ಸಿನಿ ದುನಿಯಾದಲ್ಲೀಗ ಟೈಟಲ್ಗೊಂದು ಅರ್ಥ ಇರಬೇಕು ಅಂತೇನು ಇಲ್ಲ. ಜನಪ್ರಿಯತೆ ಪಡೆದ ಪದ ಹೇಗಿದ್ದರೂ ಸರಿ, ಆ ಹೆಸರಲ್ಲೊಂದು ಸಿನಿಮಾ ಮಾಡುವ, ಅದಕ್ಕೂ ಒಂದು ಕಾರಣ ನೀಡುವ ಅಭ್ಯಾಸ ಮಾಮೂಲು. ಹೆಸರಾಂತ ನಿರ್ಮಾಪಕ, ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಅವರ ಸಂದೇಶ್ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ʼ ಶ್ರೀಕೃಷ್ಣ @ಜಿಮೇಲ್. ಕಾಮ್ʼ ಚಿತ್ರಕ್ಕೀಗ ಚಿತ್ರೀಕರಣ ಮುಗಿದಿದೆ.
ಕಳೆದ ಎಂಟು ದಿನಗಳಿಂದ ಮೇಲುಕೋಟೆ ಸೇರಿದಂತೆ ಮೈಸೂರು ಸುತ್ತಮುತ್ತ ಹಾಡಿನ ಚಿತ್ರೀಕರಣ ನಡೆದಿದೆ. ಹಾಗೆಯೇ ಮೈಸೂರಿನ ಸಂದೇಶ್ ಹೋಟೆಲ್ ನಲ್ಲಿ ಚಿತ್ರೀಕರಣ ಪೂರ್ಣಗೊಳಿಸಿ ಕುಂಬಳಕಾಯಿ ಒಡೆದಿದೆ. ಒಟ್ಟು 90 ದಿನಗಳ ಕಾಲ ಈ ಚಿತ್ರಕ್ಕೆ ಚಿತ್ರೀಕರಣ ನಡೆದಿದೆ.ನಾಗಶೇಖರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ ಚಿತ್ರ ಇದು. ಲವ್ ಮಾಕ್ಟೆಲ್ ಖ್ಯಾತಿಯ ಡಾರ್ಲಿಂಗ್ ಕೃಷ್ಣ ಇದರ ನಾಯಕ ನಟ.
ಭಾವನಾ ಈ ಚಿತ್ರದ ನಾಯಕಿ. ಅವರೊಂದಿಗೆ ಚಂದನ್ ಗೌಡ ಚಿತ್ರದ ಎರಡನೇಯ ನಾಯಕ. ವಿಶೇಷ ಅಂದ್ರೆ ನಟ , ನಿರ್ದೇಶಕ ರಿಷಭ್ ಶೆಟ್ಟಿ ಈ ಚಿತ್ರದಲ್ಲೊಂದು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ಅವರೊಂದಿಗೆ ದತ್ತಣ್ಣ, ಸಾಧುಕೋಕಿಲ, ಚಿಕ್ಕಣ್ಣ, ಸಾತ್ವಿಕ್(ಕಾರ್ಪೊರೇಟರ್), ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮುಂತಾದ ಅದ್ದೂರಿ ತಾರಾಬಳಗ ಈ ಚಿತ್ರದಲ್ಲಿದೆ.
ಸಂದೇಶ್ ಪ್ರೊಡಕ್ಷನ್ಸ್ ಮೂಲಕ ಈ ಹಿಂದೆ “ಅಮರ್” ಚಿತ್ರವನ್ನೂ ನಿರ್ದೇಶಿಸಿ ತೆರೆಗೆ ತಂದಿದ್ದ ನಾಗಶೇಖರ್, ಈಗ ʼಶ್ರೀಕೃಷ್ಣ @ಜಿಮೇಲ್. ಕಾಮ್ʼ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಐದು ಹಾಡುಗಳಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದರೆ. ಕವಿರಾಜ್ ಗೀತರಚನೆ ಮಾಡಿದ್ದಾರೆ. ಸತ್ಯ ಹೆಗಡೆ ಅವರ ಛಾಯಾಗ್ರಹಣವಿದೆ. ದೀಪು ಎಸ್ ಕುಮಾರ್ ಸಂಕಲನ ಹಾಗೂ ಅರುಣ್ ಸಾಗರ್ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಟೈಟಲ್ ನಲ್ಲಿಯೇ ಡಿಫೆರೆಂಟ್ ಎನಿಸುವ ಸಿನಿಮಾ ಇದು. ಹಾಗೆಯೇ ತುಂಬಾ ಸೊಗಸಾದ ಕಥೆ ಈ ಚಿತ್ರದಲ್ಲಿದೆ ಎನ್ನುವ ಭರವಸೆಯ ಮಾತು ನಾಗಶೇಖರ್ ಅವರದ್ದು.