ನಾವು ಯಾರ ಪರನೂ ಅಲ್ಲ ಯಾರ ವಿರೋಧವೂ ಅಲ್ಲ’ ಯಾಕೀ ಮಾತು ಹೇಳ್ತಿದ್ದೀವಿ ಅನ್ನೋದು ಕಂಪ್ಲೀಟ್ ಸ್ಟೋರಿನಾ ಓದಿದ್ಮೇಲೆ ನಿಮಗೆ ಗೊತ್ತಾಗುತ್ತೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೇಲೆ ಒಂದಾದ್ಮೇಲೊಂದು ಆರೋಪಗಳು ಕೇಳಿ ಬರುತ್ತಲೇ ಇವೆ. ಅಸಲಿಯತ್ತು ಬಯಲಾಗುವ ಮುನ್ನವೇ ಬಣ್ಣಕಟ್ಟಿ ಪುಂಕಾನುಪುಂಕವಾಗಿ ಪುಂಗುವ ಕಾರ್ಯಕ್ಕೆ ಚಾಲನೆ ಕೊಟ್ಟಿದ್ದಾರೆ. ಯಾವುದೋ ವಿಷ್ಯವನ್ನು ತೆಗೆದುಕೊಂಡು ಇನ್ಯಾವುದಕ್ಕೋ ಲಿಂಕ್ ಮಾಡಿ ಸ್ಯಾಂಡಲ್‌ವುಡ್ ಚಕ್ರವರ್ತಿಯನ್ನು ತೇಜೋವಧೆ ಮಾಡುವಂತಹ ಕೆಲಸ ನಡೆಯುತ್ತಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಪ್ರಿನ್ಸ್ ಹೋಟೆಲ್‌ನ ಸಪ್ಲೈಯರ್ ಮೇಲೆ ಸಾರಥಿ ಹಾಗೂ ಅವರ ಸ್ನೇಹಿತರು ಹಲ್ಲೆ ನಡೆಸಿದ್ದಾರೆನ್ನುವ ಆರೋಪದಲ್ಲಿ ಹುರುಳಿದಿಯೋ ಇಲ್ಲವೋ ಗೊತ್ತಿಲ್ಲ. ಸದ್ಯಕ್ಕೆ ಪ್ರಕರಣ ತನಿಖಾ ಹಂತದಲ್ಲಿದೆ. ಅಷ್ಟಕ್ಕೂ, `ಸತ್ಯಾನಾ ದಫನ್ ಮಾಡುವ ಖಫನ್ನಾ’ ಯಾರೂ ಇನ್ನೂ ಕಂಡುಹಿಡಿದಿಲ್ಲ ಹೀಗಾಗಿ ಸತ್ಯದ ಕೊರಳಿಗೆ ಕುಣಿಕೆ ಬಿಗಿದರೂ ಅದೂ ನುಸುಳಾಡಿಕೊಂಡು ಹೊರಬರಲೆಬೇಕು ಹೊರಬರುತ್ತೆ ಬಿಡಿ. ಆದರೆ ದಾಸನ ಮೇಲೆ ಇಲ್ಲಸಲ್ಲದ ಆರೋಪ ಹೊರಿಸುತ್ತಾ, ಅಖಾಡದಲ್ಲಿ ಗೊಂದಲ ಸೃಷ್ಟಿಸುತ್ತಾ, ವಿವಾದ ಎಬ್ಬಿಸುವ ಘಟನೆಗಳನ್ನ ಡಿಬಾಸ್ ಭಕ್ತರ ಕೈಯಲ್ಲಿ ನೋಡೋದಕ್ಕೆ ಆಗ್ತಿಲ್ಲ ಹೀಗಾಗಿ ಭಕ್ತಬಳಗ ಕೆಂಡಾಮಂಡಲಗೊಂಡಿದೆ.
ಶನಿವಾರ ಬೆಳಗ್ಗೆಯಿಂದ ದೊಡ್ಮನೆ ಆಸ್ತಿ ಮೇಲೆ ದರ್ಶನ್ ಕಣ್ಣಿಟ್ಟಿದ್ದರಂತೆ ಎಂಬುದೇ ದೊಡ್ಡ ಚರ್ಚೆ. ಒಡಹುಟ್ಟಿದವರಿಗಿಂತ ಒಂದು ಕೈ ಮೇಲಾಗಿದ್ದ ಸಾರಥಿ ಹಾಗೂ ಉಮಾಪತಿ ನಡುವೆ ಮನಸ್ಥಾಪ ಮೂಡೋದಕ್ಕೆ, ಬಿರುಕು ಕಾಣಿಸಿಕೊಳ್ಳೋದಕ್ಕೆ, ಇಬ್ಬರು ಸ್ಟೇಷನ್ ಮೆಟ್ಟಿಲೇರೋದಕ್ಕೆ, ೨೫ ಕೋಟಿ ವಂಚನೆ ಪ್ರಕರಣ ಬೆಳಕಿಗೆ ಬರುವುದಕ್ಕೆ, ದೋಖಾ ಪ್ರಕರಣದಲ್ಲಿ ಒಂದು ವೇಳೆ ಉಮಾಪತಿಯವರ ಕೈವಾಡ ಇದೆ ಅಂತಾದರೆ ನಾನು ಅವರನ್ನೂ ಬಿಡೋದಿಲ್ಲ ಅಂತ ದಾಸ ಹೇಳಿದ್ದಕ್ಕೆ, ಸ್ನೇಹಿತರ ಜೊತೆ ಕುಳಿತು ಮೈಸೂರಿನಲ್ಲಿ ಪ್ರೆಸ್ಮೀಟ್ ಮಾಡಿದ್ದಕ್ಕೆ, ಇತ್ತ ಉಮಾಪತಿ ನಾನು ಬಾಯ್ಬಿಟ್ಟು ಆ ಮೂರು ವಿಷ್ಯ ಹೇಳಿದರೆ ಮಂಡ್ಯಗಿಂತ ಜಾಸ್ತಿ ವೈಬ್ರೇಷನ್ ಆಗುತ್ತೆ ಅಂತ ಹೇಳಿದ್ದಕ್ಕೆ, ಹೀಗೆ ಎಲ್ಲದಕ್ಕೂ ದೊಡ್ಮನೆ ಆಸ್ತಿ ಕೈತಪ್ಪಿರುವುದೇ ಎನ್ನುವುದು ಚರ್ಚೆಯಲ್ಲಿರುವ ವಿಷ್ಯ. ಆದರೆ, ಸತ್ಯಾಸತ್ಯತೆಯನ್ನು ಪರಾಮರ್ಶಿಸುವ ಮೊದಲೇ ಅಂತಿಮ ತೀರ್ಮಾನಕ್ಕೆ ಬರುವುದು ಅಕ್ಷಮ್ಯ ಅಪರಾದ ಅಲ್ಲದೇ ಮತ್ತೇನು ಅಲ್ಲ ಬಿಡಿ.
ದಾಸನಿಗೆ ೨೫ ಕೋಟಿ ದೋಖಾ ಪ್ರಕರಣ ಬೆಳಕಿಗೆ ಬಂದಾಗ, ದರ್ಶನ್‌ಗೆ ಅರುಣಕುಮಾರಿಯವರನ್ನು ಪರಿಚಯ ಮಾಡಿದ್ದು ನಿರ್ಮಾಪಕ ಉಮಾಪತಿಯವರು ಎನ್ನುವ ಸುದ್ದಿ ಹೊರಬಿದ್ದಾಗ ನೇರವಾಗಿ ಉಮಾಪತಿಯವರ ಕಡೆ ಎಲ್ಲರೂ ಬೊಟ್ಟುಮಾಡಿ ತೋರಿಸಿದ್ರು. ಚಕ್ರವರ್ತಿಯ ಆಸ್ತಿ ಹೊಡೆಯೋಕೆ ಅಥವಾ ದಚ್ಚುನಾ ಮೈಸೂರು ಸ್ನೇಹಿತರಿಂದ ದೂರ ಇಡೋದಕ್ಕೆ ನಿರ್ಮಾಪಕ ಉಮಾಪತಿಯವರು ಈ ರೀತಿ ಪ್ಲ್ಯಾನ್ ಮಾಡಿರ‍್ಬೋದು ಅಂತ ಎಲ್ಲರೂ ಮಾತನಾಡಿಕೊಂಡರು. ಇದೀಗ, ಉಮಾಪತಿಯವರು ಬಿಚ್ಚಿಟ್ಟ ದೊಡ್ಮನೆ ಆಸ್ತಿ ವಿಷ್ಯ ಕೇಳಿದ್ಮೇಲೆ ಬಹುತೇಕರು ಮಾತನಾಡ್ತಿರುವುದು ಹಾಗೂ ಬಜಾರ್‌ನಲ್ಲಿ ಚರ್ಚೆಯಾಗ್ತಿರೋದು ದೊಡ್ಮನೆ ಆಸ್ತಿ ತನ್ನ ಕೈ ಸೇರಲಿಲ್ಲ ಎನ್ನುವ ಕಾರಣಕ್ಕೆ ದಾಸದರ್ಶನ್ ರಾಬರ್ಟ್ ಪ್ರೊಡ್ಯೂಸರ್ ಮೇಲೆ ಹಗೆತನ ಸಾಧಿಸೋದಕ್ಕೆ ಹೊರಟರಾ? ತಮ್ಮನಂತಿದ್ದ ಉಮಾಪತಿ ವಿರುದ್ದ ದುಷ್ಮನಿಗೆ ನಿಂತ್ರಾ? ಹೀಗೆ ಏನೇನೋ ಚರ್ಚೆಗಳು ಆಗ್ತಿವೆ.
ಅಂದ್ಹಾಗೇ, ರಾಬರ್ಟ್ ಪ್ರೊಡ್ಯೂಸರ್ ಉಮಾಪತಿಯವರು ದೊಡ್ಮನೆ ಆಸ್ತಿ ವಿಷಯವನ್ನು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಹಾಗೂ ರಾಘವೇಂದ್ರ ರಾಜ್‌ಕುಮಾರ್ ಅವರ ಹೆಸರಲ್ಲಿದ್ದ ಪ್ರಾಪರ್ಟಿಯನ್ನ ನಾನು ಕೊಂಡುಕೊಂಡಿದ್ದೆ. ಈ ವಿಚಾರ ತಿಳಿದ ದರ್ಶನ್ ಅವರು ಆ ಪ್ರಾಪರ್ಟಿಯನ್ನು ತನಗೆ ಕೊಡಿ ಅಂತ ಕೇಳಿದರು. ಆದರೆ, ದೊಡ್ಮನೆ ಆಸ್ತಿಯನ್ನು ಬಿಟ್ಟುಕೊಡುವುದಕ್ಕೆ ನನಗೆ ಮನಸ್ಸು ಒಪ್ಪಲಿಲ್ಲ. ಅಷ್ಟಕ್ಕೂ ಒಬ್ಬ ಸ್ಟಾರ್ ನಟರಿಂದ ಪ್ರಾಪರ್ಟಿಯನ್ನು ಖರೀದಿ ಮಾಡಿ ಮಗದೊಬ್ಬ ಸ್ಟಾರ್ ನಟರಿಗೆ ಮಾರಿಕೊಳ್ಳುವುದು ಶೋಭೆ ತರುವಂತಹ ಕೆಲಸ ಅಲ್ಲ. ಹೀಗಾಗಿ ನಾನು ಕೊಡುವುದಕ್ಕೆ ಆಗಲ್ಲ ಬಾಸ್ ಎಂದೇ ಇದಕ್ಕೆ ಅವರು ಹೋಗಲಿ ಬಿಡಿ ನಿರ್ಮಾಪಕರೇ ಅಂತ ಸುಮ್ಮನಾದರು. ಇದಾದ್ಮೇಲೆ ಮತ್ತೆ ಯಾವತ್ತೂ ಕೂಡ ಆಸ್ತಿ ಬಗ್ಗೆ ಡಿಬಾಸ್ ನನ್ನ ಹತ್ತಿರ ಚರ್ಚೆ ಮಾಡಿಲ್ಲ, ನಾನೇ ಅವರಿಗೆ ದೊಡ್ಮನೆ ಪ್ರಾಪರ್ಟಿಯ ಬದಲಿಗೆ ಮಗದೊಂದು ಪ್ರಾಪರ್ಟಿಯನ್ನು ಕೊಡುತ್ತೇನೆ ಅಂತ ಹೇಳಿದ್ದೇನೆ. ಹೀಗಂತ ಖುದ್ದು ಉಮಾಪತಿಯವರು ಹೇಳಿದ್ಮೇಲೂ ಕೂಡ ದೊಡ್ಮನೆಯ ಆಸ್ತಿ ತನಗೆ ದಕ್ಕಲಿಲ್ಲ ಎನ್ನುವ ಕಾರಣಕ್ಕೆ ಉಮಾಪತಿಯವರ ವಿರುದ್ದ ಜಿದ್ದು ಸಾಧಿಸುತ್ತಿದ್ದಾರೆ ಅಂತೆಲ್ಲಾ ಕೆಲವರು ಸುದ್ದಿಮಾಡುತ್ತಿದ್ದಾರೆ.
ಅಷ್ಟಕ್ಕೂ, ದಾಸದರ್ಶನ್ ಸಣ್ಣಮನಸ್ಸಿನ ವ್ಯಕ್ತಿಯೂ ಅಲ್ಲ ಅಂತಹ ವ್ಯಕ್ತಿತ್ವವೂ ಅವರದ್ದಲ್ಲ. ಆಸ್ತಿ ಬೇಕು ಅಂದರೆ ಭೂಮಿ ಮೇಲೆ ಅಲ್ಲ ಆಕಾಶದಲ್ಲೂ ಖರೀದಿ ಮಾಡುವ ತಾಕತ್ತೂ ಜಗ್ಗುದಾದನಿಗಿದೆ. ಬೆಲೆಕಟ್ಟಲಾಗದ ಕೋಟ್ಯಾಂತರ ಅಭಿಮಾನಿಗಳ ಹೃದಯದಲ್ಲಿ ಜಾಗ ಸಂಪಾದನೆ ಮಾಡಿರುವ ದಾಸ ಮಗದೊಬ್ಬ ಸ್ಟಾರ್ ನಟರ ಆಸ್ತಿಯ ಮೇಲೆ ಕಣ್ಣಾಕೋದು ಇರಲಿ ಬೇರೆ ಸ್ಟಾರ್‌ನಟರ ಫ್ಯಾನ್ಸ್ ಗಳನ್ನೂ ತನ್ನತ್ತ ಸೆಳಿಬೇಕು ಎನ್ನುವ ಕುತಂತ್ರವನ್ನ ಮಾಡೋದಿಲ್ಲ. ಹೀಗಿರುವಾಗ, ದೊಡ್ಮನೆ ಆಸ್ತಿ ತನಗೆ ದಕ್ಕಲಿಲ್ಲ ಎನ್ನುವ ಕಾರಣಕ್ಕೆ ಉಮಾಪತಿಯವರ ವಿರುದ್ದ ಜಿದ್ದು ಸಾಧಿಸ್ತಾರೆ, ಅವರ ವಿರುದ್ದ ಸಂಚು ರೂಪಿಸ್ತಾರೆ, ಅವರ ವಿರುದ್ದ ಇಲ್ಲಸಲ್ಲದ ಆರೋಪ ಮಾಡ್ತಾರೆ ಅಂತೆಲ್ಲಾ ಮಾತನಾಡಿಕೊಳ್ಳುವುದು ತಪ್ಪು.
ಒಂದ್ವೇಳೆ ದಾಸ ದೊಡ್ಮನೆಯ ಆಸ್ತಿ ಮೇಲೆ ಆಸೆಪಟ್ಟಿದ್ದು ನಿಜಾನೇ ಅಂತಾನೇ ತಿಳಿದುಕೊಳ್ಳೋಣ ಅದರಲ್ಲಿ ಏನ್ ತಪ್ಪು. ಅಷ್ಟಕ್ಕೂ, ಆಸ್ತಿ ಮೇಲೆ ಕಣ್ಣಿಡುವುದಕ್ಕೂ, ಆಸೆಪಟ್ಟು ಕೇಳಿ ಪಡೆಯುವುದಕ್ಕೂಅಜಗಜಾಂತರ ವ್ಯತ್ಯಾಸವಿದೆ. ಹೀಗಿರುವಾಗ ದರ್ಶನ್ ಆಸೆಪಟ್ಟು ನಿರ್ಮಾಪಕ ಉಮಾಪತಿಯವರ ಬಳಿ ಕೇಳಿದ್ದರಲ್ಲಿ ತಪ್ಪೇನಿದೆ. ಅಷ್ಟಕ್ಕೂ, ಅವರೇನು ಲಪಟಾಯಿಸೋಕೆ ನೋಡಿಲ್ಲವಲ್ಲ ದುಡ್ಡು ಕೊಟ್ಟು ಖರೀದಿ ಮಾಡೋದಕ್ಕೆ ಕೇಳಿದ್ದಾರೆ ಅವರು ಕೊಡಲ್ಲ ಅಂದಿದ್ದಾರೆ ಅಲ್ಲಿಗೆ ಮುಗೀತು. ಅದನ್ನು ಬಿಟ್ಟು ದೊಡ್ಮನೆಯವರನ್ನು ಹಾಗೂ ತೂಗುದೀಪ್ ಕುಟುಂಬವನ್ನು ಎತ್ತಿಕಟ್ಟುವ ಒಳಸಂಚು ರೂಪಿಸೋದ್ಯಾಕೆ.ಹೊಗೆಯಾಡದಿದ್ದರೂ ಕೂಡ ಕಡ್ಡಿಗೀರಿ ಚಳಿಕಾಯಿಸಿಕೊಳ್ಳುವ ಪ್ರಯತ್ನ ಮಾಡ್ತಿರೋದ್ಯಾಕೆ ಒಂದು ಗೊತ್ತಾಗ್ತಿಲ್ಲ.
ಎನಿವೇ, ಬೆಂಕಿಹಚ್ಚಿ ಮಜಾ ಉಡಾಯಿಸೋರ್ ಆಟ ಹೆಚ್ಚು ದಿನ ನಡೆಯಲ್ಲ ಒಂದಲ್ಲ ಒಂದು ದಿನ ತಾವೇ ಹೆಚ್ಚಿದ ಬೆಂಕಿಯ ಬಾಣಲೆಗೆ ಹಚ್ಚಿದವರೇ ಬೀಳಬೇಕು ಅಲ್ಲಿವರೆಗೂ ಕಾಯದೇ ಬೇರೆ ದಾರಿಯಿಲ್ಲ. ಆದರೆ ಒಂದಂತೂ ಸತ್ಯ ನೂರಾರು ಕೋಟಿಗೆ ಒಡೆಯನಾಗಿರುವ, ವರ್ಷಕ್ಕೆ ೩ ಕೋಟಿಯಂತೆ ಬಡಬಗ್ಗರಿಗೆ ದಾನ ಮಾಡುವ ಯಜಮಾನ ದೊಡ್ಮನೆ ಆಸ್ತಿ ಲಪಟಾಯಿಸಿಕೊಳ್ಳಬೇಕು ಎನ್ನುವ ಹಪಾಹಪಿ ಇರೋದಿಲ್ಲ ಬದಲಾಗಿ ಒಬ್ಬ ಅಭಿಮಾನಿಯಾಗಿ ಅಣ್ಣಾವ್ರ ಮೇಲಿನ ಅಭಿಮಾನ ಹಾಗೂ ದೊಡ್ಮನೆಯ ಸ್ಟಾರ್‌ಗಳ ಮೇಲಿರುವ ಪ್ರೀತಿಗೆ ಕಾಣಿಕೆಯಾಗಿ ಆ ಆಸ್ತಿಯನ್ನು ಖರೀದಿಸಿ ಜೋಪಾನ ಮಾಡ್ಬೇಕು ಎನ್ನುವ ಬಯಕೆ ಇದ್ದಿರಬಹುದು. ಅದನ್ನ ಅಪಾರ್ಥಮಾಡಿಕೊಂಡು ಇಲ್ಲಸಲ್ಲದ ಬಣ್ಣಕಟ್ಟಿ ಸಾರಥಿಯ ತೇಜೋವಧೆ ಮಾಡುವ ಕಾಯಕ ಒಳ್ಳೆಯದಲ್ಲ ಬಿಡಿ