ಕನ್ನಡ ಚಿತ್ರರಂಗದಲ್ಲೀಗ ಕ್ರಿಕೆಟ್ ಹವಾ…!
ಹೌದು, ಸದ್ಯಕ್ಕೆ ಸಿನಿಮಾಗಳ ಬಿಡುಗಡೆಯ ಪರ್ವ ಶುರುವಾಗಿದೆ. ಇದಕ್ಕೂ ಮೊದಲೇ ಬಿಡುಗಡೆಗೆ ಸಜ್ಜಾಗಿರುವ ಚಿತ್ರಗಳು ಜೋರು ಸುದ್ದಿ ಮಾಡುತ್ತಿವೆ. ಇನ್ನು, ಕ್ರಿಕೆಟ್ ವಿಚಾರಕ್ಕೆ ಬಂದರೆ, ಸಿನಿಮಾರಂಗಕ್ಕೂ ಕ್ರಿಕೆಟ್ ಪಂದ್ಯಕ್ಕೂ ಅವಿನಾಭಾವ ಸಂಬಂಧವಿದೆ. ಇಲ್ಲಿ ಸಿನಿಮಾ ನಟರು ಕೂಡ ಕ್ರಿಕೆಟ್ ಮೇಲೆ ಹೆಚ್ಚು ಪ್ರೀತಿ ತೋರುವ ಹಿನ್ನೆಲೆಯಲ್ಲಿ, ಅಭಿಮಾನಿಗಳು ಕೂಡ ಕ್ರಿಕೆಟ್ ಆಡೋಕೆ ಬ್ಯಾಟು-ಬಾಲು ಹಿಡಿಯುತ್ತಿರುವುದು ಹೊಸ ಬೆಳವಣಿಗೆಯೇನಲ್ಲ.
ಇತ್ತೀಚೆಗಷ್ಟೇ, ಶಿವರಾಜಕುಮಾರ್ ಅವರು ತಮ್ಮ ಸಿನಿಮಾ ಜರ್ನಿಯಲ್ಲಿ 35 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ, ಫ್ಯಾನ್ಸ್ ಸೇರಿ ಕ್ರಿಕೆಟ್ ಲೀಗ್ ಆಯೋಜಿಸಿದ್ದರು. ಈಗ “ದುನಿಯಾ” ವಿಜಯ್ ಅಭಿಮಾನಿಗಳ ಸರದಿ.
ಹೌದು, ಸದ್ಯಕ್ಕೆ “ಸಲಗ” ಚಿತ್ರದ ಬಗ್ಗೆ ಎಲ್ಲೆಡೆ ಹವಾ ಇದೆ. ಹೀಗಾಗಿ ರಾಜ್ಯದಾದ್ಯಂತ ವಿಜಯ್ ಅಭಿಮಾನಿಗಳಿಂದ ಕ್ರಿಕೆಟ್ ಅಭಿಯಾನ ಶುರುವಾಗಿದೆ. “ಸಲಗ” ಚಿತ್ರತಂಡ ಕ್ರಿಕೆಟ್ ಮೂಲಕ ವಿಶಿಷ್ಟವಾಗಿ ಸಿನಿಮಾ ಪ್ರಚಾರ ಮಾಡಲು ಹೊರಟಿದೆ. “ದುನಿಯಾ” ವಿಜಯ್ ಅಭಿಮಾನಿಗಳು ರಾಜ್ಯದಾದ್ಯಂತ “ಸಲಗ” ಕ್ರಿಕೆಟ್ ಕಪ್ ಸರಣಿಯನನು ಆಯೋಜಿಸಿದ್ದಾರೆ.
ಆ ಸರಣಿಗಳಲ್ಲಿ “ಸಲಗ” ಚಿತ್ರತಂಡವೂ ಒಂದು ತಂಡವಾಗಿ ಮೈದಾನಕ್ಕಿಳಿಯಲಿದೆ. ಇದರಿಂದಾಗಿ ಮಾರ್ಚ 7ರಂದು ಕೋಲಾರದ ಮಾಲೂರಿನಲ್ಲಿ “ಸಲಗ” ಕ್ರಿಕೆಟ್ ಕಪ್ ಸರಣಿ ನಡೆಯಲಿದೆ. ಇದೇ ಮಾದರಿಯಲ್ಲಿ ಚಿತ್ರದುರ್ಗ, ಹೊಸಪೇಟೆ ಹಾಗೂ ಮೈಸೂರು ಸೇರಿದಂತೆ ರಾಜ್ಯದ ನಾನಾ ಊರುಗಳಲ್ಲಿ “ಸಲಗ” ಕಪ್ ನಡೆಯಲಿದೆ. ಇತ್ತೀಚೆಗೆ ನಡೆದ ಶಿವರಾಜಕುಮಾರ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಸರಣಿಯಲ್ಲಿ “ಸಲಗ” ಚಿತ್ರತಂಡ ಭಾಗವಹಿಸಿತ್ತು. ಪ್ರದರ್ಶನ ಪಂದ್ಯ ಆಡಿದ “ಸಲಗ” ಟೀಮ್ ಭರ್ಜರಿಯಾಗಿ ಗೆಲುವು ದಾಖಲಿಸಿತ್ತು. ಈಗ ಅದರ ವಿಡಿಯೋ ಕೂಡ ರಿಲೀಸ್ ಆಗಿದೆ.