ಸಾಮೂಹಿಕ ವಿವಾಹದ ಹಾಗೆ ಕಲಾವಿದರಿಗೆ ಪ್ರಶಸ್ತಿ ನೀಡುವುದು ಬೇಡ- ಹಿರಿಯ ನಟಿ ಜಯಮಾಲಾ ಬೇಸರ ವ್ಯಕ್ತಪಡಿಸಿದ್ದೇಕೆ?

ಕಲಾವಿದರಿಗೆ ನೀಡುವ ಪ್ರಶಸ್ತಿ ಪ್ರದಾನ ಸಮಾರಂಭಗಳು ಸಾಮೂಹಿಕ ವಿವಾಹದ ಹಾಗೆ ಆಗುವುದು ಬೇಡ. ಆ ಪ್ರಶಸ್ತಿಗಳಿಗೂ ಒಂದು ಘನತೆ, ಗೌರವ ಬರಬೇಕಾದರೆ ಆಯಾ ವರ್ಷದ ಪ್ರಶಸ್ತಿಗಳನ್ನು ಅಂದೇ ನೀಡಿ… – ಹೀಗಂತ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದು ಹಿರಿಯ ನಟಿ ಹಾಗೂ ಮಾಜಿ ಸಚಿವೆ ಡಾ. ಜಯಮಾಲಾ. ಸಿನಿಮಾ ಪತ್ರಕರ್ತರು ನೀಡುವ ಚಂದನವನ ಫಿಲ್ಮ್‌ ಕ್ರಿಟಿಕ್ಸ್‌ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾನುವಾರ ಅವರು ಭಾಗವಹಿಸಿ ಮಾತನಾಡಿದರು.

ರಾಷ್ಟ್ರ ಅಥವಾ ರಾಜ್ಯದಲ್ಲಿರುವ ಸಾಹಿತಿಗಳು, ಕಲಾವಿದರು ಜತೆಗೆ ಎಲ್ಲಾ ಕಲಾ ಪ್ರಕಾರಗಳೇ ನಿಜವಾದ ಅಮೂಲ್ಯ ಸಂಪತ್ತು.ಅವರನ್ನೇ ನಾವು ಗುರುತಿಸದೆ ಹೋದರೆ, ಆಯಾ ವರ್ಷದಲ್ಲಿ ಅವರಿಗೆ ಪ್ರಶಸ್ತಿ ನೀಡದೆ ಹೋದರೆ ನಿಜವಾದ ಪರಿಸ್ಥಿತಿ ಏನು? ಆಯಾ ವರ್ಷದ ಪ್ರಶಸ್ತಿ ಆಯಾ ವರ್ಷದಲ್ಲೇ ಕೊಡದೆ ಹೋದರೆ ಸಾಮೂಹಿಕ ವಿವಾಹದ ಹಾಗೆ ಎಲ್ಲರೂ ಒಂದೇ ವೇದಿಕೆಗೆ ಬಂದು ಪ್ರಶಸ್ತಿ ಜತೆಗೆ ಹಾರ ಹಾಕಿಸಿಕೊಂಡು ಅಲ್ಲಿಯೇ ಅವುಗಳನ್ನು ತೆಗೆದು ಬಿಸಾಕಿ ಹೋಗಬೇಕಾಗುತ್ತದೆ. ಆ ಹಿನ್ನೆಲೆಯಲ್ಲಿ ಸರ್ಕಾರಗಳು ಆಯಾ ವರ್ಷದ ಪ್ರಶಸ್ತಿಗಳನ್ನು ಅಂದೇ ಕೊಟ್ಟರೆ ಒಳ್ಳೆಯದು ಅಂತ ನಟಿ ಜಯಮಾಲ ಸಲಹೆ ಕೊಟ್ಟರು.ಚಂದನವನ ಫಿಲ್ಸ್‌ ಕ್ರಿಟಿಕ್ಸ್‌ ಅಕಾಡೆಮಿ ಕಾರ್ಯಕ್ಕೆ ಮೆಚ್ಚಿಗೆ ವ್ಯಕ್ತಪಡಿಸಿದ ಅವರು, ಸರ್ಕಾರಗಳು ಮಾಡದ ಕೆಲಸವನ್ನು ಚಂದನವನ ಮಾಡುತ್ತಿದೆ. ಆಯಾ ವರ್ಷದ ಪ್ರಶಸ್ತಿಗಳಿಗೆ ಅಂದೇ ಕಲಾವಿದರನ್ನು ಗುರುತಿಸುವ ಕೆಲಸ ಆಗಬೇಕು. ಆಗ ಮಾತ್ರ ಪ್ರಶಸ್ತಿಗೂ ಗೌರವ ಬರುತ್ತೆ, ಜತೆಗೆ ಪ್ರಶಸ್ತಿ ಸ್ವೀಕರಿಸಿದವರಿಗೂ ಆದ್ಯತೆ ಸಿಗುತ್ತದೆ. ಈ ನಿಟ್ಟಿನಲ್ಲಿ ಚಂದನವನ ಫಿಲ್ಮ್‌ ಕ್ರಿಟಿಕ್ಸ್‌ ಅವಾರ್ಡ್‌ ಕಾರ್ಯಕ್ರಮ ಖುಷಿ ತಂದಿದೆ ಎಂದರು. ಇದೇ ವೇಳೆ ಚಂದನವನ ಫಿಲ್ಮ್‌ ಕ್ರಿಟಿಕ್ಸ್‌ ಅಕಾಡೆಮಿ ನೀಡುವ ಈ ವರ್ಷದ ಅತ್ಯುತ್ತಮ ಪೋಷಕ ಪ್ರಶಸ್ತಿಗೆ ಪಾತ್ರವಾದ ನಟ ಅಚ್ಯುತ್‌ ಕುಮಾರ್‌ ಅವರಿಗೆ ಅಕಾಡೆಮಿ ಪರವಾಗಿ ಪ್ರಶಸ್ತಿ ನೀಡಿ ಗೌರವಿಸಿದರು. ಹಿರಿಯ ಪತ್ರಕರ್ತ ಕೆ.ಜೆ ಕುಮಾರ್‌ ಪ್ರಶಸ್ತಿ ವಿಜೇತ ಕಲಾವಿದರ ಹೆಸರು ಪ್ರಕಟಿಸಿದರು. ಜಿಮ್‌ ರವಿ ಕೂಡ ಹಾಜರಿದ್ದರು.

Related Posts

error: Content is protected !!