ಆ ಕೋಟೆಗೆ ರಾಜನೂ ನಾನೇ, ಕಾವಲು ಗಾರನೂ ನಾನೇ.. ಹೀಗಂತ ಬೆಳ್ಳಿತೆರೆಗೆ ಬರಲು ರೆಡಿಯಾಗಿದೆ ʼ ಯಾರ ಮಗ ʼ ಹೆಸರಿನ ಚಿತ್ರ. ಇದು ಭೂಗತ ಲೋಕದ ಕಥೆ. ಹಾಗೆಯೇ ತಾಯಿ ಸೆಂಟಿಮೆಂಟ್ ಮೇಲೂ ನಿರ್ಮಣವಾದ ಚಿತ್ರ. ರಘು ಪಡುಕೋಟೆ ಇದರ ನಾಯಕ ನಟ ಕಮ್ ನಿರ್ದೇಶಕ. ಇವರು ಕನ್ನಡಪರ ಹೋರಾಟಗಾರ ಬಸವರಾಜ ಪಡುಕೋಟೆ ಪುತ್ರ. ಬಸವರಾಜ್ ಅವರು ತಮ್ಮ ಪುತ್ರನನ್ನು ಬೆಳ್ಳಿ ತೆರೆಗೆ ಹೀರೋ ಆಗಿ ಪರಿಚಯಿಸಲು ಯಾರ ಮಗ ಹೆಸರಿನ ಚಿತ್ರವೊಂದನ್ನು ನಿರ್ಮಿಸಿ ಬೆಳ್ಳಿ ತೆರೆಗೆ ಹೊರಟಿದ್ದಾರೆ. ಮೊನ್ನೆಯಷ್ಟೇ ಈ ಚಿತ್ರದ ಟೀಸರ್ ಹೊರ ಬಂದಿದೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ರೇಣುಕಾಂಬ ಚಿತ್ರಮಂದಿರದಲ್ಲಿ ಟೀಸರ್ ಲಾಂಚ್ ಕಾರ್ಯಕ್ರಮ ನಡೆಯಿತು.
ಕರ್ನಾಟಕ ರಕ್ಷಣಾ ವೇದಿಕೆ ಯುವಘಟಕದ ರಾಜ್ಯಾಧ್ಯಕ್ಷ ಧರ್ಮರಾಜ್, ಡಿ.ಎಸ್. ಮ್ಯಾಕ್ಸ್ ನ ದಯಾನಂದ್, ಮಾರುತಿರಾವ್ ಮೋರೆ, ವೀರಶೈವ ಯುವ ವೇದಿಕೆಯ ಪ್ರಶಾಂತ್ ಕಲ್ಲೂರ್, ಕೆ.ಜಿ.ಹನುಮಂತಯ್ಯ ಆ ದಿನ ಚಿತ್ರದ ಟೀಸರ್ ಲಾಂಚ್ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಬಂದಿದ್ದರು. ಟೀಸರ್ ಲಾಂಚ್ ಮಾತನಾಡಿದ ಗಣ್ಯರು, ಚಿತ್ರಕ್ಕೆ ಒಳ್ಳೆಯದಾಗಲಿ ಅಂತ ಶುಭ ಹಾರೈಸಿದರು. ಚಿತ್ರ ತಂಡದ ಪರವಾಗಿ ಮೊದಲು ಮಾತನಾಡಿದ ನಿರ್ಮಾಪಕ,ʼ ನಾನು ಡಾ.ರಾಜ್ಕುಮಾರ್ ಅವರ ಅಪ್ಪಟ ಅಭಿಮಾನಿ, ಸಿನಿಮಾ ಮಾಡಲೆಂದೇ ಬೆಂಗಳೂರಿಗೆ ಬಂದಿದ್ದೆ, ಈಗ ನನ್ನ ಮಗನಿಗಿರುವ ಸಿನಿಮಾ ಆಸಕ್ತಿ ಕಂಡು ಈಚಿತ್ರ ನಿರ್ಮಾಣ ಮಾಡಿದ್ದೇನೆ. ಚಿತ್ರ ರಿಲೀಸ್ ಗೆ ರೆಡಿಯಾಗಿದೆ. ಇಷ್ಟರಲ್ಲಿಯೇ ತೆರೆಗೆ ಬರಲಿದೆ ಅಂತ ಹೇಳಿಕೊಂಡರು.
ಚಿತ್ರಕ್ಕೆ ಸುರಪುರ ತಾಲ್ಲೂಕಿನ ಪಡುಕೋಟೆ, ಬೆಂಗಳೂರಿನ ಶಿವಾಜಿನಗರ, ವೈಟ್ಫೀಲ್ಡ್ ಸುತ್ತಮುತ್ತ ಶೇ. 60 ರಷ್ಟು ಚಿತ್ರೀಕರಣ ಮುಗಿದಿದೆ. ಚಿತ್ರದಲ್ಲಿ ಸಾಕಷ್ಟು ಹೊಸಬರಿಗೆ ಅವಕಾಶ ಸಿಕ್ಕಿದೆಯಂತೆ. ಪ್ಲಾನ್ ಪ್ರಕಾರ ಆದರೆ ಇದೇ ಜೂನ್ ತಿಂಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆ ಚಿತ್ರ ತಂಡಕ್ಕಿದೆ.” ಈಗಿನ ಕಾಲದ ಹುಡುಗರು ಹೇಗೆಲ್ಲಾ ಹಾಳಾಗ್ತಿದಾರೆ ಎಂಬುದನ್ನು ಈ ಚಿತ್ರದಲ್ಲಿ ಹೇಳಿದ್ದೇವೆ, ತಾಯಿ ಸೆಂಟಿಮೆಂಟ್, ಲವ್, ಡ್ರಗ್ ಮಾಫಿಯಾ ಕೂಡ ಚಿತ್ರದಲ್ಲಿದೆ. ಒಬ್ಬ ಮಗನಾದವನು ತನ್ನ ತಾಯಿಯನ್ನು ಎಷ್ಟು ಕಾಳಜಿಯಿಂದ ನೋಡಿಕೊಳ್ಳಬಹುದು ಅಂತ ನನ್ನ ಪಾತ್ರದ ಮೂಲಕ ನಿರೂಪಿಸಲಾಗುತ್ತಿದೆ. ತಾಯಿ ಕೂಡ ತನ್ನ ಮಗನ ಮೇಲೆ ಎಷ್ಟು ಕಾಳಜಿ ವಹಿಸುತ್ತಾಳೆ ಎಂಬ ಕಂಟೆಂಟ್ ಚಿತ್ರದಲ್ಲಿದೆʼ ಎನ್ನುವುದು ನಿರ್ದೇಶಕ ಕಮ್ ನಾಯಕ ನಟ ರಘು ಪಡುಕೋಟೆ ಮಾತು. ಚಿತ್ರದಲ್ಲಿ 5 ಹಾಡುಗಳಿದ್ದು, ಅವಗಳಿಗೆ ಪ್ರವೀಣ್ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ಸುಕೃತ ಅಭಿನಯಿಸುತ್ತಿದ್ದು, ಕಾಕ್ರೋಚ್ಸುಧೀ, ಬಲ ರಾಜವಾಡಿ ಸೇರಿದಂತೆ ದೊಡ್ಡ ತಂಡವೇ ಚಿತ್ರದಲ್ಲಿದೆ.