ನಿರೂಪಕ ಕಿರಿಕ್ ಕೀರ್ತಿ ಚೊಚ್ಚಲ ನಿರ್ದೇಶನದ ‘ಪ್ರೀತಿ, ಮದುವೆ ಇತ್ಯಾದಿ’ ಚಿತ್ರದ ನಾಯಕಿಯಾಗಿ ಶ್ವೇತಾ ಪ್ರಸಾದ್ ಆಯ್ಕೆಯಾಗಿದ್ದಾರೆ. ಈ ಹಿಂದಿನ ‘ಸಂಕಷ್ಟಕರ ಗಣಪತಿ’ ಚಿತ್ರದ ನಟ ಲಿಖಿತ್ ಶೆಟ್ಟಿ ಚಿತ್ರದ ಹೀರೋ ಎನ್ನುವುದು ವಾರದ ಹಿಂದೆಯೇ ಖಾತ್ರಿಯಾಗಿತ್ತು. ಇದೀಗ ‘ರಾಧಾ ರಮಣ’ ಧಾರಾವಾಹಿ ಖ್ಯಾತಿಯ ಶ್ವೇತಾ ಪ್ರಸಾದ್ ಚಿತ್ರದ ನಾಯಕಿಯಾಗಿ ನಟಿಸಲಿದ್ದಾರೆ. ಮಾರ್ಚ್ ಮಧ್ಯದಲ್ಲಿ ಸಿನಿಮಾ ಶೂಟಿಂಗ್ ಆರಂಭಿಸಲಿದೆ ಎನ್ನಲಾಗಿದೆ.
‘ಶ್ರೀರಸ್ತು ಶುಭಮಸ್ತು’ ಸೀರಿಯಲ್ ಮೂಲಕ ಕಿರುತೆರೆಗೆ ಪದಾರ್ಪಣೆ ಮಾಡಿದ ಶ್ವೇತಾ ಪ್ರಸಾದ್ ಅವರಿಗೆ ‘ರಾಧಾ ರಮಣ’ ಧಾರಾವಾಹಿ ದೊಡ್ಡ ಹೆಸರು ತಂದುಕೊಟ್ಟಿತು. ನಂತರ ದೀಪಕ್ ಮಧುವನಹಳ್ಳಿ ನಿರ್ದೇಶನದ ‘ಕಳ್ಬೆಟ್ಟದ ದರೋಡೆಕೋರರು’ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾದರು. ಇದೀಗ ‘ಪ್ರೀತಿ, ಮದುವೆ ಇತ್ಯಾದಿ’ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಚಿತ್ರದ ಹೀರೋ ಲಿಖಿತ್ ತುಳು ಚಿತ್ರರಂಗದಲ್ಲಿ ಪರಿಚಿತ ಹೆಸರು. ‘ಫ್ಯಾಮಿಲಿ ಪ್ಯಾಕ್’ ಚಿತ್ರೀಕರಣ ಮುಗಿಸಿರುವ ಅವರು ಕೀರ್ತಿ ನಿರ್ದೇಶನದಲ್ಲಿ ನಟಿಸಲಿದ್ದಾರೆ. ಆರ್ಜೆ ಆಗಿ ಪರಿಚಯವಾದ ಕಿರಿಕ್ ಕೀರ್ತಿ ಬಿಗ್ಬಾಸ್ ಮನೆಗೂ ಹೋಗಿ ಬಂದಿದ್ದರು. ‘ಪ್ರೀತಿ, ಮದುವೆ ಇತ್ಯಾದಿ’ಯೊಂದಿಗೆ ನಿರ್ದೇಶಕರಾಗುತ್ತಿದ್ದಾರೆ.