ಮೈಸೂರಿನಲ್ಲಿ ಚಿತ್ರನಗರಿ: ರಾಜೇಂದ್ರ ಸಿಂಗ್ ಬಾಬು ಸಂತಸ – ಕಾರಣರಾದವರಿಗೆ ಧನ್ಯವಾದ ಅರ್ಪಿಸಿದ ನಿರ್ದೇಶಕರು

ಕನ್ನಡ ಚಿತ್ರರಂಗಕ್ಕೆ ಚಿತ್ರನಗರಿಯ ಕೂಗು ಹೊಸದಲ್ಲ. ಹಲವು ವರ್ಷಗಳಿಂದಲೇ ಅದು ಕೇಳಿಬರುತ್ತಲೇ ಇತ್ತು. ಇದೀಗ ಚಿತ್ರನಗರಿಗೊಂದು ನೆಲೆ ಸಿಗುವ ಸಮಯ ಬಂದಿದೆ. ಹೌದು, ಮೈಸೂರಲ್ಲಿ ಚಿತ್ರನಗರಿ ನಿರ್ಮಾಣಕ್ಕೆ ಸರ್ಕಾರ ಅನುಮತಿ ನೀಡಿರುವುದು ಸಂತಸದ ವಿಷಯವೇ. ಕಳೆದ ನಾಲ್ಕು ದಶಕಗಳಿಂದಲೂ ಹೆಸರಘಟ್ಟ, ರಾಮನಗರ ಸೇರಿದಂತೆ, ಆ ಊರು, ಈ ಊರಲ್ಲಿ ಚಿತ್ರನಗರಿ ತಲೆಯತ್ತಲಿದೆ ಎಂಬ ಸುದ್ದಿಗಳೇ ಹರಿದಾಡಿದ್ದವು. ಇದೀಗ ಅಂತಿಮವಾಗಿ ಮೈಸೂರು ನಗರವನ್ನು ಸೂಚಿಸಿರುವುದು ಸಹಜವಾಗಿಯೇ ಸಿನಿಮಂದಿಗೆ ಖುಷಿಯಾಗಿದೆ. ಈ ಖುಷಿಗೆ ಕಾರಣರಾದ ಮುಖ್ಯಮಂತ್ರಿ ಯಡಿಯೂರಪ್ಪ, ವಿಜಯೇಂದ್ರ, ಶಿವರಾತ್ರಿ ಸ್ವಾಮೀಜಿ ಅವರಿಗೆ ವೈಯಕ್ತಿಕವಾಗಿ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್‌ ಬಾಬು ಅವರು ಧನ್ಯವಾದ ಅರ್ಪಿಸಿದ್ದಾರೆ.

ಇನ್ನುಳಿದಂತೆ, ಈ ವಿಚಾರವಾಗಿ ಸಹಕರಿಸಿದ ಸಚಿವರಾದ ಎಸ್.ಟಿ ಸೋಮಶೇಖರ್, ಸಿ.ಸಿ ಪಾಟೀಲ್, ಸಿ.ಪಿ.ಯೋಗಿಶ್ವರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಧನ್ಯವಾದ ಹೇಳಿರುವ ರಾಜೇಂದ್ರ ಸಿಂಗ್‌ ಬಾಬು, “ಮೈಸೂರಿಗೆ 85 ವರ್ಷಗಳ ಸಿನಿಮಾ ಇತಿಹಾಸವಿದೆ. ಇಂತಹ ಇತಿಹಾಸ ಇರುವ ನಗರಕ್ಕೆ ಚಿತ್ರನಗರಿ ಅನ್ನೋ ಮತ್ತೊಂದು ಕಿರೀಟ ಮುಡಿಗೇರಿದ್ದು, ಚಿತ್ರೋದ್ಯಮದ ಪ್ರಗತಿಗೆ ದಾರಿಯಾಗಿದೆ. ಮೈಸೂರು ಪ್ರವಾಸೋದ್ಯಮಕ್ಕೂ ಇದರಿಂದ ಪುಷ್ ಸಿಕ್ಕಂತಾಗಿದೆ. ಎಂಜಿಆರ್, ರಾಜ್ ಕಪೂರ್, ಶಾಂತಾ ರಾಮ್ ಎಲ್ಲರೂ ಮೈಸೂರಿನಲ್ಲಿಯೇ ಬಿಡಾರ ಹೂಡುತ್ತಿದ್ದರು. ಕೇವಲ 20 ಕಿಲೋ ಮೀಟರ್ ವ್ಯಾಪ್ತಿಯಲ್ಲಿ 257 ಲೋಕೇಷನ್‌ಗಳು ಮೈಸೂರಿನಲ್ಲಿವೆ. 16 ಪ್ಯಾಲೇಸ್‌ಗಳಿವೆ. 5 ನದಿಗಳಿವೆ. ಹೀಗಾಗಿಯೇ ವಿಷ್ಣುವರ್ಧನ್ ಮತ್ತು ರಜನಿಕಾಂತ್ ಅವರಿಗೂ ಮೈಸೂರು ಅಂದ್ರೆ ಪಂಚಪ್ರಾಣ. ಇದೀಗ ಸರ್ಕಾರ ಇಷ್ಟೇಲ್ಲ ಐತಿಹ್ಯ ಇರುವ ನಗರಕ್ಕೆ ಚಿತ್ರನಗರಿ ನೀಡುತ್ತಿದೆ. ಸರ್ಕಾರಕ್ಕೆ, ಚಿತ್ರನಗರಿ ಸ್ಥಾಪನೆಗೆ ಕಾರಣರಾದ ಎಲ್ಲರಿಗೂ ಧನ್ಯವಾದ” ಎಂದಿದ್ದಾರೆ.

Related Posts

error: Content is protected !!