ಚಿತ್ರರಂಗ ಒಂದು ಮನೆ ಇದ್ದಂತೆ. ನಾವೆಲ್ಲ ಒಂದೇ ಕುಟುಂಬದ ಸದ್ಯಸರು ಅಂತ ಉದ್ಯಮದ ಸಭೆ- ಸಮಾರಂಭಗಳಲ್ಲಿ ನಟ-ನಟಿಯರು ಹೇಳಿಕೊಳ್ಳುವುದು ಸರ್ವೇ ಸಾಮಾನ್ಯ. ಅದು ನಿಜವೂ ಹೌದು. ವರನಟ ರಾಜ್ ಕುಮಾರ್ ಕಾಲದಿಂದಲೂ ಉದ್ಯಮ ಹಾಗೆ ಇದ್ದಿದ್ದೂ ನಿಮಗೂ ಗೊತ್ತು. ಆದರೆ ಈಗ ಕೆಟ್ಟ ಮನಸುಗಳ ಮೂಲಕ ಅದಕ್ಕೆ ಬೆಂಕಿ ಬಿದ್ದಿದೆ. ತರವಲ್ಲದ ಮಾತುಗಳು ಮನಸ್ಸು ಕೆಡಿಸಿವೆ. ಹಾಗೆಯೇ ಕೆಟ್ಟ ಮನಸುಗಳು ಸೇರಿಕೊಂಡು ಮನೆಯನ್ನೇ ಕೆಡಿಸಿವೆ. ದರ್ಶನ್ ಹಾಗೂ ಜಗ್ಗೇಶ್ ನಡುವಿನ ಈ ಜಗಳ ಎಲ್ಲಿಗೆ ಹೋಗಿ ನಿಲ್ಲುತ್ತೋ ಗೊತ್ತಿಲ್ಲ. ಸದ್ಯಕ್ಕಂತೂ ಒಂದು ವಿರಾಮ ಸಿಕ್ಕಿದೆ. ಅದೇ ಈಗ ಖುಷಿ ವಿಚಾರ.
ಅದೇನೆ ಇರಲಿ, ಮಾತು ಮನೆ ಕೆಡಿಸಿತು,ತೂತು ಒಲೆ ಕೆಡಿಸಿತು ಅನ್ನೊದೊಂದು ಗಾದೆ ಮಾತು.ಹಾಗೆಯೇ ಮಾತು ಆಡಿದರೆ ಹೊಯ್ತು, ಮುತ್ತು ಒಡೆದರೆ ಹೊಯ್ತು ಅನ್ನೊದು ಇನ್ನೊಂದು ಗಾದೆ ಮಾತು. ಸದ್ಯಕ್ಕೆ ಚಿತ್ರರಂಗದಲ್ಲಿ ಇವರೆಡು ಗಾದೆ ಮಾತುಗಳು ನಿಜವಾಗಿ ಹೋದವು. ಗಾದೆ ಹೇಳಿದ ಹಿರಿಯರು, ಮಾತನಾಡುವಾಗ ಎಚ್ಚರ ಇರಲಿ ಅಂತ ಹೇಳಿದ್ದಕ್ಕೂ ಕ್ಯಾರೆ ಎನ್ನದೆ ಜಗ್ಗೇಶ್ ಮಾತನಾಡಿದ್ದರ ಪರಿಣಾಮ ಇವತ್ತು ಏನಾಗಿ ಹೋಯಿತು ಅಂತ ನಿಮಗೆಲ್ಲ ಗೊತ್ತೇ ಇದೆ. ಆ ಜಗಳದ ಬಗ್ಗೆ, ಹೆಚ್ಚೇನು ಹೇಳಬೇಕಿಲ್ಲ. ಆದರೆ ಹೇಳಲು ಹೊರಟಿದ್ದು ಆ ಇಬ್ಬರು ನಟರ ನಡುವೆ ಬೆಂಕಿ ಹಚ್ಚಿ ಚಳಿ ಕಾಯಿಸಿಕೊಂಡ ಮನಸು ಮತ್ತು ಮನಸ್ಥಿತಿ ಕುರಿತು.
ಆಫ್ ದಿ ರೆಕಾರ್ಡ್ ಮಾತುಕತೆ ಎಲ್ಲರಲ್ಲೂ ಸರ್ವೇ ಸಾಮಾನ್ಯ. ಅದೆಷ್ಟು ಸಲ ನಾವು ಕೆಲಸ ಮಾಡುವ ಆಫೀಸ್ ಗಳಲ್ಲಿಯೇ ಯಾರೋ ಆಗದವರ ಬಗ್ಗೆ ಫ್ರೆಂಡ್ಸ್ ಬಳಿ ಹಂಚಿಕೊಳ್ಳುತ್ತೇವೆ. ಅದು ಸಾತ್ವಿಕ ಸಿಟ್ಟು ಮಾತ್ರ. ಧ್ವೇಷ ಅಲ್ಲ. ನಿಜಕ್ಕೂ ಅದು ದ್ವೇಷವೇ ಆಗೋದಾದ್ರೆ ಇಷ್ಟೊತ್ತಿಗೆ ಯಾರ ಮನೆಯಲ್ಲೂ ನೆಮ್ಮದಿ ಉಳಿಯು ತ್ತಿರಲಿಲ್ಲ . ಅತ್ತೆ ಬಗ್ಗೆ ಸೊಸೆ ಅಕ್ಕಪಕ್ಕದ ಮನೆಯವರ ಜತೆಗೆ ಹಂಚಿಕೊಳ್ಳುವ ಮಾತುಗಳನ್ನೇ ಚಾಡಿ ಹೇಳಿ ಬೆಂಕಿ ಹಚ್ಚುವುದಾದರೆ, ಪ್ರತಿ ಮನೆಗಳಲ್ಲೂ ಬೆಂಕಿ ಗ್ಯಾರಂಟಿ. ಮನೆಗಳಲ್ಲಿ ಮಾತ್ರವಲ್ಲ, ಅದು ಊರು, ರಾಜ್ಯ, ದೇಶಕ್ಕೂ ಅಷ್ಟೇ. ಹಾಗಾಗಿಯೇ ಕೆಲವನ್ನು ಕೇಳಿಯೂ ಕೇಳದ ಹಾಗೆ ಇದ್ದು ಬಿಡಬೇಕು ಅನ್ನೋದು.
ಕೆಲವರಿಗೆ ಒಂದು ತೆವಲು ಇರುತ್ತದೆ. ಒಬ್ಬರನ್ನು ಇನ್ನೊಬ್ಬರ ಮೇಲೆ ತಂದಿಕ್ಕುವುದು, ಆ ಮೂಲಕ ತಮ್ನ ಸ್ವಾರ್ಥದ ಬೆಳೆ ಕಾಳು ಬೇಯಿಸಿಕೊಳ್ಳುವುದು. ಅದೇ ಸಾಲಿನಲ್ಲಿ ಇವನು ಕೂಡ. ಜತೆಗೆ ಆತನಿಗೆ ಸಾಥ್ ಕೊಟ್ಟವನು ಕೂಡ. ಇವರೆಲ್ಲ ಮೀರ್ ಸಾಧಿಕ್ ಸಂಸ್ಕೃತಿಗೆ ಸೇರಿದವರು.
ಚಿತ್ರೋದ್ಯಮ ದಲ್ಲಂತೂ ಇದು ಮಾಮೂಲು. ಆಫ್ ದಿ ರೆಕಾರ್ಡ್ ಅಂತಲೇ ಒಂದಷ್ಟು ಮಾತುಕತೆ ನಡೆದು ಹೋಗುತ್ತವೆ. ತೀರಾ ತೀರಾ ನಂಬಿಕೆ ಮೇಲೆಯೇ ಇವೆಲ್ಲ ನಡೆದು ಹೋಗುತ್ತವೆ. ಸಮಾಜ ಕೂಡ ಇಷ್ಟು ದೂರ ಬಂದಿದ್ದೇ ಹಾಗೆ. ಅದೆಷ್ಟೋ ಸತ್ಯಗಳು ಕೂಡ ಹಾಗೆಯೇ ಹುದುಗಿ ಹೋಗಿವೆ. ಅಷ್ಟಾಗಿಯೂ ಸಮಾಜ ನಂಬಿಕೆ ಮೇಲೆ ಸಾಗುತ್ತಾ ಬಂದಿದೆ. ಅಂತಹ ನಂಬಿಕೆಯ ಸಮಾಜಕ್ಕೀಗ ನಂಬಿಕೆ ಇಟ್ಟವರ ಪೈಕಿ ದರ್ಶನ್ ಕುರಿತು ಜಗ್ಗೇಶ್ ಆಡಿದ್ದೆರೆನ್ನಲಾದ ಮಾತಿನ ಆಡಿಯೋ ಸೋರಿಕೆ ಮಾಡಿದವನು ಒಬ್ಬ.
ಹಾಗಂತ, ಜಗ್ಗೇಶ್ ಅದ್ಯಾವುದೋ ನಿರ್ಮಾಪಕನ ಜತೆ ಮಾತನಾಡುತ್ತಾ ದರ್ಶನ್ ಫ್ಯಾನ್ಸ್ ಬಗ್ಗೆ ಮಾತನಾಡಿದ್ದು ಸರಿ ಅಂತಲೂ ಅಲ್ಲ. ಅದು ಆಪ್ ದಿ ರೆಕಾರ್ಡ್ ಆದರೂ ಅದು ತಪ್ಪೇ. ಹಾಗೆಯೇ ಆ ಮಾತಿಗೆ ದರ್ಶನ್ ಅಭಿಮಾನಿಗಳನ್ನೆಲಾದವರು ಶೂಟಿಂಗ್ ಸ್ಥಳದಲ್ಲೇ ಜಗ್ಗೇಶ್ ಅವರಿಗೆ ಮುತ್ತಿಗೆ ಹಾಕಿ ಧಿಕ್ಕಾರ ಕೂಗುವ ಮೂಲಕ ಅಸಭ್ಯವಾಗಿ ನಡೆದುಕೊಂಡಿದ್ದು ಕೂಡ ಸರಿನಾ? ಎಲ್ಲದಕ್ಕೂ ಒಂದು ರೀತಿ ರಿವಾಜು ಅಂತೆಲ್ಲ ಇವೆ. ಅದೆಲ್ಲವನ್ನು ಮರೆತು ಹಾದಿ ರಂಪ, ಬೀದಿ ರಂಪ ಆಗಿ ಹೋಯಿತು ಆಡಿಯೋ ಸೋರಿಕೆ ಪ್ರಕರಣ. ಅದು ಇನ್ನೆಲ್ಲಿಗೆ ಹೋಗುತ್ತೋ, ಸದ್ಯಕ್ಕೆ ನಟ ದರ್ಶನ್ ಒಂದಷ್ಟು ವಿರಾಮ ಕೊಟ್ಟಿದ್ದಾರೆ. ಆದರೆ ಆಪ್ ದಿ ರೆಕಾರ್ಡ್ ಅಂತ ಒಂಥರದ ನಂಬಿಕೆಯಲ್ಲಿಜಗ್ಗೇಶ್ ಹಗುರವಾಗಿ ಆಡಿದ ಮಾತುಗಳನ್ನು ಬೀದಿಗೆ ತಂದ ಆ ಮಹಾಶಯರು ಮಾಡಿದ ಘನ ಕಾರ್ಯ ಸಮಾಜದ ಸ್ವಾಸ್ಥ್ಯ ಕ್ಕೆ ಪೂರಕವಾಗಿದೆಯೇ ಅಂತ ಒಮ್ಮೆ ಎಲ್ಲರೂ ಯೋಚಿಸಬೇಕಿದೆ.
ಕೆಲವರಿಗೆ ಒಂದು ತೆವಲು ಇರುತ್ತದೆ. ಒಬ್ಬರನ್ನು ಇನ್ನೊಬ್ಬರ ಮೇಲೆ ತಂದಿಕ್ಕುವುದು, ಆ ಮೂಲಕ ತಮ್ನ ಸ್ವಾರ್ಥದ ಬೆಳೆ ಕಾಳು ಬೇಯಿಸಿಕೊಳ್ಳುವುದು. ಅದೇ ಸಾಲಿನಲ್ಲಿ ಇವನು ಕೂಡ. ಜತೆಗೆ ಆತನಿಗೆ ಸಾಥ್ ಕೊಟ್ಟವನು ಕೂಡ. ಇವರೆಲ್ಲ ಮೀರ್ ಸಾಧಿಕ್ ಸಂಸ್ಕೃತಿಗೆ ಸೇರಿದವರು. ನೀವೇ ಹೇಳಿ, ಇನ್ನು ಮೇಲೆ ನೀವು ಆತನ ಜತೆಗೆ ನೇರವಾಗಿಯೋ ಇಲ್ಲವೇ ಫೋನ್ ಮೂಲಕವೋ ಕಾನ್ಪಿಡೆನ್ಸಿಯಲ್ ಮ್ಯಾಟರ್ ಹಂಚಿಕೊಳ್ಳಲು ಸಾಧ್ಯವೇ? ಆತನದ್ದು ಸರಿ ಅಂತ ಒಪ್ಪಿಕೊಳ್ಳುವುದಾದರೆ ಸಮಾಜದಲ್ಲಿ ಯಾರ ಮೇಲೆ ನಂಬಿಕೆ ಇಡುವುದು? ಕಷ್ಟ- ಸುಖ ಅಂತ ಹೇಗೆಹಂಚಿಕೊಂಡು ಮನಸು ಹಗುರ ಮಾಡಿಕೊಳ್ಳುವುದು? ಚಿತ್ರೊಧ್ಯಮ ಕೂಡ ಇಂತಹ ಚಾಡಿಕೋರಬಕೆಟ್ ಗಿರಾಕಿಗಳ ಬಗ್ಗೆ ಎಚ್ಚರದಿಂದರಲಿ.