ರಾಬರ್ಟ್‌ ವಾರದ ಗಳಿಕೆ ದಾಖಲೆ: ಭರ್ಜರಿ 78.36 ಕೋಟಿ ಕಲೆಕ್ಷನ್‌ ಅಂತ ಘೋಷಿಸಿದ ಚಿತ್ರತಂಡ – ತೆಲುಗಲ್ಲೂ7.61 ಕೋಟಿ !

ದರ್ಶನ್‌ ಅಭಿನಯದ “ರಾಬರ್ಟ್‌” ಸದ್ದು ಜೋರಾಗಿಯೇ ಇದೆ. ಬಿಡುಗಡೆಯಾಗಿ ಒಂದು ವಾರಕ್ಕೆ ದಾಖಲೆ ಗಳಿಕೆ ಕಂಡಿದೆ. ಹೌದು, ತರುಣ್‌ ಸುಧೀರ್‌ ನಿರ್ದೇಶನದ “ರಾಬರ್ಟ್”‌ ಚಿತ್ರ 78.36 ಕೋಟಿ ರೂ.ಗಳಿಕೆ ಕಾಣುವ ಮೂಲಕ ದಾಖಲೆ ಬರೆದಿದೆ. ಈ ಕಲೆಕ್ಷನ್‌ ಕುರಿತು ಸ್ವತಃ ಚಿತ್ರತಂಡವೇ ಅನೌನ್ಸ್‌ ಮಾಡಿದೆ.

‌ಒಂದು ಚಿತ್ರ ಇಷ್ಟವಾಗೋದು ಬೇರೆ, ಇಷ್ಟವಾಗಿ, ನೂಕುನುಗ್ಗಲು ಕಂಡು ದಾಖಲೆ ಗಳಿಕೆ ಕಾಣೋದು ವಿಶೇಷ. “ರಾಬರ್ಟ್‌” ಬಗ್ಗೆ ಮೊದಲೇ ನಿರೀಕ್ಷೆ ಇತ್ತು. ಆ ನಿರೀಕ್ಷೆ ಸುಳ್ಳಾಗಿಲ್ಲ. ಬಾಕ್ಸಾಫೀಸ್‌ ಸುಲ್ತಾನ್‌ ಎಂಬ ಹೆಸರಿಗೆ ತಕ್ಕಂತೆಯೇ, ದರ್ಶನ್‌ ಚಿತ್ರ ಭರ್ಜರಿ ಗಳಿಕೆ ಕಾಣುವ ಮೂಲಕ ಎರಡನೇ ವಾರವೂ ಮುನ್ನುಗ್ಗುತ್ತಿದೆ. ಒಂದು ವಾರ ಪೂರೈಸಿರುವ “ರಾಬರ್ಟ್‌” ತನ್ನ ಗಳಿಕೆ ಬಗ್ಗೆ ಅಧಿಕೃತವಾಗಿ ಘೋಷಿಸಿದೆ.

ಸದ್ಯ ಎರಡನೇ ವಾರವೂ ತನ್ನ ಅಬ್ಬರ ಮುಂದುವರೆಸಿರುವ ರಾಬರ್ಟ್‌ ರಾಜ್ಯಾದ್ಯಂತ 563 ಚಿತ್ರಮಂದಿರಗಳು ಮತ್ತು 100ಕ್ಕೂ ಹೆಚ್ಚು ಮಲ್ಟಿಪ್ಲೆಕ್ಸ್‌ಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ವೇಗವನ್ನು ಹೀಗೆ ನೋಡುತ್ತಿದ್ದರೆ, ದರ್ಶನ್‌ ಅವರ “ರಾಬರ್ಟ್‌” 100 ಕೋಟಿ ಕ್ಲಬ್‌ ಮಾಡಿದರೂ ಅಚ್ಚರಿಯೇನಿಲ್ಲ.

ದರ್ಶನ್‌ ಅಭಿನಯದ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ, “ರಾಬರ್ಟ್” ಚಿತ್ರದ ಗಳಿಕೆಯ ವೇಗ ತುಸು ಹೆಚ್ಚಾಗಿಯೇ ಇದೆ. ಇಂಥ್ದದೊಂದು ಮ್ಯಾಜಿಕ್‌ಗೆ ಕಾರಣ, ದರ್ಶನ್‌ ಅಭಿನಯದ ಸಿನಿಮಾ ರಿಲೀಸ್‌ ಆಗಿ ಒಂದುವರೆ ವರ್ಷ ಆಗಿದ್ದು, ಕೊರೊನಾ ಹಾವಳಿಯಿಂದ ಕಂಗೆಟ್ಟಿದ್ದ ಅವರ ಫ್ಯಾನ್ಸ್‌, ಮತ್ತು ಸಿನಿಮಾ ಪ್ರೇಮಿಗಳಿಗೆ ಒಂದೊಳ್ಳೆಯ ಮನರಂಜನೆಯ ಚಿತ್ರ ಬೇಕಿತ್ತು. ದೊಡ್ಡ ಮಟ್ಟದ ನಿರೀಕ್ಷೆ ಹೊತ್ತಿದ್ದ “ರಾಬರ್ಟ್” ಕೊನೆಗೂ ಆ ನಿರೀಕ್ಷೆಯನ್ನು ಸುಳ್ಳು ಮಾಡಲೇ ಇಲ್ಲ.

ಇಡೀ ಸಿನಿಮಾ ತಂಡ ಖುಷಿಯ ಅಲೆಯಲ್ಲಿ ತೇಲುತ್ತಿರುವುದು ನಿಜ. ಇನ್ನು, ಆಂಧ್ರದಲ್ಲೂ “ರಾಬರ್ಟ್” 7.61 ಕೋಟಿ ಗಳಿಕೆ ಕಂಡಿರುವುದು ವಿಶೇಷ. ಇದೇ ಮೊದಲ ಸಲ ಏಕಕಾಲದಲ್ಲಿ ದರ್ಶನ್‌ ಸಿನಿಮಾ ರಿಲೀಸ್‌ ಆಗಿದ್ದು, ಅಲ್ಲಿನ ಅಭಿಮಾನಿಗಳು ಮತ್ತು ಸಿನಿಮಾ ಮಂದಿ ಕೂಡ ಮೆಚ್ಚಿಕೊಂಡಿದ್ದಾರೆ. “ರಾಬರ್ಟ್”‌ ಭರ್ಜರಿ ದರ್ಶನ ಮುಂದುವರೆದಿದ್ದು, ಸದ್ಯದ ಮಟ್ಟಿಗೆ ಗಳಿಕೆಯ ರಾಜ ಎಂಬ ಮೆಚ್ಚುಗೆಗೆ ಪಾತ್ರವಾಗಿದೆ ರಾಬರ್ಟ್.

Related Posts

error: Content is protected !!