ವರುಣ್ ತೇಜ್ ನಾಯಕನಾಗಿ ನಟಿಸುತ್ತಿರುವ ‘ಗನಿ’ ತೆಲುಗು ಚಿತ್ರದಲ್ಲಿನ ನಟ ಉಪೇಂದ್ರ ಲುಕ್ ರಿವೀಲ್ ಆಗಿದೆ. ಕಿರಣ್ ಕೊರಪಾಟಿ ಚೊಚ್ಚಲ ನಿರ್ದೇಶನದ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಉಪ್ಪಿ ನಟಿಸುತ್ತಿದ್ದಾರೆ. ಚಿತ್ರೀಕರಣದ ನಿಮಿತ್ತ ಹೈದರಾಬಾದ್‌ನಲ್ಲಿರುವ ಉಪೇಂದ್ರರ ಲುಕ್ ರಿವೀಲ್ ಆಗಿದೆ. ಈ ಅದ್ಧೂರಿ ಸಿನಿಮಾದಲ್ಲಿ ವರುಣ್ ತೇಜ್ ಬಾಕ್ಸರ್ ಪಾತ್ರ ನಿರ್ವಹಿಸಲಿದ್ದಾರೆ. ಉಪೇಂದ್ರರಿಗೆ ಬಾಕ್ಸಿಂಗ್ ಕೋಚ್ ಪಾತ್ರ ಎಂದು ಮೂಲಗಳು ಹೇಳುತ್ತವೆಯಾದರೂ ಅಧಿಕೃತ ಮಾಹಿತಿ ಸಿಕ್ಕಿಲ್ಲ.
ದುಬಾರಿ ಬಜೆಟ್‌ನಲ್ಲಿ ತಯಾರಾಗುತ್ತಿರುವ ‘ಗನಿ’ಯಲ್ಲಿ ಜಗಪತಿ ಬಾಬು, ಬಾಲಿವುಡ್ ನಟ ಸುನೀಲ್ ಶೆಟ್ಟಿ ನಟಿಸುತ್ತಿದ್ದಾರೆ. ಸಾಹಿ ಮಂಜ್ರೇಕರ್ ಚಿತ್ರದ ನಾಯಕಿ. ಆರು ವರ್ಷಗಳ ಹಿಂದೆ ತೆರೆಕಂಡ ಅಲ್ಲು ಅರ್ಜುನ್ ನಟನೆಯ ‘ಸನ್ ಆಫ್ ಸತ್ಯಮೂರ್ತಿ’ ಚಿತ್ರದಲ್ಲಿ ಉಪೇಂದ್ರ ನಟಿಸಿದ್ದರು. ಇದೀಗ ‘ಗನಿ’ಯೊಂದಿಗೆ ಮತ್ತೆ ತೆಲುಗು ಬೆಳ್ಳಿತೆರೆಗೆ ಹೋಗಿದ್ದಾರೆ.
ತೆಲುಗು ನಾಡಿನಲ್ಲೂ ಅಭಿಮಾನಿಗಳನ್ನು ಹೊಂದಿರುವ ಉಪೇಂದ್ರರ ಹಲವಾರು ಕನ್ನಡ ಚಿತ್ರಗಳು ತೆಲುಗಿಗೆ ರೀಮೇಕ್ ಆಗಿವೆ. ಇನ್ನು ಅವರ ಪ್ಯಾನ್ ಇಂಡಿಯಾ ‘ಕಬ್ಜ’ ಸಿನಿಮಾದ ಕೆಲಸಗಳೂ ಚಾಲ್ತಿಯಲ್ಲಿವೆ.