ನಟಿ ಹರ್ಷಿಕಾ ಪೂಣಚ್ಚ ಈಗ ಕೊರೊನಾ ಸಂಕಷ್ಟಕ್ಕೆ ಸಿಲುಕಿದವರಿಗೆ ನೆರವಾಗುವ ಮೂಲಕ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಬೆಂಗಳೂರು ಮಾತ್ರವಲ್ಲ, ತಮ್ಮ ತವರು ಜಿಲ್ಲೆ ಕೊಡಗಿಗೂ ಹೋಗಿ ಅಲ್ಲಿಯೂ ಕೊರೊನಾ ಸಂಕಷ್ಟಕ್ಕೆ ಸಿಲುಕಿದವರ ಜತೆಗೆ ಸೋಂಕಿತರಿಗೂ ನೆರವಾಗಿ ಮಾನವೀಯತೆ ಮೆರೆದಿದ್ದು ಎಲ್ಲರಿಗೂ ಗೊತ್ತು. ಆದರೆ ಈಗ ಸೋಷಲ್ ಮೀಡಿಯಾದಲ್ಲಿ ಇನ್ನೊಂದು ಕಾರಣಕ್ಕೆ ಸಾಕಷ್ಟು ಸುದ್ದಿ ಆಗಿದ್ದು ಮಾತ್ರವಲ್ಲ, ನೆಟ್ಟಿಗರಿಂದ ತೀವ್ರ ಮುಜುಗರಕ್ಕೆ ಒಳಗಾಗುವಂತಹ ಟೀಕೆಗಳನ್ನು ಎದುರಿಸಿದ್ದಾರೆ.
ಇಷ್ಟಕ್ಕೂ ಇದಕ್ಕೆ ಕಾರಣವಾಗಿದ್ದು ಖೇಲ್ ಪ್ಲೇ ರಮ್ಮಿ ಹೆಸರಿನ ಆಟ !
ಹೌದು, ಆನ್‌ಲೈನ್ ನಲ್ಲೀಗ ಖೇಲ್ ಪ್ಲೇ ರಮ್ಮಿ ಹೆಸರಿನ ವಿಶಿಷ್ಟವಾದ ಆಟ ಶುರುವಾಗಿದೆ. ಇದರ ಜಾಹೀರಾತಿನಲ್ಲಿ ನಟಿ ಹರ್ಷಿಕಾ ಪೂಣಚ್ಚ ಕಾಣಿಸಿಕೊಂಡಿದ್ದಾರೆ. ಅಲ್ಲಿ ನಗು ನಗುತಾ ಬರುವ ಅವರು, ಖೇಲ್ ಪ್ಲೇ ರಮ್ಮಿ ಆಡುವ ವಿಧಾನವನ್ನು ತಿಳಿಸುತ್ತಾರೆ. ಬಿಡುವಿನ ವೇಳೆಯನ್ನು ಮಜವಾಗಿ ಕಳೆಯಲು ಇದು ತುಂಬಾ ಇಷ್ಟವಾಗುತ್ತೆ ಎನ್ನುತ್ತಾರೆ. ಹಾಗೆಯೇ ಕೊನೆಯಲ್ಲಿ ಮತ್ತ್ಯಾಕೆ ತಡ, ಬಿಂದಾಸ್ ಆಗಿ ಆಡಿ ಎನ್ನುವ ಮಾತುಗಳೊಂದಿಗೆ ರಮ್ಮಿ ಆಟಕ್ಕೆ ಕರೆ ನೀಡುತ್ತಾರೆ. ಇದಕ್ಕೆ ಸಾಮಾಜಿಕ ಜಾಲ ತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಸಿನಿಮಾ ರಂಗದಲ್ಲಿರುವವರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಒಬ್ಬ ಸೆಲಿಬ್ರಿಟಿಯಾಗಿ ನೀವು ಮನೆ ಹಾಳಾಗೋ ಐಡಿಯಾ ಕೊಡಬೇಡಿ ಅಂತ ಕಿವಿ ಮಾತು ಹೇಳಿದ್ದಾರೆ. ಹಾಗೆಯೇ ರಾಘು ಜಿ ಮಹೇಶ್ ಎನ್ನುವವರು, ಜನಗಳನ್ನು ಜೂಜಾಟ ಆಡಿ ಅಂತ ಹೇಳೋಕ್ಕೆ ನಿಮಗೆ ನಾಚಿಕೆ ಆಗಲ್ವಾ ಅಂತ ಖಾರವಾಗಿ ಪ್ರಶ್ನಿಸಿದ್ದಾರೆ. ಸೈನಿಕರಿಗೆ ಹೆಸರಾದ ಕೊಡಗಿನಲ್ಲಿ ಹುಟ್ಟಿ ಬೆಳೆದ ನೀವು, ಹಾಕಿ, ಫುಟ್ಬಾಲ್ ಆಡಿ ಅಂತ ಕ್ರೀಡೆಗಳಿಗೆ ಉತ್ತೇಜನ ನೀಡುವುದನ್ನು ಬಿಟ್ಟು, ಸೋಂಬೇರಿಗಳು, ಮೈಗಳ್ಳರು ಜೂಜಾಡುವ ಆಟವನ್ನು ಆಡಿಸುವ ಕಂಪನಿ ಪರವಾಗಿ ಜಾಹೀರಾತು ಕೊಡುವುದು ನಿಮಗೆ ಶೋಭೆ ತರುವ ಕೆಲಸವಲ್ಲ ಎಂದು ಪಿರಿಯಾಪಟ್ಟಣದ ರವಿಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೀಗೆ ಲೆಕ್ಕವಿಲ್ಲದಷ್ಟು ಟೀಕೆಗಳು ಸೋಶಿಯಲ್ ಮೀಡಿಯಾದಲ್ಲಿ ಬಂದಿವೆ. ಸದ್ಯಕ್ಕೆ ಇವಾವುದಕ್ಕೂ ನಟಿ ಹರ್ಷಿಕಾ ಸದ್ಯ ಪ್ರತಿಕ್ರಿಯೆ ನೀಡಿಲ್ಲ.