ಮನುಷ್ಯನಲ್ಲದ ಸಿಂಬನಿಗೂ ಸಿಕ್ತು ಸಿನಿಮಾ ಪ್ರಶಸ್ತಿ, ಹೊಸ ದಾಖಲೆ ಬರೆಯಿತು ಚಂದನವನ ಫಿಲ್ಮ್‌ ಕ್ರಿಟಿಕ್ಸ್‌ ಅಕಾಡೆಮಿ !

ಭಾರತೀಯ ಚಿತ್ರರಂಗದಲ್ಲೇ ಬಹುಶಃ ಇದು ಮೊದಲು. ಯಾಕಂದ್ರೆ, ಪ್ರಶಸ್ತಿ-ಪುರಸ್ಕಾರಗಳು ಅಂದ್ರೆ ಸಾಮಾನ್ಯವಾಗಿ ಮನುಷ್ಯರಿಗೆ ಮಾತ್ರವೇ ಎನ್ನುವುದು ನಿಮ್ಗೂ ಗೊತ್ತು. ಯಾವುದೇ ಕ್ಷೇತ್ರವಾಗಿರಲಿ ಅಲ್ಲಿ ಸಾಧನೆ ಮಾಡಿದವರಿಗೆ ಸಭೆ-ಸಮಾರಂಭಗಳಲ್ಲಿ ಪ್ರಶಸ್ತಿ ನೀಡಿ ಗೌರವಿಸುವುದು ಸರ್ವೇ ಸಾಮಾನ್ಯ. ಆದರೆ ಇಲ್ಲಿ ಸಿನಿಮಾದಲ್ಲಿ ಕಾಣಸಿಕೊಂಡ ಒಂದು ನಾಯಿಗೆ ವೇದಿಕೆ ಮೇಲೆಯೇ ಪ್ರಶಸ್ತಿ ನೀಡಿ ಗೌರವಿಸಿದ್ದು ತೀರಾ ತೀರಾ ಸ್ಪೆಷಲ್.‌

ಹೌದು, ಇಂತಹದೊಂದು ವಿಶೇಷತೆಗೆ ವೇದಿಕೆ ಆಗಿದ್ದು ಚಂದನವನ ಫಿಲ್ಮ್‌ ಕ್ರಿಟಿಕ್ಸ್‌ ಅವಾರ್ಡ್‌ ಪ್ರೋಗ್ರಾಮ್.‌ ಭಾನುವಾರ (ಫೆ. ೨೧) ಸಂಜೆ ಬೆಂಗಳೂರಿನ ಕಲಾವಿದರ ಸಂಘದ ರಾಜ್‌ ಕುಮಾರ್‌ ಸಭಾಂಗಣದಲ್ಲಿ ನಡೆದ ಚಂದನವನ ಫಿಲ್ಮ್‌ ಕ್ರಿಟಿಕ್ಸ್‌ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಅಲ್ಲಿ ಪ್ರೇಕ್ಷಕರ ಕಣ್ಮನ ಸೆಳೆದಿದ್ದು ನಾಯಿ ಸಿಂಬ. ಇದುʼ ನಾನು ಮತ್ತು ಗುಂಡ ʼಚಿತ್ರದಲ್ಲಿ ಕಾಣಿಸಿಕೊಂಡವನು ಇದೇ ನಾಯಿ ಸಿಂಬಾ.

ಗ್ರಹಿಕೆಯಲ್ಲಿ ನಾಯಿ ಮುಂಚೂಣಿಯ ಪ್ರಾಣಿ. ಗೊತ್ತಿಲ್ಲ, ತನಗೆ ಚಂದನವನ ಫಿಲ್ಮ್‌ ಕ್ರಿಟಿಕ್ಸ್‌ ಅವಾರ್ಡ್‌ ಸಿಗಬಹುದು ಅನ್ನೋದು ಅದಕ್ಕೆ ಮೊದಲೇ ಗೊತ್ತಿತ್ತೋ ಏನೋ.. ಸಿಂಬಾ ಅವಾರ್ಡ್‌ ಘೋಷಣೆಗೂ ಮೊದಲೇ ಸಭಾಂಗಣಕ್ಕೆ ಹಾಜರಿದ್ದ. ಅದರ ಸುತ್ತ ಮುತ್ತ ಇಬ್ಬರು ‌ ಟ್ರೈನರ್ಸ್‌ಗಳು. ಅವರ ಅಕ್ಕ ಪಕ್ಕ ನೋಡುಗರು. ಮಜಾವಾಗಿತ್ತು ಸಿಂಬಾ ಎಂಟ್ರಿ.  ಆನಂತರದ್ದು ಇನ್ನೊಂದು ನೋಟ.ಮನುಷ್ಯತೇರ ಅವಾರ್ಡ್‌ ವಿಭಾಗದಲ್ಲಿ ಸಿಂಬಾ ನಿಗೆ ವೇದಿಕೆ ಮೇಲೆ ಪ್ರಶಸ್ತಿ ಘೋಷಿಸಲಾಯಿತು. ಪ್ರೇಕ್ಷಕರಿಗೆಲ್ಲ ಅಚ್ಚರಿ, ಸೋಜಿಗ. ಅಬ್ಬಾ ಇದೊಂದು ಒಳ್ಳೆಯ ಕೆಲಸ ಅಂತ ಎಲ್ಲರಿಂದಲೂ ಮೆಚ್ಚುಗೆ ಮಾತು. ಅಲಲ್ಲಿ ಗುಸು ಗುಸು ಕೇಳಿಸಿತು. ಕೊನೆಗೆ ಸಿಂಬಾಗೆ ಪ್ರಶಸ್ತಿ ಘೋಷಿಸಲು ಕ್ರಿಟಿಕ್ಸ್‌ ಅಕಾಡೆಮಿಯ ಶಾಮ್‌ ಬಂದರು. ಆಗ ಸಿಂಬಾ ವೇದಿಕೆ ಬಂದಿದ್ದೇ ಅದ್ಭುತವಾಗಿತ್ತು. ಕಪ್ಪು  ಕಲರ್‌‌ ಧರಿಸಿ ಮಿಂಚುತ್ತಿದ್ದ ಸಿಂಬಾ. ಆ ಮೇಲೆ ಅದಕ್ಕೆ ಪ್ರಶಸ್ತಿ ನೀಡಲು ಹಿರಿಯ ನಟಿ ಜಯಮಾಲಾ, ನಟ ಸಂಚಾರಿ ವಿಜಯ್‌ ಬಂದರು. ಅವರಿಬ್ಬರು ಕೊಟ್ಟ ಪ್ರಶಸ್ತಿಯನ್ನು ಸಿಂಬಾನ ಪರವಾಗಿ ಇಬ್ಬರು ಟ್ರೈನರ್ಸ್‌ ಹಾಗೂ ನಾನು ಮತ್ತು ಗುಂಡ ಚಿತ್ರದ ನಿರ್ದೇಶಕ ಶ್ರೀನಿವಾಸ್‌ ತಿಮ್ಮಯ್ಯ ವೇದಿಕೆ ಮೇಲಿದ್ದು ಪ್ರಶಸ್ತಿ ಸ್ವೀಕರಿಸಿದರು.

ಮುದ್ದಾದ ಸಿಂಬಾನಿಗೆ ಬಾ …ಮಗ ಅಂತಲೇ ಕರೆದು ಮುದ್ದು ಮಾಡಿದ ಜಯಮಾಲಾ ಅವರು, ಇದೊಂದು ವಿಶೇಷವಾದ ಸಂದರ್ಭ ಅಂತ ಪುಳಕಿಗೊಂಡರು. ಆನಂತರ ನಾನು ಮತ್ತು ಗುಂಡ ಚಿತ್ರದ ನಿರ್ದೇಶಕ ಶ್ರೀನಿವಾಸ್‌ ತಿಮ್ಮಯ್ಯ ಮಾತನಾಡಿ, ಈ ನಾಯಿಯನ್ನು ಸಿನಿಮಾಕ್ಕೆ ಸೆಲೆಕ್ಟ್‌ ಮಾಡಿಕೊಂಡಿದ್ದರ ಹಿನ್ನೆಲೆ ವಿವರಿಸಿದರು. “ ಇವತ್ತು ನಾಯಿಗೆ ಇರುವ ನಿಯತ್ತು ಮನುಷ್ಯನಿಗಿಲ್ಲ, ಆದ್ದರಿಂದ ಸಿನಿಮಾರಂಗದಲ್ಲಿ ಹೊಸ ರೀತಿಯ ಪ್ರಯೋಗ ಮಾಡೋಣ ಅಂತ ಯೋಚನೆಗೆ ಬಂದಿತ್ತು. ಮೂಖಪ್ರಾಣಿ ನಾಯಿಯನ್ನು ಬಳಸಿಕೊಂಡು ಸಿನಿಮಾ ಮಾಡಿದರೆ ಎಮೋಷನಲ್‌ ಆಗಿ ಜನರನ್ನು ತಲುಪಬಹುದು ಅನ್ನುವ ದೃಷ್ಟಿಯಿಂದ ಸಿನಿಮಾ ಹೊರ ತಂದೆವು. ಅದೇ ಕಾರಣಕ್ಕೆ ಜನ ಸಿನಿಮಾ ಮೆಚ್ಚಿಕೊಂಡರು. ಅದೇ ಕಾರಣಕ್ಕೆ ಈ ವೇದಿಕೆ ಏರುವ ಸಂದರ್ಭವೂ ಬಂತು ಎಂದು ಭಾವುಕರಾದರು.

Related Posts

error: Content is protected !!