ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ನಟನೆಯ 123ನೇ ಸಿನಿಮಾ ‘ಬೈರಾಗಿ’ ಟಾಕಿ ಭಾಗದ ಚಿತ್ರೀಕರಣ ಮುಗಿಸಿದೆ. ತಮಿಳಿನ ಖ್ಯಾತ ಛಾಯಾಗ್ರಾಹಕ ಕಮ್ ನಿರ್ದೇಶಕ ವಿಜಯ್ ಮಿಲ್ಟನ್ ನಿರ್ದೇಶನವಿರುವ ಈ ಚಿತ್ರಕ್ಕೆ ನೂರಕ್ಕೂ ಹೆಚ್ಚು ದಿನ ಶೂಟಿಂಗ್ ನಡೆಸಲಾಗಿದೆ. ಈ ಚಿತ್ರದಲ್ಲಿ ಶಿವಣ್ಣ ನಾನಾ ಅವತಾರ ಎತ್ತಿದ್ದಾರೆ. ಅವರ ಹುಟ್ಟು ಹಬ್ಬದಂದು ಬಿಡುಗಡೆಯಾದ ಟೈಟಲ್ ಟೀಸರ್ ಎಲ್ಲರಿಗೂ ಮೆಚ್ಚುಗೆಯಾಗಿದ್ದು, ಟೈಟಲ್ ಹಾಗೂ ಲುಕ್ ಕಂಡು ಅಭಿಮಾನಿಗಳು ಬೆರಗಾಗಿದ್ದಾರೆ.
ಹುಲಿ ವೇಷ, ಹೇರ್ ಸ್ಟೈಲ್ ಹಾಗೂ ಅವರ ಡಿಫರೆಂಟ್ ಕಾಸ್ಟ್ಯೂಮ್’ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಮುಖ್ಯವಾಗಿ ಅನೂಪ್ ಸೀಳಿನ್ ಸಂಗೀತಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಸಾಕಷ್ಟು ಜನರು ಈಗಾಗಲೇ ಟೈಟಲ್ ಟೀಸರನ್ನು ಕಾಲರ್ ಟ್ಯೂನ್ ಮಾಡಿಕೊಂಡಿದ್ದಾರೆ.
‘ಟಗರು’ ಯಶಸ್ಸಿನ ಬಳಿಕ ಶಿವರಾಜ್ ಕುಮಾರ್ ಹಾಗೂ ‘ಡಾಲಿ’ ಧನಂಜಯ್ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವ ಸಿನಿಮಾ ಇದಾಗಿರುವುದರಿಂದ ಪ್ರಾರಂಭದಿಂದಲೇ ನಿರೀಕ್ಷೆ ಗರಿಗೆದರಿದೆ. ಇಬ್ಬರೂ ಬೇರೆ ಬೇರೆ ಗೆಟಪ್ ಮೂಲಕ ಮೋಡಿ ಮಾಡಲಿದ್ದಾರೆ ಎಂಬುದು ವಿಶೇಷ. ಈಗಾಗಲೇ ಅಧಿಕೃತವಾಗಿ ಬಿಡುಗಡೆಯಾಗಿರುವ ಶಿವಣ್ಣನ ಹುಲಿ ವೇಷದ ಗೆಟಪ್ ಎಲ್ಲೆಡೆ ವೈರಲ್ ಆಗಿದ್ದು, ಆಟೋ ಹಾಗೂ ಕಾರುಗಳ ಮೇಲೆ ಶಿವಣ್ಣನ ಪೋಸ್ಟರ್ ರಾರಾಜಿಸುತ್ತಿವೆ.
ಅಂಜಲಿ ಚಿತ್ರದ ನಾಯಕಿ. ‘ದಿಯಾ’ ಖ್ಯಾತಿಯ ಪೃಥ್ವಿ ಅಂಬರ್ ಚಿತ್ರದ ಪ್ರಮುಖ ಪಾತ್ರದಲ್ಲಿದ್ದಾರೆ. ಹಿರಿಯ ನಟ ಶಶಿಕುಮಾರ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಕೃಷ್ಣ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಕೃಷ್ಣ ಸಾರ್ಥಕ್ ಅದ್ದೂರಿಯಾಗಿ ನಿರ್ಮಿಸಿರುವ ಈ ಚಿತ್ರದಲ್ಲಿ ಸಾಕಷ್ಟು ನುರಿತ ಕಲಾವಿದರಿದ್ದಾರೆ. ಬಾಕಿ ಉಳಿದುಕೊಂಡಿರುವ ಹಾಡಿನ ಚಿತ್ರೀಕರಣಕ್ಕೆ ಸದ್ಯದಲ್ಲೇ ಮೈಸೂರಿಗೆ ತೆರಳಲಿದೆ ‘ಬೈರಾಗಿ’ ತಂಡ.