರವಲ್ಲ ಸಮಸ್ತ ಏಳುಕೋಟಿ ಕನ್ನಡಿಗರು ಹೆಮ್ಮೆಪಡುವ ನಿರ್ಮಾಣ ಸಂಸ್ಥೆಯಾಗಿದೆ.

ಸೌತ್ ಸಿನಿಮಾ ಇಂಡಸ್ಟ್ರಿ ಸ್ಟಾರ್ಸ್ ಡೈರೆಕ್ಟರ್ಸ್ ಹಾಗೂ ಹೀರೋಸ್ ಮಾತ್ರವಲ್ಲ ಭಾರತೀಯ ಚಿತ್ರರಂಗವೇ ಹೊಂಬಾಳೆ ಮೇಲೆ ಕಣ್ಣಿಟ್ಟಿದೆ.
ಒಂದೇ ಒಂದು ಭಾರಿ ಈ ಸಂಸ್ಥೆ ತಮ್ಮ ಚಿತ್ರಕ್ಕೆ ಬಂಡವಾಳ ಹೂಡಿದರೆ ಸಾಕು ಎನ್ನುವ ಮಹಾದಾಸೆ ಇಟ್ಟುಕೊಂಡಿದ್ದಾರೆ. ಆ ಮಹಾಕನಸಿನ‌ ಸಾಕಾರಕ್ಕಾಗಿ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಹರಸಾಹಸ ಪಡ್ತಿದ್ದಾರೆ. ಆದರೆ ಒಂದು ಮಾತ್ರ ಸತ್ಯ ಗಾಳಿಯಲ್ಲಿ‌ ಗುಂಡು ಹಾರಿಸೋರಿಗೆ, ಸಿನಿಮಾ ನನ್ನ ಪ್ಯಾಷನ್ ಬುಟಾಟಿಕೆ ಬಿಡುವವರಿಗೆ ಹೊಂಬಾಳೆ ಸೊಪ್ಪು ಹಾಕಲ್ಲ ಅಷ್ಟೇ ಯಾಕೇ ಅಂತವರನ್ನ ಹತ್ತಿರಕ್ಕೂ ಸೇರಿಸಲ್ಲ.

ಅದೊಂದು ಕಾಲ ಇತ್ತು ಸ್ಟಾರ್ ಡೈರೆಕ್ಟರ್ ಮನೆ ಕದ ತಟ್ಟಬೇಕಿತ್ತು, ಡಿಮ್ಯಾಂಡಿಂಗ್ ಹೀರೋ ಕಾಲ್ ಶೀಟ್ ಗಿಟ್ಟಿಸಿಕೊಳ್ಳೋದಕ್ಕೆ ಹರಸಾಹಸ ಪಡಬೇಕಿತ್ತು ಆದ್ರೀಗ ಕಾಲ ಬದಲಾಗಿದೆ ಸ್ಟಾರ್ ಡೈರೆಕ್ಟರ್ ಗೆ ಹಾಗೂ ಹೀರೋಗೆ ಕೋಟಿ ಖಜಾನೆ ತೆರೆದಿಡುವ ನಿರ್ಮಾಣ ಸಂಸ್ಥೆಯ ಕಾಲ್ ಶೀಟ್ ಸಿಗಬೇಕಿದೆ. ಈ ಹೊತ್ತಿಗೆ ಇದು ಸುಲಭವಾಗಿಲ್ಲ ಅದು ಹೊಂಬಾಳೆಯಂತಹ ಸಂಸ್ಥೆಯ ಕಾಲ್ ಶೀಟ್ ಪಡೆಯುವುದು ಅಸಾಧ್ಯ. ಹಾಗಂತ ಅನ್ಯಥಾ ಭಾವಿಸಬಾರದು. ಯಾಕಂದ್ರೆ, ಯಶ್ ರಾಜ್, ಈರೋಸ್, ರೆಡ್‌ ಚಿಲ್ಲೀಸ್, ಆರ್ಕಾ ಮೀಡಿಯಾ, ಅನ್ನಪೂರ್ಣ, ಮೈತ್ರಿ, ಹೀಗೆ ಪ್ರತಿಷ್ಟಿತ ನಿರ್ಮಾಣ ಸಂಸ್ಥೆಗಳಿಗೆ ಸೆಡ್ಡು ಹೊಡೆಯುವ ಲೆವೆಲ್ಲಿಗೆ ಹೊಂಬಾಳೆ ಬೆಳೆದು ನಿಂತಿದೆ.

ಕೆಜಿಎಫ್ ಮೂಲಕ ಪ್ಯಾನ್ ಇಂಡಿಯಾ ತಲುಪಿ ಕನ್ನಡ ಚಿತ್ರರಂಗಕ್ಕೆ ಚಿನ್ನದ ಕಿರೀಟ ತೊಡಿಸಿದೆ.ಅಷ್ಟಕ್ಕೂ ನಾವು ಇವತ್ತು ಹೊಂಬಾಳೆ ಎನ್ನುವ ಹೆಮ್ಮೆಯ ಸಂಸ್ಥೆ ಬಗ್ಗೆ ಬರೆಯುತ್ತಿರುವುದಕ್ಕೆ ಕಾರಣ ಹನ್ನೊಂದನೇ ಸಿನಿಮಾ.ಇತ್ತೀಚಿಗಷ್ಟೇ 9 ಹಾಗೂ 10 ನೇ‌ ಸಿನಿಮಾ ಬಗ್ಗೆ ಅನೌನ್ಸ್ ಮೆಂಟ್ ಮಾಡಿದ್ದರು. ಪವರ್ ಸ್ಟಾರ್ ಹಾಗೂ ಲೂಸಿಯಾ ಪವನ್ ಕಾಂಬಿನೇಷನ್ ನಲ್ಲಿ ದ್ವಿತ್ವ ಬರಲಿದೆ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ರಿಚರ್ಡ್ ಆಂಟನಿಯಾಗಿ ಬರಲಿದ್ದಾರೆ ಅಂತ ಅಧಿಕೃತವಾಗಿ ಅನೌನ್ಸ್ ಕೂಡ ಮಾಡಿದ್ದರು. ಇತ್ತೀಚೆಗಷ್ಟೇ, ಸೌತ್ ಸುಂದರಿ ತ್ರಿಷಾʼ ದ್ವಿತ್ವʼ ಗೆ ಜಾಯಿನ್ ಆಗಿದ್ದಾರೆ. ಹೊಂಬಾಳೆಯ ಹತ್ತನೇ ಚಿತ್ರದ ಹೊಣೆ ಹೊತ್ತಿರುವ ಶೆಟ್ಟರು ಅದ್ಯಾವ ಸುಂದರಿಯನ್ನು ಕರೆತರುತ್ತಾರೋ ಕಾದುನೋಡಬೇಕು.‌ಆದರೆ, ಈ ಮಧ್ಯೆ ಹೊಂಬಾಳೆ ಚಿತ್ರತಂಡ ಹನ್ನೊಂದನೇ ಸಿನಿಮಾಗೆ ಕೈಹಾಕಿದೆ.

ರಾಜ್ಯರಾಜಕಾರಣ ಧಗಧಗಿಸುತ್ತಿರುವಾಗ ಹನ್ನೊಂದನೇ ಸಿನಿಮಾ ಬಗ್ಗೆ ಬ್ರೇಕಿಂಗ್ ನ್ಯೂಸ್ ಕೊಟ್ಟಿರುವ ಹೊಂಬಾಳೆ, ಚಿತ್ರದ ಹೀರೋ ಹಾಗೂ ನಿರ್ದೇಶಕರ ಬಗ್ಗೆ ಹಿಂಟ್ ನ ಬಿಟ್ಟುಕೊಟ್ಟಿಲ್ಲ. ಆಗಸ್ಟ್ 06ರಂದು ಸಮಯ 11.43ಕ್ಕೆ ಸರಿಯಾಗಿ ಟೈಟಲ್ ಲಾಂಚ್ ಹಾಗೂ ಪೋಸ್ಟರ್ ಬಿಡುಗಡೆ ಮಾಡಲಿದ್ದೇನೆ ಎನ್ನುವ ಸುದ್ದಿ ರಿವೀಲ್ ಮಾಡಿದ್ದಾರೆ ಅಷ್ಟೇ.‌ಆದರೆ, ಪೋಸ್ಟರ್ ನಲ್ಲಿರುವ ‘ನಿನ್ನೊಳಗಿನ ಕಿಚ್ಚು ನಿನ್ನನ್ನು ಸುಡದಿರಲಿ’ ಎನ್ನುವ ಕ್ಯಾಪ್ಶನ್ ಇದೆಯಲ್ಲ ಅದು ಸಾಕಷ್ಟು ಕೂತೂಹಲ ಕೆರಳಿಸಿದೆ. ಕಿಚ್ಚು ಅಂದಾಕ್ಷಣ ಕಣ್ಣಲ್ಲೇ ಕೆಂಡ ಉಗುಳುವ ಹಲವು ನಾಯಕರು ಕಣ್ಮುಂದೆ ಬರುತ್ತಾರೆ. ನಿರ್ದಿಷ್ಟವಾಗಿ ಇವರಿಗೆ ಹೊಂಬಾಳೆ ದುಡ್ಡು ಹಾಕುತ್ತಿದೆ ಎಂದು ಪ್ರಿಡಿಕ್ಟ್ ಮಾಡುವುದು ಈ‌ಕ್ಷಣಕ್ಕೆ ಅಸಾಧ್ಯ. ಒಂದು ವೇಳೆ ಮಾಡಿದರೂ ಅಂತೆ- ಕಂತೆ ಅಂತ ಬಣ್ಣಬಣ್ಣದ ಟೋಪಿ ಹಾಕಿ ಮ್ಯಾಟರ್ ಸೇಲ್ ಮಾಡ್ಬೇಕು ಅಷ್ಟೇ. ಹಿಂಗ್ ಮಾಡೋದಕ್ಕಿಂತ ನಾಳೆವರೆಗೂ ಕಾಯೋಣ ಹೊಂಬಾಳೆ ಅನೌನ್ಸ್ ಮಾಡುವ ಹನ್ನೊಂದನೇ ಸಿನಿಮಾದ ನಾಯಕ ಹಾಗೂ ನಿರ್ದೇಶಕನನ್ನು ತಲೆಮೇಲೆ ಹೊತ್ತು ಮೆರೆಸೋಣ

  • ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!