ನಿರ್ಮಾಪಕ ಆನೇಕಲ್ ಬಾಲರಾಜ್ ಪುತ್ರ ಸಂತೋಷ್ ಈಗ ಬರ್ಕ್ಲಿ ಸಿಗರೇಟ್ ಬೇಕು ಅಂತಿದ್ದಾರೆ. ಅರೇ, ಸಿಗರೇಟ್ ವಿಷಯ ಇಲ್ಲೇಕೆ ಎಂಬ ಪ್ರಶ್ನೆ ಕಾಡಬಹುದು. ಇದು ಸಿನಿಮಾ ಸುದ್ದಿ. ಹೌದು “ಬರ್ಕ್ಲಿ” ಚಿತ್ರ ಈಗ ಸದ್ದು ಮಾಡಲು ಸಜ್ಜಾಗಿದೆ.. ಏಪ್ರಿಲ್ 30 ರ ಸಂಜೆ 5 ಗಂಟೆಗೆ ಝೇಂಕಾರ್ ಮ್ಯೂಸಿಕ್ ಮೂಲಕ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.
ಸಂತೋಷ್ ಎಂಟರ್ ಪ್ರೈಸಸ್ ಬ್ಯಾನರ್ ನಲ್ಲಿ ಆನೇಕಲ್ ಬಾಲರಾಜ್ ಅವರು ನಿರ್ಮಿಸುತ್ತಿರುವ “ಬರ್ಕ್ಲಿ” ಚಿತ್ರದ ಚಿತ್ರೀಕರಣ ಈಗಾಗಲೇ ಮುಕ್ತಾಯಗೊಂಡಿದೆ. ಸದ್ಯದಲ್ಲೇ ಫಸದಟ್ ಕಾಪಿ ಸಿದ್ದವಾಗಲಿದೆ. ಈಗಾಗಲೇ “ಕರಿಯ”, “ಗಣಪ”, “ಕರಿಯ ೨” ಚಿತ್ರಗಳನ್ನು ನಿರ್ಮಿಸಿರುವ ಆನೇಕಲ್ ಬಾಲರಾಜ್ ಅವರ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಮತ್ತೊಂದು ಅದ್ದೂರಿ ಚಿತ್ರವಿದು.
“ಬರ್ಕ್ಲಿ” ಒಂದು ಉತ್ತಮ ಮನೋರಂಜನೆ ಸಿನಿಮಾ. ಈ ಚಿತ್ರಕ್ಕೆ ಸುಮಂತ್ ಕ್ರಾಂತಿ ನಿರ್ದೇಶಕರು. ಚಿತ್ರಕ್ಕೆ ಸಂಗೀತ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಅವರದೇ.
” ಬರ್ಕ್ಲಿ” ಎಂದ ಕೂಡಲೇ ಎಲ್ಲರೂ ಸಿಗರೇಟ್ ಒಂದರ ಹೆಸರು ಅಂದುಕೊಳ್ಳುತ್ತಾರೆ. ಆದರೆ ನಮ್ಮ “ಬರ್ಕ್ಲಿ” ಚಿತ್ರಕ್ಕೂ ಸಿಗರೇಟ್ ಗೂ ಯಾವುದೇ ಸಂಬಂಧವಿಲ್ಲ. ನಮ್ಮ ಚಿತ್ರದ ಶೀರ್ಷಿಕೆಯ ಅರ್ಥವೇ ಬೇರೆ ಎನ್ನುತ್ತಾರೆ ನಿರ್ದೇಶಕ ಸುಮಂತ್ ಕ್ರಾಂತಿ.
“ಗಣಪ”, “ಕರಿಯ ೨” ಚಿತ್ರಗಳಲ್ಲಿ ನಟಿಸಿ
ಖ್ಯಾತಿಗಳಿಸಿರುವ ಸಂತೋಷ್ ಬಾಲರಾಜ್ ಈ ಚಿತ್ರದ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ.
ಬಾಲ್ಯದಲ್ಲಿ ಕೇಂದ್ರ ಸರ್ಕಾರದ ನೋ ಸ್ಮೋಕಿಂಗ್ ಜಾಹೀರಾತಿನ ಮೂಲಕ ಬಾಲನಟಿಯಾಗಿ ಖ್ಯಾತರಾಗಿದ್ದ, ಸಿಮ್ರಾನ್ ನಾಟೇಕರ್ ಈ ಚಿತ್ರದ ನಾಯಕಿ.
ಬಹುಭಾಷಾ ನಟ ಚರಣರಾಜ್, ನಟಿ ಶೃತಿ, ಬಲ ರಾಜವಾಡಿ , ಬುಲೆಟ್ ಪ್ರಕಾಶ್ ಮುಂತಾದವರು ಇದ್ದಾರೆ.
“ಬಹದ್ದೂರ್” ಚೇತನ್ ಕುಮಾರ್, ಅಭಿ ಕನಸಿನ ಕವನ ಈ ಚಿತ್ರದ ಹಾಡುಗಳನ್ನು ಬರೆದಿದ್ದಾರೆ. ಜ್ಯೂಡ ಸ್ಯಾಂಡಿ ಸಂಗೀತ ನೀಡಿದ್ದಾರೆ. ಕೃಷ್ಣಕುಮಾರ್, ಎನ್.ಎಂ.ಸೂರಿ ಛಾಯಾಗ್ರಹಣವಿದೆ. ಅಮಿತ್ ಸಂಕಲನ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಹಾಗೂ ಮುರಳಿ ಅವರ ನೃತ್ಯ ಚಿತ್ರಕ್ಕಿದೆ.