ಬಹುದಿನಗಳಿಂದ ಖಾಲಿ ಇದ್ದ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ಸರ್ಕಾರ ಈಗ ಅಧ್ಯಕ್ಷರನ್ನು ನೇಮಕ ಮಾಡಲು ಮುಂದಾಗಿದೆ. ಮೂಲಗಳ ಪ್ರಕಾರ ಹಿರಿಯ ಸಿನಿಮಾ ಪತ್ರಕರ್ತ ಹಾಗೂ ಬೆಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಸದಾಶಿವ ಶೆಣೈ ಅವರನ್ನು ನೇಮಕ ಮಾಡಿದ್ದು, ಮಂಗಳವಾರ ಸಂಜೆ ಆದೇಶ ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ.
ʼಲಂಕೇಶ್ ಪತ್ರಿಕೆʼಯಲ್ಲಿ ಸಿನಿಮಾ ಬರಹಗಾರರಾಗಿದ್ದ ಸದಾಶಿವ ಶೆಣೈ ಅಲ್ಲಿಯೇ ಬಹುಕಾಲ ಸೇವೆ ಸಲ್ಲಿಸಿದ್ದಾರೆ. ಸಿನಿಮಾ ರಂಗದ ಜತೆಗೆ ತುಂಬಾ ಆತ್ಮೀಯ ಒಡನಾಟ ಹೊಂದಿದ್ದು ನಟರಾದ ಶಿವರಾಜ್ ಕುಮಾರ್ ಹಾಗೂ ಉಪೇಂದ್ರ ಅವರ ಕುರಿತು ಪುಸ್ತಕ ಹೊರ ತಂದಿದ್ದಾರೆ. ಲಂಕೇಶ್ ಪತ್ರಿಕೆಯ ನಂತರ ಇತ್ತೀಚೆಗೆ ಅವರು ಬಿ ಟಿವಿಯಲ್ಲಿ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಸದ್ಯಕ್ಕೆ ಹವ್ಯಾಸಿ ಬರಹಗಾರರಾಗಿ ಸೇವೆ ಸಲ್ಲಿಸುತ್ತಿದ್ದು, ಬೆಂಗಳೂರು ಪ್ರೆಸ್ ಕ್ಲಬ್ ಗೆ ಎರಡು ಅವದಿಗೆ ಅಧ್ಯಕ್ಷರಾದ ಹೆಗ್ಗಳಿಕೆ ಅವರದು. ಹಾಗೆಯೇ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಹಾಲಿ ಬೆಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷರಾಗಿದ್ದಾರೆ. ಇದೀಗ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾಗಿ ಅವರು ನೇಮಕ ಆಗುವ ಸಾಧ್ಯತೆಗಳಿವೆ ಎನ್ನುತ್ತಿವೆ ಮೂಲಗಳು.