ಉಡಾಫೆ ಬೇಡ, ಮನೆಯಲ್ಲಿದ್ದರೆ ಜಗತ್ತು ಬೀಳಲ್ಲ; ಜೀವ ಇದ್ದರೆ ಜೀವನ ಇದ್ದೇ ಇರುತ್ತೆ -ಕೋವಿಡ್‌ ನಿರ್ಲಕ್ಷ್ಯ ಮಾಡೋರ ಬಗ್ಗೆ ಶ್ರೀಮುರಳಿ ಎಚ್ಚರಿಕೆ ಮಾತು

ಕೊರೊನಾ ಹಾವಳಿಯಿಂದ ಇಡೀ ಜಗತ್ತೇ ತತ್ತರಿಸಿ ಹೋಗಿದೆ. ಇದಕ್ಕೆ ಸಿನಿಮಾರಂಗವೂ ಹೊರತಲ್ಲ. ಕಳೆದ ವರ್ಷ ವಕ್ಕರಿಸಿ ಬಂದ ಕೊರೊನಾ ಸಾಕಷ್ಟು ಮಂದಿಯನ್ನು ಬಲಿತೆಗೆದುಕೊಂಡಿದೆ. ಈ ವರ್ಷ ಎಲ್ಲವೂ ಸರಿಹೋಗುತ್ತೆ ಅಂದುಕೊಂಡರೆ ಮತ್ತೆ ಕೊರೊನಾ ಹಾವಳಿ ಹೆಚ್ಚಾಗಿ ಎಲ್ಲರ ಬದುಕನ್ನು ಹಾಳುಗೆಡವಿದೆ. ಸರ್ಕಾರ ಬಿಗಿ ಕ್ರಮ ಕೈಗೊಂಡರೂ ಕೊರೊನಾ ವೈರಸ್‌ ನಿಯಂತ್ರಣಕ್ಕೆ ಬರುತ್ತಿಲ್ಲ. ಇದಕ್ಕೆ ಕಡಿವಾಣ ಬೀಳಬೇಕಾದರೆ, ಎಲ್ಲರೂ ಮನೆಯಲ್ಲಿದ್ದು, ಅಂತರ ಕಾಪಾಡಿಕೊಂಡು ಕೊರೊನೊ ವಿರುದ್ಧ ಹೋರಾಡುವ ಅಗತ್ಯತೆ ಇದೆ. ಹಾಗಾಗಿ ನಟ ಶ್ರೀಮುರಳಿ ಕೂಡ ಜನರು ಬೀದಿಗಿಳಿಯದಂತೆ, ಅಂತರ ಕಾಪಾಡಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ. ಕೊರೊನಾ ಹಾವಳಿಯಿಂದ ತಪ್ಪಿಸಿಕೊಳ್ಳಬೇಕು ಎಂದು ಹೇಳಿರುವ ಶ್ರೀಮುರಳಿ, ಒಂದಷ್ಟು ಸಲಹೆ ಕೊಟ್ಟಿದ್ದಾರೆ.


“ಈಗ ಟೈಮ್‌ ಸರಿಯಿಲ್ಲ. ಒಳ್ಳೇಯ ಟೈಮ್‌ ಬಂದೇ ಬರುತ್ತೆ. ದೃಢವಾಗಿ ನಿಲ್ಲಿ. ಎಲ್ಲದ್ದಕ್ಕೂ ಒಳ್ಳೆಯ ಕಾಲ ಬಂದೇ ಬರುತ್ತೆ. ನಾವು ಸ್ಟ್ರಾಂಗ್‌ ಇದ್ದರೆ ಮಾತ್ರ, ಆಚೆ ಬರೋಕೆ ಆಗೋದು. ಮೆಂಟಲಿ ಒಳ್ಳೆಯ ವಾತಾವರಣ ಸೃಷ್ಟಿಸಿಕೊಳ್ಳಿ. ಮುಖ್ಯವಾಗಿ ಸರ್ಕಾರದ ನಿಯಮ ಪಾಲಿಸಿ. ಇಲ್ಲಿ ಯಾರದು ತಪ್ಪು, ಸರಿ ಎಂಬ ಪ್ರಶ್ನೆ ಬಿಡಿ. ಮೊದಲು ಪ್ರಶ್ನಿಸುವುದನ್ನು ಬಿಡಬೇಕು. ಕೊರೊನಾ ಬಗ್ಗೆ ಉಡಾಫೆ ಮಾತುಗಳು ಬೇಡ. ಆ ಹುಡುಗಾಟಿಕೆಯೂ ಸರಿಯಲ್ಲ. ನಾವು ಮೊದಲು ಕೊರೊನಾ ವಿರುದ್ಧ ಹೋರಾಡಬೇಕಾದರೆ, ಮನೆಯಲ್ಲೇ ಇದ್ದು, ನಮ್ಮನ್ನು ನಾವು ಕಾಪಾಡಿಕೊಳ್ಳಬೇಕು, ನಮ್ಮನ್ನು ನಂಬಿದವರಿಗೋಸ್ಕರ ಸರಿಯಾದ ಕ್ರಮಗಳನ್ನು ಅನುಸರಿಸಬೇಕು. ಮೇಜರ್‌ ಆಗಿ, ಪಾಸಿಟಿವ್‌ ಥಿಂಕ್‌ ಮಾಡಬೇಕು. ಮನೆಯಲ್ಲೇ ಇದ್ದು, ಬಿಸಿ ನೀರು ತುಳಸಿ, ಕಷಾಯ ಕುಡಿಯಬೇಕು, ಸ್ಯಾನಿಟೈಸ್‌, ಮಾಸ್ಕ್‌ ಬಳಸಬೇಕು. ಕೇರಫುಲ್‌ ಆಗಿರಬೇಕು. ಒಬ್ಬೊಬ್ಬರನ್ನೂ ಕೇರ್‌ ಮಾಡ್ಬೇಕು. ಕೋವಿಡ್‌ ಇದ್ದರೆ, ಭಯಪಡಬೇಡಿ. ಕ್ವಾರಂಟೈನ್‌ ಆಗಿ ಧೈರ್ಯವಾಗಿರಿ.

ಇಲ್ಲಿ ಎಲ್ಲರೂ ಈ ವಿರುದ್ಧ ಹೋರಾಡಬೇಕೆ ಹೊರತು, ಒಬ್ಬೊಬ್ಬರೇ ಏನೂ ಮಾಡೋಕ್ಕಾಗಲ್ಲ.‌ ಸದ್ಯಕ್ಕೆ ಇರುವ ಈ ಕೆಟ್ಟ ದಿನಗಳಿಂದ ತಪ್ಪಿಸಿಕೊಳ್ಳಿ. ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರೆ ನೂರು ವರ್ಷ ಆಯಸ್ಸು ಎಂಬಂತೆ ಕೊರೊನಾ ಹಾವಳಿಯಿಂದ ತಪ್ಪಿಸಿಕೊಳ್ಳಬೇಕಿದೆ. ನಾವು ಈ ವರ್ಷವೇ ರೆಡಿಯಾಗಬೇಕಿತ್ತು. ಆದರೆ, ಅದರ ಹಾವಳಿ ಇನ್ನೂ ಇದೆ. ಇದು ಎಲ್ಲರಿಗೂ ಹೊಸದು. ಇದು ಹೀಗೆ ಮುಂದುವರೆದರೆ, ಎಲ್ಲಿ ಹೋಗೋದು? ಇದನ್ನು ಕಟ್‌ ಮಾಡಬೇಕಾದರೆ, ಗುಂಪು ಕಟ್ಟಿಕೊಳ್ಳಬಾರದು. ಚೈನ್‌ ಬ್ರೇಕ್‌ ಮಾಡಲೇಬೇಕಿದೆ. ಎಚ್ಚೆತ್ತುಕೊಳ್ಳದೇ ಹೋದರೆ, ಸಮಸ್ಯೆ ಹೆಚ್ಚಾಗುತ್ತೆ. ನಿಮ್ಮ ಪಾಡಿಗೆ ನೀವು ಸ್ವಲ್ಪ ದಿನ ಮನೆಯಲ್ಲಿದ್ದು ಬಿಡಿ, ಜಗತ್ತು ಬೀಳುತ್ತಾ? ನಿತ್ಯ ಯೋಗ ಮಾಡಿ, ವಾಕ್‌ ಮಾಡಿ. ಆರೋಗ್ಯ ಇದ್ದರೆ,‌ ಮುಂದೆ ದುಡಿಮೆ ಮಾಡೋದು ಇದ್ದೇ ಇರುತ್ತೆ. ಆರೋಗ್ಯವೇ ಇಲ್ಲವೆಂದರೆ, ಬದುಕೋದು ಹೇಗೆ? ಕೊನೇ ಪಕ್ಷ ನಮಗೆ, ನಮ್ಮವರಿಗೋಸ್ಕರನಾದರೂ ಸ್ಟ್ರಾಂಗ್‌ ಆಗಿರೋಣ” ಎನ್ನುತ್ತಾರೆ ಶ್ರೀಮುರಳಿ.

Related Posts

error: Content is protected !!