ವಿನೋದ್ ಪ್ರಭಾಕರ್ ಕನ್ನಡ ಸಿನಿರಂಗದಲ್ಲಿ ಲೀಡಿಂಗ್ ಸ್ಟಾರ್ ಅಂತಾನೇ ಕರೆಸಿಕೊಳ್ಳುವ ನಟ. ಸ್ಯಾಂಡಲ್ವುಡ್ನಲ್ಲಿ ಗಟ್ಟಿನೆಲೆ ಕಂಡುಕೊಳ್ಳಲು ಸಾಕಷ್ಟು ಸಾಹಸ ಪಟ್ಟ ಮರಿಟೈಗರ್, ಇಲ್ಲಿ ಗೆಲುವಿಗಿಂತ ಸೋಲಿನ ರುಚಿ ಕಂಡಿದ್ದೇ ಹೆಚ್ಚು. ಒಂದೊಳ್ಳೆಯ ಗೆಲುವಿಗಾಗಿ ಸದಾ ಹಂಬಲಿಸುತ್ತಿದ್ದ ವಿನೋದ್, ಕೊನೆಗೂ ಗೆದ್ದರು. ಆಮೇಲೆ ಎಡವಿದರು. ಮೇಲೆ ಬರಬೇಕು ಅಂದುಕೊಂಡಾಗೆಲ್ಲ ಮತ್ತೆ ಮತ್ತೆ ಮುಗ್ಗರಿಸಿದರು. ಈಗ ಪುನಃ ಫೀನಿಕ್ಸ್ ಥರಾ ಎದ್ದಿದ್ದಾರೆ. ಹೌದು, ವಿನೋದ್ ಪ್ರಭಾಕರ್ “ರಾಬರ್ಟ್” ಮೂಲಕ ಮತ್ತೆ ಜೋರು ಸದ್ದು ಮಾಡಿದ್ದಾರೆ. ದೊಡ್ಡದ್ದೊಂದು ಬ್ರೇಕ್ಗಾಗಿ ಕಾದಿದ್ದ ವಿನೋದ್ ಪ್ರಭಾಕರ್ “ರಾಬರ್ಟ್” ಬರುವವರೆಗೂ ಕಾಯಬೇಕಾಯಿತು. ರಾಬರ್ಟ್ ಚಿತ್ರದಲ್ಲಿ ದರ್ಶನ್ ಅವರ ಗೆಳೆಯನಾಗಿ ಕಾಣಿಸಿಕೊಂಡಿರುವ ವಿನೋದ್ ಅವರ ನಟನೆ ಎಲ್ಲರಿಗೂ ಹಿಡಿಸಿದೆ. ಪಕ್ಕಾ ಮಾಸ್ ಲುಕ್ನಲ್ಲಿ ಮಿಂಚಿರುವ ವಿನೋದ್ ಯಶಸ್ಸಿನ ಸಂಭ್ರಮದಲ್ಲಿದ್ದಾರೆ. ವಿನೋದ್ ಬಿದ್ದು ಎದ್ದದ್ದು, ಎದ್ದು ಬಿದ್ದು ಬಗ್ಗೆ ಒಂದು ರಿಪೋರ್ಟ್.
ವಿನೋದ್ ಪ್ರಭಾಕರ್ ತನ್ನ ಸ್ವಂತ ಶ್ರಮದಿಂದಲೇ ಸ್ಯಾಂಡಲ್ವುಡ್ನಲ್ಲಿ ಬೆಳೆದು ನಿಲ್ಲಬೇಕು ಅಂತ ಹಂಬಲಿಸಿದವರು. ಅದಕ್ಕಾಗಿ, ದಶಕಗಳ ಕಾಲ ಕಷ್ಟಪಟ್ಟಿದ್ದೂ ಉಂಟು. ಅದಕ್ಕೆ ಅದ್ಯಾವಗಲೋ ಫಲ ಸಿಕ್ಕಿದೆ ಕೂಡ. ಆರಂಭದ ದಿನಗಳಲ್ಲಿ ತನ್ನ ಬಳಿಗೆ ಬಂದ ಒಂದಷ್ಟು ಸಿನಿಮಾಗಳನ್ನು ಒಪ್ಪಿಕೊಂಡರೂ, ಅವರಿಗೆ ಹೇಳಿಕೊಳ್ಳುವಂತಹ ಹೆಸರು ಬರಲಿಲ್ಲ. ಬೆರಳೆಣಿಕೆ ಸಿನಿಮಾಗಳನ್ನು ಕೊಟ್ಟು ದೊಡ್ಡ ಅಭಿಮಾನಿ ಬಳಗವನ್ನು ಸಂಪಾದಿಸಿದ್ದ ವಿನೋದ್ ಪ್ರಭಾಕರ್, ದೊಡ್ಡ ಯಶಸ್ಸು ಎದುರು ನೋಡುತ್ತಿದ್ದರು. ತಾನು ಕೂಡ ಇಂಡಸ್ಟ್ರಿಯಲ್ಲಿ ಸಕ್ಸಸ್ ಹೀರೋ ಎನಿಸಿಕೊಳ್ಳಬೇಕು, ಗುರುತಿಸಿಕೊಳ್ಳಬೇಕು ಅಂದುಕೊಂಡಿದ್ದ ವಿನೋದ್ ಪ್ರಭಾಕರ್ ಅವರ ಗ್ರಹಗತಿ ಚೆನ್ನಾಗಿತ್ತು. ಆಗ “ನವಗ್ರಹ” ಚಿತ್ರ ಅವರನ್ನು ಕೈ ಹಿಡಿಯಿತು ಎಂಬುದು ಸುಳ್ಳಲ್ಲ.
“ನವಗ್ರಹ” ಸಿನಿಮಾ ದರ್ಶನ್ ಪ್ರೊಡಕ್ಷನ್ಸ್ನಲ್ಲಿ ಬಂದಿದ್ದು, ವಿಶೇಷವೆಂದರೆ, ಖಳನಟರ ಮಕ್ಕಳೇ ಈ ಚಿತ್ರದ ಹೈಲೈಟ್ ಆಗಿದ್ದರು. ಅದೊಂದು ಥ್ರಿಲ್ ಎನಿಸುವ ಸಿನಿಮಾ ಆಗಿದ್ದರಿಂದ ವಿನೋದ್ ಪ್ರಭಾಕರ್ ಕೂಡ ಈ ಚಿತ್ರದಲ್ಲಿ ತಕ್ಕಮಟ್ಟಿಗೆ ಗುರುತಿಸಿಕೊಂಡರು. ಅಲ್ಲಿಂದ ವಿನೋದ್ ಪ್ರಭಾಕರ್ ಒಂದಷ್ಟು ಸ್ಟಡಿಯಾಗಿ ನಿಂತರು. ಬಂದ ಕೆಲ ಚಿತ್ರಗಳ ಮೂಲಕ ಸುದ್ದಿಯಾಗಿದ್ದೂ ಹೌದು. ಏರುಪೇರಿನಲ್ಲೇ ಸಿನಿಜರ್ನಿ ಮಾಡುತ್ತಿದ್ದ ವಿನೋದ್ ಪ್ರಭಾಕರ್ ಅವರಿಗೆ ಮತ್ತೊಂದು ಸಕ್ಸಸ್ ಬೇಕಾಗಿತ್ತು.
ಅದಕ್ಕಾಗಿ ಅದೆಷ್ಟೋ ಕಥೆಗಳನ್ನು ಕೇಳಿ ಸುಮ್ಮನಾಗಿದ್ದರು. ಆ ಸಮಯಕ್ಕೆ ಬಂದದ್ದೇ “ಟೈಸನ್”. ಕೆ.ರಾಮ್ ನಾರಾಯಣ್ ನಿರ್ದೇಶನದ “ಟೈಸನ್” ಚಿತ್ರ ರಿಲೀಸ್ ಆಗಿದ್ದೇ ತಡ, ವಿನೋದ್ ಪ್ರಭಾಕರ್ ಅವರಿಗೆ ಅದೃಷ್ಟದ ಬಾಗಿಲು ಓಪನ್ ಆಯ್ತು. ಅಲ್ಲಿಂದ ಹಿಂದಿರುಗಿ ನೋಡದ ವಿನೋದ್, ಅದರ ನಡುವೆಯೂ ಒಂದಷ್ಟು ಸಿನಿಮಾಗಳನ್ನು ಮಾಡಿದರು. ಗೆಳೆತನಕ್ಕೆ ಮಾಡಿದ ಸಿನಿಮಾಗಳಾಗಿದ್ದರಿಂದ ಯಾವ ಸಿನಿಮಾ ಕೂಡ ಅವರ ನಿರೀಕ್ಷೆಗೆ ತಕ್ಕಂತೆ ಹೋಗಲಿಲ್ಲ. ಮತ್ತೆ ವಿನೋದ್ ಫ್ಯಾನ್ಸ್ ಮೊಗದಲ್ಲೂ ಆತಂಕದ ಗೆರೆಗಳು ಮೂಡಿದ್ದು ಸುಳ್ಳಲ್ಲ.
ತನ್ನ ಸಿನಿಮಾ ಪಯಣದಲ್ಲಿ ಜೊತೆಗಿದ್ದವರಿಗೆ ಸಹಕಾರ ನೀಡಬೇಕು ಎಂಬ ಉದ್ದೇಶದಿಂದ ವಿನೋದ್ ಗೆಳೆತನಕ್ಕೆ ಕಟ್ಟುಬಿದ್ದು ಮಾಡಿದ ಚಿತ್ರಗಳು ಸೋಲು ಕಂಡವು. ಸಿನಿಮಾಗಾಗಿಯೇ ಅವರು ಸರಿಯಾಗಿ ಊಟ ಮಾಡದೆ, ಡಯೆಟ್ ಮಾಡಿ ಬಾಡಿ ಬಿಲ್ಡ್ ಮಾಡಿ, ಏಯ್ಟ್ ಪ್ಯಾಕ್ ಮಾಡಿಕೊಂಡು ಅಲ್ಲೂ ಸುದ್ದಿಯಾದರು. ವರ್ಷಗಟ್ಟಲೇ ದೇಹವನ್ನು ಹುರಿಗೊಳಿಸಿ ರೆಡಿಯಾದರು. ಆದರ ಮೂಲಕ ಮತ್ತೊಂದು ಅದೃಷ್ಟ ಖುಲಾಯಿಸುತ್ತೆ ಅಂದುಕೊಂಡರೆ, ಅಲ್ಲೂ ನಿರಾಸೆ. ನಿರೀಕ್ಷೆ ಇಟ್ಟುಕೊಂಡ ಮತ್ತೊಂದು ಸಿನಿಮಾ ಕೂಡ ಮೇಲೇಳಲಿಲ್ಲ. ಆದರೆ, ವಿನೋದ್ ಅವರಿಗೆ “ರಾಬರ್ಟ್” ಚಿತ್ರದ ಮೇಲೆ ಬಲವಾದ ನಂಬಿಕೆ ಇತ್ತು. ಆ ಸಿನಿಮಾ ಮತ್ತೊಂದು ದೊಡ್ಡ ಸಕ್ಸಸ್ ಕೊಡುತ್ತೆ ಎಂಬ ಭರವಸೆಯಲ್ಲಿದ್ದರು. ಅದೀಗ ನಿಜವಾಗಿದೆ.
ರಾಬರ್ಟ್ ವಿನೋದ್ ಪ್ರಭಾಕರ್ ಅವರಿಗೆ ಕೈ ಹಿಡಿದಿದೆ. ನವಗ್ರಹ ಸಿನಿಮಾದಲ್ಲಿ ದರ್ಶನ್ ಜೊತೆ ಕಾಣಿಸಿಕೊಂಡಿದ್ದ ವಿನೋದ್, ಈಗ ರಾಬರ್ಟ್ನಲ್ಲಿ ದಚ್ಚುಗೆ ಗೆಳೆಯನಾಗಿದ್ದಾರೆ. ಒಬ್ಬ ಪ್ರಾಣಸ್ನೇಹಿತನಿಗೆ ಹೇಗೆ ಜೊತೆಯಾಗಿರಬೇಕು ಅನ್ನುವುದನ್ನು ತೆರೆಮೇಲೆ ಭರ್ಜರಿಯಾಗಿಯೇ ವಿನೋದ್ ತೋರಿಸಿದ್ದಾರೆ. ದರ್ಶನ್ ಅವರಷ್ಟೇ ವಿನೋದ್ ಅವರಿಗೂ ಇಲ್ಲಿ ಜಾಗ ಕಲ್ಪಿಸಲಾಗಿದೆ. ಅವರ ಹೊಸ ಲುಕ್, ಅಕ್ಟಿಂಗ್,ಡ್ಯಾನ್ಸ್ ಎಲ್ಲವೂ ಅವರ ಫ್ಯಾನ್ಸ್ಗೆ ಮಾತ್ರವಲ್ಲ ಸಿನಿಮಾ ಮಂದಿಗೆ ಖುಷಿ ನೀಡಿದೆ. ಒಟ್ಟಲ್ಲಿ, ರಾಬರ್ಟ್ ಮೂಲಕ ವಿನೋದ್ ಈಗ ಮತ್ತೆ ಲೀಡಿಂಗ್ ಸ್ಟಾರ್ ಅನ್ನೋದನ್ನು ಖಾತರಿ ಪಡಿಸಿದ್ದಾರೆ.
ಅದೇನೆ ಇರಲಿ, ವಿನೋದ್ ಪ್ರಭಾಕರ್ ಮತ್ತು ದರ್ಶನ್ ಅವರಿಬ್ಬರ ಗೆಳೆತನ ಬಹಳಷ್ಟು ಮಂದಿಗೆ ಗೊತ್ತಿರಲಿಕ್ಕಿಲ. ಸದಾ ಒಬ್ಬರಿಗೊಬ್ಬರು ಪ್ರೀತಿಯಿಂದ ಮಾತಾಡುತ್ತಲೇ ಇರುವ ಅಣ್ತಮ್ಮಾಸ್ ಜೋಡಿ ಅದು. ವಿನೋದ್ ಪ್ರಭಾಕರ್ ಅವರ ಪ್ರತಿಯೊಂದು ಸಿನಿಮಾ ಪೂಜೆಗೂ ದರ್ಶನ್ ಹಾಜರಿ ಇರಲೇಬೇಕು. ಅಷ್ಟರಮಟ್ಟಿಗೆ ಇವರಿಬ್ಬರ ಕಾಂಬಿನೇಷನ್ ತೆರೆ ಹಿಂದೆ ಮತ್ತು ಮುಂದೆ ವರ್ಕೌಟ್ ಆಗುತ್ತಿರುವುದಂತೂ ನಿಜ. ಮುಂದಿನ ದಿನಗಳಲ್ಲಿ ವಿನೋದ್ ಇನ್ನಷ್ಟು ಒಳ್ಳೆಯ ಸಿನಿಮಾಗಳನ್ನು ಕೊಡುವ ಮೂಲಕ ಸ್ಯಾಂಡಲ್ವುಡ್ನಲ್ಲಿ ಗಟ್ಟಿಯಾಗಿ ಬೇರೂರಲಿ ಎಂಬುದೇ ಸಿನಿಲಹರಿ ಆಶಯ.