ಮನರಂಜನೆ ಹಾಗೂ ಬಿಸಿನೆಸ್ ಆಚೆಗೂ ಸಿನಿಮಾ ಎನ್ನುವುದು ಪ್ರಯೋಗಾತ್ಮಕ ಕ್ಷೇತ್ರ. ಹೊಸಬರಿಗಂತೂ ಇದೊಂದು ಮೊದಲ ಆದ್ಯತೆಯೆ ಹೌದು. ಅಂತಹದೇ ಒಂದು ಪ್ರಯೋಗದ ಮೂಲಕ ಈಗ ಸ್ಯಾಂಡಲ್ ವುಡ್ ನಲ್ಲಿ ಸಖತ್ ಸೌಂಡ್ ಮಾಡಲು ರೆಡಿಯಾಗಿರುವ ಚಿತ್ರ “ರಕ್ತ ಗುಲಾಬಿʼ. ಚಿತ್ರದ ಶೀರ್ಷಿಕೆಯೇ ಹೇಳುವ ಹಾಗೆ ಇದು ಶುದ್ಧ ಲವ್ ಅಂಡ್ ಕ್ರೈಂ ಆಧರಿತ ಚಿತ್ರ. ಹೊಸಬರೇ ಇದರ ನಿರ್ಮಾಪಕರು. ಹಾಗೆಯೇ ನಿರ್ದೇಶಕರು ಕೂಡ. ಸದ್ಯಕ್ಕೆ ಚಿತ್ರ ರಿಲೀಸ್ ಗೆ ರೆಡಿಯಿದೆ.
ಮಾರ್ಚ್ 5 ಕ್ಕೆ ರಿಲೀಸ್ ದಿನಾಂಕ ಕೂಡ ಫಿಕ್ಸ್ ಆಗಿದೆ. ಈಗಷ್ಟೇ ಟೀಸರ್ ಹಾಗೂ ಟ್ರೇಲರ್ ಮೂಲಕ ಸೌಂಡ್ ಮಾಡುತ್ತಿರುವ ಚಿತ್ರ, ತನ್ನ ಸಿಂಗಲ್ ಟೆಕ್ ಜತೆಗೆ ವಿಭಿನ್ನ ಕಥಾ ಹಂದರದ ಮೂಲಕ ಕುತೂಹಲ ಮೂಡಿಸುತ್ತಿದೆ.
ಮೆಷೆನ್ಕಡ್ ಫಿಲಂಸ್ ಬ್ಯಾನರ್ ನಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ಯುವ ನಿರ್ದೇಶಕ ರಾಬಿ. ಚಿತ್ರಕ್ಕೆ ಅವರೇ ಕತೆ, ಚಿತ್ರಕತೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ರಾಬಿ ವೃತ್ತಿಯಲ್ಲಿ ಬ್ಯಾಂಕ್ ಉದ್ಯೋಗಿ. ಪ್ರವೃತ್ತಿಯಲ್ಲಿ ಸಿನಿಮಾ ಮೇಕರ್ಸ್. ಹಲವು ವರ್ಷಗಳಿಂದ ಕನ್ನಡ ಚಿತ್ರೋದ್ಯಮದಲ್ಲಿ ಕೆಲಸ ಮಾಡಿದ್ದಾರಂತೆ. ಅದೇ ಅನುಭವದಲ್ಲಿ ಈಗ ಸ್ವತಂತ್ರ ನಿರ್ದೇಶಕರಾಗಿ ʼರಕ್ತ ಗುಲಾಬಿʼ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿ, ಪ್ರೇಕ್ಷಕರ ಮುಂದೆ ತರಲು ರೆಡಿಯಾಗಿದ್ದಾರೆ. ಚಿತ್ರದ ತಾರಾಬಳಗದಲ್ಲೂ ಹೊಸ ಪ್ರತಿಭೆಗಳೇ ಇದ್ದಾರೆ. ವಿಕ್ರಮಾಧಿತ್ಯ ಹಾಗೂ ಶಿವಾನಿ ಚಿತ್ರದ ನಾಯಕ-ನಾಯಕಿ. ಅವರ ಪ್ರಕಾರ ಇದೊಂದು ಪಕ್ಕಾ ಎಂಟರ್ ಟೈನರ್ ಮೂವೀ.
ಚಿತ್ರದ ಟೀಸರ್ ಹಾಗೂ ಟ್ರೈಲರ್ ನೋಡಿದವರಿಗೆ ಇಲ್ಲೊಂದಿಷ್ಟು ರೋಚಕ ಸಂಗತಿಗಳಿವೆ. ಪ್ರೀತಿಸುವ ಒಂದು ಜೋಡಿ. ಅವರನ್ನು ಹಿಂಬಾಲಿಸಿ ಬಂದ ಒಂದು ಶಸ್ತ್ರ ಸಜ್ಜಿತ ಗುಂಪು, ಅವರನ್ನು ಹಿಂಬಾಲಿಸಿ ಬಂದ ಪೊಲೀಸು. ಇದೆಲ್ಲ ಕಾಡಿನ ನಡುವೆ ಕಾಣುವ ದೃಶ್ಯ. ಈ ದೃಶ್ಯ ನೋಡಿದರೆ ಸಹಜವಾಗಿಯೇ ಇದೊಂದು ನಕ್ಸಲ್ ಆಧರಿಸಿದ ಕತೆ ಎಂದೆನಿಸುವುದು ಸಹಜ. ಆದರೆ ಅಲ್ಲಿ ನಡೆಯುವುದೇ ಬೇರೆಯಂತೆ.” ಕಥಾ ನಾಯಕ ಗಣೇಶ್. ಆತ ತನ್ನ ಬಂಡಾಯದ ಸ್ವರೂಪದಿಂದ ಹೇಗಾದರೂ ಮಾಡಿ ವಿಮುಕ್ತಿ ಪಡೆಯಲು ಯತ್ನಿಸುತ್ತಾನೆ. ಅದೇ ವೇಳೆ ತಾನು ಇಷ್ಟ ಪಟ್ಟ ಹುಡುಗಿಯೊಂದಿಗೆ ಕಾಡು ತೊರೆದು ದೂರದೂರಿಗೆ ಹೊರಡುತ್ತಾನೆ. ಅಲ್ಲಿ ಅವನಿಗೆ ಕೆಲವು ಸವಾಲುಗಳಿವೆ. ಆತನನ್ನು ಹಿಂಬಾಲಿಸಿ ಕೆಲವರು ಬರುತ್ತಾರೆ. ಅದಕ್ಕಾಗಿ ಆತ ದಾರಿ ಬದಲಿಸುತ್ತಾನೆ. ಅಲ್ಲಿಂದ ಮುಂದೇವಾಗುತ್ತೆ ಎನ್ನುವುದು ಕತೆಯ ಸಸ್ಪೆನ್ಸ್ ವಿಷಯʼ ಎನ್ನುತ್ತಾರೆ ನಿರ್ದೇಶಕ ರಾಬಿ.
ಕತೆಯ ಕುತೂಹಲ ಒಂದೆಡೆಯಾದರೆ ಸಿಂಗಲ್ ಟೆಕ್ ಶೂಟ್ ಇದರ ಇನ್ನೊಂದು ವಿಶೇಷ. ಸುಮಾರು ೨ ಗಂಟೆಯಷ್ಟು ಅವದಿಯ ಇಡೀ ಸಿನಿಮಾ ಒಂದೇ ಟೆಕ್ ನಲ್ಲಿ ಶೂಟ್ ಆಗಿದೆ. ಈಗಾಗಲೇ ಇದು ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾಗಿದೆ. ಈ ಮೂಲಕ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ದಾಖಲೆಗಳ ಜತೆಗೆ ಫಿಲ್ಮ್ ಫೆಸ್ಟಿವೆಲ್ ಗಳಿಗೂ ಕಳುಹಿಸುವ ತವಕ ಚಿತ್ರ ತಂಡದಲ್ಲಿದೆ. ಸದ್ಯಕ್ಕೀಗ ರಿಲೀಸ್ ಸಿದ್ದತೆಯೊಂದಿಗೆ ಚಿತ್ರದ ತಂಡ ಸದ್ದು ಮಾಡಲು ರೆಡಿಯಾಗಿದೆ.