ರಾಜ್‌ ಅಭಿನಯದ ಮೊದಲ ಚಿತ್ರಕ್ಕೆ ಈಗ 67 ವರ್ಷ! ಬೇಡರ ಕಣ್ಣಪ್ಪ ಕನ್ನಡದ ಅಮೂಲ್ಯ ಕೊಡುಗೆ ; ಗುಬ್ಬಿ ವೀರಣ್ಣ ನಿರ್ಮಾಣದ ಅಪರೂಪದ ಚಿತ್ರವಿದು

ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹಲವು ವಿಶೇಷತೆಗಳಿವೆ. ಅಂತಹ ವಿಶೇಷತೆಗಳಲ್ಲಿ ಡಾ.ರಾಜ್‌ಕುಮಾರ್‌ ಅಭಿನಯದ ಮೊದಲ ಸಿನಿಮಾ “ಬೇಡರ ಕಣ್ಣಪ್ಪ” ಚಿತ್ರವೂ ಒಂದು. ಆ ಚಿತ್ರದ ಬಗ್ಗೆ ಈಗ ಇಲ್ಲೇಕೆ ಪ್ರಸ್ತಾಪ ಎಂಬ ಪ್ರಶ್ನೆ ಎದುರಾಗಬಹುದು. ಅದಕ್ಕೆ ಕಾರಣ, ಮೇ. 7. ಹೌದು, ಈ ದಿನ ಡಾ.ರಾಜ್‌ ಅಭಿನಯದ ಮೊದಲ ಸಿನಿಮಾ “ಬೇಡರ ಕಣ್ಣಪ್ಪ” ಬಿಡುಗಡೆಯಾದ ದಿನ. ಮೇ.7, 1954ರಂದು ಬಿಡುಗಡೆಯಾದ ಈ ಚಿತ್ರಕ್ಕೆ ಈಗ 67 ವರ್ಷ.

ಕನ್ನಡ ಚಿತ್ರರಂಗಕ್ಕೆ ರಾಜ್‌ಕುಮಾರ್‌ ಅವರ “ಬೇಡರ ಕಣ್ಣಪ್ಪ” ಅಮೂಲ್ಯ ಕೊಡುಗೆ. ಆಗಷ್ಟೇ ಕನ್ನಡ ಚಿತ್ರರಂಗ ಮೆಲ್ಲನೆ ಗರಿಗೆದರುತ್ತಿದ್ದ ಸಂದರ್ಭ. ಅದಾಗಲೇ ಒಂದಷ್ಟು ಕಲಾವಿದರು ಬೆಳ್ಳಿತೆರೆಗೆ ಅಪ್ಪಳಿಸಿದ್ದರು. ಅಷ್ಟೇ ಅಲ್ಲ, ಭಕ್ತಿ ಪ್ರಧಾನ ಸಿನಿಮಾಗಳು, ಸಾಮಾಜಿಕ ಚಿತ್ರಗಳು, ಐತಿಹಾಸಿಕ ಚಿತ್ರಗಳು ಆಗಷ್ಟೇ ಬರುತ್ತಿದ್ದ ಕಾಲಘಟ್ಟವದು.

ಅಂತಹ ಸಮಯದಲ್ಲೇ “ಬೇಡರ ಕಣ್ಣಪ್ಪ” ಚಿತ್ರವೂ ಬಿಡುಗಡೆಯಾಗಿತ್ತು. ಈ ಮೊದಲ ಸಾಮಾಜಿಕ ಚಿತ್ರವನ್ನು ತೆರೆಗೆ ಪರಿಚಯಿಸಿದ್ದು, ಕನ್ನಡ ರಂಗಭೂಮಿಯ ಪಿತಾಮಹರಲ್ಲಿ ಒಬ್ಬರಾದ ಗುಬ್ಬಿ ವೀರಣ್ಣ. ಹೌದು, ಈ ಚಿತ್ರ ಅವರ ನಿರ್ಮಾಣ ಸಂಸ್ಥೆಯಿಂದ ಮೂಡಿಬಂದಿದ್ದು. ಗುಬ್ಬಿ ವೀರಣ್ಣ ಕರ್ನಾಟಕ ಪ್ರೊಡಕ್ಷನ್ಸ್ ನಲ್ಲಿ ತಯಾರಾದ ಚಿತ್ರವದು. ಅಷ್ಟೇ ಅಲ್ಲ, ಅದು ಅವರದೇ ಸಾಗರ್ ಚಿತ್ರಮಂದಿರಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರವನ್ನು ಎಚ್‌.ಎಲ್.ಎನ್.‌ ಸಿಂಹ ನಿರ್ದೇಶಿಸಿದ್ದಾರೆ. ಹಾಡುಗಳಿಗೆ ಲಾವಣಿ ವಿಧ್ವಾನ್‌ ಎಸ್.ನಂಜಪ್ಪ ಅವರ ಸಾಹಿತ್ಯವಿದೆ. ಚಿದಂಬರಂ ಎಸ್.ಜಯರಾಮನ್‌ , ಎಂ.ಎಲ್.ವಸಂತ ಕುಮಾರಿ, ಟಿ.ಎಸ್.ಭಗವತಿ ಮೋತಿ ಅವರ ಧ್ವನಿ ಹಾಡುಗಳಿಗಿದೆ. ಎಸ್.ಮಾರುತಿರಾವ್‌ ಅವರ ಛಾಯಾಗ್ರಹಣವಿದೆ. ಆರ್.ಸುದರ್ಶನಂ ಸಂಗೀತ ನೀಡಿದ್ದಾರೆ.

ಚಿತ್ರದಲ್ಲಿ ಹಾಡೊಂದರ ಬಗ್ಗೆ ಇಲ್ಲಿ ಹೇಳಲೇಬೇಕು. “ನಲಿಯುವ ಬಾ ಇನಿಯ” ಎನ್ನುವ ಹಾಡು ಡಾ.ರಾಜಕುಮಾರ್‌ ಹಾಗೂ ನಟಿ ಪಂಡರಿಬಾಯಿ ಅವರ ಮೊದಲ ಗೀತೆ ಅನ್ನೋದು ವಿಶೇಷ. ಈ ಚಿತ್ರದ ಮೊದಲ ದೃಶ್ಯದಲ್ಲಿ ರಾಜ್ ಕುಮಾರ್ ರವರ ಎಂಟ್ರಿಯಾಗುತ್ತೆ. ಇನ್ನು, ಕಥೆ ಬಗ್ಗೆ ಹೇಳೋದಾದರೆ, ಗಂಧರ್ವರ ಲೋಕದ ಮಣಿಮಂತ ಹಾಗೂ ಶರ್ಮಿಷ್ಠಾ ಜೋಡಿಯಿಂದ ಆಗುವ ಒಂದು ಅಚಾನಕ್ ತಪ್ಪಿನ ಸಲುವಾಗಿ ಶಪಿತಗೊಂಡ ಮಣಿಮಂತ ಮತ್ತು ಶರ್ಮಿಷ್ಠಾ ದುಃಖಿಸುತ್ತಿರುವಾಗ ಪರಮೇಶ್ವರ ಹೇಳುವ ಸಂಭಾಷಣೆ ಹೀಗಿದೆ.

“ಅದೊಂದು ಕೆಟ್ಟ ಘಳಿಗೆ ಎಂದು ವ್ಯಥೆ ಪಡದೆ, ಅದೊಂದು ಮಹಾ ಘಳಿಗೆ ಎಂದು ನೀನೇಕೆ ಸಂತೋಷ ಚಿತ್ತನಾಗಿರಬಾರದು” ಇಂತಹ ಅರ್ಥಗರ್ಭಿತ ಸಂಭಾಷಣೆ ಜೊತೆ ಕನ್ನಡದ ಹೆಮ್ಮೆಯ ಕಲಾವಿದ ಬೆಳ್ಳಿ ತೆರೆಯನ್ನು ಬೆಳಗಲು ಆರಂಭಿಸಿದ ಮಹಾನ್ ಘಳಿಗೆ ಅದಾಗಿತ್ತು ಅನ್ನೋದೇ ವಿಶೇಷ.

ಮುಂಬರುವ ದಿನಗಳಲ್ಲಿ ಈ ಚಿತ್ರ ತೆಲುಗಿನಲ್ಲಿಯೂ ತೆರೆಗೆ ಬರುತ್ತೆ. ಅಲ್ಲಿ “ಕಾಳಹಸ್ತಿ ಮಹಿಮೆ” ಹೆಸರಲ್ಲಿ ಸಿನಿಮಾ ರೆಡಿಯಾಗುತ್ತೆ. ಅಲ್ಲೂ ರಾಜ್ ಕುಮಾರ್ ಅಭಿನಯಿಸಿದರು. ವಿಶೇಷವೆಂದರೆ, ರಾಜಕುಮಾರ್‌ ಅವರೇ ಪಾತ್ರಕ್ಕೆ ತೆಲುಗಲ್ಲಿ ಡಬ್‌ ಮಾಡುತ್ತಾರೆ. ನಂತರದ ದಿನಗಳಲ್ಲಿ ಈ ಸಿನಿಮಾ ಹಿಂದಿಯಲ್ಲೂ ತೆರೆಕಾಣುತ್ತೆ. ವಿಶೇಷವೆಂದರೆ, ಮತ್ತೆ ಮೂರು ದಶಕಗಳ ಬಳಿಕ ಶಿವರಾಜ್ ಕುಮಾರ್ ಅಭಿನಯದಲ್ಲಿ”ಶಿವ ಮೆಚ್ಚಿದ ಕಣ್ಣಪ್ಪ” ಸಿನಿಮಾ ಕೂಡ ಬಂತು.

ಈ ಸಿನಿಮಾ ಕೂಡ ರಾಜ್ ಸಂಸ್ಥೆಯಿಂದ ನಿರ್ಮಾಣವಾಯ್ತು. ಈ ಸಿನಿಮಾ ಮಾಡುವ ಮೊದಲು, “ಬೇಡರ ಕಣ್ಣಪ್ಪ” ಸಿನಿಮಾ ಹೆಸರಿಟ್ಟುಕೊಂಡೇ ನಟ,ನಿರ್ಮಾಪಕ ನಿರ್ದೇಶಕ ದ್ವಾರಕೀಶ್‌ ಅವರು ಮಾಡಲು ತೀರ್ಮಾನಿಸಿದ್ದರು. ಅವರು “ಕೃಷ್ಣ ನೀ ಕುಣಿದಾಗ” ಸಿನಿಮಾ ಬಿಝಿಯಲ್ಲಿದ್ದರು. ಅಷ್ಟೊತ್ತಿಗೆ ರಾಜ್‌ ಸಂಸ್ಥೆಯಿಂದ “ಶಿವ ಮೆಚ್ಚಿದ ಕಣ್ಣಪ್ಪ” ಸಿನಿಮಾ ರೆಡಿಯಾಗಿ ಬಿಡುಗಡೆಯಾಗುತ್ತೆ.


ಅದೇನೆ ಇರಲಿ, ರಾಜಕುಮಾರ್‌ ಅಭಿನಯದ ಮೊದಲ ಚಿತ್ರ ಬೇಡರ ಕಣ್ಣಪ್ಪ ಚಿತ್ರ ಬಿಡುಗಡೆಯಾಗಿ ಇಂದಿಗೆ 67 ವರ್ಷಗಳು ಅನ್ನೋದೇ ಈ ಹೊತ್ತಿನ ವಿಶೇಷ.

Related Posts

error: Content is protected !!