ಹಿರಿಯ ಪತ್ರಕರ್ತರಾದ ಮಂಜುನಾಥ್ ಚಾಂದ್ ಬರೆದಿರುವ “ಕಾಡ ಸೆರಗಿನ ಸೂಡಿ” ಕಾದಂಬರಿ ಆಧರಿಸಿ “ಧನ್ಯೋಸ್ಮೀ ಫಿಲಂಸ್” ಬ್ಯಾನರಿನಡಿ “ಭುಗಿಲು” ಎಂಬ ಕುಂದಾಪುರ ಭಾಷಾ ಶೈಲಿಯ ಸಿನಿಮಾ ನಿರ್ಮಾಣವಾಗಿದೆ. ಕನ್ನಡ ಚಿತ್ರರಂಗದಲ್ಲಿ ಸುಮಾರು ಮೂವತೈದು ವರ್ಷ ಡಬ್ಬಿಂಗ್ ಕಲಾವಿದರಾಗಿ, ನಟರಾಗಿ ಹಿರಿಯ ಅನುಭವ ಹೊಂದಿರುವ ಚಂದ್ರಕಾಂತ್ ಕೊಡಪಾಡಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.
ಅಂದಹಾಗೆ, ಈ “ಕಾಡ ಸೆರಗಿನ ಸೂಡಿ” ಕಾದಂಬರಿಯು, ವಿಶೇಷವಾಗಿ ಸ್ವತಂತ್ರ ಪೂರ್ವದ, 1934ನೇ ಇಸವಿಯಲ್ಲಿ ಗಾಂಧೀಜೀ ಕುಂದಾಪುರಕ್ಕೆ ಬಂದಿದ್ದ ಸಮಯದ ಆಸುಪಾಸಿನ ಕಾಲದಲ್ಲಿ ನಡೆದ ಘಟನಾವಳಿಗಳ ಸುತ್ತ ಕಥೆ ಹೆಣೆಯಲಾಗಿದೆ. ಆ ಕಾಲದ ಜನರ ಕಟ್ಟುಪಾಡುಗಳು ಮತ್ತು ದುರಾಡಳಿತ ನಡೆಸುತ್ತಿದ್ದ ಬ್ರಿಟಿಷರ ಕಪಿಮುಷ್ಟಿಯಿಂದ ಸ್ವತಂತ್ರರಾಗುವ ನಿಟ್ಟಲ್ಲಿ, ಹಳ್ಳಿಯ ಪ್ರಮುಖರು ನಡೆಸಿದ ಹಿಂಬಾಗಿಲಿನ ಕಾರ್ಯಾಚರಣೆಗಳ ಮೇಲೆ ಈ ಕಾದಂಬರಿ ಬೆಳಕು ಚೆಲ್ಲಿದೆ. ವಿಶೇಷವಾಗಿ ತನಿಯ ಎಂಬ ದಲಿತನೊಬ್ಬನ ಮೇಲೆ ಇಡೀ ಕಥೆ ಚಾಚಿಕೊಳ್ಳುತ್ತದೆ.
ಇಂತಹದೊಂದು ಗಟ್ಟಿ ಕಥೆಯನ್ನು ಆಯ್ಕೆ ಮಾಡಿಕೊಂಡಿರುವ ನಿರ್ದೇಶಕ ಚಂದ್ರಕಾಂತ್ ಸಿನಿಮೀಯ ರೀತಿಯಲ್ಲಿ ಅದನ್ನು ಕೊಂಚ ಬದಲಿಸಿಕೊಂಡು ಕುಂದಾಪುರ ಭಾಷಾ ಶೈಲಿಯಲ್ಲಿ ಚಿತ್ರ ತಯಾರಿಸಿದ್ದಾರೆ. ಕರಾವಳಿ ಕುಂದಾಪುರದ ಅರೆಹೊಳೆ ಮತ್ತು ವಂಡ್ಸೆ ಎಂಬ ಎರಡು ಸುಂದರ ಊರುಗಳಲ್ಲಿ ಚಿತ್ರೀಕರಣ ನಡೆಸಿದ್ದಾರೆ. ನಿರ್ದೇಶನದ ಜೊತೆ ಚಂದ್ರಕಾಂತ್ ‘ತನಿಯ’ ಎಂಬ ಪ್ರಮುಖ ಪಾತ್ರವನ್ನೂ ನಿರ್ವಹಿಸಿದ್ದಾರೆ. ಜೊತೆಯಲ್ಲಿ ಹಿರಿಯ ನಟ ರಮೇಶ್ ಭಟ್, ನಮಿತಾ ದೇಸಾಯಿ, ರಾಜೀವ್ ಕೊಠಾರಿ, ಗಿರೀಶ್ ಬೈಂದೂರ್, ನಾಗರಾಜ್ ಗಾಣಿಗ ಬೈಂದೂರ್, ಚಂದ್ರಕಲಾ ರಾವ್, ನಾಗರಾಜ್ ಗಾಣಿಗ ಗುಜ್ಜಾಡಿ, ಪ್ರದೀಪ್ ಚಂದ್ರ ಕುತ್ಪಾಡಿ. ಶ್ರೀಪಾದ ಉಡುಪಿ, ಲಕ್ಷ್ಮಣ ಕೊರಗ, ಸತೀಶ್ ಕಂಚಕೋಡು, ಶ್ರೀನಿವಾಸ ಗಂಗೊಳ್ಳಿ ಸೇರಿದಂತೆ ರಂಗಭೂಮಿ ಕಲಾವಿದರೇ ಹೆಚ್ಚಾಗಿ ತೆರೆಹಂಚಿಕೊಂಡಿದ್ದಾರೆ.
ಮಂಜುನಾಥ್ ಚಾಂದ್
ವಿಶೇಷವಾಗಿ ಚಿತ್ರದಲ್ಲಿ ಪೀಟರ್ ಎಂಬ ಬ್ರಿಟಿಷ್ ಅಧಿಕಾರಿಯ ಪಾತ್ರದಲ್ಲಿ ‘ಪೀಟರ್ ಗ್ರಾವಿಸ್ಕಿ’ ಎನ್ನುವ ಹಾಲೆಂಡಿನ ವಿದೇಶಿಗ ಬಣ್ಣ ಹಚ್ಚಿದ್ದಾರೆ. ಇನ್ನು ರಾಜತಂತ್ರ ಅಮ್ಮನ ಮನೆ ಖ್ಯಾತಿಯ ಪಿವಿಆರ್ ಸ್ವಾಮಿ ಛಾಯಾಗ್ರಹಣ ಮಾಡಿದ್ದು, ಕಾಶೀನಾಥ್, ಉಪೇಂದ್ರ ಒಡನಾಡಿಯಾದ ನಿರ್ದೇಶಕ ರಾಜೀವ್ ಕೊಠಾರಿ (ಶ್ರೀರಾಜ್) ಸ್ನೇಹಪೂರ್ವಕವಾಗಿ ಈ ಚಿತ್ರದ ನಿರ್ಮಾಣ-ನಿರ್ವಹಣೆಯ ಜವಾಬ್ದಾರಿ ನಿರ್ವಹಿಸಿದ್ದಾರೆ.
ಚಿತ್ರಸಾಹಿತಿ, ಡಾ. ನಾಗೇಂದ್ರ ಪ್ರಸಾದ್ ಸಾಹಿತ್ಯ, ರಾಧಾಕೃಷ್ಣ ಬಸ್ರೂರ್ ಸಂಗೀತ ಸಂಯೋಜನೆ, ಗುರುದತ್ ಸಾವುಕಾರ್ ಹಿನ್ನೆಲೆ ಸಂಗೀತ ಮತ್ತು ಸಂಕಲನ ಚಿತ್ರಕ್ಕೆ ಶಕ್ತಿ ತುಂಬಿದೆ. ಅಂದುಕೊಂಡಂತೆ ಎಲ್ಲವನ್ನು ಅಚ್ಚುಕಟ್ಟಾಗಿ ಮುಗಿಸಿರುವ ಚಿತ್ರತಂಡ ಚಿತ್ರೋತ್ಸವಗಳಿಗೆ ಲಗ್ಗೆ ಇಡುವ ಯೋಚನೆಯಲ್ಲಿದ್ದಾಗಲೇ ಕೊರೊನಾ ಹಾವಳಿಯಿಟ್ಟು ಕೈ ಕಟ್ಟಿ ಹಾಕಿದೆ. ಆದರೇನಂತೆ, ಈಗ ರಾಷ್ಟ್ರೀಯ ಚಲನಚಿತ್ರೋತ್ಸವದತ್ತ ಚಿತ್ರ ತಂಡ ಮುಖ ಮಾಡಿರುವ ಮಾಹಿತಿ ಹೊರ ಬಿದ್ದಿದೆ.
ಇಂಥದ್ದೊಂದು ಒಳ್ಳೆಯ ಕಥಾಹಂದರ ಇರುವ ಚಿತ್ರಕ್ಕೆ ಪ್ರಶಸ್ತಿಗಳು ಲಭಿಸಲಿ ಅನ್ನೋದು ‘ಸಿನಿಲಹರಿ’ ಆಶಯ.