ರೈತರ ಹೋರಾಟ ಬೆಂಬಲಿಸಿ ಟೂಲ್ಕಿಟ್ ಸೃಷ್ಟಿ ಮಾಡಿದ ಆರೋಪದಡಿ ಬಂಧಿತರಾಗಿರುವ ದಿಶಾ ರವಿ ಬೆಂಬಲಿಸಿ ನಟಿ ರಮ್ಯಾ ಇನ್ಸ್ಟಾಗ್ರಾಂ ಪೋಸ್ಟ್ ಹಾಕಿದ್ದಾರೆ. ಈ ಸುದೀರ್ಘ ಪತ್ರದಲ್ಲಿ ರಮ್ಯಾ ಅವರು ಕೇಂದ್ರ ಸರ್ಕಾರದ ನಿಲುವನ್ನು ಪ್ರಶ್ನಿಸುತ್ತಲೇ ನಾಗರಿಕರ ಜವಾಬ್ದಾರಿಯನ್ನೂ ನೆನಪು ಮಾಡಿದ್ದಾರೆ.
21ರ ಹರೆಯದ ಬೆಂಗಳೂರಿನ ಯುವತಿ ದಿಶಾ ರವಿ ಅವರನ್ನು ಮೊನ್ನೆ ದಿಲ್ಲಿ ಪೊಲೀಸರು ಬಂಧಿಸಿದ ಕರೆದೊಯ್ದಿದ್ದಾರೆ. ರೈತರ ಹೋರಾಟಕ್ಕೆ ಸಂಬಂಧಿಸಿದಂತೆ ಜಾಗತಿಕ ಹೋರಾಟಗಾರರಿಗೆ ಟೂಲ್ಕಿಟ್ನೊಂದಿಗೆ ನೆರವಾಗಿದ್ದಾರೆ ಎನ್ನುವ ಆರೋಪ ಅವರ ಮೇಲಿದೆ. ದಿಶಾರನ್ನು ಬೆಂಬಲಿಸಿರುವ ರಮ್ಯಾ, “ಈಗ ದಿಶಾ ಜೈಲಿನಲ್ಲಿದ್ದರೆ ಅದಕ್ಕೆ ನಾವೆಲ್ಲರೂ ಹೊಣೆಗಾರರು. ಮೂಕಪ್ರೇಕ್ಷಕರಂತೆ ನೋಡುತ್ತಾ ಕುಳಿತಿರುವ ನಾವು ದಿಟ್ಟತನದಿಂದ ಮಾತನಾಡಿ ಎಷ್ಟು ಸಮಯವಾಗಿದೆ?” ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಜನರು ತಮ್ಮ ಅಧಿಕಾರ, ದನಿಯನ್ನೇ ಮರೆತಿದ್ದಾರೆ ಎನ್ನುವುದು ಅವರ ಅಸಮಾಧಾನ. “ಜನರಿಂದ, ಜನರಿಗಾಗಿ ಸರ್ಕಾರ ಎನ್ನುವುದನ್ನು ಮರೆತಿದ್ದೇವೆ. ಆ ಯುವತಿ ತನ್ನದೇ ಒಂದು ಸ್ವಂತ ವ್ಯಕ್ತಿತ್ವ, ನಿಲುವು ಹೊಂದಿರುವುದಕ್ಕಾಗಿ ಇಂದು ಜೈಲಿನಲ್ಲಿದ್ದಾರೆ. ಪರಿಸರ ಹೋರಾಟಕ್ಕಾಗಿ ತನ್ನ ಬದುಕನ್ನು ಮುಡಿಪಾಗಿಟ್ಟಿರುವ ಆಕೆಯನ್ನು ನಾವು ಬೆಂಬಲಿಸದಿದ್ದರೆ ಹೇಗೆ? ನಾವೆಲ್ಲರೂ ದಿಶಾ ಪರ ನಿಲ್ಲೋಣ” ಎನ್ನುವ ರಮ್ಯಾ ಪೋಸ್ಟ್ಗೆ ಪರ-ವಿರೋಧದ ನೂರಾರು ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.