‘ರಾಮಾ ರಾಮಾ ರೇ’ ಖ್ಯಾತಿಯ ನಟ ನಟರಾಜ್ ಹಾಗೇಕೆ ಹೇಳಿದ್ರೂ ಗೊತ್ತಿಲ್ಲ. ಆದ್ರೆ ಹೇಳುತ್ತಲೇ ಅವರೀಗ ‘ಮ್ಯಾನ್ ಆಫ್ ದಿ ಮ್ಯಾಚ್’ ಚಿತ್ರದ ಡಬ್ಬಿಂಗ್ ಮುಗಿಸಿದ್ದಾರೆ. ಡಬ್ಬಿಂಗ್ ಮುಗಿಸಿದ್ದರ ಕುರಿತು ಸೋಷಲ್ ಮೀಡಿಯಾದಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಅಂದ ಹಾಗೆ, ‘ಮ್ಯಾನ್ ಆಫ್ ದಿ ಮ್ಯಾಚ್’ ಸತ್ಯ ಪ್ರಕಾಶ್ ನಿರ್ದೇಶನ ಚಿತ್ರ. ಒಂದಲ್ಲ ಎರಡಲ್ಲ ಚಿತ್ರದ ಒಂದಷ್ಟು ಗ್ಯಾಪ್ ನಂತರ ಈ ಚಿತ್ರದ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ವಿಶೇಷ ಅಂದ್ರೆ ನಿರ್ದೇಶನದ ಜತೆಗೀಗ ನಿರ್ಮಾಣದ ಸಾಹಸಕ್ಕೂ ಇಳಿದಿದ್ದಾರೆ.
‘ ಮ್ಯಾನ್ ಆಫ್ ದಿ ಮ್ಯಾಚ್’ ಚಿತ್ರದ ನಿರ್ಮಾಣದಲ್ಲಿ ಪಿಆರ್ ಕೆ ಪ್ರೋಡಕನ್ಸ್ ಜತೆಗೆ ಸತ್ಯ ಫಿಕ್ಚರ್ಸ್ ಹಾಗೂ ಮಯೂರ ಪಿಕ್ಚರ್ಸ್ ಕೂಡ ಸಾಥ್ ನೀಡಿವೆ. ಈ ಚಿತ್ರದ ಚಿತ್ರೀಕರಣ ಮುಗಿದು ಈಗ ಡಬ್ಬಿಂಗ್ ಕೆಲಸಗಳು ನಡೆಯುತ್ತಿವೆ.ಈ ಚಿತ್ರದಲ್ಲಿ ನಟ ನಟರಾಜ್ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ. ಉಳಿದಂತೆ ಒಂದಷ್ಟು ಹೊಸ ಮುಖಗಳೇ ಚಿತ್ರದ ಪಾತ್ರವರ್ಗದಲ್ಲಿದ್ದು, ಅವರೆಲ್ಲರ ಮಾಹಿತಿ ಸದ್ಯಕ್ಕೆ ನಿಗೂಢವಾಗಿದೆ. ಮುಂದಕ್ಕೆ ಅವೆಲ್ಲವೂ ರಿವೀಲ್ ಆಗಲಿದೆ. ಈ ನಡುವೆ ಮ್ಯಾನ್ ಆಫ್ ದಿ ಮ್ಯಾಚ್ ಚಿತ್ರದಲ್ಲಿನ ತಮ್ಮ ಪಾತ್ರದ ಡಬ್ಬಿಂಗ್ ಕೆಲಸ ಮುಗಿಸಿರುವ ಬಗ್ಗೆ ನಟರಾಜ್ ಸೋಷಲ್ ಮೀಡಿಯಾದಲ್ಲಿ ಒಂದಷ್ಟು ಪೋಟೋ ಹಾಗೂ ಸಣ್ಣದೊಂದು ವಿಡಿಯೋ ರಿವೀಲ್ ಮಾಡಿದ್ದಾರೆ. ಆ ವಿಡಿಯೋದಲ್ಲಿ ನಟರಾಜ್, ಹೇಳಿದ್ದು ಅರ್ಥ ಆಯ್ತು ಅಂತ ಅನ್ಕೊಂಡಿದ್ದೀನಿ, ಯಾವುದೇ ಕ್ಯಾಮೆರಾಗಳು ಆಫ್ ಆಗರ್ಬಾದು… ಅಂತ ಹೇಳುವ ಸಂಭಾಷಣೆಯ ಹಿನ್ನೆಲೆ ಸದ್ಯಕ್ಕೆ ನಿಗೂಢ. ಅದು ಗೊತ್ತಾಗುವುದು ಚಿತ್ರ ನೋಡಿದಾಗಲೆ. ಆ ಮೂಲಕ ಡಬ್ಬಿಂಗ್ ಮುಗಿಸಿರುವ ನಟರಾಜ್, ಚಿತ್ರದ ಕುರಿತು ಸಿನಿ ಲಹರಿ ಜತೆಗೆ ಒಂದಷ್ಟು ಮಾಹಿತಿ ಹಂಚಿಕೊಂಡರು.
‘ ನಿರ್ದೇಶಕರ ನಿರೀಕ್ಷೆಯಂತೆಯೇ ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಚಿತ್ರೀಕರಣವನ್ನು ನಾವು ಲೆಕ್ಕಚಾರ ಹಾಕಿಕೊಂಡಂತೆಯೇ ಅಚ್ಚು ಕಟ್ಟಾಗಿ ಅಂದುಕೊಂಡಷ್ಟು ದಿನಗಳಲ್ಲೇ ಮುಗಿಸಿದ್ದೇವೆ. ಚಿತ್ರದಲ್ಲಿ ಬಹಳಷ್ಟು ಕಲಾವಿದರು ಹೊಸಬರೇ ಇದ್ದಾರೆ. ನಿರ್ದೇಶಕ ರಾದ ಸತ್ಯ ಪ್ರಕಾಶ್ ಸಾಕಷ್ಟು ಶ್ರಮ ಹಾಕಿ ಎಲ್ಲವನ್ನು ಅಚ್ಚುಕಟ್ಟಾಗಿ ತೆರೆಗೆ ತಂದಿದ್ದಾರೆ. ಸಿನಿಮಾ ಬಗ್ಗೆ ನನಗೂ ಸಾಕಷ್ಟು ನಿರೀಕ್ಷೆ ಇದೆ’ ಎಂದರು. ಈ ಚಿತ್ರದ ಚಿತ್ರೀಕರಣದ ಅಂತಿಮ ಹಂತದ ಚಿತ್ರೀಕರಣದ ವೇಳೆ ಸೆಟ್ ಗೆ ನಟ ಪುನೀತ್ ರಾಜ್ ಕುಮಾರ್ ಭೇಟಿ ನೀಡಿ ಚಿತ್ರೀಕರಣ ವೀಕ್ಷಣೆ ನಡೆಸಿದ್ದರು. ಅವರ ಆಗಮನದಿಂದ ಚಿತ್ರ ತಂಡ ಥ್ರಿಲ್ ಆಗಿತ್ತು. ಇದೀಗ ಚಿತ್ರೀಕರಣ ಮುಗಿಸಿ, ಡಬ್ಬಿಂಗ್ ಕೆಲಸಗಳಲ್ಲಿ ಬ್ಯುಸಿ ಆಗಿದೆ.