ಪ್ರತಿಷ್ಠಿತ 74ನೇ ಕಾನ್ ಚಿತ್ರೋತ್ಸವದ ಮಾರುಕಟ್ಟೆ ವಿಭಾಗದಲ್ಲಿ ದೇವರ ಕನಸು

ಮಿಲೇನಿಯಮ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ನಿರ್ದೇಶಕ ಸುರೇಶ್ ಲಕ್ಕೂರ್ ನಿರ್ದೇಶನದ “ದೇವರ ಕನಸು” ಸಿನಿಮಾ ಪ್ರತಿಷ್ಠಿತ 74ನೇ ಕಾನ್ ಸಿನಿಮೋತ್ಸದ ವೇಳೆ ಅದರ ಮಾರುಕಟ್ಟೆ ವಿಭಾಗದ ಮಾರ್ಷ್ ಡು ಫಿಲಂನಲ್ಲಿ ಪ್ರದರ್ಶನ ಕಂಡಿದೆ. ಸಾಮಾಜಿಕ ಸಂದೇಶ ಸಾರುವ ಈ ಸಿನಿಮಾದಲ್ಲಿ 12 ವರ್ಷದ ಬಾಲಕನ ಸೈಕಲ್ ಪಡೆದುಕೊಳ್ಳುವ ಕನಸಿನ ಸುತ್ತ ನಿರ್ದೇಶಕರು ಕಥೆ ಹೆಣೆದಿದ್ದಾರೆ. ಸ್ವಂತ ಸೈಕಲ್ ಖರೀದಿಸಿ ಊರ ಸೈಕಲ್ ರೇಸ್‌ನಲ್ಲಿ ಗೆಲುವು ಸಾಧಿಸುವುದು ಆತನ ಮುಖ್ಯ ಉದ್ದೇಶ. ಅದನ್ನು ಈಡೇರಿಸಿಕೊಳ್ಳಲು ಬಾಲಕ ಏನೆಲ್ಲ ಹರಸಾಹಸ ಮಾಡುತ್ತಾನೆ ಎಂಬುದೇ ದೇವರ ಕನಸು ಚಿತ್ರದ ಎಳೆ.


ಈ ಸಿನಿಮೋತ್ಸವದ ಮಾರುಕಟ್ಟೆ ವಿಭಾಗದಲ್ಲಿ ಚಿತ್ರತಂಡ ಪಾಲ್ಗೊಳ್ಳಲು ಅವಕಾಶ ಇದ್ದರೂ, ಕೋವಿಡ್ ಪ್ಯಾಂಡಮಿಕ್ ಹಿನ್ನೆಲೆಯಲ್ಲಿ ಅದು ಈಡೇರಿರಲಿಲ್ಲ. ಮಾರುಕಟ್ಟೆ ವಿಭಾಗದ ಚಿತ್ರಗಳು ಆನ್ಲೈನ್ ಮೂಲಕ ಪ್ರದರ್ಶನ ಕಾಣುತ್ತಿವೆ. 2019ರಲ್ಲಿ ಶೂಟಿಂಗ್ ಆರಂಭಿಸಿದ್ದ ಈ ಸಿನಿಮಾ, ಒಟ್ಟು 29 ದಿನಗಳಲ್ಲಿ ಸಂಪೂರ್ಣ ಶೂಟಿಂಗ್ ಮುಗಿಸಿಕೊಂಡು, ಇದೀಗ ಅಂತಾರಾಷ್ಟ್ರೀಯ ಸಿನಿಮೋತ್ಸವಗಳಿಗೆ ಎಂಟ್ರಿಯಾಗಿತ್ತು.


ಇನ್ನು, ಈ ಸಿನಿಮಾದ ಮತ್ತೊಂದು ವಿಶೇಷ ಏನೆಂದರೆ, “ದೇವರ ಕನಸು” ಚಿತ್ರಕ್ಕೆ ಪ್ಯಾನ್ ಇಂಡಿಯಾ ತಂತ್ರಜ್ಞರು ಕೆಲಸ ಮಾಡಿರುವುದು. ರತ್ನಜಿತ್ ರಾಯ್ ಛಾಯಾಗ್ರಹಣ ಮಾಡಿದರೆ, ಅನಿರ್ಬನ್ ಗಂಗೂಲಿ ಸೌಂಡ್ ಡಿಸೈನಿಂಗ್ ಮಾಡಿದ್ದಾರೆ. ಜಿಸ್ನು ಸೇನ್ ಸಂಕಲನ ಮಾಡಿದ್ದಾರೆ. ಚೆನ್ನೈ ಮೂಲದ ನಿತ್ಯಾನಂದ ಸೌಂಡ್, ಸುಂದರ್ ಸಂಗೀತ ನೀಡಿದ್ದಾರೆ. ಕೇರಳ ಮೂಲದ ಜಿಷಾ ಮ್ಯಾಥ್ಯು ವಸ್ತ್ರ ವಿನ್ಯಾಸ ಮಾಡಿದ್ದು, ಮನೋಜ್ ಅಂಗಮಾಲಿ ಮೇಕಪ್ ಮಾಡಿದ್ದಾರೆ. ಲಿಂಗರಾಜ್ ಇತಿಹಾಸ್ ಸಂಭಾಷಣೆ ಮತ್ತು ಸಾಹಿತ್ಯ ಬರೆದರೆ, ಚನ್ನಬಸವ ಪ್ರೊಡಕ್ಷನ್ ಡಿಸೈನರ್ ಆಗಿ ಈ ಚಿತ್ರಕ್ಕೆ ಕೆಲಸ ಮಾಡಿದ್ದಾರೆ.

ಈ ಸಿನಿಮಾಕ್ಕೆ ಸುನೀಲ್ ರಾಮ್ ಕಥೆ ಬರೆದಿದ್ದಾರೆ. ನಿರ್ದೇಶಕ ಸುರೇಶ್ ಲಕ್ಕೂರ್ ನ್ಯೂಯಾರ್ಕ್ ಸಿನಿಮಾ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದಾರೆ. ಮೊದಲ ಚಿತ್ರವಾಗಿ ದೇವರ ಕನಸು ಅವರ ಬತ್ತಳಿಕೆಯಿಂದ ಹೊರಬಂದಿದ್ದು, ಮಕ್ಕಳ ಸಿನಿಮಾ ಮೂಲಕ ಆಗಮಿಸಿದ್ದಾರೆ. ಚಿಂತಾಮಣಿಯ ಬಳಿಯ ಹಿರೇಪಳ್ಳಿ. ಕನಂಪಲ್ಲಿ, ಕೈವಾರ ಸುತ್ತಮುತ್ತ ಚಿತ್ರದ ಚಿತ್ರೀಕರಣವಾಗಿದೆ. ಈ ಮೊದಲು ಚಿತ್ರದಲ್ಲಿ ದೀಪಕ್, ಅಮೂಲ್ಯ, ಯುವರಾಜ್ ಕಿಣಿ, ಆರುಷಿ ವೇದಿಕಾ, ಮಣಿ, ರೂಪಾ, ವಿಜಯ್ ರಾಕೇಶ್ ನಟಿಸಿದ್ದಾರೆ. ಸಿ. ಜಯಕುಮಾರ್, ಸಿ ಶೇಖರ್ ನಿರ್ಮಾಣವಿದೆ. ಗಂಗಾಧರ್, ಶಂಕರ್, ಸಿ ಸುಬ್ಬಯ್ಯ ಅವರ ಸಹ ನಿರ್ಮಾಣವಿದೆ.

Related Posts

error: Content is protected !!