ಯುವ ಬರಹಗಾರ ಶಿವಕುಮಾರ ಮಾವಲಿ ಸಿನಿಮಾ ಸಾಹಿತ್ಯದತ್ತ ಹೆಚ್ಚು ಒಲವು ತೋರಿದ್ದಾರೆ. “ಅವ್ಯಕ್ತʼ ಚಿತ್ರಕ್ಕೆ ಕಥೆ, ಸಂಭಾಷಣೆ ಜತೆಗೆ ಸಾಹಿತ್ಯ ಬರೆದ ನಂತರವೀಗ ʼಮುತ್ತುರಾಜʼ ಹೆಸರಿನ ಕಿರುಚಿತ್ರವೊಂದಕ್ಕೆ ಸೊಗಸಾದ ಸಾಹಿತ್ಯ ಬರೆದಿದ್ದು, ಅದೀಗ ಯುಟ್ಯೂಬ್ ನಲ್ಲಿ ರಿಲೀಸ್ ಆಗಿ ಸಕತ್ ಸುದ್ದಿ ಮಾಡುತ್ತಿದೆ. ಸುಮಾರು ೨೦ ನಿಮಿಷಗಳ ಅವದಿಯ ಈ ಕಿರುಚಿತ್ರ ʼಮುತ್ತುರಾಜʼ ಹೆಸರಿನ ಒಬ್ಬ ವ್ಯಕ್ತಿಯ ಸುತ್ತ ನಡೆಯುವ ಕಥೆ ಹೊಂದಿದೆ. ” ಯಾವ ದೂರವೂ ದೂರವಲ್ಲ, ಸನಿಹ ಇರದ ಸಲುಗೆ ಬಲು ದೂರ ʼ ಎನ್ನುವ ತಿರುಳ ಮೇಲೆ ಸಾಗುವ ಕಥಾ ಹಂದರ ಹೊಂದಿದ್ದು, ಮನುಷ್ಯ ಸಂಬಂಧಗಳ ಮೇಲೆ ಬೆಳಕು ಚೆಲ್ಲುತ್ತದೆ.
ಕತೆಯ ಇದೇ ಸಾರಕ್ಕೆ ತಕ್ಕಂತೆ ಬರಹಗಾರ ಶಿವಕುಮಾರ ಮಾವಲಿ ಬರೆದ ” ಕಳೆದ ಹೋದ ನಿನ್ನೆಯನು..ʼ. ಎನ್ನುವ ಗೀತೆ ರೆಟ್ರೋ ಶೈಲಿಯಲ್ಲಿ ಮೂಡಿ ಬಂದರೂ, ಎಲ್ಲರೊಳಗೂ ಮನುಷ್ಯ ಸಂಬಂಧಗಳ ಭಾವಗಳನ್ನು ಮೀಟುತ್ತಾ ಹೋಗುವುದೇ ವಿಶೇಷ. ಸದ್ಯ ಬೆಂಗೂರಿನ ಕಾಲೇಜ್ವೊಂದರಲ್ಲಿ ಸಿನಿಮಾ ಮೇಕಿಂಗ್ ಕೋರ್ಸ್ ಅಭ್ಯಾಸ ಮಾಡುತ್ತಿರುವ ಶಕ್ತಿ ಪ್ರಸಾದ್ ಎಂಬ ಯುವ ಪ್ರತಿಭೆ ” ಮುತ್ತುರಾಜʼ ಕಿರುಚಿತ್ರದ ನಿರ್ದೇಶಕ. ಹಾಗೆಯೇ ಅವರಂತೆಯೇ ಸಿನಿಮಾ ಮೇಕಿಂಗ್ ಮೇಲೆ ಅಸಕ್ತಿ ಹೊಂದಿದ ಒಂದಷ್ಟು ಯುವಕರೂ ಕೂಡ ಈ ಕಿರುಚಿತ್ರ ನಿರ್ಮಾಣದಲ್ಲಿ ಸಾಥ್ ನೀಡಿದ್ದಾರೆ. ಪಾಪರ್ ಫಿಲಂಸ್ ಮೂಲಕ ಈ ಕಿರುಚಿತ್ರ ನಿರ್ಮಾಣಗೊಂಡಿದೆ. ಈ ಕಿರುಚಿತ್ರದ ತಾರಾಗಣದಲ್ಲೂ ಹೊಸ ಪ್ರತಿಭೆಗಳೆ ವಿವಿಧ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಚಾಮರಾಜ ನಗರ ಸುತ್ತ ಮುತ್ತ ಕಿರುಚಿತ್ರ ಚಿತ್ರೀಕರಣಗೊಂಡಿದೆ.
ಸಾಹಿತ್ಯ ರಚನೆಯ ಮೂಲಕ ಈ ಹೊಸ ಪ್ರತಿಭೆಗಳಿಗೆ ಬೆಂಬಲವಾಗಿ ನಿಂತಿರುವ ಯುವ ಬರಹಗಾರ ಶಿವಕುಮಾರ ಮಾವಲಿ, ಆ ಮೂಲಕ ಸಿನಿಮಾ ಸಾಹಿತ್ಯಕ್ಕೆ ಒಲವು ತೋರಿರುವುದು ಇನ್ನೊಂದು ವಿಶೇಷ. ಕನ್ನಡದ ಹೊಸ ತಲೆಮಾರಿನ ಯುವ ಬರಹಗಾರರಲ್ಲಿ ಶಿವಕುಮಾರ್ ಮಾವಲಿ ಅವರದ್ದು ಮುಂಚೂಣಿಯ ಹೆಸರು. ವೃತ್ತಿಯಲ್ಲಿ ಇಂಗ್ಲಿಷ್ ಉಪನ್ಯಾಸಕರಾದರೂ, ಕನ್ನಡ ಸಾಹಿತ್ಯದಲ್ಲಿ ಹೆಚ್ಚು ಆಸಕ್ತಿ ಇಟ್ಟುಕೊಂಡವರು ಶಿವಕುಮಾರ ಮಾವಲಿ. ಹಾಗೆಯೇ ರಂಗಭೂಮಿಯಲ್ಲೂ ಅಪಾರ ಆಸಕ್ತಿ ಹೊಂದಿದ್ದು, ಈಗಾಗಲೇ “ದೇವರು ಅರೆಸ್ಟ್ ಆದʼ, “ಟೈಪಿಸ್ಟ್ ತಿರಸ್ಕರಿಸಿದ ಕಥೆʼ, “ಸುಪಾರಿ ಕಿಲ್ಲರ್” ಎಂಬ ಪುಸ್ತಕಗಳಿಂದ ಕಥೆಗಾರರಾಗಿಯೂ ವಿಶೇಷವಾಗಿ ಗುರುತಿಸಿಕೊಂಡಿದ್ದಾರೆ.
ಯಟ್ಯೂಬ್ ನಲ್ಲಿ ಭಾನುವಾರವಷ್ಟೇ ರಿಲೀಸ್ ಆಗಿರುವ ” ಕಳೆದು ಹೋದ ನಿನ್ನೆಯನು ..ಈ ವೀಡಿಯೋ ಸಾಂಗ್ ಅರ್ಥಗರ್ಭೀತ ಸಾಹಿತ್ಯದ ಜತೆಗೆ ಅದರ ಚಿತ್ರೀಕರಣವೂ ವಿಶೇಷವಾಗಿದ್ದು ,ಮೂರು ನಿಮಿಷದ ಈ ಹಾಡಿನಲ್ಲಿ ಪ್ರತಿಯೊಂದು ಸಾಲುಗಳೂ ಮಾರ್ಮಿಕವಾಗಿವೆ. ‘ನೀರ ಮೇಲಿನ ಮರಳ ಮನೆಯಂತೆ ಒಲವು ಕಟ್ಟಿದ ನೆನಪು … ಕಟ್ಟುತ್ತಲೇ ಕೆಡಗುವುದು ಎಲ್ಲಾ ಒಲವ ರೂಪು… ವಿರಹವನು ಗೆದ್ದವನ ಸಾವು ಉಂಟೇನು? ಸಲುಗೆ ಇರದ ಸನಿಹ ಬಲು ದೂರ ‘ ಎಂಬ ಸಾಲುಗಳಲ್ಲಿ ಏನೋ ಹೊಸತನ್ನು ಹೇಳುವ ಹಾಗೆ ಕಾಣುತ್ತಿದ್ದಾರೆ. ನಾರಾಯಣ ಶರ್ಮ ಕಂಪೋಸ್ ಮಾಡಿ ಹಾಡಿದ್ದಾರೆ. ಮೂರು ನಿಮಿಷಗಳ ಹಾಡಾದರೂ ಫ್ರೆಷ್ ಅನ್ನಿಸುವ ಭಾವ ಮೂಡಿಸುತ್ತದೆ. ಈ ಹಿಂದೆ ಸಂಚಾರಿ ವಿಜಯ್ ಅವರ ನಟನೆಯಲ್ಲಿ ಮೂಡಿಬಂದ ʼಅವ್ಯಕ್ತʼ ಕಿರುಚಿತ್ರದಲ್ಲಿಯೂ ಶಿವಕುಮಾರ್ ಮಾವಲಿ ಬರೆದಿದ್ದ, ‘ ಹೆಣ್ಣಿನೊಲವ ಹಾದಿ ಹಿಡಿದು ‘ ಎಂಬ ಹಾಡು ವಿಶೇಷವಾಗಿದ್ದು ಮಾತ್ರವಲ್ಲ, ಸಂಗೀತಾಸಕ್ತರ ಆಕರ್ಷಣೆಗೂ ಕಾರಣವಾಗಿತ್ತು.