ನಿರ್ದೇಶಕ ಆಸ್ಕರ್ ಕೃಷ್ಣ ಇದೇ ಮೊದಲು ನಾಯಕರಾಗಿ ಅಭಿನಯಿಸಿರುವ ” ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟʼ ಚಿತ್ರ ರಿಲೀಸ್ ಗೆ ರೆಡಿ ಆಗಿದೆ. ಇಷ್ಟರಲ್ಲಿಯೇ ತೆರೆಗೆ ಬರಲು ಸಿದ್ಧತೆ ನಡೆಸಿರುವ ಚಿತ್ರ ತಂಡ ಈಗ ಚಿತ್ರದ ಹಾಡುಗಳ ಮೂಲಕ ಸದ್ದು ಮಾಡುತ್ತಿದೆ. ಮನುಷ್ಯನಾಗಿ ಹುಟ್ಟಿದ್ಮೇಲೆ ಏನ್ ಮಾಡ್ಬೇಕು… ಎನ್ನುವ ಸ್ಪೆಷಲ್ ಸಾಂಗ್ ನಲ್ಲಿ ಕನ್ನಡದ ಪ್ರತಿಭಾನ್ವಿತ ನಟಿ ಹರ್ಷಿತಾ ಕಲ್ಲಿಂಗಲ್ ಸಖತ್ ಆಗಿಯೇ ಕುಣಿದಿದ್ದು, ಪಡ್ಡೆ ಗಳಿಗಾಗಿಯೇ ಚಿತ್ರ ತಂಡ ಈ ಹಾಡು ಚಿತ್ರೀಕರಿಸಿದಷ್ಟು ಮಾದಕವಾಗಿದೆ.
ಐಟಂ ಮಾದರಿಯ ಈ ಹಾಡಿನಲ್ಲಿ ಹೆಜ್ಜೆ ಹಾಕಿರುವ ನಟಿ ಹರ್ಷಿತಾ ಕಲ್ಲಿಂಗಲ್ ಮೂಲತಃ ಬೆಂಗಳೂರಿನ ಹುಡುಗಿ. ಎಲ್ಲಕ್ಕಿಂತ ಹೆಚ್ಚಾಗಿ ಇವರು ಅಪ್ಪಟ ಕನ್ನಡತಿ ಎನ್ನುವುದು ವಿಶೇಷ. ಈಗಾಗಲೇ ಮಲಯಾಳಂ, ತೆಲುಗು, ತಮಿಳು ಹಾಗೂ ಇತರೇ ಭಾಷೆಯ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಹರ್ಷಿತಾ ಕಲ್ಲಿಂಗಲ್ ಈಗ ಕನ್ನಡದತ್ತ ಮುಖ ಮಾಡಿದ್ದಾರೆ. ಇದೇ ಮೊದಲು ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ ಚಿತ್ರದಲ್ಲಿನ ವಿಶೇಷ ಹಾಡಿನ ಮೂಲಕ ಕನ್ನಡಕ್ಕೆ ಎಂಟ್ರಿ ಆಗಿದ್ದಾರೆ. ಇಲ್ಲಿ ಅವರನ್ನು ತಮ್ಮ ಚಿತ್ರಕ್ಕೆ ತಂದು ಕುಣಿಸಿದ್ದು ನಿರ್ದೇಶಕ ಆಸ್ಕರ್ ಕೃಷ್ಣ.
ಮನುಷ್ಯನಾಗಿ ಹುಟ್ಟಿದ್ಮೇಲೆ ಏನ್ ಮಾಡ್ಬೇಕು ಹಾಡನ್ನು ಚಿತ್ರದಲ್ಲಿ ತರಬೇಕು ಅಂದಾಗ ಅದಕ್ಕೆ ಸೂಕ್ತ ನಟಿಯನ್ನೇ ತರಬೇಕೆಂದು ಹುಡುಕಾಟದಲ್ಲಿದ್ದೇವು. ಆಗ ನಮಗೆ ಪರಿಚಯದವರ ಮೂಲಕ ಸಿಕ್ಕವರು ನಟಿ ಹರ್ಷಿಕಾ ಕಲ್ಲಿಂಗಲ್. ಈ ವೇಳೆಗಾಗಲೇ ಅವರು ಕನ್ನಡದಾಚೆ ತೆಲುಗು, ತಮಿಳು ಹಾಗೂ ಮಲಯಾಳಂ ನಲ್ಲಿ ಸಾಕಷ್ಟು ಸುದ್ದಿ ಮಾಡಿದ್ದರು. ಕನ್ನಡದವರೇ ಆಗಿದ್ದರು, ಅವರು ಮೊದಲು ಅಲ್ಲಿ ಗುರುತಿಸಿಕೊಂಡಿದ್ದರು. ಅವರನ್ನೇ ಯಾಕೆ ನಮ್ಮ ಸಿನಿಮಾದ ಮೂಲಕ ಪರಿಚಯಿಸಬಾರದು ಅಂತ ನಾವು ಹರ್ಷಿತಾ ಅವರನ್ನೇ ಆಯ್ಕೆ ಮಾಡಿಕೊಂಡೆವು ಎನ್ನುತ್ತಾರೆ ನಟ ಆಸ್ಕರ್ ಕೃಷ್ಣ. ಇತ್ತೀಚೆಗಷ್ಟೇ ಯುಟ್ಯೂಬ್ ಮೂಲಕ ಬಿಡುಗಡೆಯಾಗಿರುವ ಈ ಹಾಡಿಗೆ ಭಾರೀ ಮೆಚ್ಚುಗೆ ಸಿಕ್ಕಿದೆಯಂತೆ.
ರೆಡ್ ಅಂಡ್ ವೈಟ್ ಬ್ಯಾನರ್ ಅಡಿಯಲ್ಲಿ, ‘ಆಸ್ಕರ್’ ಕೃಷ್ಣರವರೇ ನಿರ್ಮಿಸಿ, ನಿರ್ದೇಶಿಸಿ, ನಾಯಕರಾಗಿ ಅಭಿನಯಿಸಿರುವ ಚಿತ್ರವಿದು. ಚಿತ್ರದಲ್ಲಿ ಮೂರು ಹಾಡುಗಳಿದ್ದು, ಅನಂತ್ ಆರ್ಯನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಎಲ್ಲವೂ ಅಂದುಕೊಂಡಂತಾದರೆ ಮಾರ್ಚ್ ಕೊನೆಯ ವಾರ ಈ ಚಿತ್ರವು ತೆರೆಗೆ ಬರಲಿದೆಯಂತೆ.