ಕೊನೆಗೂ ರಾಜ್ಯ ಸರ್ಕಾರ ಕೊರೋನಾ ನಿಯಂತ್ರಣಕ್ಕೆ ಟಫ್ ರೂಲ್ಸ್ ಜಾರಿಗೊಳಿಸಿದೆ. ಇದು ಲಾಕ್ ಡೌನ್ ಎನ್ನುವುದರ ಇನ್ನೊಂದು ರೂಪವೇ. ಲಾಕ್ಡೌನ್ ಎನ್ನುವ ಬದಲಿಗೆ ಟಫ್ ರೂಲ್ಸ್ ಹೆಸರಲ್ಲಿ ಅಘೋಷಿತ ಲಾಕ್ ಡೌನ್ಹೇರಿದೆ. ಆಸ್ಪತ್ರೆ, ಹಣ್ಣು-ಹಂಪಲು, ತರಕಾರಿ ಮಾರಾಟ ಸೇರಿದಂತೆ ಅಗತ್ಯ ಸೇವೆಗಳ ಓಡಾಟಕ್ಕೆ ಅವಕಾಶ ಇದೆ. ಉಳಿದಂತೆ ಎಲ್ಲವೂ ಗುರುವಾರ ಮಧ್ಯಾಹ್ನದಿಂದಲೇ ಬಂದ್ ಆಗಿವೆ. ಸಹಜವಾಗಿಯೇ ಇದರ ಎಫೆಕ್ಟ್ ಮನರಂಜನಾ ಕ್ಷೇತ್ರದ ಮೇಲೂ ಬಿದ್ದಿದೆ. ಸಿನಿಮಾ ಅಥವಾ ಸೀರಿಯಲ್ ಚಿತ್ರೀಕರಣಕ್ಕೆ ಸರ್ಕಾರ ನಿರ್ಧಿಷ್ಟವಾಗಿ ಏನನ್ನು ಹೇಳಿಲ್ಲ. ಸಭೆ-ಸಮಾರಂಭ ನಡೆಸುವಂತಿಲ್ಲ, ಗುಂಪು ಸೇರುವಂತಿಲ್ಲ ಅಂತೆಲ್ಲ ಆದೇಶ ನೀಡಿರುವುದರಿಂದ ಅದು ಸಿನಿಮಾ ಚಟುವಟಿಕೆಗಳಿಗೂ ಅನ್ವಯಿಸುತ್ತದೆ. ಅದರ ಇಂಫ್ಯಾಕ್ಟ್ ಈಗಾಗಲೇ ಸಿನಿಮಾ ಹಾಗೂ ಸೀರಿಯಲ್ ಕ್ಷೇತ್ರದ ಮೇಲೂ ಆಗಿದೆ. ಚಿತ್ರೀಕರಣದ ಹಂತದಲ್ಲಿದ್ದ ಸಾಕಷ್ಟು ಸಿನಿಮಾಗಳ ಚಿತ್ರೀಕರಣ ಗುರುವಾರದಿಂದಲೇ ಸ್ಟಾಪ್ ಆಗಿದೆ. ಸೀರಿಯಲ್ ಚಿತ್ರೀಕರಣ ಬಂದ್ ಆಗಿರುವುದರ ಬಗ್ಗೆ ಈವರೆಗೂ ಯಾವುದೇ ಮಾಹಿತಿ ದೊರೆತಿಲ್ಲ. ಆದರೆ ಸದ್ಯದ ಪರಿಸ್ಥಿತಿ ನೋಡಿದರೆ ಸೀರಿಯಲ್ ಚಿತ್ರೀಕರಣಕ್ಕೂ ಟಫ್ ರೂಲ್ಸ್ ಎಫೆಕ್ಟ್ ಬೀರುವುದು ಗ್ಯಾರಂಟಿ. ಹಾಗೊಂದು ವೇಳೆ, ಸಿನಿಮಾ ಹಾಗೂ ಸೀರಿಯಲ್ ಚಿತ್ರೀಕರಣದ ಚಟುವಟಿಕೆಗಳ ಸಂಪೂರ್ಣವಾಗಿ ಬಂದ್ ಆದ್ರೆ ಈಕ್ಷೇತ್ರಗಳನ್ನೆ ನಂಬಿಕೊಂಡವರ ಪರಿಸ್ಥಿತಿ ಶೋಚನೀಯ ಆಗುವುದು ಕಟ್ಟಿಟ್ಟ ಬುತ್ತಿ .
ಸಿನಿಮಾ ಅಥವಾ ಸೀರಿಯಲ್ ಅಂದಾಕ್ಷಣ ಜನ ಸಾಮಾನ್ಯರಿಗೆ ಬರುವ ಆಲೋಚನೆಯೇ ಬೇರೆ. ಅದೊಂದು ತಳಕು-ಬಳುಕಿನ ಜಗತ್ತು. ಅಲ್ಲಿನ ಜನರು ಸಹಜವಾಗಿಯೇ ಸುಖವಾಗಿದ್ದಾರೆನ್ನುವುದು ಸಹಜವಾದ ತಿಳಿವಳಿಕೆ.ಇವೆರೆಡು ಬಣ್ಣದ ಜಗತ್ತು ಅನ್ನೋದು ಕೂಡ ಅದಕ್ಕೆ ಕಾರಣ. ಆದ್ರೆ ಅದು ವಾಸ್ತವವಲ್ಲ. ಈಗಾಗಲೇ ಗೊತ್ತಿರುವಂತೆ ಕನ್ನಡ ಚಿತ್ರರಂಗದ ವಾರ್ಷಿಕ ಸಕ್ಸಸ್ ರೇಟ್ ಕೇವಲ 5 ರಷ್ಟು. ವರ್ಷಕ್ಕೆ ನೂರಿನ್ನೂರು ಚಿತ್ರಗಳು ಬಿಡುಗಡೆ ಯಾದರೂ, ಗೆಲ್ಲುವುದು ಮಾತ್ರ ಬೆರಳೆಣಿಕೆಯ ಚಿತ್ರಗಳು. ಹಾಗೆಯೇ ಇಲ್ಲಿ ಎಲ್ಲಾ ಸೌಲಭ್ಯಗಳನ್ನು ಪಡೆದು ಸುಖವಾಗಿರುವವರ ಸಂಖ್ಯೆ ಕೂಡ ಕೇವಲ ೫ ರಷ್ಟು. ಉಳಿದ ಶೇ. 95 ರಷ್ಟು ಜನರ ಬದುಕು ದಿನಗೂಲಿಗಳಿಗಿಂತ ಭಿನ್ನವಾಗಿಲ್ಲ. ಅವರೆಲ್ಲ ಒಂದೂತ್ತಿನ ಅನ್ನಕ್ಕೂ ನಿತ್ಯ ದುಡಿಯಲೇಬೇಕು. ಅವರ ಪಾಡು ಈಗ ಅಕ್ಷರಶಃ ಬೀದಿ ಪಾಲಾಗಿದೆ.
ಕಳೆದ ಒಂದು-ಒಂದೂವರೆ ವರ್ಷದಿಂದ ಅವರಿಗೆ ಕೈ ತುಂಬಾ ಕೆಲಸ ಇಲ್ಲ. ಕೊರೋನಾ ಬಂದು ಅವರ ನೆಮ್ಮದಿ ಹಾಳಾಗಿದೆ. ವಾರಕ್ಕೆ ಒಂದು ದಿನ ಕೆಲಸ ಮಾತ್ರ. ಅಲ್ಲಿ ಸಿಕ್ಕ ಕೂಲಿಯಲ್ಲಿಯೇ ಅವರೆಲ್ಲ ವಾರದಷ್ಟು ಖರ್ಚು ವೆಚ್ಚ ನೋಡಿಕೊಳ್ಳಬೇಕಿದೆ. ಅದೇ ಬದುಕಿಗೆ ಈಗ ಮತ್ತೆ ಲಾಕ್ ಡೌನ್ ಗರ ಬಡಿದಿದೆ. ವಾರಕ್ಕೆ ಒಂದೋ, ಎರಡೋ ದಿನ ಸಿಗುತ್ತಿದ್ದ ಕೂಲಿಗೂ ಈಗ ಕಲ್ಲು ಬಿದ್ದಿದೆ. ಫ್ಯಾಕ್ಟರಿಗಳಿಗೆ, ಸರ್ಕಾರಿ ಕಚೇರಿಗಳಿಗೆ, ಖಾಸಗಿ ಕಂಪನಿಗಳಲ್ಲೂ ಇಂತಿಷ್ಟೇ ಜನ ಕೆಲಸ ಮಾಡ್ಬೇಕು ಅಂತ ಸರ್ಕಾರ ಗೈಡ್ ಲೈನ್ಸ್ ಕೊಟ್ಟಿದೆ. ಸಿನಿಮಾ ಮತ್ತು ಸೀರಿಯಲ್ ಕ್ಷೇತ್ರಕ್ಕೆ ಇಂತಹ ಯಾವುದೇ ಗೈಡ್ ಲೈನ್ಸ್ ನೀಡದೆ ಮೋಸ ಮಾಡಿದೆ. ಈ ಕ್ಷೇತ್ರಗಳನ್ನೇ ನಂಬಿ ಬದುಕುವವರು ಬೀದಿಗೆ ಬೀಳುವಂತಾಗಿದೆ. ಸರ್ಕಾರ ತಕ್ಷಣವೇ ಸಿನಿಮಾ ಮತ್ತು ಸೀರಿಯಲ್ ಚಿತ್ರೀಕರಣದ ಚಟುವಟಿಕೆಗಳಿಗೂ ಸೂಕ್ತ ಗೈಡ್ ಲೈನ್ಸ್ ಹೊರಡಿಸಿ, ಅಲ್ಲಿನ ಕಾರ್ಮಿಕರಿಗೂ ಕೆಲಸ ಮಾಡುವ ಅವಕಾಶ ನೀಡಬೇಕು. ಹಾಗೆಯೇ ಸೂಕ್ತ ಮುಂಜಾಗ್ರತೆ ವಹಿಸುವಂತೆ ಪ್ರೊಡಕ್ಷನ್ ಹೌಸ್ ಗಳಿಗೆ ಸೂಚನೆ ನೀಡಬೇಕು. ಹಾಗಾದಾಗ ಮಾತ್ರ ಸಿನಿಮಾ ಮತ್ತು ಸೀರಿಯಲ್ ಕ್ಷೇತ್ರಗಳನ್ನೇ ನಂಬಿಕೊಂಡು ಬದುಕುತ್ತಿರುವ ಕಾರ್ಮಿಕರು, ಕಲಾವಿದರಿಗೂ ಒಳೀತು.