ಬದಲಾವಣೆ ಬಯಸೋದಲ್ಲ, ನಾವು ಬದಲಾಗಬೇಕು… ಮುಂದುವರೆದ ಅಧ್ಯಾಯ ಡೈಲಾಗ್ ಟೀಸರ್‌ ಗೆ ಭರಪೂರ ಮೆಚ್ಚುಗೆ

ನಟ ಆದಿತ್ಯ ಅಭಿನಯದ “ಮುಂದುವರೆದ ಅಧ್ಯಾಯ” ಚಿತ್ರ ಇನ್ನೇನು ಬಿಡುಗಡೆಗೆ ರೆಡಿಯಾಗುತ್ತಿದೆ. ಅದಕ್ಕೂ ಮೊದಲು ಚಿತ್ರ ಈಗ ಜೋರು ಸದ್ದು ಮಾಡುತ್ತಿದೆ. ಅದಕ್ಕೆ ಕಾರಣ, ಚಿತ್ರದ ಡೈಲಾಗ್‌ ಟೀಸರ್.‌ ಹೌದು, ಚಿತ್ರದ ಡೈಲಾಗ್‌ ಟೀಸರ್‌ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಬಿಡುಗಡೆ ಮಾಡಿದ ಕೆಲವೇ ಗಂಟೆಗಳಲ್ಲಿ ಲಕ್ಷಗಟ್ಟಲೆ ವೀಕ್ಷಣೆ ಪಡೆದು, ಎಲ್ಲೆಡೆಯಿಂದಲೂ ಮೆಚ್ಚುಗೆ ಪಡೆಯುತ್ತಿದೆ. ಬಾಲು ಚಂದ್ರಶೇಖರ್ ನಿರ್ದೇಶನದ ಮೊದಲ ಚಿತ್ರವಿದು. ಇನ್ನು ‌ಕಣಜ‌ ಎಂಟರ್ಪ್ರೈಸಸ್ ನಿರ್ಮಾಣದ ಈ ಚಿತ್ರಕ್ಕೆ ಆದಿತ್ಯ ಹೀರೋ.

ಉಳಿದಂತೆ ಚಿತ್ರದಲ್ಲಿ ಮುಖ್ಯಮಂತ್ರಿ ಚಂದ್ರು, ಜೈ ಜಗದೀಶ್‌, ಸಂದೀಪ್‌ ಕುಮಾರ್‌, ಅಜಯ್‌ ರಾಜ್‌, ಚಂದನ ಗಡ, ಆಶಿಕಾ ಸೋಮಶೇಖರ್‌, ವಿನಯ್‌ ಕೃಷ್ಣಸ್ವಾಮಿ, ವಿನೋದ್‌, ಶೋಭನ್‌ ಇತರರು ನಟಿಸಿದ್ದಾರೆ. ಅನೂಪ್ ಸೀಳಿನ್ ಹಿನ್ನಲೆ‌ ಸಂಗೀತವಿದೆ. ಜಾನಿ ನಿತಿನ್ ಸಂಗೀತ ನೀಡಿದ್ದಾರೆ. ದಿಲೀಪ್ ಛಾಯಾಗ್ರಹಣವಿದೆ. “ಉಗ್ರಂ” ಶ್ರೀಕಾಂತ್ ಸಂಕಲನ ಮಾಡಿದ್ದಾರೆ. ಚಿತ್ರ ಈಗಾಗಲೇ ಬಿಡುಗಡೆಗೆ ಸಜ್ಜಾಗಿದ್ದು, ಮಾರ್ಚ್ 18ರಂದು ಬಿಡುಗಡೆಯಾಗಲಿದೆ.


ಸದ್ಯಕ್ಕೆ ಡೈಲಾಗ್‌ ಟೀಸರ್‌ಗೆ ಸಿಕ್ಕಾಪಟ್ಟೆ ಮೆಚ್ಚುಗೆ ಸಿಗುತ್ತಿದೆ. ಅದಕ್ಕೆ ಕಾರಣ ಡೈಲಾಗ್ಸ್ ಹಾಗೂ ಹಿನ್ನಲೆ‌ ಸಂಗೀತ. ಅಲ್ಲಿರುವ ಒಂದಷ್ಟು ಡೈಲಾಗ್‌ ಬಗ್ಗೆ ಹೇಳುವುದಾದರೆ, “ನಾವೇ ಗೆಲ್ಲಿಸಿದ ರಾಜಕಾರಣಿಗಳನ್ನ ಬೈತೀವಿ, ನಮ್ಮನ್ನ ಕಾಯೋ ಪೊಲೀಸರನ್ನ ಬೈತೀವಿ, ಸುದ್ದಿ ಮುಟ್ಟಿಸೋ ವಾಹಿನಿಗಳನ್ನ ಬೈತೀವಿ, ಕಷ್ಟ ನಿವಾರಿಸೋ ಡಾಕ್ಟರ್‌ಗಳನ್ನ ಬೈತೀವಿ, ಅನ್ನ ಹಾಕೋ ರೈತ, ಪಾಠ ಮಾಡೋ ಮೇಷ್ಟ್ರು , ಊಟ ಕೊಡೊ ಹೋಟ್ಲು, ಮನೆ ತಲುಪಿಸೋ ಡ್ರೈವರ್ , ನಮ್ಮನ್ನ ತಿದ್ದೋ ಕಲಾವಿದ ಹೀಗೆ … ಎಲ್ಲರನ್ನೂ ಬೈತಿವಿ. ಆದರೆ ನಾವೂ ಇವ್ರಲ್ಲೇ ಒಬ್ಬರಾಗಿದಿವಿ ಅನ್ನೋದೇ ಮರೀತಿವಿ. ಬದಲಾವಣೆ ಬಯಸುವುದಲ್ಲ. ನಾವು ಬದಲಾಗೋದು.

ಎಷ್ಟೋ ಕ್ರೈಂ ಕಥೆಗಳ ನಡುವೆ ಒಂದು ಕ್ರಾಂತಿಯ ಕಥೆ… ಈ ನನ್ನ ಮುಂದುವರೆದ ಅಧ್ಯಾಯ” ಹೀಗೆ ಸಾಗುವ ಡೈಲಾಗ್‌ ಟೀಸರ್‌ನಲ್ಲಿ ಒಂದಷ್ಟು ವಿಷಯವಿದೆ ಅನ್ನುವುದಂತೂ ನಿಜ. ಈ ಡೈಲಾಗ್‌ ಟೀಸರ್‌ ನೋಡಿದವರಿಗೆ ಸಿನಿಮಾ ನೋಡಲೇಬೇಕು ಎಂಬಷ್ಟರಮಟ್ಟಿಗೆ ಕುತೂಹಲ ಮೂಡಿಸಿರುವುದಂತೂ ದಿಟ.

Related Posts

error: Content is protected !!