ಅದೇನೋ ಗೊತ್ತಿಲ್ಲ. ಈ ಸಿನಿಮಾನೇ ಹಾಗೆ. ಇದೊಂದು ಮ್ಯಾಜಿಕ್ಲೋಕ. ಭಾವಗಳನ್ನು ಬೆಸೆಯುವ ಕಲೆ ಈ ಸಿನಿಮಾಗಿದೆ. ನೋವು-ನಲಿವುಗಳ ಸಂಗಮ ಇಲ್ಲಿದ್ದರೂ, ಸದಾ ಉತ್ಸಾಹ ತುಂಬುವ ಕೆಲಸ ಸಿನಿಮಾ ಮಾಡುತ್ತೆ ಅಂದರೆ ನಂಬಲೇಬೇಕು. ಹೌದು, ಫ್ಯಾನ್ಸ್ ಇಲ್ಲದೆ ಸ್ಟಾರ್ಸ್ ಇಲ್ಲ. ಸಿನಿಮಾಗಳಿಲ್ಲದೆ ಅಭಿಮಾನಿಗಳಿಲ್ಲ. ಅಷ್ಟರ ಮಟ್ಟಿಗೆ ಬೆಸೆದಿರುವ ಸಿನಿಮಾ ರಂಗವಿದು. ಅದೊಂದು ರೀತಿ ಸ್ಟಾರ್ಗಳಿಗೂ, ಅಭಿಮಾನಿಗಳಿಗೂ ಇರುವ ಅವಿನಾಭಾವ ಸಂಬಂಧ. ಅದೆಷ್ಟೋ ಸಿನಿಮಾಗಳು ಒಡೆದ ಮನಸ್ಸುಗಳನ್ನು ಒಂದು ಮಾಡಿವೆ. ದೂರವಾದ ಗೆಳೆಯರನ್ನು ಒಂದುಗೂಡಿಸಿವೆ. ಊರಿಗೆ ಊರೇ ಒಗ್ಗೂಡಿ ದುಡಿಮೆ ಮಾಡುವಂತಹ ಸಂದೇಶವನ್ನ ಸಾರಿವೆ. ಸಮಾಜದಲ್ಲಿ ಬದಲಾವಣೆ ತರುವಂತಹ ಕೆಲಸ ಕೂಡ ಕೆಲವು ಸಿನಿಮಾಗಳಿಂದ ಆಗಿದೆ ಅನ್ನೋದು ವಿಶೇಷ.
ಇಲ್ಲಿ ಪ್ರತಿಯೊಬ್ಬ ನಟರಿಗೂ ತನ್ನದೇ ಅಭಿಮಾನಿ ಬಳಗವಿದೆ. ಅವರಿಗೆ ತಮ್ಮ ಪ್ರೀತಿಯ ಹೀರೋ ಅಂದರೆ ಸಾಕು, ಪ್ರಾಣ ಕೊಡುವಷ್ಟರ ಮಟ್ಟಿಗೆ ಪ್ರೀತಿ ತೋರುತ್ತಾರೆ. ಈಗಾಗಲೇ ಅಂತಹ ಅನೇಕ ಘಟನೆಗಳು ಕಣ್ಣೆದುರಿಗಿವೆ. ಅಂತಹ ಅಭಿಮಾನಿಗಳ ಅಭಿಮಾನ ಕುರಿತು ಹೇಳೋದಾದರೆ, ಅದೆಷ್ಟೋ ಹಿರೋಗಳನ್ನು ಪೂಜಿಸುವ ಫ್ಯಾನ್ಸ್ ಇದ್ದಾರೆ. ಎದೆ ಮೇಲೆ, ಕೈ ಮೇಲೆ ಹಚ್ಚೆ ಹಾಕಿಸಿಕೊಂಡು ಅಭಿಮಾನ ಮೆರೆದವರೂ ಇದ್ದಾರೆ. ಇನ್ನೇನು ಸಾವು-ಬದುಕಿನ ಜೊತೆ ಹೋರಾಡುವ ಅದೆಷ್ಟೋ ಫ್ಯಾನ್ಸ್, ನಾವು ಸಾಯುವ ಮುನ್ನ ನನ್ನ ಹೀರೋನನ್ನು ನೋಡಬೇಕು ಅಂತ ಹಠ ಹಿಡಿದು ದರ್ಶನ ಭಾಗ್ಯ ಪಡೆದವರೂ ಇದ್ದಾರೆ. ಅಂತಹ ಅಭಿಮಾನಿಗಳ ಪ್ರೀತಿಗೆ ಸೋತು ಹೋಗುವ ಸ್ಟಾರ್ನಟರು ಕೂಡ ತಮ್ಮ ಫ್ಯಾನ್ಸ್ ಆಸೆ ಈಡೇರಿಸಿರುವ ಉದಾಹರಣೆಗೆ ಲೆಕ್ಕವಿಲ್ಲ.
ಪುನೀತ್ ಮದುರೆ, ಅಪ್ಪು ಫ್ಯಾನ್
ಇತ್ತೀಚೆಗಷ್ಟೇ ಮೈಸೂರಿನ ಪುನೀತ್ ರಾಜಕುಮಾರ್ ಅಭಿಮಾನಿಯೊಬ್ಬ ಮೃತಪಟ್ಟಿದ್ದ. ಆತನಿಗೆ ಪುನೀತ್ ಅಂದರೆ ಎಲ್ಲಿಲ್ಲದ ಪ್ರೀತಿ. ಪುನೀತ್ ಸಿನಿಮಾ ನೋಡಬೇಕು ಅಂದುಕೊಂಡಿದ್ದ ಆಕಸ್ಮಿಕವಾಗಿ ಇಹಲೋಕ ತ್ಯಜಿಸಿದ್ದ. ಮಗ ಆಸೆಯಂತೆ, ಅವನ ಫೋಟೋ ಸಮೇತ ಚಿತ್ರಮಂದಿರಕ್ಕೆ ಬಂದು ಅವನಿಗೂ ಒಂದು ಟಿಕೆಟ್ ತೆಗೆಸಿ “ಯುವರತ್ನ” ಸಿನಿಮಾ ನೋಡಿದ ಪೋಷಕರ ಉದಾಹರಣೆ ಕಣ್ಣ ಮುಂದಿದೆ. ಈಗ ತನ್ನ ಕಾಲು ಕಳೆದುಕೊಂಡು, ಹಾಸಿಗೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಪುನೀತ್ ಅವರ ಅಪ್ಪಟ ಅಭಿಮಾನಿಯೊಬ್ಬ “ಯುವರತ್ನ” ಸಿನಿಮಾ ನೋಡಲೇಬೇಕು ಅಂತ ಹಠ ಹಿಡಿದು, ಸಿನಿಮಾ ನೋಡಿ ಭಾವುಕನಾಗಿದ್ದಾನೆ. ಅಷ್ಟೇ ಅಲ್ಲ, ಮನೆಗೆ ಬಂದವನೇ, “ಯುವರತ್ನ” ಚಿತ್ರದ ಫೀಲ್ ದ ಪವರ್ ಹಾಡಿಗೆ ಪುನೀತ್ ಅವರಂತೆಯೇ ಒಂದೇ ಕಾಲಲ್ಲಿ ಸ್ಟೆಪ್ ಹಾಕಿ ಖುಷಿಪಟ್ಟಿದ್ದಾನೆ.
ಪುನೀತ್ ಮದುರೆ
ಅಂದಹಾಗೆ, ಆ ಅಭಿಮಾನಿಯ ಹೆಸರು ಪುನೀತ್ ಮದುರೆ. ಜಗಳೂರಿನಲ್ಲಿ ಬೆಸ್ಕಾಂ ಮೆಕ್ಯಾನಿಕ್೧ ಆಗಿರುವ ಲೋಕೇಶ್ಅವರ ಪುತ್ರನೀತ. ೨೧ ವರ್ಷದ ಪುನೀತ್ ಐಟಿಐ ಮುಗಿಸಿ, ಜಾಬ್ ಕೋರ್ಸ್ ಮಾಡುತ್ತಿದ್ದ. ಕಳೆದ ವರ್ಷ ಮಾರ್ಚ್ನಲ್ಲಿ ಕಲ್ಲು ತುಂಬಿದ್ದ ಲಾರಿಯೊಂದು ಈ ಪುನೀತ್ ಮದುರೆ ಮೇಲೆ ಹರಿದು ಹೋಗಿದೆ. ಈ ಘಟನೆಯಿಂದ ಪುನೀತ್ ಕಾಲಿಗೆ ತೀವ್ರ ಪೆಟ್ಟು ಬಿದ್ದು, ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ೪೮ ದಿನಗಳ ಕಾಲ ಚಿಕಿತ್ಸೆ ಕೊಡಿಸಿದರೂ ಆತನ ಕಾಲು ಮಾತ್ರ ಉಳಿಯಲಿಲ್ಲ. ಬಲಗಾಲನ್ನು ಕಟ್ ಮಾಡುವಂತಹ ಸ್ಥಿತಿ ಬಂತು. ತನ್ನ ಬಲಗಾಲು ಕಳೆದುಕೊಂಡಿದ್ದ ಪುನೀತ್, ಒಂದು ವರ್ಷ ಕಾಲ ಎಲ್ಲಿಗೂ ಹೋಗದೆ ಮನೆಯಲ್ಲೇ ಇದ್ದರು. ಆದರೆ, “ಯುವರತ್ನ” ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಯಾವಾಗ ಆಯ್ತೋ, ಆಗಿನಿಂದ ಸಿನಿಮಾ ನೋಡಲೇಬೇಕು ಅಂತ ನಿರ್ಧರಿಸಿದರು. ರಿಲೀಸ್ ದಿನ ಸಿನಿಮಾ ನೋಡೋಕೆ ಹಠ ಮಾಡಿದರು. ಮನೆಯಲ್ಲಿ ಕೊರೊನಾ ಇದೆ, ಅದರಲ್ಲೂ ವಿಶ್ರಾಂತಿ ಅಗತ್ಯವಿದೆ ಅಂದರೂ, ಕೇಳದೆ, ಟಿಕೆಟ್ ತರಿಸಿಕೊಂಡು “ಯುವರತ್ನ” ಸಿನಿಮಾ ನೋಡಿ ಖುಷಿಗೊಂಡಿದ್ದಾರೆ. ತನ್ನ ಹೆಸರೂ ಪುನೀತ್ ಆಗಿದ್ದರಿಂದಲೇ ಚಿಕ್ಕಂದಿನಿಂದಲೂ ಪುನೀತ್ ಅಭಿಮಾನಿ ನಾನು ಅನ್ನುತ್ತಲೇ ಇದ್ದ ಪುನೀತ್, ಈಗ ಕಾಲು ಕಳಕೊಂಡ ನೋವಲ್ಲಿದ್ದರೂ, ಸಿನಿಮಾ ನೋಡಿ ಆ ನೋವು ಮರೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅಭಿಮಾನ ಅಂದರೆ ಇದೇ ಅಲ್ಲವೇ?
ಕಿಚ್ಚನ ಅಭಿಮಾನಿ, ಬಾಳೆಹಣ್ಣು ಹರಿಕೆ
ಇದು ಪುನೀತ್ ಫ್ಯಾನ್ ಕಥೆಯಾದರೆ, ಕಿಚ್ಚ ಸುದೀಪ್ ಅಭಿಮಾನಿ ಕಥೆ ಕೂಡ ಇನ್ನೂ ವಿಶೇಷವಾಗಿದೆ. ಬಾಳೆ ಹಣ್ಣಿನ ಮೇಲೆ ಕೋಟಿಗೊಬ್ಬ ಹೆಸರು ಬರೆದ ಅಭಿಮಾನಿ ದೇವರಿಗೆ ಹರಿಕೆ ತೀರಿಸಿ ಸಿನಿಮಾ ಗೆಲ್ಲಬೇಕೆಂದು ದೇವರಿಗೆ ಕೈ ಮುಗಿದಿದ್ದಾನೆ. ಅಭಿನಯ ಚಕ್ರವರ್ತಿ ಅಂತಲೇ ಜನ ಪ್ರಿಯತೆ ಪಡೆದ ನಟ ಕಿಚ್ಚ ಸುದೀಪ್ ಅವರೇನು ಕಮ್ಮಿ ಇಲ್ಲ. ಲಕ್ಷಾಂತರ ಅಪಾರ ಅಭಿಮಾನಿ ಬಳಗವನ್ನ ಹೊಂದಿರುವ ಸ್ಟಾರ್ ನಟ. ಅವರ ಹೆಸರಲ್ಲೇ ಲೆಕ್ಕವಿಲ್ಲದಷ್ಟು ಅಭಿಮಾನಿ ಸಂಘಗಳಿವೆ. ಅವೇ ಸಾಕು ಅವರ ಅಭಿಮಾನಿಗಳ ಅಭಿಮಾನಕ್ಕೆ. ಅವರೆಲ್ಲ ಸುದೀಪ್ ಅಂದ್ರೆ ಹೊತ್ತು ಮೆರೆಯುತ್ತಾರೆ. ರಾತ್ರೋರಾತ್ರಿ ಆರಡಿ ಕಟೌಟ್ ಕಟ್ಟಿ, ಅದಕ್ಕೆ ಹಾಲಿನ ಅಭಿಷೇಕ ಮಾಡುತ್ತಾರೆ. ದೇವರಂತೆ ಆರಾಧಿಸುತ್ತಾರೆ. ಅವರ ಪಾಲಿಗೆ ಸುದೀಪ್ ಅಂದ್ರೆ ದೇವರು. ಇದು ಉತ್ಪ್ರೇಕ್ಷೆ ಎನಿಸಿದರೂ ಸತ್ಯ. ಅವರೆಲ್ಲ ಈಗ ಕೋಟಿಗೊಬ್ಬ ೩ ಚಿತ್ರದ ನಿರೀಕ್ಷೆಯಲ್ಲಿದ್ದಾರೆ. ಆ ಚಿತ್ರದ ರಿಲೀಸ್ದಿನವನ್ನೇ ಕಾಯುತ್ತಿದ್ದಾರೆ.
ಈ ವರ್ಷಕ್ಕೆ ಸುದೀಪ್ ಅಭಿನಯದ ಸಿನಿಮಾಗಳ ಪೈಕಿ ಮುಂಚೆ ಬರಬೇಕಿರುವ ಸಿನಿಮಾ ಕೋಟಿಗೊಬ್ಬ ೩ . ಈಗಾಗಲೇ ಇದರ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿದ್ದು ನಿಮಗೂ ಗೊತ್ತು. ಆದ್ರೆ ಈಗ ಕೊರೋನಾ ಮಹಾಮಾರಿಯ ಅಟ್ಟಹಾಸ ಹೆಚ್ಚಾಗಿದೆ. ಹಾಗಾಗಿ ಕೋಟಿಗೊಬ್ಬ ೩ ರಿಲೀಸ್ ಡೇಟ್ ಹೆಚ್ಚು ಕಡಿಮೆ ಆಗುವ ಸಾಧ್ಯತೆಗಳು ಇವೆ. ಇಷ್ಟಾಗಿಯೂ ಕಿಚ್ಚನ ಫ್ಯಾನ್ಸ್ ಕ್ರೇಜ್ ಮಾತ್ರ ಕಮ್ಮಿ ಆಗಿಲ್ಲ. ಕೋಟಿಗೊಬ್ಬ ೩ ಬುರುವುದು ಇನ್ನಾವಾಗೋ ಗೊತ್ತಿಲ್ಲ. ಆದ್ರೂ ಅದರ ನೆಕ್ಟ್ ಲೆವೆಲ್ ಕ್ರೇಜ್ ಶುರುವಾಗಿದೆ. ಕಿಚ್ಚನ ಅಭಿಮಾನಿಯೊಬ್ಬ ದೇವರಿಗೆ ಬಾಳೆ ಹಣ್ಣಿನ ಹರಿಕೆ ಹೊತ್ತುಕೊಂಡು, ಅದರ ಮೇಲೆ ಕೋಟಿಗೊಬ್ಬ ೩ ಅಂತ ಬರೆದು, ಹರಕೆ ತೀರಿಸಿಕೊಂಡಿದ್ದಾನೆ. ಓಹೋ…, ದೇವರೇ.. ನನ್ನ ನೆಚ್ಚಿನ ನಟನ ಚಿತ್ರ ಭರ್ಜರಿ ಯಶಸ್ಸು ಕಾಣಲಿ. ದೊಡ್ಡ ಗೆಲುವು ಕಾಣಲಿ ಅಂತೆಲ್ಲ ಆತ ಬೇಡಿಕೊಂಡು ಸ್ಟಾರ್ ಮೇಲಿನ ಅಭಿಮಾನ ಮೆರೆಯುತ್ತಾನೆಂದರೆ, ಅವರಿಗೆಲ್ಲ ಸ್ಟಾರ್ ಅಂದ್ರೆ ಮನೆ ದೇವ್ರು ಅಲ್ಲವೇ? ಇಂತಹ ಅದೆಷ್ಟೋ ಫ್ಯಾನ್ಸ್ ಇದ್ದಾರೆ. ಅವರೆಲ್ಲರಿಗೂ ಸುದೀಪ್ ಅಂದ್ರೆ ಪ್ರಾಣ.
ಹನುಮಂತ, ದುನಿಯಾ ವಿಜಿ ಫ್ಯಾನ್
ಇನ್ನು ದುನಿಯಾ ವಿಜಯ್ ಫ್ಯಾನ್ ಕಥೆ ಕೂಡ ವಿಭಿನ್ನ. ಸಲಗ ಶತದಿನಕ್ಕಾಗಿ ಟ್ಯಾಟೋ ಹಾಕಿಸಿಕೊಂಡ ಅಭಿಮಾನಿ ಇದ್ದಾನೆ. ಸಲಗ ಯಶಸ್ಸು ಕಾಣಬೇಕು ಅಂತ ಶಿಲಾಶಾಸನ ಮಾದರಿ ಮಾಡಿದ ಫ್ಯಾನ್ ಕೂಡ ಇದ್ದಾನೆ. ಗೋವಾ ಕನ್ನಡಿಗನೊಬ್ಬ ಸಲಗ ಟ್ಯಾಟೋ ಹಾಕಿಸಿಕೊಂಡು ಅಭಿಮಾನ ಮೆರೆದಿದ್ದಾನೆ. ಉತ್ತರ ಕರ್ನಾಟಕ ಮೂಲದ ಹನುಮಂತ ಎಂಬ ಹುಡುಗ, ಗೋವಾದಲ್ಲಿರುವ ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾನೆ.
ಆತನಿಗೆ ದುನಿಯಾ ವಿಜಯ್ ಅಂದರೆ ಪ್ರೀತಿ. ವಿಜಯ್ ಅವರಂತೆ ಹನುಮಂತ ಕೂಡ ತನ್ನ ತಂದೆ ತಾಯಿಯನ್ನು ಪ್ರೀತಿಯಿಂದ ಆರಾಧಿಸುತ್ತಿದ್ದಾನೆ. ವಿಜಯ್ ಮೊದಲ ನಿರ್ದೇಶನದ ಸಲಗ ಸಿನಿಮಾ ಯಶಸ್ವಿಯಾಗಲಿ ಎಂದು ಸಲಗ ಟೈಟಲ್ ಅನ್ನು ತನ್ನ ಕೈ ಮೇಲೆ ಟ್ಯಾಟೋ ಹಾಕಿಸಿಕೊಂಡು ಅಭಿಮಾನ ಮೆರೆದಿದ್ದಾನೆ.
ವೀರೇಶ್ ಆಚಾರ್, ವಿಜಿ ಅಭಿಮಾನಿ
ದುನಿಯಾ ವಿಜಯ್ ಮತ್ತೊಬ್ಬ ಅಭಿಮಾನಿಯದ್ದು ಇನ್ನೊಂದು ಕಥೆ. ಚಿತ್ರ ಯಶಸ್ವಿಯಾಗಲೆಂದು ಸಲಗ ಶಾಸನ ಬರೆದು ಅಭಿಮಾನ ತೋರಿದ್ದಾನೆ. ವೀರೇಶ್ ಆಚಾರ್ ಎಂಬಾತ, ಯಾರೂ ಮಾಡದಿರುವ ಕೆಲಸ ಮಾಡಿದ್ದಾರೆ. ಪುರಾತನ ಶಿಲಾ ಶಾಸನದ ಮಾದರಿಯಲ್ಲಿ ಸಲಗ ಶಾಸನ ರಚನೆ ಮಾಡಿ ಎಲ್ಲರ ಮನಗೆದ್ದ ಅಭಿಮಾನಿಯನ್ನು ದುನಿಯಾ ವಿಜಯ್ ಕೂಡ ಕೊಂಡಾಡಿದ್ದಾರೆ. ಅದೇನೆ ಇರಲಿ, ಅಭಿಮಾನಿಗಳ ಅಭಿಮಾನ ವಿಭಿನ್ನವಾಗಿಯೇ ಇರುತ್ತೆ. ಅದರಂತೆ ಸ್ಟಾರ್ನಟರು ಕೂಡ ತಮ್ಮ ಪ್ರೀತಿಯ ಅಭಿಮಾನಿಗಳನ್ನು ಅಷ್ಟೇ ಪ್ರೀತಿಯಿಂದ ಮಾತಾಡಿಸುವ ಮೂಲಕ ಅವರ ಅಭಿಮಾನವನ್ನು ಕೊಂಡಾಡುತ್ತಿದ್ದಾರೆ. ಕನ್ನಡದ ಅನೇಕ ನಟರ ಅಭಿಮಾನಿಗಳು ಕೂಡ ತಮ್ಮದೇ ಶೈಲಿಯಲ್ಲಿ ಅಭಿಮಾನ ತೋರುವ ಮೂಲಕ ತಮ್ಮೊಳಗೆ ವಿಶೇಷ ಖುಷಿ ಪಡುತ್ತಿದ್ದಾರೆ. ಇಂತಹ ಅಭಿಮಾನಿಗಳಿಗೆ ಸ್ಟಾರೇ ಅವರ ಮನೆ ದೇವರಾದರೆ, ಸ್ಟಾರ್ಗಳಿಗೆ ಅಭಿಮಾನಿಗಳೇ ನಮ್ಮನೆ ದೇವ್ರು ಅನ್ನೋದಂತೂ ಸತ್ಯ.