ಸಿನಿಮಾ ರಂಗಕ್ಕೆ ಕರಾವಳಿ ಹುಡುಗಿಯರು ಸರದಿಯಂತೆ ದಾಂಗುಡಿ ಇಡುತ್ತಿದ್ದಾರೆ. ಈಗಾಗಲೇ ಅಲ್ಲಿಂದ ಇಲ್ಲಿಗೆ ಬಂದು ಹೆಸರು ಮಾಡಿದವರದ್ದು ದೊಡ್ಡ ಪಟ್ಟಿಯಿದೆ. ಆ ಸಾಲಿಗೆ ಈಗ ಮತ್ತೊಬ್ಬರು ಕರಾವಳಿ ಚೆಲುವೆ ಸಿನಿಮಾ ರಂಗಕ್ಕೆ ಎಂಟ್ರಿಯಾಗಿದ್ದಾರೆ. ಹೆಸರು ವಿರಾನಿಕಾ ಶೆಟ್ಟಿ. “ಚಿ. ತು. ಯುವಕರ ಸಂಘʼ ಎನ್ನುವ ಚಿತ್ರದ ನಾಯಕಿ. ಇದು ಇವರ ಮೊದಲ ಚಿತ್ರ. ಸಿನಿಮಾ ರಂಗಕ್ಕೆ ಎಂಟ್ರಿಯಾದ ಬಗೆ, ಚಿತ್ರೀಕರಣದ ಅನುಭವ ಕುರಿತು ಸಿನಿಲಹರಿ ಜತೆಗೆ ನಟಿ ವಿರಾನಿಕಾ ಶೆಟ್ಟಿ ಮಾತನಾಡಿದ್ದು ಹೀಗೆ..
-ಎಂಥಾ ನೀವೂ ಕೂಡ ಕರಾವಳಿ ಕಡೆಯವ್ರಾ ?
ಮೂಲತಃ ನಾನು ಸಕಲೇಶಪುರ ಹುಡುಗಿ. ಹೈಸ್ಕೂಲ್ ತನಕ ಓದಿದ್ದೆಲ್ಲವೂ ಅಲ್ಲಿಯೇ. ಉನ್ನತ ಶಿಕ್ಷಣಕ್ಕೆ ಅಂತ ಮಂಗಳೂರಿಗೆ ಬಂದೆ. ಅಲ್ಲಿಂದ ಮಂಗಳೂರಿನಲ್ಲಿಯೇ ಉಳಿದುಕೊಂಡೆ. ಅದೇ ನಮ್ಮೂರಾಯ್ತು.
– ಅದು ಸರಿ, ಈ ಸಿನಿಮಾರಂಗದ ನಂಟು ಶುರುವಾಗಿದ್ದು ಹೆಂಗೆ?
ಸಿನಿಮಾ ಅಂದ್ರೆ ಎಲ್ಲರಿಗೂ ಆಸಕ್ತಿಯೇ. ಅಂತೆಯೇ ಬಾಲ್ಯದಿಂದಲೂ ನಂಗೂ ಸಿನಿಮಾ ಬಗೆಗೆ ಒಂದ್ರೀತಿಯ ಕುತೂಹಲ, ಆಸಕ್ತಿ ಇದ್ದೇ ಇತ್ತು. ಆನಂತರ ಕಾಲೇಜು ದಿನಗಳಲ್ಲಿ ಅದು ಇನ್ನಷ್ಟು ಆಕರ್ಷಿಸತೊಡಗಿತು. ನಟಿಯಾದ್ರೆ ಹೆಂಗೆ ಅಂತ ಯೋಚಿಸತೊಡಗಿದೆ. ಅವಕಾಶ ಸಿಕ್ಕರೆ ಸಿನಿಮಾದಲ್ಲಿ ಅಭಿನಯಿಸೋಣ ಅಂತ ಕಾಯುತ್ತಿದ್ದೆ. ಆ ಟೈಮ್ ನಲ್ಲಿಯೇ ಜಾಹೀರಾತುಗಳಲ್ಲಿ ಕಾಣಸಿಕೊಂಡೆ. ನೂರಕ್ಕೂ ಹೆಚ್ಚು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಅವಕಾಶ ಸಿಕ್ಕಿತು. ಅದೇ ವೇಳೆ ಪರಿಚಿತರೊಬ್ಬರು “ ಚಿ.ತು. ಯುವಕರ ಸಂಘʼ ಸಿನಿಮಾದ ಬಗ್ಗೆ ಹೇಳಿದ್ರು. ಅಲ್ಲಿಂದ ನಿರ್ದೇಶಕರು ಹಾಗೂ ನಿರ್ಮಾಪಕರನ್ನು ಭೇಟಿ ಮಾಡಿದೆ. ಫೋಟೋ ಮತ್ತು ಪ್ರೊಪೈಲ್ ಕಳುಹಿಸಿದೆ. ಒಂದಷ್ಟು ದಿನಗಳ ನಂತರ ಟೀಮ್ ಕಡೆಯಿಂದ ಕರೆ ಬಂತು. ಕಥೆಯ ಜತೆಗೆ ನನ್ನ ಪಾತ್ರದ ಬಗ್ಗೆ ಕೇಳಿದೆ. ಚೆನ್ನಾಗಿತ್ತು. ಒಪ್ಪಿಕೊಂಡೆ.
– ಆಕ್ಟಿಂಗ್ ಬಗ್ಗೆ ಮೊದಲೇ ಗೊತ್ತಿತ್ತಾ ಅಥವಾ ಸಿನಿಮಾಕ್ಕೆ ಸೆಲೆಕ್ಟ್ ಆದ್ಮೇಲೆ ಕಲಿತುಕೊಂಡ್ರಾ?
ನಾನೊಬ್ಬಳು ಥಿಯೇಟರ್ ಆರ್ಟಿಸ್ಟ್. ಕಾಲೇಜು ದಿನಗಳಲ್ಲೇ ರಂಗಭೂಮಿ ನಂಟಿತ್ತು. ಆಗಲೇ ನಟನೆ ಬಗ್ಗೆ ಒಂದಷ್ಟು ತಿಳಿದುಕೊಂಡಿದ್ದೆ. ಒಂದೆರೆಡು ನಾಟಕಗಳಲ್ಲೂ ಅಭಿನಯಿಸಿದ್ದೆ. ಅದೇ ಅನುಭವದಲ್ಲಿ ಸಿನಿಮಾ ನಟಿ ಆಗಲು ಬಯಸಿದ್ದೆ. ಅದಕ್ಕೆ ಪೂರಕವಾಗಿಲೇ ಒಂದಷ್ಟು ಸಿದ್ಧತೆ ನಡೆಸಿದ್ದೆ. ಅದೇ ಈ ಸಿನಿಮಾಕ್ಕೆ ಅನುಕೂಲವಾಯಿತು. ಹಾಗೆಯೇ ಇಲ್ಲಿಗೆ ಬಂದ ನಂತರ ರಿಹರ್ಸಲ್ ಮಾಡಿಕೊಂಡು, ಶೂಟಿಂಗ್ ಹೊರಟೆವು.
-ಏಜುಕೇಷನ್ ಏನ್ ಮಾಡ್ಕೊಂಡಿದ್ದೀರಿ, ಮುಂದೆ ಹೇಗೆ ?
ಏವಿಯೇಷನ್ ಅಂಡ್ ಹೋಟೆಲ್ ಮ್ಯಾನೆಜ್ಮೆಂಟ್ ಕೋರ್ಸ್ ಮುಗಿದಿದೆ. ನಂಗೆ ಅದರಲ್ಲಿಯೇ ಏನಾದ್ರೂ ಸಾಧಿಸಬೇಕು ಅನ್ನೋ ಆಸೆ ಇದೆ. ಆದ್ರೆ ನಂಗೀಗ ಸಿನಿಮಾದ ಮೇಲೆ ಹೆಚ್ಚಿನ ಆಸಕ್ತಿ ಇದೆ. ಸದ್ಯಕ್ಕೆ ಇಲ್ಲಿಯೇ ಕಾಂಸ್ಟ್ರೇಷನ್ ಮಾಡಿದ್ದೇನೆ. ಮುಂದೆ ನೋಡ್ಬೇಕು ಹೇಗಾಗುತ್ತೋ ಅಂತ.
- ಜಾಹೀರಾತುಗಳಲ್ಲಿನ ಅನುಭವ ಹೇಗಿತ್ತು ?
ಐಯಾನ್ ಎನ್ನುವ ಬ್ರಾಂಡ್ ಗೆ ಕ್ರಿಸ್ ಗೇಲ್ ಜೊತೆ ಕಾಣಸಿಕೊಳ್ಳುವ ಅವಕಾಶ ಬಂತು. ಅದರ ಜತೆಗೆ ಸಾಕಷ್ಟು ಬ್ರಾಂಡ್ ಗಳಿಗೆ ಅಂಬಾಸಿಡರ್ ಆಗಿದ್ದೆ. ನನ್ನ ಪ್ರಕಾರ ಇದೆಲ್ಲಾ ಅದ್ಭುತ ಅನುಭವ. ನೇಮ್ ಅಂಡ್ ಫೇಮ್ ಎರಡೂ ಅಲ್ಲಿ ಸಿಕ್ಕವು. ಜಾಹೀರಾತು ಪ್ರಪಂಚದಲ್ಲಿ ನನ್ನನ್ನು ನಾನು ಗುರುತಿಸಿಕೊಳ್ಳುವುದಕ್ಕೆ ಸಾಧ್ಯವಾಯಿತು. ಹಾಗೆಯೇ ಒಂದು ಆಲ್ಬಂ ಸಾಂಗ್ ವೊಂದರಲ್ಲಿ ನಟಿಸಿದ್ದೇನೆ. ಅದಿನ್ನು ರಿಲೀಸ್ ಆಗಿಲ್ಲ. ಶೂಟಿಂಗ್ ಮುಗಿದಿದೆ. ಅಲ್ಲಿಂದ ಈಗ ಸಿನಿಮಾ ಪಯಣ.
-ಚಿ. ತು. ಯುವಕರ ಸಂಘದ ಸಿನಿಮಾ ಬಗ್ಗೆ ಹೇಳಿ ?
ಇದೊಂದು ಪಕ್ಕಾ ಕಾಮಿಡಿ ಜಾನರ್ ಸಿನಿಮಾ. ಟೈಟಲ್ ನಲ್ಲಿಯೇ ಅಂತಹದೊಂದು ಇಂಡಿಕೇಷನ್ ಇರೋದು ನಿಮಗೂ ಗೊತ್ತು. ಹಾಗಂತ ಸಿನಿಮಾವೀಡಿ ಕಾಮಿಡಿ ಸಿನಿಮಾ ಅಲ್ಲ, ಅದರೊಳಗೊಂದು ನವೀರಾದ ಪ್ರೀತಿಯ ಕಥೆ ಇದೆ. ಹಾಗೆಯೇ ಒಂದಷ್ಟು ಸೆಂಟಿಮೆಂಟ್, ಆಕ್ಷನ್ ಎಲ್ಲವೂ ಇರುವಂತಹ ಪಕ್ಕಾ ಕಮರ್ಷಿಯಲ್ ಸಿನಿಮಾ ಇದು. ಕಥೆ ತುಂಬಾ ಚೆನ್ನಾಗಿದೆ. ಗುಂಡಾಡಿ ಗುಂಡನಂತಿರುವ ನಾಯಕ. ಚಿಂತೆ ಇಲ್ಲದವ ಸಂತೆಯಲ್ಲೂ ನಿದ್ದೆ ಮಾಡುವಂತಿದ್ದವ. ಆತನಿಗೆ ನಾಯಕಿಯ ಮೇಲೆ ಪ್ರೀತಿ ಹುಟ್ಟುತ್ತೆ. ಅಲ್ಲಿಂದ ಮುಂದೇನಾಗುತ್ತೆ ಅನ್ನೋದು ಚಿತ್ರದ ಕಥೆ.
- ಚಿತ್ರದಲ್ಲಿನ ನಿಮ್ಮ ಪಾತ್ರದ ಬಗ್ಗೆ ಹೇಳಿ?
ಹೀರೋ ಗುಂಡಾಡಿ ಗುಂಡ ಅಂತದ್ಮೇಲೆ ನಾಯಕಿ ಆತನಿಗೆ ಕಾಂಟ್ರಾಸ್ಟ್ ಆಗಿರ್ತಾಳೆ ಅನ್ನೋದನ್ನ ವಿವರಿಸಿ ಹೇಳಬೇಕಿಲ್ಲ. ತುಂಬಾ ಗಂಭೀರವಾದ ಹುಡುಗಿ. ಜೀವನದಲ್ಲಿ ಏನನ್ನಾದ್ರೂ ಸಾಧಿಸಬೇಕೆಂದುಕೊಂಡವಳು. ಆದ್ರೆ ಗುಂಡಾಡಿ ಗುಂಡನಂತಿದ್ದ ಹೀರೋ ಆಕೆಯ ಜೀವನದಲ್ಲಿ ಎಂಟ್ರಿಯಾದ ನಂತ್ರ ಅವರಿಬ್ಬರ ಬದುಕಲ್ಲಿ ಏನಾಗುತ್ತೆ ಅನ್ನೋದು ನನ್ನ ಪಾತ್ರ.
- ಚಿ .ತು. ಯುವಕರ ಸಂಘದ ಸದಸ್ಯರ ಬಗ್ಗೆ ಏನ್ ಹೇಳ್ತೀರಾ ?
ನನಗಿಲ್ಲಿ ಕೋ ಆರ್ಟಿಸ್ಟ್ ನಟ ಸನತ್. ಹಾಗೆಯೇ ನಿರ್ಮಾಪಕರು ಚೇತನ್ ರಾಜ್. ತುಂಬಾ ಪ್ರೇಂಡ್ಲಿ ಆಗಿರ್ತಾರೆ. ಹಾಗೆಯೇ ಡೈರೆಕ್ಟರ್ ಶಿವು ಅವರಂತೂ ಪಕ್ಕಾ ಪ್ರಪೋಷನ್ ಆಗಿದ್ದಾರೆ. ಕಥೆಗೆ ತಾವು ಅನಿಸಿದ್ದೂ ಬರೋ ತನಕ ಶೂಟ್ ನಿಲ್ಲಿಸೋದಿಲ್ಲ. ಅವರ ಕಲಾವಿದರ ಆಯ್ಕೆಯೇ ಅದ್ಬುತವಾಗಿದೆ. ನಂಗಂತೂ ಎಂಟ್ರಿಯಲ್ಲೇ ಒಂದೊಳ್ಳೆಯ ತಂಡ ಸಿಕ್ಕಿದೆ. ಆ ಮಟ್ಟಿಗೆ ನಾನು ಲಕ್ಕಿ ಅಂತಲೇ ಹೇಳಬಹುದು.
- ಸಿನಿಮಾ ಅಂದ್ರೆ ಒಂಥರ ಗಾಸಿಪ್ ಅಂಡ್ ಗ್ಲಾಮರ್. ಈ ಬಗ್ಗೆ ನಿಮ್ಮ ನಿಲುವೇನು?
ಸಿನಿಮಾ ಅಂದ್ಮೇಲೆ ಗ್ಲಾಮರ್ ಇರಲೇಬೇಕು. ಹಾಗೆಯೇ ಗಾಸಿಪ್ ಕೂಡ ಇರುತ್ತೆ. ಅದೆಲ್ಲವನ್ನು ನಾವು ಹೇಗೆ ಸ್ವೀಕರಿಸುತ್ತೇವೋ ಅದರ ಮೇಲೆ ನಿಂತಿರುತ್ತದೆ. ನಂಗಂತೂ ಗಾಸಿಪ್ ಬಗ್ಗೆ ಅಷ್ಟಾಗಿ ಆಸಕ್ತಿ ಇಲ್ಲ. ಆ ಬಗ್ಗೆ ತಲೆ ಕೆಡಿಸಕೊಳ್ಳುವುದಿಲ್ಲ ಬಿಡಿ.
- ಸ್ಯಾಂಡಲ್ ವುಡ್ ನಲ್ಲಿ ನಿಮಗೆ ಯಾವ ನಟ ಅಂದ್ರೆ ಇಷ್ಟ ?
ನಟ ದರ್ಶನ್ ಅಂದ್ರೆ ನಂಗೆ ತಂಬಾ ಇಷ್ಟ. ಅವರಗ ಜತೆಗೆ ಅಭಿನಯಿಸುವ ಅವಕಾಶ ಸಿಕ್ಕರೆ ಕಣ್ಣ್ಮುಚ್ಚಿಕೊಂಡು ಓಕೆ ಹೇಳಿ ಬಿಡುವೆ. ಅವರ ಜತೆಗೆ ತೆರೆಯಲ್ಲಿ ಕಾಣಿಸಿಕೊಳ್ಳಬೇಕೆನ್ನುವುದು ನನ್ನ ಕನಸು ಕೂಡ. ಅದು ನನಸಾಗುತ್ತಾ ಅಂತ ಕಾಯುತ್ತಿದ್ದೇನೆ.
- ವರ್ಕೌಟ್ ಸ್ಟ್ರೈನ್ ಹೇಗಿರುತ್ತೆ ?
ನಿಜ ಹೇಳ್ತೀನಿ, ನಾನು ವರ್ಕೌಟ್ ಮಾಡೋದ್ರಿಂದಲೇ ಇಷ್ಟು ಸಣ್ಣ ಆಗಿದ್ದು. ನಾನು ತುಂಬಾ ದಪ್ಪ ಇದ್ದೆ. ವರ್ಕೌಟ್ ಮಾಡಿ ಅರ್ಧದಷ್ಟು ಸಣ್ಣ ಆದೆ. ನಾನು ಯೋಗ ಮಾಡಲ್ಲ. ಬೇಯಿಸಿದ ಮೊಟ್ಟೆ , ತರಕಾರಿ, ಚಿಕನ್ ತಿನ್ನುತ್ತೇನೆ. ಪ್ರತೀ ನಿತ್ಯ ಚೆನ್ನಾಗಿ ನೀರು ಕುಡಿಯುತ್ತೇನೆ ಇದೇ ನನ್ನ ಆರೋಗ್ಯದ ಗುಟ್ಟು.