ಕನ್ನಡದ ಕಿರುತೆರೆಯಲ್ಲಿ ಈಗಂತೂ ನಟ,ನಟಿಯರದ್ದೇ ಕಲರವ! ಹಾಗಂತ, ಅವರೆಲ್ಲರೂ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ ಅಂದುಕೊಳ್ಳುವಂತಿಲ್ಲ. ಅಲ್ಲಿ ನಡೆಯೋ ರಿಯಾಲಿಟಿ ಶೋಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈಗಾಗಲೇ ಹಲವು ಸ್ಟಾರ್ ನಟರು, ನಟಿಯರು ಕೂಡ ಭಾಗವಹಿಸಿದ್ದಾಗಿದೆ. ಈಗಲೂ ಕೆಲ ರಿಯಾಲಿಟಿ ಶೋಗಳನ್ನು ನಟ, ನಟಿಯರು ನಡೆಸಿಕೊಡುತ್ತಿದ್ದಾರೆ. ಆ ಸಾಲಿಗೆ ಈಗ ಹರಿಪ್ರಿಯಾ ಕೂಡ ಸೇರುತ್ತಿದ್ದಾರೆ. ಹೌದು, ಸದ್ಯದ ಮಟ್ಟಿಗೆ ಸಿನಿಮಾಗಳಲ್ಲೇ ಬಿಝಿಯಾಗಿರುವ ಹರಿಪ್ರಿಯಾ, ಅದ್ಯಾಕೆ ಕಿರುತೆರೆ ಕಡೆ ಮುಖ ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಕಾಡಬಹುದು. ಅದಕ್ಕೆ ಉತ್ತರ, ಅದೊಂದು ಡ್ಯಾನ್ಸ್ ಶೋ.
ಹೌದು, ಹರಿಪ್ರಿಯಾ ಅವರು ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಲಿದ್ದಾರೆ ಎಂಬುದು ಈ ಹೊತ್ತಿನ ಸುದ್ದಿ. ಆ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಹರಿಪ್ರಿಯಾ ಅವರೊಂದಿಗೆ ಇನ್ನೂ ಇಬ್ಬರು ಪ್ರಮುಖರು ಕಾಣಿಸಿಕೊಳ್ಳುತ್ತಿದ್ದು, ಅವರೂ ನಟ ಮತ್ತು ನಿರ್ದೇಶಕ ಅನ್ನೋದು ವಿಶೇಷ.
‘ಡ್ಯಾನ್ಸ್ ಡ್ಯಾನ್ಸ್’ ಹೆಸರಿನ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಹರಿಪ್ರಿಯಾ ಜಡ್ಜ್ ಆಗಿ ಭಾಗವಹಿಸುತ್ತಿದ್ದು, ಆ ರಿಯಾಲಿಟಿ ಶೋ ಒಳಾಂಗಣ ಮಾತ್ರವಲ್ಲ, ಹೊರಾಂಗಣ ಚಿತ್ರೀಕರಣವೂ ನಡೆಯಲಿದೆ. ಡ್ಯಾನ್ಸ್ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಹರಿಪ್ರಿಯಾ ಜೊತೆಗೆ ನಟ ಪ್ರಜ್ವಲ್ ದೇವರಾಜ್ ಮತ್ತು ನೃತ್ಯ ನಿರ್ದೇಶಕ ಹರ್ಷ ಕೂಡ ಈ ಶೋನ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ, ಈ ರಿಯಾಲಿಟಿ ಶೋಗೆ ಶೈನ್ ಶೆಟ್ಟಿ ಅವರ ನಿರೂಪಣೆ ಇರಲಿದೆ.
ಹರಿಪ್ರಿಯಾ ಕೇವಲ ನಟಿ ಮಾತ್ರವಲ್ಲ, ಅವರೊಬ್ಬ ಒಳ್ಳೆಯ ಡ್ಯಾನ್ಸರ್ ಕೂಡ. ಈ ಕಾರಣದಿಂದಾಗಿಯೇ ರಿಯಾಲಿಟಿ ಶೋ ಮುಖ್ಯಸ್ಥರು ಹರಿಪ್ರಿಯಾ ಅವರನ್ನು ತೀರ್ಪುಗಾರರನ್ನಾಗಿ ಆಯ್ಕೆ ಮಾಡಿದ್ದಾರೆ. ಆ ರಿಯಾಲಿಟಿ ಶೋ ಬಗ್ಗೆ ಹೇಳುವ ಹರಿಪ್ರಿಯಾ, “ಈ ಹಿಂದೆ ಕೂಡ ಹಲವು ರಿಯಾಲಿಟಿ ಶೋಗಳಲ್ಲಿ ಪಾಲ್ಗೊಳ್ಳಲು ಅವಕಾಶ ಬಂದಿದ್ದವು. ಆದರೆ, ಸಾಧ್ಯವಾಗಿರಲಿಲ್ಲ. ಈ “ಡ್ಯಾನ್ಸ್ ಡ್ಯಾನ್ಸ್’ ಶೋನ ಪರಿಕಲ್ಪನೆ ವಿಶೇಷ ಎನಿಸಿದೆ. ಹಾಗಾಗಿ ಒಪ್ಪಿದೆ. ಇನ್ನು, ಇಲ್ಲಿ ನಟ-ನಟಿಯರೇ ಸ್ಪರ್ಧಿಗಳಾಗಿರುತ್ತಾರೆ ಅನ್ನೋದು ಇನ್ನೊಂದು ವಿಶೇಷʼ ಎನ್ನುತ್ತಾರೆ. ಅದೇನೆ ಇರಲಿ, ಈಗಾಗಲೇ ಕನ್ನಡದ ಒಂದಷ್ಟು ನಟ,ನಟಿಯರು, ಕಿರುತೆರೆಗೆ ಎಂಟ್ರಿ ಕೊಟ್ಟು, ರಿಯಾಲಿ ಶೋ ನಡೆಸಿಕೊಡುತ್ತಿದ್ದಾರೆ. ಅವರ ಸಾಲಿಗೆ ಈಗ ಹರಿಪ್ರಿಯಾ ಕೂಡ ಸೇರಿದ್ದಂತಾಗಿದೆ.