ಬಾಲಿವುಡ್ ನಲ್ಲಿ ಒಂದು ಟ್ರೆಂಡ್ ಇದೆ. ಯಾವುದೇ ಸಿನಿಮಾ ಸಂಬಂಧಿತ ಸಭೆ-ಸಮಾರಂಭಗಳಲ್ಲಿ ಸ್ಟಾರ್ ಗಳೆಲ್ಲ ಬಹುತೇಕ ಬ್ಲಾಕ್ ಡ್ರೆಸ್ ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅಷ್ಟೇ ಯಾಕೆ, ಅವರ ಕಾರುಗಳು ಕೂಡ ಬುತೇಕ ಬ್ಲಾಕ್ ಬಣ್ಣದವೇ ಆಗಿವೆ. ಕನ್ನಡದ ಮಟ್ಟಿಗೆ ಅಂತಹದೇ ಟ್ರೆಂಡ್ ಫಾಲೋ ಮಾಡುತ್ತಿರುವವರ ಪೈಕಿ ನಟ ಕಿಚ್ಚ ಸುದೀಪ್ ಅವರು ಕೂಡ ಒಬ್ಬರು. ಹಾಗಂತ ಅವರೇನು ಬಾಲಿವುಡ್ ಸ್ಟಾರ್ ಗಳನ್ನು ಫಾಲೋ ಮಾಡುತ್ತಿದ್ದಾರೆ ಅಂತ ಭಾವಿಸಬೇಡಿ. ನಿಜಕ್ಕು ಅವರು ಫಾಲೋ ಮಾಡುತ್ತಿರುವುದು ಕನ್ನಡದ ಮತ್ತೊಬ್ಬ ಸ್ಟಾರ್ ಅನ್ನು. ಅವರೇ ಕ್ರೇಜಿ ಸ್ಟಾರ್ ರವಿಚಂದ್ರನ್.
ಕಿಚ್ಚ ಸುದೀಪ್ ಅವರು ಬ್ಲಾಕ್ ಡ್ರೆಸ್ ಹಾಕೋದಿಕ್ಕೆ ರವಿಚಂದ್ರನ್ ಅವರೇ ಕಾರಣವಂತೆ. ಹಾಗಂತ ನಾವ್ ಹೇಳ್ತೀಲ್ಲ, ಸ್ವತಹ: ಕಿಚ್ಚ ಸುದೀಪ್ ಅವರೇ ಇಂತಹದೊಂದು ಇಂಟೆರೆಸ್ಟಿಂಗ್ ಸಂಗತಿಯನ್ನು ಬಹಿರಂಗವಾಗಿ ರಿವೀಲ್ ಮಾಡಿದ್ದಾರೆ. ಸೋಮವಾರ ಸಂಜೆ ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಕೋಟಿಗೊಬ್ಬ ೩ ಚಿತ್ರ ತಂಡ ಸುದೀಪ್ ಅವರ ಸಿನಿ ಜರ್ನಿಯ ೨೫ನೇ ವರ್ಷದ ಹಿನ್ನೆಲೆಯಲ್ಲಿ ಅದ್ದೂರಿಯಾಗಿ ಬೆಳ್ಳಿ ಹಬ್ಬ ಆಯೋಜಿಸಿತ್ತು. ಅಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಕೂಡ ಹಾಜರಿದ್ದರು. ಕಾರ್ಯಕ್ರಮಕ್ಕೆ ಅತಿಥಿಗಳಾಗಿದ್ದ ಅವರು, ಬ್ಲಾಕ್ ಡ್ರೆಸ್ ಹಾಕ್ಕೊಂಡ್ ಬಂದಿದ್ರು. ಕಾಕತಾಳೀಯ ಎನ್ನುವ ಹಾಗೆ ನಟ ಕಿಚ್ಚ ಸುದೀಪ್ ಕೂಡ ಬ್ಲಾಕ್ ಡ್ರೆಸ್ ಧರಿಸಿಕೊಂಡಿದ್ರು. ದೊಡ್ಡ ವೇದಿಕೆ, ಸಾವಿರಾರು ಜನರ ಮುಂದೆ ಸನ್ಮಾನ ಸ್ವೀಕರಿಸಿ ಮಾತಿಗಿಳಿದಾಗ, ನಟ ಕಿಚ್ಚ ಸುದೀಪ್ ತಮಗೆ ಬ್ಲಾಕ್ ಡ್ರೆಸ್ ಮೇಲಿದ್ದ ಪ್ರೀತಿ , ಅಭಿಮಾನದ ರಹಸ್ಯ ಬಿಚ್ಚಿಟ್ಟರು. ” ನನಗೆ ಕಪ್ಪು ಬಣ್ಣದ ಬಟ್ಟೆಗಳೆಂದರೆ ಇಷ್ಟ. ರವಿ ಸರ್ ತರಹ ಅವಾಗವಾಗ ಕಪ್ಪು ಬಟ್ಟೆ ಧರಿಸುತ್ತಿರುತ್ತೇನೆ. ಸೋ ಬ್ಲ್ಯಾಕ್ ಡ್ರೆಸ್ ಧರಿಸೋಕೆ ಕಾರಣ ರವಿ ಸರ್. ನಾನು ಹಲವು ಬಾರಿ ಕೇಳಿದ್ದೆ ಯಾಕೆ ಕಪ್ಪು ಬಟ್ಟೆ ಧರಿಸ್ತೀರಿ ಅಂತ, ಅದಕ್ಕೆ ಅವರಂದ್ರು, ಒಂದು ನಾವು ಬೆಳ್ಳಗೆ ಕಾಣಿಸುತ್ತೀವಿ. ಇನ್ನೊಂದು, ತೆಳ್ಳಗೆ ಕಾಣಿಸುತ್ತೀವಿ ಅಂತ. ಅದನ್ನೇ ನಾನು ಕೂಡ ಫಾಲೋ ಮಾಡುತ್ತಿದ್ದೇನೆʼ ಅಂತ ಕಪ್ಪು ಬಟ್ಟೆಯ ಮೇಲಿನ ವ್ಯಾಮೋಹದ ಹಿಂದಿನ ಕಥೆ ಬಿಚ್ಚಿಟ್ಟು ಸಭಿಕರಲ್ಲಿ ನಗು ತರಿಸಿದರು ಕಿಚ್ಚ ಸುದೀಪ್.