ಕನ್ನಡದಲ್ಲೂ ಜೈಭೀಮ್ ಹವಾ -ಅಂಬೇಡ್ಕರ್ ಅನುಯಾಯಿಗಳು ಖುಷ್ ಹುವಾ !

ಟೈಟಲ್ ಓದಿದಾಕ್ಷಣ ಅರೆ, ಇದೇನು ಅಂತ ನಿಮಗನಿಸಿರಬಹುದು. ʼಮಹಾನಾಯಕʼ ಸೀರಿಯಲ್ ನಂತರ ಕನ್ನಡದ ಕಿರುತೆರೆಯಲ್ಲಿ ‘ಜೈ ಭೀಮ್’ ಹೆಸರಲ್ಲಿ ಮತ್ತೊಂದು ಸೀರಿಯಲ್ ಶುರುವಾಗುತ್ತಾ ಎನ್ನುವ ಲೆಕ್ಕಚಾರವೂ ಹುಟ್ಟಿರಬಹುದು. ಯಾಕಂದ್ರೆ ಈಗ ಮಹಾನಾಯಕ ಅಥವಾ ಜೈ ಭೀಮ್‌ ಅಂತ ಸಿನಿಮಾ ಅಥವಾ ಸೀರಿಯಲ್‌ ಪೂರಕವಾಗಿ ಹೇಳಿದರೆ, ಹಾಗೆಂದು ಭಾವಿಸುವಷ್ಟು ಜನಪ್ರಿಯತೆ ಕನ್ನಡದಲ್ಲಿ ಮಹಾನಾಯಕ ಸೀರಿಯಲ್‌ ತಂದಿಟ್ಟಿದೆ. ಆದರೆ ಇದು ಸೀರಿಯಲ್‌ ಕಥೆ ಅಲ್ಲ. ಸಿನಿಮಾವೇ ಹೌದು. ಹಾಗಂತ ಕನ್ನಡದವರು ಮಾಡುತ್ತಿಲ್ಲ. ಬದಲಿಗೆ ತಮಿಳಿನ ಹೆಸರಾಂತ ನಟ ಸೂರ್ಯ ಅಲಿಯಾಸ್‌ ಸೂರ್ಯ ಶಿವಕುಮಾರ್‌ ಅವರ 39ನೇ ಚಿತ್ರದ ಹೆಸರು ಜೈ ಭೀಮ್.‌

ಶುಕ್ರವಾರವಷ್ಟೇ ನಟ ಸೂರ್ಯ ತಮ್ಮ 46ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡರು. ಆ ಹುಟ್ಟು ಹಬ್ಬದ ಪ್ರಯುಕ್ತ ಅವರು ʼಜೈ ಭೀಮ್‌ʼ ಸಿನಿಮಾದ ಫಸ್ಟ್‌ ಲುಕ್‌ ಪೋಸ್ಟರ್‌ ಅನ್ನು ಸೋಷಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆ ಪೋಸ್ಟರ್‌ ಈಗ ಸೋಷಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಅಷ್ಟು ಮಾತ್ರವಲ್ಲ, ಸೌತ್ ಸಿನಿಮಾ ಇಂಡಸ್ಟ್ರಿನಲ್ಲಿ ಸಖತ್ ಸೌಂಡ್ ಮಾಡಿದೆ. ಯಾಕಂದ್ರೆ ಅದು ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡವೂ ಸೇರಿದಂತೆ ಭಾರತದ ಬಹು ಭಾಷೆಗಳಲ್ಲಿ ಬರುತ್ತಿದೆ. ಅವೆಲ್ಲ ಭಾಷೆಗಳಲ್ಲೂ ಚಿತ್ರ ತಂಡ ಪೋಸ್ಟರ್‌ ರಿವೀಲ್‌ ಮಾಡಿದೆ.

ಪೋಸ್ಟರ್‌ ಸಖತ್‌ ಸುದ್ದಿ ಮಾಡಿದ್ದು ಸೂರ್ಯ ಅವರ ಪಾತ್ರದ ಲುಕ್‌ ಕಾರಣಕ್ಕೆ. ಸದ್ಯಕ್ಕೆ ಲಭ್ಯವಿರುವ ಮಾಹಿತಿ ಪ್ರಕಾರ ಇದು ಅಂಬೇಡ್ಕರ್‌ ಅವರ ಕುರಿತ ಕಥಾಹಂದರದ ಚಿತ್ರ. ಹಾಗಂತ ಚಿತ್ರ ಶೀರ್ಷಿಕೆಯೇ ಹೇಳುತ್ತೆ. ಹಾಗಂತ ಇದು ಅಂಬೇಡ್ಕರ್‌ ಅವರ ಇಡೀ ಜೀವನ ಕಥೆ ಆಧರಿಸಿದ ಸಿನಿಮಾ ಅಲ್ಲ. ಈಗ ಲಾಂಚ್‌ ಆಗಿರುವ ಪೋಸ್ಟರ್‌ ನಲ್ಲಿ ನಟ ಸೂರ್ಯ ಅವರದ್ದು ಲಾಯರ್‌ ಪಾತ್ರ. ಅಲ್ಲಿಗೆ ಈ ಚಿತ್ರದ ಕಥಾ ಹಂದರ ಅಂಬೇಡ್ಕರ್‌ ಒಬ್ಬ ಲಾಯರ್‌ ಆಗಿ, ಯಾರ ಪರವಾಗಿ ಧ್ವನಿ ಎತ್ತಿದ್ದರು, ಯಾರ ವಿರುದ್ಧ ಹೇಗೆಲ್ಲ ಕಾನೂನಿನ ಮೂಲಕ ಗೆದ್ದರು ಅನ್ನೋದನ್ನು ಬಯೋಪಿಕ್ ಮಾದರಿಯಲ್ಲಿ ತೋರಿಸುವುದಕ್ಕೆ ಹೊರಟ ಸಿನಿಮಾ. ಪೋಸ್ಟರ್‌ ಲಾಂಚ್‌ ಹಿನ್ನೆಲೆಯಲ್ಲಿ ಬಂದ ವರದಿಗಳ ಪ್ರಕಾರ ಚಿತ್ರದ ನಾಯಕ, ದೇಶದ ಬುಡಕಟ್ಟು ಜನರ ಪರವಾಗಿ ಕೋರ್ಟ್‌ನಲ್ಲಿ ವಾದಿಸುವ ಒಬ್ಬ ಜನಪರ ಲಾಯರ್. ಅಲ್ಲಿಂದ ಆತನಿಗೆ ವ್ಯವಸ್ಥೆಯಲ್ಲಿ ಏನೆಲ್ಲ ಸವಾಲು ಏದುರಾದವು‌, ಅವುಗಳನ್ನು ಆತ ಏದುರಿಸಿದ ಏನ್ನುವ ಎಳೆಗಳೇ ಚಿತ್ರಕಥೆಯ ಹೈಲೆಟ್ಸ್‌ ಅಂತೆ.

ಅದೇನೆ ಇರಲಿ, ಸಿನಿಮಾದ ಕಥೆ ಏನು ಎನ್ನುವುದರ ಫುಲ್‌ ಡಿಟೈಲ್ಸ್‌ ಸಿನಿಮಾ ಬಂದಾಗ ನಿಮಗೂ ಸಿಗುತ್ತೆ. ಅದರಾಚೆ ಇಲ್ಲಿ ವಿಶೇಷ ಎನಿಸಿದ್ದು ಸೂರ್ಯ ಅವರಂತಹ ಒಬ್ಬ ಕರ್ಮಷಿಯಲ್‌ ಹೀರೋ, ಇಂತಹ ಸಾಮಾಜಿಕ ಕಾಳಜಿಯ ಕಥೆಯೊಳಗೂ ತಾನು ನಟಿಸಬಲ್ಲೆ ಅಂತ ಮುಂದಾಗಿದ್ದು. ಹಾಗಂತ ಅವರಿಗೇನು ಇದು ಹೊಸದಲ್ಲ, ನಟನೆಯನ್ನು ಒಂದ್ರೀತಿ ಪ್ರಯೋಗಾತ್ಮಕ ಎನ್ನುವ ಹಾಗೆಯೇ ಸ್ವೀಕರಿಸಿದ ಅಪರೂಪದ ನಟ ಅವರು. ಅದಕ್ಕೆ ಸಾಕ್ಷಿ ಇತ್ತೀಚೆಗಷ್ಟೇ ಬಂದು ಹೋದʼ ಸೂರರೈ ಪೋಟ್ರುʼ ಸಿನಿಮಾ. ಇದು ಕನ್ನಡದವರೇ ಆದ ಏರ್‌ಡೆಕ್ಕನ್‌ ವಿಮಾನ ಸಂಸ್ಥೆಯ ಮಾಲೀಕರಾಗಿದ್ದ ಕ್ಯಾಪ್ಟನ್‌ ಗೋಪಿನಾಥ್‌ ಅವರ ಜೀವನದ ಕಥೆ. ಅದರಲ್ಲಿಯೇ ಅತ್ಯಾದ್ಬುತವಾಗಿ ನಟಿಸಿದ್ದ ಸೂರ್ಯ, ಕನ್ನಡದಲ್ಲೂ ಮನೆ ಮಾತಾದರು ಎನ್ನುವುದು ಅಷ್ಟೇ ಸತ್ಯ. ಈಗ ಅಂತಹದೇ ಮತ್ತೊಂದು ಜನಪ್ರಿಯ ವ್ಯಕ್ತಿಯ ಕಥೆಯಲ್ಲಿ ಸೂರ್ಯ ನಾಯಕರಾಗಿದ್ದು ಕನ್ನಡದಲ್ಲೂ ಸದ್ದು ಮಾಡಿದೆ.

ಪೋಸ್ಟರ್‌ ಈಗಾಗಲೇ ತಮಿಳು, ಮಲಯಾಳಂ ಹಾಗೂ ಕನ್ನಡದಲ್ಲೂ ಬಂದಿವೆ. ದೊಡ್ಡ ಕುತೂಹಲ ಅಂಬೇಡ್ಕರ್‌ ಅವರ ನ್ಯಾಯವಾದಿ ಬದುಕಿನೊಂದಿಗೆ ತೆರೆದುಕೊಂಡಿದೆ. ಅಂಬೇಡ್ಕರ್‌ ಅನುಯಾಯಿ ಗಳಂತೂ ಸೂರ್ಯ ಅವರ ಹೊಸ ಅವತಾರದಲ್ಲಿ ಅಂಬೇಡ್ಕರ್‌ ಅವರ ವಕೀಲಿ ವೃತ್ತಿಯ ಕಾರ್ಯ ಶೈಲಿಯನ್ನು ಕಣ್ತುಂಬಿಕೊಳ್ಳಲು ಕಾತರದಲ್ಲಿದ್ದಾರೆ. ಆ ಮಟ್ಟಿಗೆ ಜೈ ಭೀಮ್ ಸಿನಿಮಾ ಬರೀ ಪೋಸ್ಟರ್‌ ಮೂಲಕವೇ ದೊಡ್ಡ ಹವಾ ಎಬ್ಬಿಸಿದೆ. ಉಳಿದಂತೆ ಈ ಸಿನಿಮಾವು ೨ಡಿ ಎಂಟರ್‌ಟೈನ್‌ಮೆಂಟ್‌ ಸಂಸ್ಥೆ ಮೂಲಕ ನಿರ್ಮಾಣವಾಗುತ್ತಿದೆ. ಜ್ಞಾನವೆಲ್‌ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಹೆಸರಾಂತ ನಟ ಪ್ರಕಾಶ್‌ ರೈ ಸೇರಿದಂತೆ ಹಲವರು ಈ ಚಿತ್ರದಲ್ಲಿದ್ದಾರೆಂಬ ಮಾಹಿತಿ ಇದೆ.

Related Posts

error: Content is protected !!