ಹೋಮ ನಡೆಸುವ ಬ್ರಾಹ್ಮಣನ ಹೆಗಲ ಮೇಲೆ ಧ್ರುವ ಸರ್ಜಾ ಕಾಲಿಟ್ಟಿದ್ದು ಸರಿನಾ?

ಧ್ರುವ ಸರ್ಜಾ ನಟನೆಯ ಅದ್ಧೂರಿ ‘ಪೊಗರು’ ಚಿತ್ರದಲ್ಲಿ ಬ್ರಾಹ್ಮಣ ಜನಾಂಗದವರನ್ನು ಅವಹೇಳನ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಆರೋಪಿಸಿತ್ತು. ಚಿತ್ರದಲ್ಲಿನ ಅಂತಹ ದೃಶ್ಯಗಳನ್ನು ತೆಗೆಯಬೇಕು ಮತ್ತು ಚಿತ್ರತಂಡ ಕ್ಷಮೆಯಾಚಿಸಬೇಕು ಎಂದು ಮಂಡಳಿ ಆಗ್ರಹಿಸಿತ್ತು. ಇದೀಗ ಚಿತ್ರದ ನಿರ್ದೇಶಕ ನಂದಕಿಶೋರ್‌ ಕ್ಷಮೆಯಾಚಿಸಿದ್ದಾರೆ.

“ಪೊಗರು ಚಿತ್ರದಲ್ಲಿ ಹೋಮ ನಡೆಸುತ್ತಿರುವ ಬ್ರಾಹ್ಮಣ ವ್ಯಕ್ತಿಯ ಹೆಗಲ ಮೇಲೆ ನಾಯಕನಟ ಕಾಲಿಡುತ್ತಾನೆ. ಅಲ್ಲದೆ ಬ್ರಾಹ್ಮಣ ಸಮುದಾಯದ ವ್ಯಕ್ತಿಗಳಾಗಿ ತೋರಿಸಿರುವ ಪಾತ್ರಗಳ ಬಗ್ಗೆ ಹಗುರವಾದ ಸಂಭಾಷಣೆಗಳಿವೆ” ಎಂದು ಬ್ರಾಹ್ಮಣ ಅಭಿವೃದ್ಧಿ ಮಂಡಳಿ ರಾಜ್ಯಾಧ್ಯಕ್ಷ ಸಚ್ಚಿದಾನಂದ ಮೂರ್ತಿ ಪ್ರಸ್ತಾಪಿಸಿತ್ತು. ಈ ಕುರಿತಾಗಿ ಸೋಷಿಯಲ್ ಮೀಡಿಯಾದಲ್ಲೂ ಹತ್ತಾರು ಪೋಸ್ಟ್‌ಗಳು ಹರಿದಾಡಿದ್ದವು. ಚಿತ್ರತಂಡ ಸ್ಪಂದಿಸದಿದ್ದರೆ ರಾಜ್ಯಾದ್ಯಾಂತ ಹೋರಾಟ ನಡೆಸುವುದಾಗಿ ಸಚ್ಚಿದಾನಂದ ಮೂರ್ತಿ ಎಚ್ಚರಿಕೆ ನೀಡಿದ್ದರು.

ಎಚ್ಚರಿಕೆಗೆ ಮಣಿದ ಚಿತ್ರದ ನಿರ್ದೇಶಕ ನಂದಕಿಶೋರ್‌, “ನಾವು ಬೇಕೆಂದೇ ಒಂದು ಜನಾಂಗಕ್ಕೆ ಧಕ್ಕೆ ತರುವ ಉದ್ದೇಶದಿಂದ ಸನ್ನಿವೇಶಗಳನ್ನು ಸೃಷ್ಟಿಸಿದ್ದಲ್ಲ. ಇದೊಂದು ಕಾಲ್ಪನಿಕ ಕತೆ. ಅರಿವಿಲ್ಲದೆ ಹೀಗಾಗಿದೆ, ಇದರಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ. ಈ ಸಿನಿಮಾಗೆ ಮೂರು ವರ್ಷ ವ್ಯಯಿಸಿದ್ದೇವೆ. ಕೋವಿಡ್ ನಂತರ ಬಿಡುಗಡೆಯಾಗುತ್ತಿರುವ ದೊಡ್ಡ ಚಿತ್ರವಿದು. ದೊಡ್ಡ ಮನಸ್ಸು ಮಾಡಿ ವಿವಾದ ನಿಲ್ಲಿಸಲು ಪ್ರಾರ್ಥಿಸುತ್ತೇನೆ” ಎಂದಿದ್ದಾರೆ.

Related Posts

error: Content is protected !!