ಇದು ನಿಜಕ್ಕೂ ಸಂಕಷ್ಟದ ಕಾಲ. ಏನೇ ಸಾಹಸಗಳು ಕೂಡ ಸವಾಲೇ. ಅಂತಹದ್ದೆ ಸವಾಲಿನ ಸಂದರ್ಭದಲ್ಲೇ ʼ ಸಿನಿಲಹರಿʼ ಸಾಹಸಗಳು ಮುಂದುವರೆದಿವೆ ಅನ್ನೋದು ನಮ್ಮ ಪಾಲಿಗೆ ಹೆಮ್ಮೆ. ʼ ಸಿನಿಲಹರಿʼ ವೆಬ್ ಸೈಟ್ ಶುರು ವಾಗಿದ್ದೇ ನಮ್ಮ ಪಾಲಿಗೆ ಒಂದು ದೊಡ್ಡ ಸಾಹಸ. ಕೋರೋನಾ ನಂತರದ ಲೌಕ್ ಡೌನ್ ದಿನಗಳು ಆಗಷ್ಟೇ ಮುಗಿದಿದ್ದವು. ಹಾಗಂತ ಜನರಿಗೆ ಕೊರೋನಾ ಆತಂಕ ದೂರವಾಗಿರಲಿಲ್ಲ. ಆ ಹೊತ್ತಿಗೆ ನಮಗೂ ಕೈಯಲ್ಲಿ ಕೆಲಸ ಇರಲಿಲ್ಲ. ಬದುಕಿಗೆ ಒಂದು ಕೆಲಸ ಅಂತ ಅನಿವಾರ್ಯವೇ ಇತ್ತು. ಆಗ ನಮಗೆ ಹೊಳೆದಿದ್ದು ವೆಬ್ ಸೈಟ್ ಶುರು ಮಾಡುವ ಆಲೋಚನೆ. ಅದೃಷ್ಟ ಎನ್ನುವ ಹಾಗೆ ಅದಕ್ಕೆ ದೊಡ್ಡ ಬೆಂಬಲ ನೀಡಿ, ಚಾಲನೆ ಕೊಟ್ಟಿದ್ದು ಲಹರಿ ರೆಕಾರ್ಡಿಂಗ್ ಸಂಸ್ಥೆಯ ಮುಖ್ಯಸ್ಥರಾದ ಲಹರಿ ವೇಲು ಅವರು. ” ಸಿನಿ ಲಹರಿʼ ಪ್ರತಿ ಹೆಜ್ಜೆಗಳಲ್ಲಿ ಅವರನ್ನು ನಾವು ಮರೆಯೋದಿಕ್ಕೆ ಸಾಧ್ಯವೇ ಇಲ್ಲ. ಯಾಕಂದ್ರೆ , ಕಂಗೆಟ್ಟಿದ್ದ ನಮಗೆ ಒಂದು ದಾರಿ ಸಿಕ್ಕಿದ್ದೇ ಅವರ ಮೂಲಕ.
ಯೋಗಾ ಯೋಗ ಅದಕ್ಕೆ ಹಲವರ ಬೆಂಬಲವೂ ಸಿಕ್ಕಿತು. ಅದು ಶುರುವಾಗಿ ಇಲ್ಲಿಗೆ ನಾಲ್ಕು ತಿಂಗಳ ಮೇಲಾಯಿತು. ಈಗ ಇನ್ನೊಂದು ಹೆಜ್ಜೆ. ʼ ಸಿನಿ ಲಹರಿʼ ಯುಟ್ಯೂಬ್ ಚಾನೆಲ್. ಹಾಗಂತ ಆರ್ಥಿಕವಾಗಿ ಏನೋ ಮ್ಯಾಜಿಕ್ ನಡೆದು ಹೋಯಿತು ಅಂತೇನಿಲ್ಲ. ಹಣಕಾಸಿನ ವಿಚಾರದಲ್ಲಿ ಈಗಲೂ ಸಂಕಷ್ಟವೇ. ಕೊರೋನಾ ಕಾರಣಕ್ಕೆ ಇಡೀ ಚಿತ್ರರಂಗ ಭಾರೀ ಆರ್ಥಿಕ ಹೊಡೆತಕ್ಕೆ ಸಿಲುಕಿದೆ. ಅದು ಚೇತರಿಕೆ ಕಾಣಲು ಇನ್ನಷ್ಟು ಸಮಯ ಬೇಕಿದೆ. ಇಂತಹ ದಿನಗಳಲ್ಲಿ ಸಿನಿಮಾ ರಂಗ ನಂಬಿಕೊಂಡು ಏನೇನೋ ಮಾಡಲು ಹೊರಡುತ್ತೇವೆಂದರೆ ಅದರ ಪರಿಸ್ಥಿತಿ ಹೇಗೆ ಅಂತ ಬಿಡಿಸಿ ಹೇಳಬೇಕಿಲ್ಲ. ಅದೇ ಪರಿಸ್ಥಿತಿಯಲ್ಲೆ ನಾವೂ ಇದ್ದೇವೆ. ಅದರಾಚೆ, ಅತೀ ಕಡಿಮೆ ಅವದಿಯಲ್ಲಿ’ ಸಿನಿ ಲಹರಿ ”ಗೆ ಚಿತ್ರರಂಗದಿಂದ ದೊಡ್ಡ ಮನೋಬೆಂಬಲ ಸಿಕ್ಕಿದೆ. ಸಿನಿಮಾಕ್ಕಂತಲೇ ಇಂತಹದೊಂದು ವೆಬ್ ಸೈಟ್ ಬೇಕಿತ್ತು, ಅದನ್ನು ನೀವಿಬ್ಬರು ಮಾಡಿದ್ದೀರಿ, ಅದನ್ನು ಇನ್ನಷ್ಟು, ಮತ್ತಷ್ಟು ಅಂದವಾಗಿ, ಚೆಂದವಾಗಿ ನಡೆಸಿಕೊಂಡು ಹೋಗುವ ಸಾಮಾರ್ಥ್ಯ ನಿಮಗಿದೆ, ಮಾಡಿ ಅಂದರು. ಹಲವು ನಟ- ನಟಿಯರು ಕಚೇರಿಗೆ ನೇರವಾಗಿ ಭೇಟಿ ಕೊಟ್ಟು, ಮಾನಸಿಕ ಸ್ಥೈರ್ಯ ಕೊಟ್ಟರು. ಅದೇ, ಹೊತ್ತಿಗೆ ನಮ್ಮ ಸಾಹಸಕ್ಕೆ ಆರ್ಥಿಕ ಸಹಾಯದ ಮೂಲಕ ‘ಸಿನಿಲಹರಿ’ ಗೆ ದೊಡ್ಡ ಬೆಂಬಲವಾಗಿ ನಿಂತಿದ್ದು ಉದ್ಯಮಿ ಪಿ. ಕೃಷ್ಣ. ಅವರಿವತ್ತು ಸಿನಿ ಲಹರಿ ಸಿಇಒ.
ಹಾಗೆ ನೋಡಿದರೆ, ಸಿನಿಲಹರಿ ಯುಟ್ಯೂಬ್ ಚಾನೆಲ್ ಶುರುವಿಗೆ ಅವರೇ ಕಾರಣ. ಅವರಿಂದಲೇ ಯುಟ್ಯೂಬ್ ಚಾನೆಲ್ ಆರಂಭದ ಕನಸುಗಳು ಗರಿಗೆದರಿಕೊಂಡವು. ಮುಂದೆ ಅವರೇ ಆಸಕ್ತಿ ವಹಿಸಿ, ಯುಟ್ಯೂಬ್ ಚಾನೆಲ್ ಆರಂಭದ ಪ್ರಕ್ರಿಯೆಗಳು ಶುರುವಾದವು. ಹೆಚ್ಚು ಕಡಿಮೆ ಒಂದು ತಿಂಗಳ ಸಿದ್ಧತೆಯಲ್ಲಿ ವ್ಯವಸ್ಥಿತ ಸ್ಟುಡಿಯೋ, ಮೂರ್ನಾಲ್ಕು ಹೈಟೆಕ್ ತಂತ್ರಜ್ಞಾನದ ಕ್ಯಾಮೆರಾ, ನುರಿತ ಸಿಬ್ಬಂದಿಯೊಂದಿಗೆ ಈಗ ಯುಟ್ಯೂಬ್ ಚಾನೆಲ್ ಸಿನಿಮಾ ರಂಗದ ಸೇವೆಗೆ ರೆಡಿಯಾಗಿದೆ. ಇಂದು( ಮಾ.10) ಜನಪ್ರಿಯ ಸಿನಿ ತಾರೆಯರು ಹಾಗೂ ಹಿತೈಷಿಗಳ ಮೂಲಕ ಚಿತ್ರರಂಗಕ್ಕೆ ಅರ್ಪಣೆ ಆಗುತ್ತಿರುವುದು ಸಿನಿ ಲಹರಿ ತಂಡದ ಹೆಮ್ಮೆ.