ಕನ್ನಡ ಚಿತ್ರರಂಗದ ನಟ “ದುನಿಯಾ” ವಿಜಯ್ ಅವರ ತಾಯಿ ಅನಾರೋಗ್ಯದಲ್ಲಿದ್ದ ವಿಷಯ ಎಲ್ಲರಿಗೂ ಗೊತ್ತೇ ಇತ್ತು. ಈಗ ಅವರ ಸ್ಥಿತಿ ಕೊಂಚ ಗಂಭೀರವಾಗಿದೆ. ಅವರ ತಾಯಿ ನಾರಾಯಣಮ್ಮ ಅವರಿಗೆ ಕಳೆದ ಕಳೆದ 20 ದಿನಗಳಿಂದಲೂ ನಟ ವಿಜಯ್ ಅವರು ತಮ್ಮ ಮನೆಯಲ್ಲೇ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದಾರೆ.
ಬ್ರೇನ್ ಸ್ಟ್ರೋಕ್ ಆದ ಕಾರಣ ಅವರ ಆರೋಗ್ಯ ತೀವ್ರ ಹದಗೆಟ್ಟಿದ್ದು, ಪ್ರತಿದಿನವೂ ವೈದ್ಯರು ಮನೆಗೆ ಬಂದು ಚಿಕಿತ್ಸೆ ನೀಡುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಕೋವಿಡ್‌ನಿಂದ ದುನಿಯಾ ವಿಜಯ್ ಪೋಷಕರು ಚೇತರಿಸಿಕೊಂಡಿದ್ದರು. ಚಿಕಿತ್ಸೆ ಪಡೆದು, ಎಲ್ಲವೂ ಸರಿಹೋಯ್ತು ಎನ್ನುವ ಹೊತ್ತಲ್ಲೇ ಈಗ ವಿಜಯ್ ಅವರ ತಾಯಿ ಅವರ ಆರೋಗ್ಯ ಪುನಃ ಹದಗೆಟ್ಟಿದೆ.
ಈ ಕುರಿತಂತೆ ಹೇಳಿಕೊಂಡಿರುವ “ದುನಿಯಾ” ವಿಜಯ್ ಅವರು, “ನನ್ನ ಅಮ್ಮನಿಗೆ ಆಸ್ಪತ್ರೆಗೆ ಹೋಗಲು ಇಷ್ಟವಿರಲಿಲ್ಲ. ಹೀಗಾಗಿ ಮನೆಯಲ್ಲೇ ಚಿಕಿತ್ಸೆಗೆ ವ್ಯವಸ್ಥೆ ಮಾಡಿಸಿದ್ದೇನೆ. ನೋಡಿಕೊಳ್ಳಬೇಕು ಅನ್ನೋದಷ್ಟೇ ನನ್ನಾಸೆ. ಅವರಿಗೆ ಬ್ರೇನ್ ಸ್ಟ್ರೋಕ್ ಆಗಿದ್ದರಿಂದ ಚಲನವಲನ ಇಲ್ಲದೆ, ಎಲ್ಲವೂ ಹಾಸಿಗೆಯಲ್ಲೇ ಆಗುತ್ತಿದೆ.
ಇದರಿಂದ ದಿನ ಕಳೆದಂತೆ ಅವರ ಆರೋಗ್ಯ ಹದಗೆಡುತ್ತಿದೆ. ಅವರ ಸ್ಥಿತಿ ನೋಡಿದರೆ, ಕೊನೆಯ ದಿನಗಳನ್ನು ಕಳೆಯುತ್ತಿದ್ದಾರೇನೋ ಎಂಬ ಬೇಸರವಾಗುತ್ತೆ. ತಾಯಿ ನಿಜಕ್ಕೂ ಮತ್ತೆ ಸಿಗಲ್ಲ. ಇದ್ದಾಗ, ಇರೋವಾಗ ಕಣ್ಣಿಗಿನ ಜಾಸ್ತಿ ನೋಡಿಕೊಳ್ಳಬೇಕಿದೆ. ಅದೇನೆ ಇದ್ದರೂ ಅವರ ಆರೋಗ್ಯ ಮತ್ತೆ ಸರಿಯಾಗುತ್ತೆ ಎಂಬ ವಿಶ್ವಾಸ ನನಗಿದೆ” ಎಂದಿದ್ದಾರೆ ವಿಜಯ್.