ಮಾಡುವ ಮನಸ್ಸಿದ್ದರೆ ಏನ್‌ ಬೇಕಾದರೂ ಮಾಡಬಹುದು – ಚಂದನವನ ಪ್ರಶಸ್ತಿ ಪ್ರದಾನ ಸಮಾರಂಭವೇ ಇದಕ್ಕೆ ಸಾಕ್ಷಿ

ಪ್ರಶಸ್ತಿ ಅಂದರೆ, ಅದೊಂದು ಹೆಮ್ಮೆ. ಶ್ರಮಕ್ಕೆ ಸಿಗುವ ಪ್ರತಿಫಲ. ಜವಾಬ್ದಾರಿ ಹೆಚ್ಚಿಸುವ ಕೆಲಸ. ಇನ್ನಷ್ಟು ಹುಮ್ಮಸ್ಸು ತುಂಬುವ ಪದ. ಒಬ್ಬ ಸಾಧಕನನ್ನು ಗುರುತಿಸಿ, ಪ್ರಶಸ್ತಿ ಕೊಟ್ಟರೆ ಅದಕ್ಕೊಂದು ಅರ್ಥ. ಅಂತಹ ಅರ್ಥಪೂರ್ಣ ಕೆಲಸವನ್ನು “ಚಂದನವನ ಫಿಲ್ಮ್‌ ಕ್ರಿಟಿಕ್ಸ್‌ ಅಕಾಡೆಮಿ” ಮಾಡಿದೆ. ಹೌದು, ಎರಡನೇ ಕ್ರಿಟಿಕ್ಸ್‌ ಅವಾರ್ಡ್‌ ಕಾರ್ಯಕ್ರಮ ಅದ್ಧೂರಿಯಾಗಿಯೇ ನಡೆದಿದೆ. ಸಿನಿಮಾ ಪತ್ರಕರ್ತ ಮಿತ್ರರೆಲ್ಲರೂ ಸೇರಿ ಕೊಡುವ ಈ ಕ್ರಿಟಿಕ್ಸ್‌ ಅವಾರ್ಡ್‌ ಎರಡನೇ ವರ್ಷವೂ ಅದ್ಭುತ ಯಶಸ್ಸು ಗಳಿಸಲು ಕಾರಣ, ಚಂದದ ಆಯೋಜನೆ.

ಒಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹೇಗೆಲ್ಲಾ ರೂಪುಗೊಳ್ಳಬೇಕು ಎಂಬ ಅರಿವು ಇದ್ದುದರಿಂದಲೇ ಕನ್ನಡ ಚಿತ್ರರಂಗದ ಕೆಲ ನಟ,ನಟಿಯರು, ತಾಂತ್ರಿಕ ವರ್ಗದವರು, ಸಿನಿಮಾರಂಗದ ಗಣ್ಯರು ಸಿನಿಮಾ ಪತ್ರಕರ್ತರ ಕೆಲಸವನ್ನು ಗುಣಗಾನ ಮಾಡಿದರು. ಪ್ರಶಸ್ತಿಗೆ ಭಾಜನರಾಗಿ ಪ್ರಶಸ್ತಿಯನ್ನು ಖುಷಿಯಿಂದಲೇ ಸ್ವೀಕರಿಸಿದವರಿಂದಲೂ ಸಿನಿಮಾ ಪತ್ರಕರ್ತರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದರು.


ಪ್ರಶಸ್ತಿ ಪ್ರದಾನ ಮಾಡುವುದು ದೊಡ್ಡ ಕೆಲಸವೇನಲ್ಲ ಅಂದುಕೊಂಡವರು ಬಹಳಷ್ಟು ಜನ ಇದ್ದಾರೆ. ಆದರೆ, ಅದನ್ನು ಆಯೋಜನೆ ಮಾಡಿದವರಿಗಷ್ಟೇ ಅದರ ಆಳ, ಅಳತೆ ಗೊತ್ತು. ಯಾವುದೇ ಪ್ರಶಸ್ತಿ ಪ್ರದಾನ ಕಾರ್ಯಕ್ರಮವಿದ್ದರೂ, ಒಂದಷ್ಟು ಗೊಂದಲಗಳು ಸಹಜ, ವಿರೋಧಗಳೂ ಸಾಮಾನ್ಯ. “ಚಂದನವನ ಫಿಲ್ಮ್‌ ಕ್ರಿಟಿಕ್ಸ್‌ ಅಕಾಡೆಮಿʼ ಕೊಡುವ ಅವಾರ್ಡ್‌ ಕೂಡ ಇದಕ್ಕೆ ಹೊರತಲ್ಲ. ಇಷ್ಟೆಲ್ಲಾ ವಿವಾದಗಳಿದ್ದರೂ, ಎರಡನೇ ವರ್ಷದ ಕ್ರಿಟಿಕ್ಸ್‌ ಅವಾರ್ಡ್‌ ಯಶಸ್ವಿಯಾಗಿದೆ.

ರಾಜ್ಯ ಸರ್ಕಾರ ಕೊಡುವ ಸಿನಿಮಾ ಅವಾರ್ಡ್‌ ಕೂಡ ನಾಲ್ಕು ವರ್ಷಗಳಿಂದ ನಡೆಯದೇ ನಿಂತಿದೆ. ಇಂತಹ ಸಂದರ್ಭದಲ್ಲೂ ಸಿನಿಮಾ ಪತ್ರಕರ್ತರು ಸೇರಿ ಕೊಡುವ ಕ್ರಿಟಿಕ್ಸ್‌ ಅವಾರ್ಡ್‌ ಎರಡನೇ ವರ್ಷ ಪೂರೈಸಿದ್ದು ಹೆಗ್ಗಳಿಕೆ. ಮಾಡುವ ಮನಸ್ಸಿದ್ದರೆ ಏನ್‌ ಬೇಕಾದರೂ ಮಾಡಬಹುದು. ಹಣಕಾಸು ಮುಖ್ಯವಲ್ಲ. ಮಾಡಬೇಕು ಅಂತ ಡಿಸೈಡ್‌ ಮಾಡಿದರೆ, ಅದು ಹೇಗೋ ನಡೆದು ಬಿಡುತ್ತೆ. ಮೊದಲು ಮಾಡುವ ಮನಸ್ಸು ಬೇಕಷ್ಟೇ. ಇಲ್ಲೀಗ ಚಂದನವನ ಫಿಲ್ಮ್‌ ಅಕಾಡೆಮಿ ಮಾಡಿದ್ದೂ ಕೂಡ ಅದನ್ನೇ. ರಾಜ್ಯ ಸರ್ಕಾರ ಘೋಷಣೆ ಮಾಡುವ ಪ್ರಶಸ್ತಿ ವಿರುದ್ಧ ಒಂದಷ್ಟು ಮಂದಿ ಕೋರ್ಟ್‌ ಮೆಟ್ಟಿಲೇರುತ್ತಾರೆ. ಪ್ರಶಸ್ತಿ ಸಿಗದ ಕೆಲವರು ಸಹಿಸಿಕೊಳ್ಳದೆ ವಿವಾದ ಎಬ್ಬಿಸುತ್ತಾರೆ.

ಸರ್ಕಾರಕ್ಕೆ ಇಚ್ಛಾಶಕ್ತಿ ಇದ್ದರೆ, ಕೋರ್ಟ್‌ಗೊಂದು ಸ್ಪಷ್ಟನೆ ಕೊಟ್ಟು, ಕೆಲಸವನ್ನು ಮಾಡಿ ಮುಗಿಸಬೇಕು. ವರ್ಷಗಟ್ಟಲೆ ಪ್ರಶಸ್ತಿ ವಿತರಿಸದೆ ಸುಮ್ಮನಾದರೆ, ಅಂತಹ ಪ್ರಶಸ್ತಿಗಳಿಗೂ ಅರ್ಥ ಬರೋದಿಲ್ಲ. ಕೆಲವರ ಧೋರಣೆಯಿಂದಾಗಿ‌ ಪ್ರಶಸ್ತಿ ವಿಷಯ ಕೋರ್ಟ್ ಮೆಟ್ಟಿಲೇರುತ್ತೆ. ಇದು ಸಿನಿಮಾ ಪ್ರಶಸ್ತಿಗೆ ಸಂಬಂಧಿಸಿದ್ದಷ್ಟೇ ಅಲ್ಲ, ನೊಬೆಲ್‌ ಶಾಂತಿ ಪ್ರಶಸ್ತಿ ಇರಲಿ, ಜಾನಪೀಠ ಪ್ರಶಸ್ತಿ ಇರಲಿ, ಇನ್ಯಾವುದೇ ಪ್ರತಿಷ್ಠಿತ ಪ್ರಶಸ್ತಿಗಳೇ ಇರಲಿ, ವಿವಾದ ಇದ್ದೇ ಇರುತ್ತೆ. ಸಿನಿಮಾ ಪತ್ರಕರ್ತರು ಕೊಡುವ ಪ್ರಶಸ್ತಿಗಳಿಗೂ ಇಂತಹ ವಿವಾದ ಸಹಜವೇ. ಸಿನಿಮಾ ಪತ್ರಕರ್ತರು ಒಗ್ಗೂಡಿದ್ದರೂ, ಸಣ್ಣಪುಟ್ಟ ಸಮಸ್ಯೆಗಳಿವೆ. ಇದೆಲ್ಲದರ ಹೊರತಾಗಿಯೂ ಕ್ರಿಟಿಕ್ಸ್‌ ಅವಾರ್ಡ್‌ ಪಡೆದವರೆಲ್ಲರೂ ಒಂದಷ್ಟು ಭಾವುಕತೆಗೆ ಒಳಗಾದರು. ಅದಕ್ಕೆ ಕಾರಣವೂ ಇತ್ತು.

ರಘುಗೆ ಮೊದಲ ಅವಾರ್ಡ್

ಸಂಗೀತ ನಿರ್ದೇಶಕ, ಗಾಯಕ ರಘುದೀಕ್ಷಿತ್‌ ಅವರು ಈ ಬಾರಿ “ಲವ್‌ ಮಾಕ್ಟೇಲ್‌” ಚಿತ್ರದ ಸಂಗೀತಕ್ಕಾಗಿ ಅತ್ಯುತ್ತಮ ಸಂಗೀತ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಕ್ರಿಟಿಕ್ಸ್‌ ಅವಾರ್ಡ್‌ ಪಡೆದ ರಘುದೀಕ್ಷಿತ್‌, “ತನ್ನ ಜೀವಮಾನದ ಮೊದಲ ಪ್ರಶಸ್ತಿ ಇದು” ಎಂದು ಪ್ರೀತಿಯಿಂದಲೇ ಹೇಳಿಕೊಂಡರು. ರಘುದೀಕ್ಷಿತ್‌ ಒಳ್ಳೆಯ ಹಾಡುಗಾರ, ಸಂಗೀತ ನಿರ್ದೇಶಕ, ಆದರೆ, ಅವರಿಗೆ ಬೆಸ್ಟ್‌ ಮ್ಯೂಸಿಕ್‌ ಡೈರೆಕ್ಟರ್‌ ಅವಾರ್ಡ್‌ ಸಿಕ್ಕಿರಲಿಲ್ಲ. ಪತ್ರಕರ್ತರ ಕ್ರಿಟಿಕ್ಸ್‌ ಅವಾರ್ಡ್‌ ಸಿಕ್ಕ ಖುಷಿಯನ್ನು ಹಂಚಿಕೊಂಡರು. ಅವರಷ್ಟೇ ಅಲ್ಲ, ಅಂತಾರಾಷ್ಟ್ರೀಯ ಬಾಡಿಬಿಲ್ಡರ್ ಜಿಮ್‌ ರವಿ‌ ಕೂಡ ತಮ್ಮ ಸಂತಸ ಹಂಚಿಕೊಂಡರು. ” ಅವರು ಬಾಡಿಬಿಲ್ಡರ್‌ ಆಗಿ ದೇಶ ವಿದೇಶಗಳಲ್ಲಿ ಗೆಲುವು ಪಡೆದವರು. ಹಲವು ಚಿನ್ನದ ಪದಕ ತಂದವರು.

ಜಿಮ್‌ ರವಿಗೆ ಮೊದಲ ವೇದಿಕೆ

ಅಷ್ಟೇ ಅಲ್ಲ, ನೂರಾರು ಚಿತ್ರಗಳಲ್ಲಿ ಖಳನಟರಾಗಿ, ಪೋಷಕ ಕಲಾವಿದರಾಗಿ ನಟಿಸಿದವರು. ಕನ್ನಡ ಸೇರಿದಂತೆ ತೆಲುಗು, ತಮಿಳು ಚಿತ್ರಗಳಲ್ಲೂ ನಟಿಸಿದವರು. ಜಿಮ್‌ ರವಿ, ಅವರಿಗೆ ಕ್ರಿಟಿಕ್ಸ್‌ ಅವಾರ್ಡ್‌ ವೇದಿಕೆ ಸಿಕ್ಕಿದ್ದು ಅದೇ ಮೊದಲಂತೆ. ಯಾವ ವೇದಿಕೆಯೂ ಸಿಕ್ಕಿರಲಿಲ್ಲ. ಇದು ನನ್ನ ಮೊದಲ ವೇದಿಕೆ. ಈ ಮೂಲಕ ನಾನು ಒಂದು ಅವಾರ್ಡ್‌ ನೀಡುತ್ತಿದ್ದೇನೆ ಅಂದರೆ, ಅದು ಕ್ರಿಟಿಕ್ಸ್‌ ಅವಾರ್ಡ್‌ ಕಲ್ಪಿಸಿಕೊಟ್ಟ ಅವಕಾಶದಿಂದ ಮಾತ್ರ” ಎಂದು ಭಾವುಕರಾದರು.

ಜಾಲಿ ಬಾಸ್ಟಿನ್‌ಗೇ ಮೊದಲ ಪ್ರಶಸ್ತಿ

ಇನ್ನು, ಸ್ಟಂಟ್‌ ಮಾಸ್ಟರ್‌ ಜಾಲಿಬಾಸ್ಟಿನ್‌ ಅವರಿಗೂ “ಪಾಪ್‌ ಕಾರ್ನ್‌ ಮಂಕಿ ಟೈಗರ್‌” ಚಿತ್ರದ ಸಾಹಸ ಸಂಯೋಜನೆಗಾಗಿ ಅತ್ಯುತ್ತಮ ಸಾಹಸ ನಿರ್ದೇಶಕ ಪ್ರಶಸ್ತಿ ಲಭಿಸಿತು. ಪ್ರಶಸ್ತಿ ಸ್ವೀಕರಿಸಿದ ಅವರು, “ಸುಮಾರು ೯೦೦ ಚಿತ್ರಗಳಿಗೆ ಕೆಲಸ ಮಾಡಿದ್ದೇನೆ. ಈವರೆಗೂ ಬೆಸ್ಟ್‌ ಸ್ಟಂಟ್‌ ಮಾಸ್ಟರ್‌ ಅವಾರ್ಡ್‌ ಸಿಕ್ಕಿರಲಿಲ್ಲ. ಈಗ ಸಿನಿಮಾ ಪತ್ರಕರ್ತರು ಗುರುತಿಸಿ ಈ ಕ್ರಿಟಿಕ್ಸ್‌ ಅವಾರ್ಡ್‌ ನೀಡುತ್ತಿದ್ದಾರೆ. ಇದೊಂದು ಮರೆಯದ ಸಂಗತಿ ಅಂತ ಅವರೂ ಕೂಡ ಪ್ರಶಸ್ತಿ ಬಗ್ಗೆ ಕೊಂಡಾಡಿದರು.‌

ಸಿಂಬನಿಗೂ ಸ್ಪೆಷಲ್‌ ಅವಾರ್ಡ್

ಈ ವೇಳೆ ಪತ್ರಕರ್ತರು ಸೇರಿ ವಿಶೇಷ ಪ್ರಶಸ್ತಿಯೊಂದನ್ನು ಗುರುತಿಸಿ ಕೊಟ್ಟಿದ್ದು ವಿಶೇಷವೇ. ಸಾಮಾನ್ಯವಾಗಿ ಎಲ್ಲರೂ ನಟ,ನಟಿ, ಪೋಷಕ ಕಲಾವಿದರು, ತಾಂತ್ರಿಕ ವರ್ಗದವರಿಗೆ ಪ್ರಶಸ್ತಿ ಕೊಡುತ್ತಾರೆ. ಆದರೆ, ಪತ್ರಕರ್ತರು ಸೇರಿ ವಿಶೇಷ ಪ್ರಶಸ್ತಿ ನೀಡಿದ್ದು ಈ ಬಾರಿ ಗಮನಸೆಳೆಯಿತು. “ನಾನು ಮತ್ತು ಗುಂಡ” ಚಿತ್ರದಲ್ಲಿ ನಟಿಸಿದ್ದ ಸಿಂಬ ಎಂಬ ನಾಯಿಗೂ ಒಂದು ಪ್ರಶಸ್ತಿ ಕೊಟ್ಟು ಪ್ರೀತಿಗೆ ಪಾತ್ರವಾಯಿತು. ನಿಜಕ್ಕೂ ಇದೊಂದು ದಾಖಲೆಯೇ ಸರಿ. ಒಂದು ಪ್ರಾಣಿಯ ನಟನೆ ಗುರುತಿಸಿ, ಅದಕ್ಕೆ ತರಬೇತಿ ಕೊಟ್ಟವರನ್ನೂ ವೇದಿಕೆ ಕರೆದು ಪ್ರಶಸ್ತಿ ಕೊಟ್ಟಿದ್ದು ವಿಶೇಷವಾಗಿತ್ತು.

ಕ್ರಿಟಿಕ್ಸ್‌ ಅವಾರ್ಡ್‌ ಮುಂದಿನ ವರ್ಷ ಇನ್ನಷ್ಟು ವಿಶೇಷತೆಗಳೊಂದಿಗೆ ನಡೆಯಲಿದೆ. ಇದಕ್ಕೆ ಮುಂದಿನ ದಿನಗಳಲ್ಲಿ ಕನ್ನಡದ ಎಲ್ಲಾ ಸೆಲೆಬ್ರಿಟಿಗಳೂ, ಸಿನಿಮಾ ಮಂದಿ ಕೈ ಜೋಡಿಸಬೇಕು. ಇನ್ನು, ತಮ್ಮ ಪ್ರತಿಷ್ಠೆಗಳನ್ನು ಬದಿಗೊತ್ತಿ ಒಟ್ಟಿಗೆ ಕೆಲಸ ಮಾಡಿದರೆ, ಕ್ರಿಟಿಕ್ಸ್‌ ಅವಾರ್ಡ್‌ ಇನ್ನಷ್ಟು ಎತ್ತರಕ್ಕೆ ಹೋಗುವುದರಲ್ಲಿ ಅನುಮಾನವಿಲ್ಲ.

ಅಂದಹಾಗೆ, ಶ್ಯಾಮ್‌ ಪ್ರಸಾದ್‌, ಶರಣು ಹುಲ್ಲೂರು, ಶಶಿ ಪ್ರಸಾದ್‌, ಚಿತ್ರತಾರಾ ಮನು, ವಿಸಿಎನ್‌ ಮಂಜು, ಜಗದೀಶ್‌, ಮತ್ತು ಪತ್ರಕರ್ತ ಮಿತ್ರರು ಸೇರಿದಂತೆ ಪ್ರಚಾರಕರ್ತರಾದ ನಾಗೇಂದ್ರ, ಸುಧೀಂದ್ರ ವೆಂಕಟೇಶ್‌, ವಿಜಯಕುಮಾರ್‌, ವಾಸು ಕೂಡ ಕ್ರಿಟಿಕ್ಸ್‌ ಅಕಾಡೆಮಿಗೆ ಸಾಥ್‌ ನೀಡಿದ್ದರಿಂದ ಕಾರ್ಯಕ್ರಮ ಮತ್ತಷ್ಟು ರಂಗೇರಿತ್ತು.

Related Posts

error: Content is protected !!