ಕೊರೊನಾ ಎರಡನೇ ಅಲೆ ಜೋರಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ನಿನ್ನೆಯಷ್ಟೇ ಕಠಿಣ ಕ್ರಮಗಳನ್ನು ಜಾರಿಗೊಳಿಸಿದೆ. ಬೆಂಗಳೂರು ಸೇರಿದಂತೆ ಎಂಟು ಜಿಲ್ಲೆಗಳಲ್ಲಿ ಟಫ್ ರೂಲ್ಸ್ ಜಾರಿ ಮಾಡಿದೆ. ಚಿತ್ರಮಂದಿರಗಳಿಗೆ ಶೇ.50ರಷ್ಟು ಭರ್ತಿಗೆ ಮಾತ್ರ ಅವಕಾಶ ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ ಚಿತ್ರರಂಗ ದೊಡ್ಡ ಧ್ವನಿ ಎತ್ತಿದೆ.
ಈ ಆದೇಶ ಹೊರಬರುತ್ತಿದ್ದಂತೆಯೇ ಚಿತ್ರರಂಗದ ಸ್ಟಾರ್ ನಟರಿಂದ ಹಿಡಿದು, ಚಿತ್ರೋದ್ಯಮದ ಎಲ್ಲರೂ ಒಕ್ಕೊರಲ ಧ್ವನಿ ಎತ್ತಿದ್ದಾರೆ. ಅಂತೆಯೇ ನಟ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರೂ ಕೂಡ ತಮ್ಮ ಟ್ವೀಟ್ ಮೂಲಕ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಅವರು ಮಾಡಿರುವ ಟ್ವೀಟ್ನಲ್ಲಿ “ಕೊರೋನಾ ನಿಯಂತ್ರಣಕ್ಕೆ ಸರ್ಕಾರ ಕೈಗೊಳ್ಳುವ ಮುಂಜಾಗ್ರತಾ ಕ್ರಮಗಳ ಬಗ್ಗೆ ವಿರೋಧ ಇಲ್ಲ. ಇದು ಅಗತ್ಯ ಕೂಡ. ಸರ್ಕಾರ ಕೈಗೊಳ್ಳುವ ನಿರ್ಧಾರಗಳಲ್ಲಿ ಬಣ್ಣವನ್ನೇ ನಂಬಿ ಬದುಕುವರ “ಬಣ್ಣ” ಅಳಿಸೋದು ಬೇಡ ಎಂಬ ಮನವಿ ನಮ್ಮದು. ಕೊರೋನಾ ಎಚ್ಚರಿಕೆ ಕ್ರಮಗಳೊಂದಿಗೆಯೇ ಮನರಂಜಿಸುವ ಕೆಲಸ ಚಿತ್ರೋದ್ಯಮದಿಂದ ಆಗುತ್ತೆ ಎಂಬ ನಂಬಿಕೆ ಸರ್ಕಾರಕ್ಕೂ ಬರಲಿ” ಎಂದು ಹೇಳಿದ್ದಾರೆ.
ಅವರ ಈ ಟ್ವೀಟ್ಗೆ ಫ್ಯಾನ್ಸ್ ಸೇರಿದಂತೆ ಸಾಮಾಜಿಕ ವಲಯದಿಂದಲೂ ಮೆಚ್ಚುಗೆ ಸಿಕ್ಕಿದ್ದು, ಎಲ್ಲರೂ ಶ್ರೀಮುರಳಿ ಅವರ ಮಾತಿಗೆ ಧ್ವನಿಗೂಡಿಸಿದ್ದಾರೆ.
ಇನ್ನು, ಸಾಮಾಜಿಕ ತಾಣದಲ್ಲಿ ಮತ್ತೊಂದು ವಿಡಿಯೋ ಹರಿಬಿಟ್ಟಿರುವ ಶ್ರೀಮುರಳಿ, “ಮನಸು ಬಹಳ ಬೇಜಾರಾಗುತ್ತಿದೆ. ಈಗಷ್ಟೇ ಒಂದು ನ್ಯೂಸ್ ಕೇಳಿದೆ. ಮತ್ತೊಮ್ಮೆ ಶೇ.50ರಷ್ಟು ಆಕ್ಯುಪೆನ್ಸಿಗೆ ಅವಕಾಶ ಕೊಟ್ಟಿದ್ದಾರೆ ಅಂತ. ನಿನ್ನೆ ತಾನೇ “ಯುವರತ್ನ” ರಿಲೀಸ್ ಆಗಿದೆ. ಅದಕ್ಕೂ ಮುಂಚೆ “ರಾಬರ್ಟ್” ರಿಲೀಸ್ ಆಗಿದೆ. ಈ ವಾರ ಒಂದಷ್ಟು ಸಿನಿಮಾಗಳು ರಿಲೀಸ್ ಆಗಬೇಕಿದೆ. ಏನ್ ಮಾಡಬೇಕು ಸರ್. ರಿಲೀಸ್ ಆಗಿರುವ ಸಿನಿಮಾಗಳ ಗತಿ ಏನಾಗಬೇಕು ಸರ್. ಹಲವು ಸಂಸಾರಗಳು ಈ ವೃತ್ತಿಯನ್ನು ನಂಬಿ ಬದುಕುತ್ತಿದ್ದೇವೆ ಸರ್. ನಮಗೆ ಬೇರೇನೂ ಗೊತ್ತಿಲ್ಲ ಸರ್. ಜನರಿಗೆ ಅಳಿಸ್ತೀವಿ, ಇಲ್ಲ ನಗಸ್ತೀವಿ ಇಷ್ಟೇ ಸರ್ ಗೊತ್ತಿರೋದು. ಎಲ್ಲೋ ಒಂದು ಕಡೆ ನಿಜವಾಗಿಯೂ ನೋವಾಗುತ್ತಿದೆ ಸರ್. ಏನ್ ಮಾಡಬೇಕು ನಿರ್ಮಾಪಕರು.
ಅಷ್ಟೊಂದು ಖರ್ಚು ಮಾಡಿ ಎಂಟರ್ಟೈನ್ಮೆಂಟ್ಗೋಸ್ಕರ ಸಿನಿಮಾ ಮಾಡಿದಾಗ ನಾವೆಲ್ಲಾ ಏನ್ ಆಗಬೇಕು ಸರ್. ದಯವಿಟ್ಟು ಇದನ್ನು ವಾಪಸ್ ತಗೊಳ್ಳಿ. ದಯವಿಟ್ಟು ಶೇ.100 ಆಕ್ಯುಪೆನ್ಸಿಗೆ ಅವಕಾಶ ಕೊಡಿ ಸರ್. ಇದು ನಮ್ಮ ಮನವಿ. ನೀವು ಇವತ್ತು ಇದನ್ನು ಮಾಡಲಿಲ್ಲವೆಂದರೆ, ಹಲವಾರು ಜನರು ನಾಳೆ ಬೀದಿಗೆ ಬರುತ್ತಾರೆ. ಇನ್ನಷ್ಟು ಸಿನಿಮಾಗಳು ರಿಲೀಸ್ ಆಗುತ್ತವೆ. ವ್ಯಾಕ್ಸಿನೇಷನ್ ಬಂದಿದೆ ಸರ್.
ಎಲ್ಲರೂ ತಗೊಂಡು ಸೇಫ್ ಆಗ್ತಾರೆ. ನೀವೇ ಸಲಹೆ ಕೊಟ್ಟಿದ್ದೀರಿ. ಆದರೂ ಈ ನಿರ್ಧಾರದಿಂದ ಭಯ ಆಗುತ್ತಿದೆ. ಮತ್ತೊಮ್ಮೆ ಶೇ.100ರಷ್ಟು ಆಕ್ಯುಪೆನ್ಸಿ ಕೊಡಿ” ಎಂದು ಮನವಿ ಮಾಡಿದ್ದಾರೆ.
ಅದೇನೆ ಇರಲಿ, ಈಗ ಚಿತ್ರರಂಗದ ಸ್ಟಾರ್ ನಟರೆಲ್ಲರೂ ಒಗ್ಗಟ್ಟಾಗಿ ಮನವಿ ಮಾಡುತ್ತಿದ್ದಾರೆ. ಸರ್ಕಾರ ಕೂಡ ಈ ಬಗ್ಗೆ ಯೋಚಿಸಿ, ಚಿತ್ರರಂಗದ ಮನವಿಗೆ ಸ್ಪಂದಿಸುವುದೇ ಎಂದು ಕಾದು ನೋಡಬೇಕಿದೆ.