ರವಿಚಂದ್ರನ್ ಕನ್ನಡ ಚಿತ್ರರಂಗ ಕಂಡ ಸ್ಟಾರ್ ನಟ. ಅವರು ಸ್ಟಾರ್ ನಟರಷ್ಟೇ ಅಲ್ಲ, ಯಶಸ್ವಿ ನಿರ್ದೇಶಕರು, ಸಕ್ಸಸ್ಫುಲ್ ನಿರ್ದೇಶಕರಷ್ಟೇ ಅಲ್ಲ, ಅವರೊಳಗೊಬ್ಬ ಒಳ್ಳೆಯ ಕಥೆಗಾರನಿದ್ದಾನೆ. ಒಟ್ಟಾರೆ, ಅವರೊಬ್ಬ ರೈಟರ್, ಮ್ಯೂಸಿಕ್ ಡೈರೆಕ್ಟರ್, ಲಿರಿಕ್ ರೈಟರ್ ಹೀಗೆ ಸಿನ್ಮಾ ವಿಭಾಗದಲ್ಲಿ ಎಲ್ಲವನ್ನೂ ಕರಗತ ಮಾಡಿಕೊಂಡವರು. ತಾವು ಅಂದುಕೊಂಡಿದ್ದನ್ನು ಮಾಡದೇ ಬಿಡದ ವ್ಯಕ್ತಿತ್ವ ಅವರದು. ತಮಗೆ ಇಷ್ಟವಿಲ್ಲದ್ದನ್ನು ನೇರವಾಗಿಯೇ ಹೇಳುವ ವ್ಯಕ್ತಿಯೂ ಹೌದು. ಈಗ ರವಿಚಂದ್ರನ್ ಅವರ ಕುರಿತು ಇಷ್ಟೊಂದು ಪೀಠಿಕೆ ಯಾಕೆ ಗೊತ್ತಾ? ಅವರು ಇನ್ನು ಮುಂದೆ ಸದಾ ಸುದ್ದಿಯಲ್ಲಿರುತ್ತಾರೆ! ಅರೇ, ಹೀಗಂದಾಕ್ಷಣ, ಇಷ್ಟು ದಿನ ಸುದ್ದಿಯಲ್ಲಿರಲಿಲ್ಲವೇ? ಎಂಬ ಪ್ರಶ್ನೆ ಸಹಜವಾಗಿಯೇ ಎದುರಾಗುತ್ತೆ. ಇದೆಲ್ಲವೂ ಹೌದು, ಅವರೀಗೆ ಸೋಶಿಯಲ್ ಮೀಡಿಯಾಗೆ ಎಂಟ್ರಿಯಾಗುತ್ತಿದ್ದಾರೆ.
ಅದರಲ್ಲೂ ಹೊಸ ವರ್ಷಕ್ಕೆ. ಅಂದರೆ ಯುಗಾದಿ ಹಬ್ಬಕ್ಕೆ. ಈಗಾಗಲೇ ಥೇಟ್ ಸಿನಿಮಾ ಶೈಲಿಯಲ್ಲೇ ಅವರು ಟೀಸರ್ ಬಿಡುಗಡೆ ಮಾಡುವ ಮೂಲಕ ತಾವು ಸೋಶಿಯಲ್ ಮೀಡಿಯಾಗೆ ಎಂಟ್ರಿ ಕೊಡುವ ಕುರಿತು ಹೇಳಿಕೊಂಡಿದ್ದರು. ಅದಕ್ಕೆ ಈಗ ಸಮಯ ಬಂದಾಗಿದೆ.
ಹೌದು, ಕನ್ನಡದ ಬಹುತೇಕ ಸ್ಟಾರ್ ನಟರು ಈಗ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಸದಾ ಟ್ವಿಟ್ಟರ್, ಫೇಸ್ಬುಕ್, ಇನ್ಸ್ಟಾಗ್ರಾಂ ಅಂತೆಲ್ಲಾ ಸದ್ದು ಮಾಡುತ್ತಲೇ ಇದ್ದಾರೆ. ಇಷ್ಟು ದಿನ ಸುಮ್ಮನಿದ್ದರೂ ಸುದ್ದಿಯಾಗುತ್ತಿದ್ದ ರವಿಚಂದ್ರನ್ ಅವರು, ಇನ್ನು ಮುಂದೆ ಸದಾ ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಫ್ಯಾನ್ಸ್ಗೆ ಸಿಗಲಿದ್ದಾರೆ. ಹೌದು, ಅವರೂ ಕೂಡ ಇನ್ಮುಂದೆ ಟ್ವಿಟ್ಟರ್, ಇನ್ಸ್ಟಾಗ್ರಾಂ, ಫೇಸ್ಬುಕ್ ತಾಣಗಳಲ್ಲಿ ಸಕ್ರಿಯರಾಗಲಿದ್ದಾರೆ.
ಆ ಮೂಲಕ ತಮ್ಮದೇ ಫ್ಯಾನ್ಸ್ ಜೊತೆ ಒಂದಷ್ಟು ವಿಷಯ ಹಂಚಿಕೊಳ್ಳಲಿದ್ದಾರೆ. ಇದರೊಂದಿಗೆ ಹೊಸ ಚಿತ್ರಗಳ ಅಪ್ಡೇಟ್ ಸೇರಿದಂತೆ ಇತ್ಯಾದಿ ವಿನೂತನ ವಿಷಯಗಳನ್ನು ಹಂಚಿಕೊಳ್ಳಲಿದ್ದಾರೆ. ರವಿಚಂದ್ರನ್ ಅವರಿಗೆ ಅಪಾರ ಅಭಿಮಾನಿ ಬಳಗವಿದೆ. ಈಗ ರವಿಚಂದ್ರನ್ ಅವರು ಅಧಿಕೃತವಾಗಿ ಸೋಶಿಯಲ್ ಮೀಡಿಯಾಗೆ ಎಂಟ್ರಿಯಾಗುತ್ತಿದ್ದಾರೆ ಅಂದಮೇಲೆ, ಅವರನ್ನು ಸ್ವಾಗತಿಸೋಕೆ ಈಗಾಗಲೇ ಅವರ ಫ್ಯಾನ್ಸ್ ತುದಿಗಾಲ ಮೇಲೆ ನಿಂತಿದ್ದಾರೆ. ಇಷ್ಟು ವರ್ಷಗಳ ಕಾಲ ತೆರೆಯ ಮೇಲೆ ಭರಪೂರ ಮನರಂಜನೆ ಕೊಡುತ್ತಲೇ, ಆಗಾಗ ಅಭಿಮಾನಿಗಳಿಗೆ ದರ್ಶನ ಕೊಡುತ್ತಿದ್ದ ರವಿಚಂದ್ರನ್, ಇನ್ನು ಮುಂದೆ ಸೋಶಿಯಲ್ ಮೀಡಿಯಾ ಮೂಲಕ ಸದಾ ಕಾಣಿಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ಕೊಡಲು ಮುಂದಾಗಿದ್ದಾರೆ.
ಸಹಜವಾಗಿಯೇ ಇದು ಅವರ ಅಭಿಮಾನಿಗಳಿಗೆ ಸಂತಸ ಕೊಟ್ಟಿದೆ. ರವಿಚಂದ್ರನ್ ಅವರು ಏನೇ ಮಾಡಿದರೂ ಅಲ್ಲೊಂದು ವಿಶೇಷತೆ ಇದ್ದೇ ಇರುತ್ತೆ. ಈಗ ಸೋಶಿಯಲ್ ಮೀಡಿಯಾದಲ್ಲಿ ಎಂಟ್ರಿಯಾಗುವ ಸುದ್ದಿ ಕೂಡ ಅಷ್ಟೇ ಸ್ಪೆಷಲ್ ಆಗಿದೆ. ಮುಂದಿನ ದಿನಗಳಲ್ಲಿ ರವಿಚಂದ್ರನ್ ತಮ್ಮ ಹೊಸ ಆಲೋಚನೆಗಳನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಫ್ಯಾನ್ಸ್ ಕೆಲ ಪ್ರಶ್ನೆಗಳಿಗೂ ಉತ್ತರವಾಗಲಿದ್ದಾರೆ ಎಂಬುದೇ ಅವರ ಅಭಿಮಾನಿ ಬಳಗಕ್ಕೆ ಖುಷಿ. ಅದೇನೆ ಇರಲಿ, ರವಿಚಂದ್ರನ್ ಅಂದರೆ, ನಿಷ್ಕಲ್ಮಷ ಪ್ರೀತಿ ಕಾಣುತ್ತೆ. ಅದು ತೆರೆ ಮುಂದೆಯೂ ಹೌದು, ತೆರೆ ಹಿಂದೆಯೂ ಹೌದು. ಅವರನ್ನು ಆಳವಾಗಿ ಬಲ್ಲವರಿಗೆ ಮಾತ್ರ ರವಿಚಂದ್ರನ್ ವ್ಯಕ್ತಿತ್ವ ಏನು, ಹೇಗೆ ಎಂಬುದು ಗೊತ್ತು. ಸದ್ಯ ಏಪ್ರಿಲ್ ೧೩ರಂದು ೯ ಗಂಟೆಗೆ ರವಿಚಂದ್ರನ್ ಸೋಶಿಯಲ್ ಮೀಡಿಯಾಗೆ ಗ್ರಾಂಡ್ ಎಂಟ್ರಿಕೊಡಲಿದ್ದಾರೆ. ಅಂದಹಾಗೆ, ರವಿಚಂದ್ರನ್ ಸದ್ಯ ಬಹುನಿರೀಕ್ಷೆಯ ಕನ್ನಡಿಗ ಸಿನಿಮಾ ಮುಗಿಸಿದ್ದಾರೆ. ಬಿ.ಎಂ ಗಿರಿರಾಜ್ ನಿರ್ದೇಶನದ ಈ ಚಿತ್ರದಲ್ಲಿ ರವಿಚಂದ್ರನ್ ಗುಣಭದ್ರ ಪಾತ್ರ ಮಾಡಿದ್ದಾರೆ. ಅವರ ಮತ್ತೊಂದು ಸಿನಿಮಾ “ರವಿ ಬೋಪಣ್ಣ” ಸಿನಿಮಾ ಕೂಡ ಬರಲು ಸಜ್ಜಾಗುತ್ತಿದೆ.