ವಿಕ್ರಾಂತ್ ರೋಣ ಬಜೆಟ್ ಕೇಳಿದ್ರೆ ಹೌಹಾರ್ತೀರಿ; ಕಿಚ್ಚನಿಗಾಗಿ ಜಾಕ್ ಮಂಜು ಕೋಟಿ ಖಜಾನೆ‌ ಓಪನ್ !

ಸಿನಿಲಹರಿ ವಿಶೇಷ….

  • ವಿಶಾಲಾಕ್ಷಿ

ವಿಕ್ರಾಂತ್ ರೋಣ ಬಹುಕೋಟಿ ವೆಚ್ಚದ ಸಿನಿಮಾ ಎಂಬುದು‌ ಎಲ್ಲರಿಗೂ ಗೊತ್ತಾಗಿದೆ ಆದರೆ ಬಹುಕೋಟಿ ಅಂದರೆ ಎಷ್ಟು ಕೋಟಿ ಸುರಿದಿರಬಹುದು ಎನ್ನುವ ಪ್ರಶ್ನೆ ಮಾತ್ರ ಕೂತೂಹಲವಾಗಿ ಉಳಿದಿದೆ. ಆ ಕೌತುಕದ ಪ್ರಶ್ನೆಗೆ ಉತ್ತರದ ಜೊತೆಗೆ ವಿಕ್ರಾಂತ್ ರೋಣನ ಡಿಮ್ಯಾಂಡ್ ಸ್ಟೋರಿ ಕಥೆನಾ ನಿಮ್ಮ ಮುಂದೆ ಇಡಲಿದ್ದೇವೆ.‌

ಇಡೀ ಇಂಡಿಯನ್ ಸಿನಿಮಾ ಇಂಡಸ್ಟ್ರಿಯೇ ಎದುರು‌ನೋಡ್ತಿರುವ ಕನ್ನಡದ ಹೆಗ್ಗಳಿಕೆಯ ಚಿತ್ರ ವಿಕ್ರಾಂತ್ ರೋಣ. ಭಾರತೀಯ ಚಿತ್ರರಂಗದ ಅಂಗಳದಲ್ಲಿ ಸಾವಿರಾರು ಚಿತ್ರಗಳು ತಯ್ಯಾರಾಗ್ತಿವೆ. ಹಲವು ಸೂಪರ್ ಸ್ಟಾರ್ ಗಳ ಪವರ್ ಫುಲ್ ಸಿನಿಮಾಗಳು ತೆರೆಗೆ ಬರೋಕೆ ಸಜ್ಜಾಗ್ತಿವೆ. ಈ ಮಧ್ಯೆ ಸ್ಯಾಂಡಲ್ ವುಡ್ ಬಾದ್ ಷಾ ಕಿಚ್ಚ ಸುದೀಪ್ ಅವರ ವಿಕ್ರಾಂತ್ ರೋಣನಿಗಾಗಿ ಜಗತ್ತಿನ‌ ಸಿನಿಮಾ ಪ್ರೇಕ್ಷಕ ಬಳಗ ಜಾತಕಪಕ್ಷಿಯಂತೆ ಕಾಯ್ತಿದೆ. ವಿಕ್ರಾಂತ್ ರೋಣನ ಮೇಲಿರುವ ನಿರೀಕ್ಷೆ ಬುರ್ಜ್ ಖಲೀಫಾವನ್ನು ಮೆಟ್ಟಿನಿಂತಿದೆ.

ಹೌದು, ಅದ್ಯಾವ ದಿವ್ಯಗಳಿಗೆಯಲ್ಲಿ ಚಿತ್ರತಂಡ ಫ್ಯಾಂಟಮ್ ಹೆಸರನ್ನ ಬದಲಾಯಿಸಿ ಬುರ್ಜ್ ಖಲೀಫಾ‌ದಲ್ಲಿ ವಿಕ್ರಾಂತ್ ರೋಣ ಟೈಟಲ್ ಲಾಂಚ್ ಮಾಡ್ತೋ ಏನೋ ಅಲ್ಲಿಂದ ಇಲ್ಲಿಯವರೆಗೆ ಚಿತ್ರದ ಮೇಲಿನ ನಿರೀಕ್ಷೆ ಗಗನಕ್ಕೇರುತ್ತಲೆ ಇದೆ.

ವಿಕ್ರಾಂತ್ ರೋಣ ಆಕ್ಷನ್ ಅಡ್ವೆಂಚರಸ್ ಚಿತ್ರ, ಬಹುಕೋಟಿ ವೆಚ್ಚದ ಸಿನಿಮಾ, ಸುದೀಪ್- ಅನುಪ್ ಕಾಂಬಿನೇಷನ್ ನಲ್ಲಿ ಬರ್ತಿರೋ‌ ಮೊದಲ ಮೂವೀ, ತ್ರಿಡಿ ತಂತ್ರಜ್ಞಾನದಲ್ಲಿ ತೆರೆಗೆ ಬರುತ್ತಿರುವ ಕನ್ನಡದ ಮೊದಲ ಫ್ಯಾಂಟಸಿ ಪಿಕ್ಚರ್, ಹೀಗೆ ಹಲವು ಕಾರಣಕ್ಕೆ ಸೆಟ್ಟೇರಿದಾಗಿನಿಂದಲೂ ಸದ್ದು ಮಾಡುತ್ತಾ ನಿರೀಕ್ಷೆ ಎನ್ನುವ ಬೆಟ್ಟವನ್ನು ಪರ್ವತವಾಗಿಸುತ್ತಾ ಬಂದಿತ್ತು. ಟೀಸರ್ ಹಾಗೂ ಕಣ್ಣು ಕುಕ್ಕುವ ಮೇಕಿಂಗ್ ನಿಂದ ಹೈಪ್‌ ಕ್ರಿಯೇಟ್ ಮಾಡಿಕೊಂಡು ಪರಭಾಷಾ ಮಂದಿ ತಿರುಗಿ ನೋಡುವಂತೆ ಮಾಡಿತ್ತು.

ಇತ್ತೀಚೆಗೆ 6 ಕೋಟಿ ಖರ್ಚು ಮಾಡಿ ಬಾಲಿವುಡ್ ನ ಬಂಗಾರದಂತಹ ಬೊಂಬೆ ಜಾಕ್ವೆಲಿನ್ ಕರೆತಂದು ಬೆಚ್ಚಿಬೆರಗಾಗುವಂತೆ ಮಾಡಿದ ಚಿತ್ರತಂಡ 20 ಲಕ್ಷ ಖರ್ಚು ಮಾಡಿ ಮುಂಬೈನ ಚಿತ್ರಕೂಟದಲ್ಲಿ ಫಸ್ಟ್ ಲುಕ್ ಲಾಂಚ್ ಮಾಡಿದ ಸುದ್ದಿ ಕೇಳಿ ಕೆಲವರು ಹೌಹಾರಿದ್ದರು. ಇದೀಗ, ವಿಕ್ರಾಂತ್ ರೋಣನಿಗೆ ನಿರ್ಮಾಪಕ ಜಾಕ್ ಮಂಜು ಸುರಿದಿರುವ ಕೋಟಿ‌ ಬಂಡವಾಳದ ಕಥೆ ಕೇಳಿದರೆ ಮೂಗಿನ ಮೇಲೆ ಬೆರಳಿಟ್ಟುಕೊಳ್ಳೋದು ಸತ್ಯಸ್ಯಸತ್ಯ

ಹೌದು, ವಿಕ್ರಾಂತ್ ರೋಣನಿಗಾಗಿ ನಿರ್ಮಾಪಕ ಜಾಕ್ ಮಂಜು ತಮ್ಮ ಮನೆಯ ಖಜಾನೆಯನ್ನ ಓಪನ್ ಮಾಡಿಟ್ಟಿದ್ದಾರೆ. ಹತ್ತಲ್ಲ‌ .. ಐವತ್ತಲ್ಲ.. ಭರ್ತಿ 100 ಕೋಟಿ ಬಂಡವಾಳನ ಬಾದ್ ಷಾ ಮೇಲೆ ಹಾಕಿದ್ದಾರೆ.‌ ಬಾಲ್ಯದ ಸ್ನೇಹಿತ ಸುದೀಪ್ ಮೇಲಿರುವಂತಹ ನಂಬಿಕೆ ಹಾಗೂ ವಿಶ್ವಾಸಕ್ಕಿಂತ ವಲ್ಡ್ ವೈಡ್, ಆಲ್ ಇಂಡಿಯಾ ಕಟೌಟ್ ಗಿರುವ ತಾಕತ್ತು ಹಾಗೂ ಮಾರುಕಟ್ಟೆ ಬೆಲೆನಾ‌ ಅರಿತುಕೊಂಡಿರುವ ನಿರ್ಮಾಪಕ ಜಾಕ್ ಮಂಜು ಶತಕೋಟಿ ಸುರಿದರೂ ಮಗದಷ್ಟು ಹಣ ಹೂಡೋಕೆ ಸಿದ್ದರಾಗಿದ್ದಾರೆ. ಅದು ಅವರ ಗಟ್ಟಿಗುಂಡಿಗೆ ಹಾಗೂ ಕಿಚ್ಚನ ಸಿನಿಮಾ ಮೇಲಿರುವ ನಂಬಿಕೆ ಅಲ್ಲದೇ ಇನ್ನೇನು ನೀವೇ ಹೇಳಿ.‌

ಅನಿರೀಕ್ಷಿತವಾಗಿ ಚಿತ್ರರಂಗಕ್ಕೆ ಬಂದ‌ ಜಾಕ್ ಮಂಜು‌ ಅವರು, ಬ್ರಹ್ಮ ಸಿನಿಮಾದಿಂದ ಇಲ್ಲಿಯವರೆಗೆ ಕಿಚ್ಚನೊಟ್ಟಿಗೆ ಹೆಜ್ಜೆಹಾಕಿದ್ದಾರೆ. ಈ‌ ಮಧ್ಯೆ ತಮ್ಮದೇ ನಿರ್ಮಾಣ ಸಂಸ್ಥೆ ಹುಟ್ಟುಹಾಕಿ, ಡೆಡ್ಲಿ ಸೋಮ, ಲೈಫು ಇಷ್ಟೇನೆ, ಭಜರಂಗಿ, ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರ ನಿರ್ಮಾಣ ಮಾಡಿ ಯಶಸ್ವಿಯಾಗಿದ್ದಾರೆ. ಇದೀಗ 100 ಕೋಟಿ ಬಜೆಟ್ ನ ಚಿತ್ರ ನಿರ್ಮಾಣ ಮಾಡುವ ಹಂತಕ್ಕೆ ಬೆಳೆದು ನಿಂತಿದ್ದಾರೆ. ಕ್ವಾಲಿಟಿ- ಕ್ವಾಂಟಿಟಿಯಲ್ಲಿ ಎಲ್ಲಿಯೂ ಕಾಂಪ್ರಮೈಸ್ ಆಗದೇ ವಿಕ್ರಾಂತ್ ರೋಣ ಚಿತ್ರ ನಿರ್ಮಿಸಿ ಪರಭಾಷಾ ಮಂದಿ ಕಣ್ಣುಕುಕ್ಕುವಂತೆ ಮಾಡಿದ್ದಾರೆ.

ಅಲ್ಲದೇ, ಪರಭಾಷಾ ಮಂದಿ ವಿತರಣಾ ಹಕ್ಕುಗಳನ್ನು ಕೊಳ್ಳೋದಕ್ಕೆ‌ ಮುಗಿಬೀಳ್ತಿದ್ದಾರಂತೆ.‌ ವಿಶ್ವದಾದ್ಯಂತ ವಿಕ್ರಾಂತ್ ರೋಣನ ಮೇಲಿರುವ ನಿರೀಕ್ಷೆ ಚಿತ್ರದ ಬೇಡಿಕೆಯನ್ನು ಹೆಚ್ಚಿಸುತ್ತಿದೆ.
ಸದ್ಯಕ್ಕೆ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿದೆ. ಕೋಟಿಗೊಬ್ಬ 3 ನಂತರ ಅನುಪ್ ಬಂಡಾರಿ ನಿರ್ದೇಶನ- ಜಾಕ್ ಮಂಜು ನಿರ್ಮಾಣ- ಸುದೀಪ್ ಅಭಿನಯದ ವಿಕ್ರಾಂತ್ ರೋಣನ ಆರ್ಭಟ ಶುರುವಾಗಲಿದೆ.

Related Posts

error: Content is protected !!