ಎನ್ಕೌಂಟರ್ ಖ್ಯಾತಿಯ ನಿವೃತ್ತ ಪೊಲೀಸ್ ಅಧಿಕಾರಿ ಟೈಗರ್ ಅಶೋಕ್ ಕುಮಾರ್ ಬರೆದ ಅಂಕಣಗಳ ” ಹುಲಿಯ ನೆನಪುಗಳು ʼ ಕೃತಿ ಈಗ ವೆಬ್ ಸೀರಿಸ್ ಮೂಲಕ ತೆರೆ ಮೇಲೆ ಬರುತ್ತಿದೆ. “ಹುಲಿಯ ನೆನಪುಗಳುʼ ಪುಸ್ತಕದ ಇಂಗ್ಲಿಷ್ ಅವತರಣಿಕೆ ” ಟೈಗರ್ ಮೆಮೋರಿಸ್ʼ ಆಧರಿಸಿ ವೆಬ್ ಸೀರಿಸ್ ನಿರ್ಮಾಣಕ್ಕೆ ಮುಂದಾಗಿದೆಯಂತೆ ಸೋನಿ ಎಂಟರ್ಟೈನ್ಮೆಂಟ್ ಸಂಸ್ಥೆ. ಹಿಂದಿ, ಇಂಗ್ಲಿಷ್ ಸೇರಿದಂತೆ ಐದು ಭಾಷೆಗಳಲ್ಲಿ ಇದು ನಿರ್ಮಾಣವಾಗುತ್ತಿದೆ. ಹಾಗೆಯೇ ಟಾಲಿವುಡ್ ನ ಹೆಸರಾಂತ ನಿರ್ದೇಶಕರೇ ಇದಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆನ್ನುವ ಅಂಶ ರಿವೀಲ್ ಆಗಿದೆ.
ʼಹುಲಿಯ ನೆನಪುಗಳುʼ ಕೃತಿ ವೆಬ್ ಸೀರಿಸ್ ಆಗಿ ತೆರೆ ಮೂಡಿ ಬರುತ್ತಿರುವ ಸಂತಸದ ಸಂಗತಿಯನ್ನು ಅಶೋಕ್ ಕುಮಾರ್ ಅವರೇ ಔಪಚಾರಿಕವಾಗಿ ಹಂಚಿಕೊಂಡಿದ್ದು, ಅಧಿಕೃತವಾಗಿ ನಡೆಯ ಬೇಕಿರುವ ಎಲ್ಲಾ ಪ್ರಕ್ರಿಯೆಗಳು ಈಗ ಫೈನಲ್ ಹಂತದಲ್ಲಿವೆ. ಒಳ್ಳೆಯ ಸಂಭಾವನೆಗೆ ಇದಕ್ಕೆ ಸಿಗುತ್ತಿದೆ. ವೃತ್ತಿಯ ಜತೆಗೆ ಬರವಣಿಗೆ ಮೂಲಕವೂ ಹೀಗೆಲ್ಲ ಸಂಭಾವನೆ ಸಿಗುತ್ತಿರುವುದು ಸಂತಸ ತಂದಿದೆ ಎನ್ನುತ್ತಾರೆ ನಿವೃತ್ತ ಪೊಲೀಸ್ ಅಧಿಕಾರಿ ಅಶೋಕ್ ಕುಮಾರ್. ನೆಟ್ಪ್ಲೆಕ್ಸ್ ನಲ್ಲಿ ಈಗಾಗಲೇ ಲಭ್ಯವಿರುವ ʼಡೆಲ್ಲಿ ಕ್ರೈಮ್ʼ ಮಾದರಿಯಲ್ಲೇ ” ಹುಲಿಯ ನೆನಪುಗಳುʼ ಪುಸ್ತಕ ವೆಬ್ ಸೀರಿಸ್ ಆಗಿ ಮೂಡಿ ಬರಲಿದೆಯಂತೆ. ಅಲ್ಲಿ ಆಶೋಕ್ ಕುಮಾರ್ ಅವರೇ ಕೆಲವು ಘಟನೆಗಳನ್ನು ನಿರೂಪಣೆ ಮಾಡುವುದಕ್ಕೂ ಒಪ್ಪಿಕೊಂಡಿದ್ದಾರಂತೆ.
ಅವರಿಗೂ ಮತ್ತು ಸಿನಿಮಾಕ್ಕೂ ಅವಿನಾಭಾವ ನಂಟು. ಹಾಗೆ ನೋಡಿದರೆ ಅವರು ಪೊಲೀಸ್ ಇಲಾಖೆಗೆ ಬಂದಿದ್ದಕ್ಕೆ ಬಿಗ್ ಬಿ ಅಮಿತಾಬ್ ಬಚ್ಚನ್ ಅಭಿನಯದ ” ಝಂಜೀರ್ʼ ಸಿನಿಮಾವೇ ಕಾರಣವಂತೆ. ಹಾಗೆ ಬಂದವರು ಸಿನಿಮಾಕ್ಕೂ ತಮ್ಮ ವೃತ್ತಿಗೂ ನಂಟು ಇಟ್ಟು ಕೊಂಡೇ ಬಂದಿದ್ದು ನಿಮಗೂ ಗೊತ್ತು. ಕಳೆದ ಕೆಲವು ವರ್ಷಗಳ ಹಿಂದಷ್ಟೇ ಬಂದು ಹೋಗಿದ್ದ ಕನ್ನಡದ ಬ್ಲಾಕ್ ಬಸ್ಟರ್ ಚಿತ್ರ” ಮೈನಾʼ ದ ಕತೆಗೆ ಆಶೋಕ್ ಕುಮಾರ್ ಅವರೇ ಪ್ರೇರಣೆ ಆಗಿದ್ದರು. ಅವರು ಹೇಳಿದ್ದ ಒಂದು ಘಟನೆಯನ್ನೇ ಪ್ರೇರಣೆಯಾಗಿಟ್ಟುಕೊಂಡು ʼಮೈನಾʼ ಚಿತ್ರ ಮಾಡಿದ್ದರು ನಾಗಶೇಖರ್. ಅದೆಲ್ಲ ನಿಮಗೂ ಗೊತ್ತಿರುವ ವಿಚಾರ.
ಈಗ ಅವರೇ ಬರೆದ ಕೃತಿಯೊಂದು ವೆಬ್ ಸೀರಿಸ್ ಆಗಿ ತೆರೆ ಮೇಲೆ ಬರುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಅಶೋಕ್ ಕುಮಾರ್, ನಾನು ಬರೆದ ಪುಸ್ತಕಕ್ಕೆ ಈ ಮಟ್ಟದ ಡಿಮ್ಯಾಂಡ್ ಇರೋದಿಕ್ಕೆ ಖುಷಿ ಆಗಿದೆ ಎನ್ನುತ್ತಾರೆ. ಅಶೋಕ್ ಕುಮಾರ್ ಅವರು ಪೊಲೀಸ್ ಇಲಾಖೆಯಲ್ಲಿ ಒಬ್ಬ ದಕ್ಷ ಅಧಿಕಾರಿಯಾಗಿ ಹೆಸರು ಮಾಡಿದ ಹಾಗೆಯೇ ಆ ವೃತ್ತಿಯ ಒಳನೋಟವನ್ನು ಸೂಕ್ಷ್ಮವಾಗಿ ಬಲ್ಲವರು. ಅದೇ ಕಾರಣಕ್ಕೆ ಅವರು ತಾವು ಕಂಡ ಅನುಭವಗಳನ್ನೇ ಪತ್ರಿಕೆಗಳಲ್ಲಿ ಅಂಕಣ ರೂಪದಲ್ಲಿ ಬರೆಯುತ್ತಾ ಬಂದರು. ಕ್ರಮೇಣ ಬರವಣಿಗೆ ಅವರಿಗೆ ದಕ್ಕಿತು. ಬರೆಯುತ್ತಲೇʼ ಹುಲಿಯ ನೆನಪುಗಳುʼಅಂಕಣ ಪುಸ್ತಕ ರೂಪದಲ್ಲಿ ಬಂತು. ಅದೇ ಕೃತಿ ʼಟೈಗರ್ ಮೆಮೋರಿಸ್ʼ ಹೆಸರಲ್ಲಿ ಇಂಗ್ಲಿಷ್ ಹೋಯಿತು. ಹಾಗೆಯೇ ʼಪೊಲೀಸ್ ವಿಜ್ಹಲ್ʼ, ʼಬುಲೆಟ್ ಸವಾರಿʼ ಪುಸ್ತಕಗಳನ್ನು ಬರೆದಿದ್ದು. ಅವೆಲ್ಲ ದಾಖಲೆ ಪ್ರಮಾಣದಲ್ಲಿ ಮಾರಾಟ ಕಂಡಿವೆ.