ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಚಿತ್ರದ ರಿಲೀಸ್ ಬೆನ್ನಲೇ ಸರ್ಕಾರ ಚಿತ್ರಮಂದಿರದಲ್ಲಿನ ಶೇ. ೫೦ ರಷ್ಟು ಸೀಟು ಭರ್ತಿಗೆ ಆದೇಶಿಸಿದೆ. ಸಹಜವಾಗಿಯೇ ಇದು ಪವರ್ ಸ್ಟಾರ್ ಅಭಿಮಾನಿಗಳಲ್ಲಿ ತೀವ್ರ ಬೇಸರ ತರಿಸಿದೆ. ಮಕ್ಕಳಿಂದ ಹಿಡಿದು ಮುದುಕರವರೆಗೂ ಫ್ಯಾನ್ಸ್ ಯುವರತ್ನಕ್ಕೆ ಹಂಡ್ರಡ್ ಪರ್ಸೆಂಟ್ ಸೀಟು ಭರ್ತಿಗೆ ಅವಕಾಶ ಸಿಗಲಿ ಅಂತ ಒತ್ತಾಯಿಸುತ್ತಿದ್ದಾರೆ. ವಿಶೇಷವಾಗಿ ಮೂವರು ಮುದ್ದು ಮಕ್ಕಳು ಸರ್ಕಾರಕ್ಕೆ ಮನವಿ ಮಾಡಿಕೊಂಡಿರುವ ವಿಡಿಯೋ ವೈರಲ್ ಆಗಿದೆ.
” ಪ್ಲೀಸ್ ಸರ್ ಯುವರತ್ನ ಚಿತ್ರಕ್ಕೆ ಶೇಕಡಾ ನೂರರಷ್ಟು ಸೀಟು ಭರ್ತಿಗೆ ಅವಕಾಶ ಮಾಡಿಕೊಡಿ, ನಾವು ಮಾಸ್ಕ್ ಹಾಕ್ಕೊಂಡು ಸ್ಯಾನಿಟೈಸ್ ಮಾಡಿಕೊಂಡು ಸಿನಿಮಾ ನೋಡುತ್ತೇವೆʼ ಅಂತ ವಿಡಿಯೋದಲ್ಲಿ ಮನವಿ ಮಾಡಿಕೊಂಡಿದ್ದಾರೆ. ನಾಳೆ( ಭಾನುವಾರ) ನಮ್ಮ ಪೋಷಕರು ಯುವರತ್ನ ಸಿನಿಮಾಗೆ ಟಿಕೆಟ್ ಬುಕ್ ಮಾಡಿದ್ದಾರೆ. ಅಪ್ಪು ಅಂದ್ರೆ ನಮಗೆ ತುಂಬಾ ಇಷ್ಟ , ನಾವು ಸಿನಿಮಾ ನೋಡಬೇಕು, ಟಿಕೆಟ್ ಕ್ಯಾನ್ಸಲ್ ಆಗಬಾರದು ಅಂತ ಆ ಮೂವರು ಮಕ್ಕಳೂ ವಿಡಿಯೋದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಲ್ಲಿ ವಿನಂತಿಸಿಕೊಂಡಿದ್ದಾರೆ.
ಮತ್ತೊಂದೆಡೆ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ತಂಡ ವಿನೂತನವಾಗಿ ಹಂಡ್ರೆಡ್ ಪರ್ಸೆಂಟ್ ಸೀಟು ಭರ್ತಿಗೆ ಅವಕಾಶ ಮಾಡಿಕೊಡುವಂತೆ ಒತ್ತಾಯಿಸಿದೆ. ಅದಕ್ಕಂತಲೇ ವಿನೂತನವಾದ ಪೋಸ್ಟರ್ ಲಾಂಚ್ ಮಾಡಿದೆ.