ಅಂದೇ ಮೋಡಿ ಮಾಡಿದ್ದರು ಅಣ್ಣಾ‌ಬಾಂಡ್! ಬಾಂಡ್‌ ಸಿನಿಮಾಗಳಲ್ಲಿ ಅಣ್ಣಾವ್ರ ಖದರ್‌

ಇದು ಅಣ್ಣಾವ್ರ ಹುಟ್ಟು ಹಬ್ಬದ ವಿಶೇಷ...

ಡಾ.ರಾಜಕುಮಾರ್…‌ ಭಾರತೀಯ ಚಿತ್ರರಂಗ ಕಂಡ ಅದ್ಭುತ ನಟರು. ಏಪ್ರಿಲ್‌ 24 ಅವರ ಹುಟ್ಟು ಹಬ್ಬ. ಅವರು ನಮ್ಮೊಂದಿಗಿಲ್ಲ. ಆದರೆ, ಮೌಲ್ಯ ಸಾರುವ ಅವರ ಅನೇಕ ಸಿನಿಮಾಳಿವೆ. ಆ ಮೂಲಕ ಅವರು ಇಂದಿಗೂ ನಮ್ಮೊಂದಿಗೆ ಜೀವಿಸುತ್ತಿದ್ದಾರೆ. ಏಪ್ರಿಲ್‌ 24 ಬಂತೆಂದರೆ ಸಾಕು. ಅವರ ಅಭಿಮಾನಿಗಳಿಗಂತೂ ಎಲ್ಲಿಲ್ಲದ ಸಡಗರ-ಸಂಭ್ರಮ. ಆ ದಿನ ಅವರಿಗೆ ಅದೊಂದು ರೀತಿ ಹಬ್ಬ. ರಾಜ್ಯಾದ್ಯಂತ ಅವರ ಅಪಾರ ಅಭಿಮಾನಿಗಳು ಕಂಠೀರವ ಸ್ಟುಡಿಯೋದಲ್ಲಿರುವ ಅವರ ಸ್ಮಾರಕ ಬಳಿ ಬಂದು ಪೂಜೆ ಸಲ್ಲಿಸುತ್ತಾರೆ. ಇನ್ನೂ ಕೆಲವರು ಅವರ ಹುಟ್ಟುಹಬ್ಬದ ಅಂಗವಾಗಿ ಅನ್ನಸಂತರ್ಪಣೆ, ರಕ್ತದಾನ ಶಿಬಿರ, ನೇತ್ರದಾನ ಶಿಬಿರ ಆಯೋಜಿಸಿ ಸಂಭ್ರಮಿಸುತ್ತಾರೆ.

ರಾಜ್‌ಕುಮಾರ್‌ ಅವರ ಹುಟ್ಟುಹಬ್ಬವನ್ನು ಎಲ್ಲೆಡೆ ಕನ್ನಡ ಹಬ್ಬದಂತೇ ಆಚರಿಸುತ್ತಾರೆ. ಕನ್ನಡ ಪ್ರಾಧಿಕಾರ ಕೂಡ ರಾಜ್‌ಕುಮಾರ್‌ ಹುಟ್ಟುಹಬ್ಬದ ದಿನವನ್ನು ಕನ್ನಡ ಅಭಿಮಾನದ ದಿನ ಎಂದು ಆಚರಿಸುತ್ತಿರುವುದು ವಿಶೇಷತೆಗಳಲ್ಲೊಂದು. ರಾಜ್‌ಕುಮಾರ್‌ ಅಂದರೆ, ಸಿನಿಮಾ ಮಂದಿಗಷ್ಟೇ ಅಲ್ಲ, ಎಲ್ಲಾ ವರ್ಗದವರಿಗೂ ಒಂದು ರೀತಿ ಆರಾಧ್ಯ ದೈವ. ರಾಜ್‌ಕುಮಾರ್‌ ಅವರ ಸಿನಿಮಾಗಳಲ್ಲಿ ಮೌಲ್ಯಗಳಿದ್ದವು. ಮನರಂಜನೆಗೂ ಹೆಚ್ಚು ಒತ್ತು ಕೊಡಲಾಗುತ್ತಿತ್ತು. ಸಮಾಜಕ್ಕೆ ಸಂದೇಶ ಸಾರುವ ಚಿತ್ರಗಳೂ ಬಂದಿವೆ. ಈ ನಿಟ್ಟಿನಲ್ಲಿ ಅವರ‌ “ಬಾಂಡ್” ಸಿನಿಮಾಗಳ ಬಗ್ಗೆ ಹೇಳಲೇಬೇಕು.

ಬಾಂಡ್‌ ಸಿನ್ಮಾ ಮೂಲಕ ಮೋಡಿ

ವರನಟ ಡಾ.ರಾಜಕುಮಾರ್‌ ಅವರ ಬಾಂಡ್‌ ಸಿನಿಮಾಗಳು ಮತ್ತು ಅದರ ಹಾಡುಗಳ ಬಗ್ಗೆ ಎಷ್ಟು ಹೇಳಿದರೂ ಸಾಲದು. ಕನ್ನಡ ಚಿತ್ರರಂಗದಲ್ಲಿ “ಜೇಡರ ಬಲೆ ದೊಡ್ಡ ಸಕ್ಸಸ್‌ ಕಂಡ ಸಿನಿಮಾ. ಆ ಬಳಿಕ ನಿರ್ದೇಶಕದ್ವಯರಾದ ದೊರೆ-ಭಗವಾನ್‌ ಜೋಡಿ ಜೋರು ಸುದ್ದಿ ಮಾಡಿತು. ಪತ್ತೆದಾರಿ ಕಥೆಗಳನ್ನು ಇಂಗ್ಲೀಷ್ ಸಿನಿಮಾ ಶೈಲಿಯಲ್ಲೇ ಚಿತ್ರೀಕರಿಸುತ್ತಾರೆ ಎನ್ನುವ ಮಾತು ಜನಜನಿತವಾಯ್ತು. ಈ ಮಾತಿಂದ ಮತ್ತಷ್ಟು ಖುಷಿಗೊಂಡ ದೊರೆ-ಭಗವಾನ್‌ ಜೋಡಿ, ಪುನಃ ಬಾಂಡ್‌ ಸಿನಿಮಾಗಳತ್ತ ಮುಖ ಮಾಡಿದರು. ಆಗ ಹುಟ್ಟಿದ್ದೇ “ಗೋವಾದಲ್ಲಿ ಸಿಐಡಿ 999”.
ಇದು 1968ರಲ್ಲಿ ಬಂದ ಸಿನಿಮಾ. ವಿಭಿನ್ನ ಕಥಾ ವಸ್ತುವಿನ ಜೊತೆಗೊಂದು ಪ್ರಯೋಗವೂ ಈ ಚಿತ್ರದಲ್ಲಿತ್ತು. ತಾಂತ್ರಿಕವಾಗಿ ಅಷ್ಟೇನೂ ಮುಂದುವರೆಯದ ಆ ಕಾಲದಲ್ಲೇ ಕ್ಷಿಪಣಿಯನ್ನು ಹೈಲೈಟ್‌ ಮಾಡಿ ಚಿತ್ರ ಮಾಡಲಾಗಿತ್ತು. ಭಯೋತ್ಪಾದಕರೇ ಇರದ ದಿನಮಾನದಲ್ಲಿ ಭಯೋತ್ಪಾದಕರನ್ನು (ಖಳನಟರು) ಈ ಚಿತ್ರದಲ್ಲಿ ಬಿಂಬಿಸಲಾಗಿತ್ತು. ನಿಜಕ್ಕೂ ಅದು ಅಡ್ವಾನ್ಸ್‌ ಥಿಂಕಿಂಗ್‌. ರಾಜ್‌ಕುಮಾರ್‌ ಅವರನ್ನು ಮತ್ತೆ ಜೇಮ್ಸ್‌ ಬಾಂಡ್‌ ಆಗಿ ನೋಡುವ ಅವಕಾಶ ಈ ಸಿನಿಮಾ ಮೂಲಕ ಸಿನಿರಸಿಕರಿಗೆ ಸಿಕ್ಕಿದ್ದು ವಿಶೇಷ.

ಬಾಂಡ್‌ ಸ್ಟೈಲ್‌ ಯುವಕರಿಗೆ ಅಚ್ಚುಮೆಚ್ಚು

ನಟಿ ಲಕ್ಷ್ಮಿ ಅವರು ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾಗಿದ್ದು ವಿಶೇಷತೆಗಳಲ್ಲೊಂದು. ಲಕ್ಷ್ಮಿ ಬೇರಾರೂ ಅಲ್ಲ, ಕನ್ನಡದ ಮೊದಲ ಚಿತ್ರ “ಸತಿಸುಲೋಚನ” ಸಿನಿಮಾ ನಿರ್ದೇಶಕ ವೈ.ವಿ.ರಾವ್‌ಅವರ ಮಗಳು. ಸಿನಿಮಾ ಮನೆತನದಿಂದ ಬಂದ ಮೊದಲ ನಾಯಕಿ ಅನ್ನೋದು ಇನ್ನೊಂದು ವಿಶೇಷ. ಲಕ್ಷ್ಮಿ ಆಗಿನ ಬಾಂಡ್‌ ಸಿನಿಮಾಗಳಿಗೆ ಹೇಳಿ ಮಾಡಿಸಿದಂತಿದ್ದರು ಅನ್ನೋದು ಸತ್ಯ. ಈ ಚಿತ್ರದ ಸಂಗೀತ, ಛಾಯಾಗ್ರಹಣ, ಚಿತ್ರಕಥೆ ಇವೆಲ್ಲದರ ಜೊತೆಗೆ ರಾಜಕುಮಾರ್‌ಅವರ ಬಾಂಡ್‌ ಸ್ಟೈಲ್‌ ಯುವಕರನ್ನು ಆಕರ್ಷಿಸಿದ್ದು ಸುಳ್ಳಲ್ಲ. ಈ ಚಿತ್ರಕ್ಕೆ ಜಿ.ಕೆ.ವೆಂಕಟೇಶ್‌ ಸಂಗೀತವಿದೆ. ಆಗೆಲ್ಲಾ ಕ್ಲಬ್‌ ಡ್ಯಾನ್ಸ್‌ ಜಮಾನ. ಡ್ಯಾನ್ಸ್‌ ಆಗಲಿ, ಡ್ಯಾನ್ಸರ್ಸ್‌ ಆಗಲಿ, ಕಾಸ್ಟ್ಯೂಮ್ಸ್‌ ಇರಲಿ ಒಂದು ರೀತಿ ತುಂಬಾನೇ ಸ್ಪೆಷಲ್‌. ಆರ್.ಎನ್.‌ ಜಯಗೋಪಾಲ್‌ ಬರೆದ “ಬಳಿಗೆ ಬಾ…” ಹಾಡಲ್ಲಿ ಇಡೀ ಚಿತ್ರದ ಸಂಚಿನ ಕಥೆ ಸಾಗುವುದನ್ನು ಕಾಣಬಹುದು. ಇನ್ನು, ಸಂಗೀತ ವಿಷಯಕ್ಕೆ ಬಂದರೆ, ಸೌಂಡಿಂಗ್‌ ತುಂಬಾನೇ ಅದ್ಭುತ ಅನಿಸುವುದು ಸುಳ್ಳಲ್ಲ.

ಸ್ವಿಮ್ಮಿಂಗ್‌ ಪೂಲ್‌ ಮತ್ತು ಸ್ಕೂಟರ್‌ನಲ್ಲೇ ಸಾಂಗ್ ಶೂಟಿಂಗ್

ಈ ಚಿತ್ರದ “ಲವ್‌ ಇನ್‌ ಗೋವಾ.. ಬನ್ನಿ ಬನ್ನಿ ಎನ್ನುತ್ತಿದೆ ಗೋವಾ…” ಹಾಡು ಕೂಡ ಆ ಕಾಲಕ್ಕೇ ಜನಪ್ರಿಯವಾಗಿತ್ತು. ರಾಜ್‌ಕುಮಾರ್‌, ಲಕ್ಷ್ಮೀ ಹಾಗು ಸಂಗಡಿರು ಇರುವ ಈ ಹಾಡಿನ ಬಗ್ಗೆ ಹೇಳುವುದಾದರೆ, ಆಗ ಇದ್ದ ಬಜಾಜ್‌ ಚೇತಕ್‌ ಸ್ಕೂಟರ್‌ನಲ್ಲೇ ಇಡೀ ಹಾಡನ್ನು ಚಿತ್ರೀಕರಿಸಿದ್ದು ವಿಶೇಷ. ಒಂದೊಳ್ಳೆಯ ಜರ್ನಿ ಸಾಂಗ್‌ ಇದಾಗಿತ್ತು. ಹಾಗೆಯೇ “ಕಂಗಳೇ ಹೇಳಿರಿ, ಮನಸಿನ ಕೋರಿಕೆ..” ಹಾಡು ಕೂಡ ಹೈಲೈಟ್.‌ ಎಲ್.ಆರ್.‌ ಈಶ್ವರಿ ಹಾಡಿದ ಈ ಇಡೀ ಹಾಡಿನ ಚಿತ್ರೀಕರಣ ಸ್ವಿಮ್ಮಿಂಗ್‌ ಪೂಲ್‌ನಲ್ಲೇ ನಡೆದಿರೋದು ಇನ್ನೊಂದು ವಿಶೇಷ. ಈ ಚಿತ್ರದ ಇನ್ನೊಂದು ಹಾಡಿನ ಬಗ್ಗೆ ಹೇಳಲೇಬೇಕು. ಅದೂ ಕೂಡ ಕ್ಲಬ್‌ ಸಾಂಗ್.‌” ಮಿಂಚಿದು ಈ ಹೆಣ್ಣು..” ಹಾಡಲ್ಲೂ ವಿಶೇಷತೆ ಇದೆ. ಡ್ಯಾನ್ಸರ್‌, ಮ್ಯೂಸಿಕ್‌ ಎಲ್ಲವೂ ಇಲ್ಲಿ ಹೈಲೈಟ್.‌ ಒಟ್ಟಾರೆ ಅಣ್ಣಾವ್ರ ಬಾಂಡ್‌ ಸಿನಿಮಾಗಳಲ್ಲಿ ಆಗಿನ ಕಾಲಕ್ಕಷ್ಟೇ ಅಲ್ಲ, ಈಗಿನ ಪೀಳಿಗೆಗೂ ಇಷ್ಟವಾಗುವ ಎಲಿಮೆಂಟ್ಸ್‌ಗಳಿವೆ.

ಬಾಂಡ್‌ ಸೀರೀಸ್‌ನಲ್ಲಿ ಅಣ್ಣಾವ್ರು

ನಂತರದ ದಿನಗಳಲ್ಲಿ ರಾಜ್‌ಕುಮಾರ್‌ “ಆಪರೇಷನ್‌ ಜಾಕ್‌ಪಾಟ್‌”, “ಆಪರೇಷನ್‌ ಡೈಮಂಡ್‌ ರಾಕೆಟ್‌”, “ಸಿಐಡಿ ರಾಜಣ್ಣ” ಹೀಗೆ ಒಂದಷ್ಟು ಪತ್ತೆದಾರಿ ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಬಾಂಡ್‌ ಪಾತ್ರವಾಗಲಿ, ಭಿಕ್ಷುಕನ ಪಾತ್ರವಿರಲಿ, ಅದು ರಾಮನಾಗಲಿ, ಕೃಷ್ಣನಾಗಲಿ, ಪುರಂದರ ದಾಸರಾಗಲಿ, ಕಬೀರರಾಗಲಿ ಈ ಎಲ್ಲಾ ಪಾತ್ರಗಳೂ ರಾಜ್‌ಅವರಿಗೆ ಹೇಳಿ ಮಾಡಿಸಿದಂತಿದ್ದವು. ಇನ್ನೊಂದು ವಿಷಯ ಹೇಳಲೇಬೇಕು. ಪ್ರತಿಯೊಬ್ಬರೂ ಅಣ್ಣಾವ್ರನ್ನು ಹೊಗಳಿದರೆ, ಅವರಿಗೆ ಅದರಿಂದ ಖುಷಿಯಾಗುತ್ತಿರಲಿಲ್ಲ. ಬದಲಿಗೆ ಅಂಜಿಕೆಯಾಗುತ್ತಿತ್ತು. “ಅತೀ ನಿರೀಕ್ಷೆ ಇಟ್ಟುಕೊಂಡಾಗ, ಅತಿ ಹೊಗಳಿಕೆ ಪಡೆದಾಗ ನಾವು ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು” ಅನ್ನೋದು ಅಣ್ಣಾವ್ರ ಮಾತಾಗಿತ್ತು. ರಾಜ್‌ಕುಮಾರ್‌ ಬಾಂಡ್‌ ಸಿನಿಮಾಗಳಿಗಿಂತ ಭಿನ್ನ ಸಿನಿಮಾಗಳಲ್ಲೂ ಕಾಣಿಸಿಕೊಂಡು ಮೋಡಿ ಮಾಡಿದ್ದು ಎಲ್ಲರಿಗೂ ಗೊತ್ತಿದೆ. ಅದೇನೆ ಇರಲಿ, ಡಾ.ರಾಜಕುಮಾರ್‌ ಅವರ ಕಪ್ಪು ಬಿಳುಪಿನ ಸಿನಿಮಾಗಳಲ್ಲಿದ್ದ ಸ್ಪೆಷಲ್‌ ಎಲಿಮೆಂಟ್ಸ್‌ ಇಂದಿಗೂ ಎಲ್ಲರನ್ನೂ ಕಾಡುತ್ತವೆ ಅನ್ನೋದನ್ನು ನಂಬಲೇಬೇಕು.

Related Posts

error: Content is protected !!